ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ

ಆರ್‌.ಮಾನಸಯ್ಯ ಪ್ರಚಾರ ಸಭೆಯಲ್ಲಿ ಜಿಗ್ನೇಶ್‌ ಮೇವಾನಿ ಹೇಳಿಕೆ
Last Updated 7 ಮೇ 2018, 13:28 IST
ಅಕ್ಷರ ಗಾತ್ರ

ಲಿಂಗಸುಗೂರು: ‘ದೇಶದ ಮಹಾ ಕ್ರಾಂತಿಕಾರಿಗಳಾದ ನಾರಾಯಣಗುರು, ಬಸವಣ್ಣ ಅವರ ವಿಚಾರಧಾರೆಗಳನ್ನು ರಾಜ್ಯದ ಜನತೆ ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಹಾಗಾಗಿ ಈ ರಾಜ್ಯದಲ್ಲಿ ದೇಶದ ನಂಬರ್‌ ಒನ್‌ ಸುಳ್ಳುಗಾರ ಮೋದಿ ಆಟ ನಡೆಯುವುದಿಲ್ಲ’ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದರು.

ಶನಿವಾರ ಜನಾಂದೋಲನ ಮಹಾ ಮೈತ್ರಿ ಬೆಂಬಲಿತ (ಸಿಪಿಐ–ಎಂಎಲ್‌ ರೆಡ್‌ ಸ್ಟಾರ್‌) ಅಭ್ಯರ್ಥಿ ಆರ್‌. ಮಾನಸಯ್ಯ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ದೇಶದಲ್ಲಿ ಧರ್ಮ, ಜಾತಿಗಳ ಮಧ್ಯೆವಿಷ ಬೀಜ ಬಿತ್ತುತ್ತ ಕೋಮುವಾದ ಮತ್ತು ಸರ್ವಾಧಿಕಾರತ್ವ ಧೋರಣೆ ಅನುಸರಿಸುತ್ತಿರುವ ಬಿಜೆಪಿಯನ್ನು ರಾಜ್ಯದ ನೆಲದಿಂದ ಬೇರು ಸಹಿತ ಕಿತ್ತೊಗೆದು ಅಂಬೇಡ್ಕರ್‌ವಾದ ಬೆಂಬಲಿತರ ಆಯ್ಕೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

‘ಅಂಬೇಡ್ಕರ್‌ ಅವರನ್ನು ಗುಣಗಾನ ಮಾಡುತ್ತ ದಲಿತ ಸಮೂಹಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನೊಂದಡೆ ಸಂವಿಧಾನ ಬದಲಾವಣೆಗೆ ಕುತಂತ್ರ ನಡೆಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡುವ ಜೊತೆಗೆ ಪತ್ರಿಕಾರಂಗದ ಮೇಲೆ ಗದಪ್ರಹಾರ ನಡೆಸಿದ್ದಾರೆ. ಮೋದಿ ಅವರು ತಮ್ಮ ಆಡಳಿತ ಅವಧಿಯಲ್ಲಿ ರೈತ, ಮಹಿಳೆಯರು, ದಲಿತರಿಗಾಗಿ ಯಾವೊಂದು ವಿಶೇಷ ಯೋಜನೆ ನೀಡಲಿಲ್ಲ’ ಎಂದು ಕಟುವಾಗಿ ಟೀಕಿಸಿದರು.

ಮುಖಂಡ ನೂರ್‌ ಶ್ರೀಧರ್‌ ಮಾತನಾಡಿ, ‘ಶೋಷಿತರು ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕ್ರಾಂತಿ ನಡೆಸಬೇಕು ಎಂದು ಕಾರ್ಲ್‌ಮಾರ್ಕ್ಸ್‌ ಹೇಳಿದ್ದು ಇಂದು ಸತ್ಯವಾಗಿದೆ. ಶೋಷಿತ ವರ್ಗಕ್ಕೆ ಪ್ರತ್ಯೇಕ ಮತದಾನ ಹಕ್ಕು ನೀಡಲು ಹೋರಾಟ ನಡೆಸಬೇಕಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಲಾಢ್ಯ ಜಾತಿ ಮತ್ತು ಬಂಡವಾಳಶಾಹಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಹೋರಾಟಕ್ಕೆ ಮುಂದಾಗಬೇಕು’ ಎಂದು ಕರೆ ನೀಡಿದರು.

ರೈತ ಸಂಘದ ಅಮರಣ್ಣ ಗುಡಿಹಾಳ, ಜನಶಕ್ತಿ ಸಂಘಟನೆಯ ನಾಯಕಿ ಮಲ್ಲಿಗೆ, ವಡ್ಡಗೆರೆ ನಾಗರಾಜಯ್ಯ, ಎನ್‌.ವೆಂಕಟೇಶ ಮಾತನಾಡಿ, ‘ಕಳೆದ 71 ವರ್ಷಗಳ ಕಾಲ ದೇಶವನ್ನು ಆಳಿದ ಯಾವೊಂದು ಪಕ್ಷಗಳು ಶೋಷಿತ, ರೈತ, ಮಹಿಳೆ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡುವಲ್ಲಿ ವಿಫಲವಾಗಿವೆ. ಮೀಸಲಾತಿ ಹೆಸರಿನಲ್ಲಿ ಆಯ್ಕೆಗೊಂಡ ಪುಡಾರಿ ರಾಜಕಾರಣಿಗಳು ಶೋಷಿತರ ಧ್ವನಿಯಾಗಿ ಕೆಲಸ ಮಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಐಎಂಎಲ್‌ ರೆಡ್‌ ಸ್ಟಾರ್‌ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನಾಂದೋಲ ಮಹಾಮೈತ್ರಿ ಅಭ್ಯರ್ಥಿ ಆರ್‌, ಮಾನಸಯ್ಯ, ರೈತ ಸಂಘದ ಅಮೀನಪಾಷ ದಿದ್ದಗಿ, ವಿವಿಧ ಸಂಘಟನೆಗಳ ಮುಖಂಡರಾದ ಲಿಂಗಪ್ಪ ಪರಂಗಿ, ರಾಜಾ ನಾಯಕ, ವಿ. ನಾಗರಾಜಣ್ಣ, ಎಂ.ಆರ್‌. ಬೇರಿ ಉಪಸ್ಥಿತರಿದ್ದರು.

**
ಹಣ ಹೆಂಡ ಮೊಸಳೆ ಕಣ್ಣೀರಿಗೆ ಮತದಾರರು ಮೋಸ ಹೋಗಬಾರದು. ಮೂರು ದಶಕಗಳ ಕಾಲ ಹೋರಾಟ ಮೂಲಕ ನಿಮ್ಮ ಸೇವೆ ಮಾಡಿದ ತಮಗೆ ಆಶೀರ್ವದಿಸಿರಿ
– ಆರ್‍. ಮಾನಸಯ್ಯ, ಅಭ್ಯರ್ಥಿ, ಸಿಪಿಐ-(-ಎಂಎಲ್‍) ರೆಡ್‍ ಸ್ಟಾರ್‍

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT