ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಿಗೆ ಬಿದ್ದ ಕಾಂಗ್ರೆಸ್‌ ಎದುರು ಬಿಜೆಪಿ

ಅಕ್ರಮ ಗಣಿಗಾರಿಕೆ ಆರೋಪಿಗಳ ವಿಜೃಂಭಣೆ; ಎಲ್ಲೆಡೆ ಭರ್ಜರಿ ಪ್ರಚಾರ
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಅಕ್ರಮ ಗಣಿಗಾರಿಕೆಯಿಂದ ವಿಶ್ವದ ಗಮನ ಸೆಳೆದಿದ್ದ ಜಿಲ್ಲೆಯಲ್ಲಿ ಈಗ ಆ ಬಗ್ಗೆ ಮಾತನಾಡುವವರು ಬೆರಳೆಣಿಕೆಯಷ್ಟು. ಅವರ ನಡುವೆ, ಆರೋಪಿಗಳಾಗಿ ಜೈಲು ಕಂಡ ಅಭ್ಯರ್ಥಿಗಳೇ ಹೆಚ್ಚು, ಅವರ ಪ್ರಚಾರವೂ ಭರ್ಜರಿ. ಆರೋಪಿಗಳಿಗೇ ಮಣೆ ಹಾಕಿರುವುದರಿಂದ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ಬಳ್ಳಾರಿ ನಗರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಟಪಾಲ್‌ ಗಣೇಶ್‌ ಮತ್ತು ಸಂಡೂರಿನ ಎಸ್‌ಯುಸಿಐಸಿ ಅಭ್ಯರ್ಥಿ ರಾಮಾಂಜನಪ್ಪ ಬಿಟ್ಟರೆ ಬೇರೆ ಯಾರೂ ಅಕ್ರಮ ಗಣಿಗಾರಿಕೆ, ಅದರ ದುಷ್ಪರಿಣಾಮ ಹಾಗೂ ಗಣಿ ಸಂತ್ರಸ್ತರ ಸಂಕಟವನ್ನು ಚುನಾವಣೆಯ ಮುಖ್ಯ ವಿಷಯವೆಂದು ಭಾವಿಸಿಲ್ಲ.

ರಾಮಾಂಜನಪ್ಪ ಇದನ್ನು ಒಂದು ಅಸ್ತ್ರವನ್ನಾಗಿಯೇ ಬಳಸಿ ಕಾರ್ಮಿಕರ ಕುರಿತ ಕಾಳಜಿಯನ್ನು ಮತಗಳನ್ನಾಗಿ ಪರಿವರ್ತಿಸುವ ಹವಣಿಕೆಯಲ್ಲಿದ್ದಾರೆ. ಆದರೆ ರೆಡ್ಡಿ ಸಹೋದರರ ಕುರಿತ ಭಯದ ಕಾರಣಕ್ಕೆ ಟಪಾಲ್‌ ಗಣೇಶ್‌ ಜೊತೆ ಬರಲು ಜನ ಹಿಂಜರಿದಿದ್ದಾರೆ.

‘ಕಳ್ಳರು, ಲೂಟಿಕೋರರು, ಜೈಲಿಗೆ ಹೋಗಿಬಂದವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷದುದ್ದಕ್ಕೂ ಯಾರನ್ನು ಜರಿದಿದ್ದರೋ, ಅವರೇ (ಆನಂದ್‌ ಸಿಂಗ್‌) ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ವಿಜಯನಗರದ ಅಭ್ಯರ್ಥಿಯಾಗಿದ್ದಾರೆ. ಆನಂದ್‌ ಸಿಂಗ್‌ ಕಾಂಗ್ರೆಸ್‌ ಸೇರಿದ ಕೂಡಲೇ ಅಲ್ಲಿಂದ ಎಚ್‌.ಆರ್‌.ಗವಿಯಪ್ಪ ಬಿಜೆಪಿ ಸೇರಿ, ಅದೇ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಆನಂದ್‌ ಸಿಂಗ್‌ ದೊಡ್ಡಪ್ಪನ ಮಗ ದೀಪಕ್‌ ಸಿಂಗ್‌ ಜೆಡಿಎಸ್‌ ಅಭ್ಯರ್ಥಿ!

ಜಿಲ್ಲೆಯಲ್ಲಿ ಪಕ್ಷ ನಿಷ್ಠೆ ದುಬಾರಿ ಬಾಬತ್ತಿನದಾಗಿದೆ. ಹೊಂದಾಣಿಕೆ ರಾಜಕೀಯದ ಪಕ್ಷಾಂತರವು ಎಲ್ಲೆಡೆ ಭಿನ್ನಾಭಿಪ್ರಾಯಗಳನ್ನು ನುಂಗಿದೆ. ಮತದಾರರಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳಿಲ್ಲವಾಗಿವೆ. ಅಸಮಾಧಾನ ವ್ಯಕ್ತವಾಗಿದ್ದೂ ಕಡಿಮೆ.

ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನಿಲ್‌ ಎಚ್‌.ಲಾಡ್‌ ಮತ್ತು ಜೆಡಿಎಸ್‌ನ ಮಹ್ಮದ್‌ ಇಕ್ಬಾಲ್‌ ಹೊತೂರ್‌ ಅಕ್ರಮ ಗಣಿಗಾರಿಕೆ ಆರೋಪಿಗಳು. ಬಿಜೆಪಿಯ ಜಿ.ಸೋಮಶೇಖರ ರೆಡ್ಡಿ ಬೇಲ್‌ ಡೀಲ್‌ ಪ್ರಕರಣದ ಆರೋಪಿ. ಇನ್ನೊಬ್ಬ ಆರೋಪಿ ಟಿ.ಎಚ್‌.ಸುರೇಶ್‌ ಬಾಬು ಕಂಪ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ.

ರೆಡ್ಡಿ ಸಹೋದರರ ಜೊತೆಗೇ  ಬೆಳೆದ ಬಿ.ನಾಗೇಂದ್ರ ಅವರನ್ನು ಕಾಂಗ್ರೆಸ್‌ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಕರೆತಂದಿದೆ. 2014ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮೊಳಕಾಲ್ಮುರಿನಿಂದ ಕರೆತಂದು ಗೆಲ್ಲಿಸಿದ್ದ ಎನ್‌.ವೈ.ಗೋಪಾಲಕೃಷ್ಣ, ಮತ್ತೆ ಅಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷ ತ್ಯಜಿಸಿ ಕೂಡ್ಲಿಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿ.ಶ್ರೀರಾಮುಲು ಮತ್ತು ಜಿ.ಜನಾರ್ದನ ರೆಡ್ಡಿ ಅವರ ಬೆನ್ನಿಗಿದ್ದಾರೆ. ಮತದಾರರು ಮಾತ್ರ ಸ್ಥಳೀಯರಾದ, ‘ನಿಷ್ಠುರ ಮಾತುಗಾರಿಕೆ’ಯ ಜೆಡಿಎಸ್‌ ಅಭ್ಯರ್ಥಿ ಎನ್‌.ಟಿ.ಬೊಮ್ಮಣ್ಣ ಕಡೆಗೆ ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆಯ ಬಲವಿಲ್ಲದ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರಿಗೆ, ಅದೇ ಕಾರಣಕ್ಕೆ ಆ ಕ್ಷೇತ್ರದ ಮೇಲೆ ಮಾತ್ರ ಆಸೆಗಣ್ಣಿದೆ!

ಮಾದಿಗರಿಗೆ ಇಲ್ಲ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾದಿಗರಿಗೆ ಟಿಕೆಟ್‌ ನೀಡಬೇಕು ಎಂಬ ಆಗ್ರಹಕ್ಕೆ ಕಾಂಗ್ರೆಸ್‌– ಬಿಜೆಪಿ ಸೊಪ್ಪು ಹಾಕಿಲ್ಲ. ಆದರೆ ಜೆಡಿಎಸ್‌ ಹಡಗಲಿಯಲ್ಲಿ ಕೆ.ಪುತ್ರೇಶ್‌ ಅವರಿಗೆ ಟಿಕೆಟ್‌ ಕೊಟ್ಟು ಮಾದಿಗರ ಮತಗಳಿಗಾಗಿ ಕಾಯುತ್ತಿದೆ.

‘ಬಾಯಿ ಬಿಗಿಯಿಲ್ಲದ’ ಕಾಂಗ್ರೆಸ್‌ನ ಪಿ.ಟಿ.ಪರಮೇಶ್ವರ ನಾಯ್ಕ ಅವರ ವಿವಾದಾಸ್ಪದ ‘ಅನುಪಮಾ ಶೆಣೈ ವರ್ಗಾವಣೆ’ ಪ್ರಕರಣವನ್ನು ಕ್ಷೇತ್ರದ ಜನ ಮರೆತಿಲ್ಲ. ಅದೇ ವೇಳೆ, ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್‌ ಶಾಸಕರಾಗಿದ್ದ ಈಗಿನ ಕಾಂಗ್ರೆಸ್‌ ಅಭ್ಯರ್ಥಿ ಎಲ್‌.ಬಿ.ಪಿ ಭೀಮಾನಾಯ್ಕ ಪಕ್ಷಾಂತರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಜೆಡಿಎಸ್‌ ಕಾರ್ಯಕರ್ತರು ಕಾಯುತ್ತಿರುವಂತಿದೆ ಅಲ್ಲಿನ ಸನ್ನಿವೇಶ.

ಸಂಡೂರಿನ ಮೂವರು ಪ್ರಮುಖ ಅಭ್ಯರ್ಥಿಗಳು ವಿ.ಎಸ್‌.ಲಾಡ್‌ ಕಂಪನಿಯ ಮಾಜಿ ನೌಕರರು. ಮೂರನೇ ಬಾರಿ ಸ್ಪರ್ಧಿಸಿರುವ ಶಾಸಕ ಈ.ತುಕಾರಾಂ ಎದುರಿನ ಬಿಜೆಪಿ ಅಭ್ಯರ್ಥಿ ಡಿ.ರಾಘವೇಂದ್ರ, ಕೆಲವು ತಿಂಗಳ ಮುಂಚೆ ಕಾಂಗ್ರೆಸ್‌ನಿಂದ ಹೊರಬಂದವರು.

ಬಾದಾಮಿ ಮತ್ತು ಮೊಳಕಾಲ್ಮುರಿನಲ್ಲಿ ಸ್ಪರ್ಧಿಸಿರುವ ಸಂಸದ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿಯಲ್ಲಿ ಪ್ರಚಾರಕ್ಕೆ ಸಮಯವಿಲ್ಲ. ಸಹೋದರನ ಪರ ಪ್ರಚಾರಕ್ಕೆ ಬಳ್ಳಾರಿಗೆ ಬರಲು ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿಲ್ಲ.

ಸಂಡೂರು, ಹಡಗಲಿಯಲ್ಲಿ ಬಿಜೆಪಿ ಟಿಕೆಟ್ ದೊರಕದೆ ಬಂಡಾಯವೆದ್ದ ಬಂಗಾರ ಹನುಮಂತು ಮತ್ತು ಓದೋ ಗಂಗಪ್ಪ ತಮ್ಮದೇ ಪಕ್ಷದ ಸೋಲಿಗಾಗಿ ಪ್ರಯತ್ನಿಸುತ್ತಿದ್ದಾರೆ. ಸಿರುಗುಪ್ಪದಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ಶಾಸಕ ಬಿ.ಎಂ.ನಾಗರಾಜ ತಮ್ಮ ಸಹೋದರ ಬಿ.ಎಂ.ವೆಂಕಟೇಶ ನಾಯ್ಕ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ.

ತನ್ನಿಂದ ದೂಷಣೆಗೆ ಒಳಗಾಗಿದ್ದವರನ್ನೇ ಸೇರಿಸಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ನಾಲಿಗೆ ಬಿದ್ದು ಹೋಗಿದೆ. ತಳ ಭದ್ರವಿಲ್ಲದ ಜೆಡಿಎಸ್‌ ಎಲ್ಲಾದರೂ ನೆಲೆ ಸಿಗಬಹುದೇನೋ ಎಂದು ನೋಡುತ್ತಿದೆ. ಬಿಜೆಪಿ ಹಳೆಯ ವೈಭವ ಮರುಕಳಿಸುವ ಆಸೆಯಲ್ಲಿದೆ.

* ಜಿಲ್ಲಾ ಕೇಂದ್ರದಲ್ಲಿ ಮೂರ್ನಾಲ್ಕು ರಸ್ತೆಗಳು ಬಿಟ್ಟರೆ ಅಭಿವೃದ್ಧಿ ಇಲ್ಲವಾಗಿದೆ. ಪಕ್ಕದಲ್ಲೇ ಜಲಾಶಯವಿದ್ದರೂ ಹತ್ತು– ಹನ್ನೆರಡು ದಿನಕ್ಕೊಮ್ಮೆ ನೀರು ಪೂರೈಸುವ ಅವ್ಯವಸ್ಥೆ ಯಾವಾಗ ಸರಿಹೋಗುವುದೋ?

–ನಾಗಭೂಷಣ, ಗಾಂಧಿನಗರ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT