ಅಕ್ರಮ ಪ್ರವೇಶ: ಬಾಂಗ್ಲಾ ಪ್ರಜೆ ಬಂಧನ

7

ಅಕ್ರಮ ಪ್ರವೇಶ: ಬಾಂಗ್ಲಾ ಪ್ರಜೆ ಬಂಧನ

Published:
Updated:

ಬೆಂಗಳೂರು: ದೇಶದೊಳಗೆ ಅಕ್ರಮವಾಗಿ ನುಸುಳಿದ್ದ ಬಾಂಗ್ಲಾದೇಶದ ಪ್ರಜೆ ಮೊಹಮ್ಮದ್ ರಿಯಾದ್ (36) ಎಂಬಾತನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಮುಂಬೈನಿಂದ ‘ಇವೈ – 287‘ ವಿಮಾನದಲ್ಲಿ ದುಬೈಗೆ ಹೊರಟಿದ್ದ ಆರೋಪಿ, ಮೇ 2ರಂದು ಬೆಳಿಗ್ಗೆ 7.50ರ ಸುಮಾರಿಗೆ ನಗರದ ನಿಲ್ದಾಣಕ್ಕೆ ಬಂದಿದ್ದ. ಇಮಿಗ್ರೇಷನ್ ಕ್ಲಿಯರೆನ್ಸ್‌ಗಾಗಿ ವಲಸೆ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ಕೊಟ್ಟಿದ್ದ. ಅದನ್ನು ಪರಿಶೀಲಿಸಿದ್ದ ಅಧಿಕಾರಿಗಳು, ನಕಲಿ ಎಂಬುದನ್ನು ಪತ್ತೆ ಹಚ್ಚಿದ್ದರು. ನಂತರ, ಆತನನ್ನು ವಶಕ್ಕೆ ಪಡೆದು ನಮಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ವಲಸೆ ಅಧಿಕಾರಿ ಮಹಿಪಾಲ್ ಶೆಹ್ರಾವತ್ ಅವರು ಆರೋಪಿ ವಿರುದ್ಧ ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ವಂಚನೆ, ಪಾಸ್‌ಪೋರ್ಟ್‌ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದೇವೆ ಎಂದರು.

ಐದು ವರ್ಷಗಳ ಹಿಂದೆ ದೇಶದೊಳಗೆ ನುಸುಳಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದ ಆರೋಪಿ, ಅಲ್ಲಿಯೇ ನಕಲಿ ಜನನ ಪ್ರಮಾಣ ಪತ್ರ ಮಾಡಿಸಿಕೊಂಡಿದ್ದ. ನಂತರ, ಅಲ್ಲಿಂದ ಮುಂಬೈಗೆ ಹೋಗಿ ವಾಸವಿದ್ದ. ಅಲ್ಲಿಯವಿಳಾಸ ನೀಡಿ 2017ರ ಮಾರ್ಚ್ 2ರಂದು ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದ. ಬಳಿಕ, ಉದ್ಯೋಗ ವೀಸಾ ಪಡೆದುಕೊಂಡು ದುಬೈಗೆ ಹೊರಟಿದ್ದ ವೇಳೆಯಲ್ಲೇ ವಲಸೆ ಅಧಿಕಾರಿಗಳಿಗೆ ಸಿಕ್ಕಿಬಿದ್ದ’ ಎಂದು ಅವರು ಹೇಳಿದರು.

‘ಆರೋಪಿಯ ಪಾಸ್‌ಪೋರ್ಟ್‌ ಜಪ್ತಿ ಮಾಡಿ ಮುಂಬೈನ ಪಾಸ್‌ಪೋರ್ಟ್‌ ಕಚೇರಿಗೆ ಕಳುಹಿಸಿದ್ದೆವು. ಪರಿಶೀಲನೆ ನಡೆಸಿದ್ದ ಅಲ್ಲಿಯ ಅಧಿಕಾರಿಗಳು, ಆರೋಪಿಯು ನಕಲಿ ದಾಖಲೆ ಕೊಟ್ಟು ಪಾಸ್‌ಪೋರ್ಟ್‌ ಪಡೆದುಕೊಂಡಿದ್ದನ್ನು ಖಾತ್ರಿಪಡಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry