ಶನಿವಾರ, ಮಾರ್ಚ್ 6, 2021
18 °C
ಕಳೆದ ವರ್ಷಕ್ಕಿಂತ ಶೇಕಡಾವಾರು ಫಲಿತಾಂಶದಲ್ಲಿ ಕುಸಿತ; ಫಲ ನೀಡದ ಇಲಾಖೆಯ ಪರಿಶ್ರಮ

ಎಸ್ಸೆಸ್ಸೆಲ್ಸಿ ಫಲಿತಾಂಶ: ಒಂದು ಸ್ಥಾನ ಮೇಲಕ್ಕೇರಿದ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್ಸೆಸ್ಸೆಲ್ಸಿ ಫಲಿತಾಂಶ: ಒಂದು ಸ್ಥಾನ ಮೇಲಕ್ಕೇರಿದ ಜಿಲ್ಲೆ

ರಾಯಚೂರು: 2017–18 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯು ಶೇ 68.89 ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 29ನೇ ಸ್ಥಾನದಲ್ಲಿ ಉಳಿದಿದೆ.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ 30 ನೇ ಸ್ಥಾನದಲ್ಲಿದ್ದ ಜಿಲ್ಲೆಯು ಒಂದು ಸ್ಥಾನ ಮೇಲಕ್ಕೆ ಏರಿಕೆ. 2016–17 ನೇ ಶೈಕ್ಷಣಿಕ ಸಾಲಿನಲ್ಲಿ ಶೇ 69.69 ಫಲಿತಾಂಶ ಬಂದಿತ್ತು. ಹಿಂದಿನ ವರ್ಷದ ಸಾಧನೆಗೆ ಹೋಲಿಕೆ ಮಾಡಿದರೆ ಈ ಬಾರಿ 0.8 ರಷ್ಟು ಕಡಿಮೆ ಫಲಿತಾಂಶ ಬಂದಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಹಾಗಿದ್ದರೂ 2012 ರಿಂದ ಇಲ್ಲಿಯವರೆಗಿನ ಶೇಕಡಾವಾರು ಫಲಿತಾಂಶಗಳನ್ನು ಹೋಲಿಸಿದರೆ, ಈ ಸಲ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಯ ಫಲಿತಾಂಶವನ್ನು ಸುಧಾರಣೆ ಮಾಡಿ ಮೊದಲ 10 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಸಾಧಿಸಬೇಕು ಎಂಬ ಪ್ರಯತ್ನ ಕೈಗೂಡಿಲ್ಲ. ತಾಲ್ಲೂಕುವಾರು ಫಲಿತಾಂಶದಲ್ಲಿ ಸಿಂಧನೂರು ಮೊದಲ ಸ್ಥಾನ ಪಡೆದುಕೊಂಡಿದ್ದು, ದೇವದುರ್ಗ ಕೊನೆಯ ಸ್ಥಾನದಲ್ಲಿ ನಿಂತಿದೆ. ಸಿಂಧನೂರು ಶೇ 77.83 ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ ಮಾನ್ವಿ ಶೇ 72.67 ರಷ್ಟು ಫಲಿತಾಂಶ ಪಡೆದು ನಂತರದ ಸ್ಥಾನದಲ್ಲಿದೆ. ರಾಯಚೂರು ತಾಲ್ಲೂಕು ಶೇ 68.36 ರಷ್ಟು ಫಲಿತಾಂಶ ಮೂರನೇ ಸ್ಥಾನದಲ್ಲಿದೆ.

ಲಿಂಗಸೂಗುರು ತಾಲ್ಲೂಕು ಶೇ 66.65 ರಷ್ಟು ಫಲಿತಾಂಶ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿ ಉಳಿದಿದ್ದು, ಕೊನೆಯ ಸ್ಥಾನದಲ್ಲಿರುವ ದೇವದುರ್ಗ ಶೇ 54.13 ರಷ್ಟು ಫಲಿತಾಂಶ ಪಡೆದುಕೊಂಡಿದೆ.

ವಿದ್ಯಾರ್ಥಿಗಳ ಉತ್ತಮ ಸಾಧನೆ: ರಾಯಚೂರು ತಾಲ್ಲೂಕಿನ ತಾಲ್ಲೂಕಿನ ಗಾರಲದಿನ್ನಿ ಗ್ರಾಮದ ನಿವಾಸಿಯಾಗಿರುವ ಜಿ.ಗಣೇಶ ಉತ್ತಮ ಸಾಧನೆ ತೋರಿದ್ದು, ಸಿಂಗನೋಡಿಯ ಸರ್ಕಾರಿ ಮೊರಾರ್ಜಿ ವಸತಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ. 619 (ಶೇ 99.04) ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾನೆ.

ವಳಬಳ್ಳಾರಿ ಸರ್ಕಾರಿ ಪ್ರೌಢಶಾಲೆ ಶೇ 95.12 ರಷ್ಟು ಫಲಿತಾಂಶ ಪಡೆದಿದೆ. ಈ ಶಾಲೆಯ ಐದು ವಿದ್ಯಾರ್ಥಿಗಳು ಕನ್ನಡದಲ್ಲಿ 125ಕ್ಕೆ 125 ಅಂಕಗಳು ಗಳಿಸಿದ್ದಾರೆ. ಹಿಂದಿಯಲ್ಲಿ ನಾಲ್ಕು ವಿದ್ಯಾರ್ಥಿಗಳು ಹಾಗೂ ಸಮಾಜದಲ್ಲಿ ಓರ್ವ ವಿದ್ಯಾರ್ಥಿ 100 ಅಂಕ ಗಳಿಸಿದ್ದಾರೆ.

ನಗರದ ಕಾನ್ವೆಂಟ್‌ ಶಾಲೆಯ ವಿದ್ಯಾರ್ಥಿನಿ ಅಮೃತಾ ಶಾಸ್ತ್ರಿ 599 (ಶೇ 95.84) ಅಂಕಗಳನ್ನು ಪಡೆದು, ಉತ್ತಮ ಸಾಧನೆ ಮಾಡಿದ್ದಾರೆ.

**

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ವರ್ಗಗಳನ್ನು ಅಯೋಜಿಲಾಗಿತ್ತು. ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಮುಂದಿನ ಶೈಕ್ಷಣಿಕ ವರ್ಷ ಮತ್ತಷ್ಟು ಪರಿಶ್ರಮ ಪಡುತ್ತೇವೆ

– ಬಿ.ಕೆ.ನಂದನೂರ, ಡಿಡಿಪಿಯು 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.