ಭಾನುವಾರ, ಮಾರ್ಚ್ 7, 2021
19 °C

ಪಕ್ಷೇತರರ ಜತೆ ಸೇರಿ ಸರ್ಕಾರ: ಎಚ್‌.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷೇತರರ ಜತೆ ಸೇರಿ ಸರ್ಕಾರ: ಎಚ್‌.ಡಿ.ದೇವೇಗೌಡ

ಮೈಸೂರು: ‘ಜೆಡಿಎಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಪಕ್ಷೇತರರ ನೆರವಿನಿಂದ ಸರ್ಕಾರ ರಚಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಇಲ್ಲಿ ಮಂಗಳವಾರ ಹೇಳಿದರು.

‘ಈ ಬಾರಿ 10ರಿಂದ 12 ಪಕ್ಷೇತರರು ಗೆಲುವು ಪಡೆಯಬಹುದು ಎಂಬುದು ನನ್ನ ಲೆಕ್ಕಾಚಾರ. ಬಿಎಸ್‌ಪಿಗೆ 2–3 ಸ್ಥಾನಗಳು ಲಭಿಸಬಹುದು. ಪಕ್ಷೇತರರ ಜತೆ ಸೇರಿ ಸರ್ಕಾರ ರಚಿಸುವ ದೃಢವಾದ ನಂಬಿಕೆಯಿದೆ. ನನಗೆ ಭ್ರಮೆ ಇಲ್ಲವೇ ಇಲ್ಲ. ನನ್ನದೇ ಆದ ಲೆಕ್ಕಾಚಾರಗಳಿಲ್ಲದೆ ಯಾವುದೇ ಮಾತುಗಳನ್ನಾಡುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

‘ಹೈದರಾಬಾದ್‌ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಎರಡು ದಿನ ಪ್ರವಾಸ ಮಾಡಿ ಬಂದಿದ್ದೇನೆ. ಆ ಭಾಗದ ಜನ ಜೆಡಿಎಸ್‌ ಪರ ಒಲವು ತೋರಿದ್ದಾರೆ. ಅಲ್ಲಿ ನಮಗೆ 30ರಿಂದ 35 ಸ್ಥಾನಗಳು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂಬರೀಷ್‌ ಜತೆ ಮಾತನಾಡಲ್ಲ: ನಟ ಅಂಬರೀಷ್‌ ಪಕ್ಷ ಸೇರುವರೇ ಎಂಬ ಪ್ರಶ್ನೆಗೆ, ‘ಅವರ ಜತೆ ಮಾತನಾಡಿಲ್ಲ. ಚುನಾವಣೆಗೆ ಇನ್ನು ಎರಡು ದಿನಗಳು ಉಳಿದಿವೆ. ಈ ಹಂತದಲ್ಲಿ ಮಾತನಾಡುವ ಯೋಚನೆಯೂ ಇಲ್ಲ’ ಎಂದರು.

ವರುಣಾ, ಕೃಷ್ಣರಾಜದಲ್ಲಿ ಗೆಲುವು ಕಷ್ಟ: ಮೈಸೂರಿನ 11 ಕ್ಷೇತ್ರಗಳಲ್ಲಿ 9ರಲ್ಲಿ ಜೆಡಿಎಸ್‌ ಗೆಲುವು ಸಾಧಿಸಲಿದೆ. ವರುಣಾ ಮತ್ತು ಕೃಷ್ಣರಾಜ ಕ್ಷೇತ್ರಗಳಲ್ಲಿ ಗೆಲುವು ಕಷ್ಟ ಎಂದು ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಹೇಳಿಕೆಗೆ ಸ್ಪಷ್ಟನೆ

ಪಕ್ಷದ ಕಾರ್ಯಕ್ರಮಗಳನ್ನು ಜಾರಿಗೊಳಿಸುವವರ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ, ‘ಜೆಡಿಎಸ್‌ ಪ್ರಣಾಳಿಕೆಯಲ್ಲಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಜನರ ಬೆಂಬಲ ಕೋರಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಮಾಧ್ಯಮಗಳು ಆ ಹೇಳಿಕೆಗೆ ಬೇರೆಯದೇ ಅರ್ಥ ಕಲ್ಪಿಸಿವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.