ಶನಿವಾರ, ಮಾರ್ಚ್ 6, 2021
24 °C

ಲೋಕಾಯುಕ್ತ ದುರ್ಬಲ ಮಾಡಿದ್ದರಿಂದಲೇ ಸಿದ್ದರಾಮಯ್ಯ ಅಕ್ರಮ ಬಯಲಾಗಲಿಲ್ಲ...

ಬಿ.ಎನ್‌.ಶ್ರೀಧರ Updated:

ಅಕ್ಷರ ಗಾತ್ರ : | |

ಲೋಕಾಯುಕ್ತ ದುರ್ಬಲ ಮಾಡಿದ್ದರಿಂದಲೇ ಸಿದ್ದರಾಮಯ್ಯ ಅಕ್ರಮ ಬಯಲಾಗಲಿಲ್ಲ...

ಇದೇ 17ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳುತ್ತಾಎಲ್ಲೆಡೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ ಬಿ.ಎಸ್‌.ಯಡಿಯೂರಪ್ಪ. ‘17ರಂದು ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪ’ ಎಂದೂ ಅವರನ್ನು ಪಕ್ಷದ ಮುಖಂಡರು ಈಗಾಗಲೇ ಅಭಿನಂದಿಸುತ್ತಿದ್ದಾರೆ. ಬಿರುಬಿಸಿಲನ್ನೂ ಲೆಕ್ಕಿಸದೆ ದಿನಕ್ಕೆ 8–10 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭಾಷಣ ಮಾಡುತ್ತಿದ್ದಾರೆ. ಮಂಗಳವಾರ ಪ್ರಚಾರಕ್ಕೆ ಹೊರಡುವ ಮುನ್ನ ಹಾವೇರಿಯಲ್ಲಿ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು:

* ಯಾವ ಗ್ಯಾರಂಟಿ ಮೇಲೆ ನೀವು ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಪಡಿಸಿಕೊಂಡಿದ್ದೀರಿ?

ರಾಜ್ಯದ ಉದ್ದಗಲಕ್ಕೂ ಸುತ್ತಿದ್ದೇನೆ. ಪ್ರಚಾರಕ್ಕೆ ಇದೇ 10ರ ಸಂಜೆ 5 ಗಂಟೆವರೆಗೂ ಅವಕಾಶ ಇದೆ. ಅಲ್ಲಿಯವರೆಗೂ ಸುತ್ತುತ್ತಲೇ ಇರುತ್ತೇನೆ. ಜನರ ನಾಡಿಮಿಡಿತ ನೋಡಿದರೆ, ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಹೀಗಾಗಿಯೇ ಮೇ 17ರಂದು ಗುರುವಾರ ಒಳ್ಳೆಯ ದಿನ ಎನ್ನುವ ಕಾರಣಕ್ಕೆ ಮುಹೂರ್ತ ನಿಗದಿಪಡಿಸಿದ್ದೇನೆ. ಇದು ಯಾವುದೇ ಕಾರಣಕ್ಕೂ ಸುಳ್ಳು ಆಗಲ್ಲ. ನೋಡುತ್ತಾ ಇರಿ.

* ಸಮೀಕ್ಷೆಗಳನ್ನು ನೋಡಿದರೆ ಬಿಜೆಪಿಗೆ ಬಹುಮತ ಸಿಗದು ಎನ್ನುವ ಅಭಿಪ್ರಾಯ ಇದೆಯಲ್ಲ...

ಅಂತಹ ಎಲ್ಲ ಸಮೀಕ್ಷೆಗಳೂ ಸುಳ್ಳಾಗಲಿವೆ. ಬೇಕಾದರೆ, ಮತದಾನದ ದಿನ ರಾತ್ರಿ ಬರುವ ‘ಮತಗಟ್ಟೆ ಸಮೀಕ್ಷೆ’ಗಳನ್ನು ನೋಡಿ. ನಾನು ಹೇಳಿದ್ದು ಸುಳ್ಳಾದರೆ ಆಗ ಕೇಳಿ.

* 2008ರಲ್ಲಿ ಅಧಿಕಾರ ಕೊಟ್ಟಾಗ ಕಚ್ಚಾಟದಲ್ಲೇ ಕಾಲಕಳೆದರು ಎನ್ನುವ ಅಭಿಪ್ರಾಯ ಇದೆ. ಈ ಬಾರಿ ಅಧಿಕಾರಕ್ಕೆ ಬಂದರೆ ಆ ತಪ್ಪು ಮಾಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?

ನೋಡಿ, ಹಿಂದಿನದು ಈಗ ಬೇಡ. ಖಂಡಿತವಾಗಿ ಹೇಳುತ್ತೇನೆ, ಉತ್ತಮ ಆಡಳಿತ ನೀಡುವುದಂತೂ ಖಚಿತ. ಈ ವಿಷಯದಲ್ಲಿ ಯಾವ ಗೊಂದಲವೂ ಬೇಡ. ಮೊದಲಿನ ಹಾಗೆ ಏರುಪೇರುಗಳು ಇರುವುದಿಲ್ಲ.

* ನೀವು ಮುಖ್ಯಮಂತ್ರಿಯವರ ದುಬಾರಿ ವಾಚ್‌ ಬಗ್ಗೆ ಮಾತನಾಡುತ್ತೀರಿ. ಆದರೆ, ಕಾಂಗ್ರೆಸ್‌ನವರು ಪ್ರಧಾನಿಯವರ ದುಬಾರಿ ಸೂಟ್ ಬಗ್ಗೆ ಮಾತನಾಡುತ್ತಿದ್ದಾರಲ್ಲ. ಈ ಬಗ್ಗೆ ಏನು ಹೇಳುತ್ತೀರಿ?

ನಾವು ದುಬಾರಿ ವಾಚ್‌ ಕಟ್ಟಿಕೊಂಡಿದ್ದರ ಬಗ್ಗೆ ಮಾತನಾಡುತ್ತಿಲ್ಲ. ಅದನ್ನು ಕೊಟ್ಟಿದ್ದು ಯಾರು, ಏಕೆ ಕೊಟ್ಟರು, ಅದನ್ನು ಕೊಡುವಷ್ಟರ ಮಟ್ಟಿಗೆ ಅವರಿಗೆ ಯಾವ ರೀತಿಯ ಅನುಕೂಲ ಮಾಡಿಕೊಡಲಾಗಿದೆ ಎಂಬುದನ್ನು ಕೇಳುತ್ತಿದ್ದೇವೆ. ಅದನ್ನು ಮೊದಲು ಅವರು ಹೇಳಲಿ. ಜನರಿಗೆ ತಿಳಿಸುವುದು ಅವರ ಕರ್ತವ್ಯ ಕೂಡ.

* ಪ್ರಧಾನಿಯೂ ದುಬಾರಿ ಸೂಟ್‌ ತೊಟ್ಟಿದ್ದರು ಎನ್ನುತ್ತಾರಲ್ಲ...

(ಸಿಟ್ಟಾಗಿ...) ಅವರಿಗೆ (ಮುಖ್ಯಮಂತ್ರಿ) ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಪ್ರಧಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತಾರಂತೆ. ಅವರೆಲ್ಲಿ, ಇವರೆಲ್ಲಿ. ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯ ಇಲ್ಲ.

* ದೇಶದ ಪ್ರಧಾನಿ, ರಾಜ್ಯವೊಂದರ ಚುನಾವಣೆಗೆ ಈ ಪಾಟೀ ಸುತ್ತುವ ಅಗತ್ಯ ಇತ್ತೇ? ಸೋಲುವ ಭೀತಿ ಏನಾದರೂ ಕಾರಣವೇ?

ಹಾಗೇನೂ ಇಲ್ಲ. ಪ್ರಧಾನಿ ನಾಲ್ಕು ವರ್ಷಗಳ ಕಾಲ ರಾಜ್ಯಕ್ಕೆ ವಿಪರೀತ ಅನುದಾನ ಕೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಅಷ್ಟು ಕೊಟ್ಟರೂ ಈ ಸರ್ಕಾರ ಏನೂ ಮಾಡಿಲ್ಲ ಎನ್ನುವುದನ್ನು ಜನರಿಗೆ ಹೇಳಬೇಕಾಗುತ್ತದೆ. ಹೀಗಾಗಿ ಬಂದಿದ್ದಾರೆ. ಪಕ್ಷಕ್ಕೆ ಅವರು ಶಕ್ತಿ. ಅದರಲ್ಲಿ ತಪ್ಪೇನೂ ಇಲ್ಲ.

* ಅಮಿತ್‌ ಶಾ ನೋಡಿದರೆ, ಜರ್ನಾದನ ರೆಡ್ಡಿ ಬಿಜೆಪಿಯಲ್ಲಿ ಇಲ್ಲ ಅನ್ನುತ್ತಾರೆ. ನೀವು ನೋಡಿದರೆ, ಅವರಿಂದ 10–15 ಸೀಟುಗಳಿಗೆ ಅನುಕೂಲ ಆಗುತ್ತದೆ ಎನ್ನುತ್ತೀರಿ. ಏಕೆ ಈ ವಿರೋಧಾಭಾಸದ ಹೇಳಿಕೆ?

ನೋಡಿ, ಚುನಾವಣೆ ಸಂದರ್ಭದಲ್ಲಿ ವೈರಿಗಳನ್ನೂ ವೋಟ್‌ ಕೇಳಬೇಕು. ಇಷ್ಟಕ್ಕೂ ಪಕ್ಷಕ್ಕೆ ಅನುಕೂಲ ಆಗುವುದಾದರೆ ಆಗಲಿ ಎನ್ನುವುದು ನನ್ನ ಭಾವನೆ. ರೆಡ್ಡಿ ಕೆಲವು ಕ್ಷೇತ್ರಗಳಲ್ಲಿ ಹಿಡಿತ ಹೊಂದಿದ್ದು, ಅವರು ಪಕ್ಷಕ್ಕೆ ಅನುಕೂಲ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ.

* ಮತ್ತೆ ಅಮಿತ್‌ ಶಾ ಹಾಗೆ ಹೇಳಿದ್ದು ಸರಿಯೇ?

ಅದು ಅವರ ಅಭಿಪ್ರಾಯ. ನನ್ನ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ.

* ನಿಮ್ಮ ಮಗ ವಿಜಯೇಂದ್ರ ಅವರಿಗೆ ವರುಣಾ ಟಿಕೆಟ್ ತಪ್ಪಲು ಅನಂತ ಕುಮಾರ್‌, ಬಿ.ಎಲ್.ಸಂತೋಷ್‌ ಕಾರಣ ಎನ್ನುವ ಅಭಿಪ್ರಾಯ ಇದೆಯಲ್ಲ?

ಹಾಗೇನೂ ಇಲ್ಲ. ಪಕ್ಷದ ಹೈಕಮಾಂಡ್‌, ಅಪ್ಪ– ಮಗನಿಗೆ ಟಿಕೆಟ್‌ ಕೊಡುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿತು. ಅದು ನನಗೂ ಸರಿ ಅನಿಸಿತು. ತಕ್ಷಣ ಮಗನಿಗೆ ಕರೆದು ಹೇಳಿದೆ. ಅವನು ಕೂಡ ಅದನ್ನು ಒಪ್ಪಿ ಹಿಂದೆ ಸರಿದಿದ್ದಾನೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಗಲು–ರಾತ್ರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾನೆ.

* ಇದು ನಿಮ್ಮನ್ನು ಕಟ್ಟಿಹಾಕುವ ಪ್ರಯತ್ನ ಅನಿಸುವುದಿಲ್ಲವೇ?

ಇಲ್ಲಪ್ಪ, ಆ ರೀತಿ ಇಲ್ಲ. ಯಾರೂ ಇದಕ್ಕೆ ಅಡ್ಡಿಪಡಿಸಿಲ್ಲ. ಪಕ್ಷದ ತೀರ್ಮಾನ ಅಷ್ಟೆ.

* ನಿಮ್ಮನ್ನು ಪದೇ ಪದೇ ಕಳಂಕಿತರು, ಜೈಲಿಗೆ ಹೋಗಿ ಬಂದವರು ಎನ್ನುತ್ತಾರಲ್ಲ...

ಹೇಳಲಿ... ನನ್ನ ಮೇಲಿನ ಯಾವ ಕೇಸ್‌ ಸಾಬೀತಾಗಿದೆ ಹೇಳಲಿ.

* ವಿರೋಧ ಪಕ್ಷದಲ್ಲಿ ಇದ್ದೂ ನೀವು ಸರ್ಕಾರದ ಹಗರಣಗಳನ್ನು ಬಯಲಿಗೆ ಎಳೆಯಲಿಲ್ಲ ಎನ್ನುವ ಆರೋಪ ಇದೆ. ಏಕೆ ಹೀಗಾಯ್ತು?

ಇದು ಭಂಡ ಸರ್ಕಾರ. ಈ ಸರ್ಕಾರದಲ್ಲಿ ಏನೇನು ಅಕ್ರಮ ನಡೆದಿದೆ ಎಂಬುದನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತನಿಖೆ ಮಾಡಿಸುತ್ತೇನೆ. ಮೊದಲಿಗೆ ಜಲಸಂಪನ್ಮೂಲ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳನ್ನು ಬಯಲಿಗೆ ಎಳೆಯುತ್ತೇನೆ. ಆಗ ಗೊತ್ತಾಗುತ್ತದೆ ಯಾರು ಏನು ಎನ್ನುವುದು.

* ನೀವು ಅಧಿಕಾರದಲ್ಲಿ ಇದ್ದಾಗ ವಿರೋಧ ಪಕ್ಷಗಳು (ಜೆಡಿಎಸ್, ಕಾಂಗ್ರೆಸ್‌) ಸಕ್ರಿಯವಾಗಿದ್ದವು. ಈಗ ಆ ರೀತಿ ಇಲ್ಲದಿರುವುದು ನಿಮ್ಮ ದೌರ್ಬಲ್ಯ ಅಲ್ಲವೇ?

ಪಕ್ಷದ ವತಿಯಿಂದಲೂ ಸಾಕಷ್ಟು ಹೋರಾಟ ಮಾಡಿದ್ದೇವೆ. ಆದರೆ ಏನು ಮಾಡುವುದು, ಕ್ರಮ ತೆಗೆದುಕೊಳ್ಳಬೇಕಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನೇ ಸಿದ್ದರಾಮಯ್ಯ ದುರ್ಬಲಗೊಳಿಸಿದರು. ಹೀಗಾಗಿ ಅವರು ಮಾಡಿದ್ದ ಅಕ್ರಮಗಳು ಹೊರಗೆ ಬರಲಿಲ್ಲ. ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ಹೊರ ತೆಗೆಯುತ್ತೇನೆ.

* ಹಾಗಾದರೆ ನೀವು ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಶಕ್ತಿ ತುಂಬುವಿರಾ?

ಖಂಡಿತಾ ಆ ಕೆಲಸ ಮಾಡುತ್ತೇನೆ. ಎ.ಸಿ.ಬಿ (ಭ್ರಷ್ಟಾಚಾರ ನಿಗ್ರಹ ದಳ) ರದ್ದುಪಡಿಸಿ, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಡುತ್ತೇನೆ.

* ಬಿಜೆಪಿ– ಜೆಡಿಎಸ್‌ ನಡುವೆ ಒಳ ಒಪ್ಪಂದ ಆಗಿದೆ ಎನ್ನುವ ಗುಸುಗುಸು ಬಗ್ಗೆ ಏನಂತೀರಾ?

ಯಾವ ಒಪ್ಪಂದವೂ ಇಲ್ಲ. ಬೇಕಾದರೆ ಒಂದೇ ಒಂದು ಉದಾಹರಣೆ ತೋರಿಸಲಿ.

* ಹಳೇ ಮೈಸೂರು ಭಾಗದ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಒಪ್ಪಂದ ಆಗಿದೆ ಅನ್ನುತ್ತಿದ್ದಾರಲ್ಲ...

ಆ ರೀತಿ ಏನೂ ಆಗಿಲ್ಲ. ನಾವು ಈ ಬಾರಿ ಹಾಸನ, ಮಂಡ್ಯ ಜಿಲ್ಲೆಗಳಲ್ಲೂ ಗೆಲ್ಲುತ್ತೇವೆ.

* ಅತಂತ್ರ ವಿಧಾನಸಭೆ ರಚನೆ ಬಗ್ಗೆ ಜೆಡಿಎಸ್‌ ಮಾತನಾಡುತ್ತಿದೆ. ಅದಕ್ಕೆ ಏನು ಹೇಳುವಿರಿ?

ಜೆಡಿಎಸ್‌ನವರು ಹಗಲುಗನಸು ಕಾಣುತ್ತಿದ್ದಾರೆ. ಆ ರೀತಿ ಆಗುವುದಿಲ್ಲ. ನಾವು ಈ ಹಿಂದೆ ಅವರೊಟ್ಟಿಗೆ ಇದ್ದು ಅನುಭವಿಸಿದ್ದು ಸಾಕು. ಪುನಃ ಆ ಸಾಹಸಕ್ಕೆ ಕೈಹಾಕಲ್ಲ.

* 75 ವರ್ಷ ಆದವರಿಗೆ ಪಕ್ಷದಲ್ಲಿ ಅಧಿಕಾರ ಇಲ್ಲ ಎನ್ನುವುದು ನಿಮಗೂ ಅನ್ವಯಿಸುತ್ತದೆಯೇ?

ಆ ರೀತಿ ಏನೂ ಇಲ್ಲ. ಪಕ್ಷದ ವರಿಷ್ಠರೇ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎರಡು ವರ್ಷಗಳ ಹಿಂದೆಯೇ ಘೋಷಿಸಿದ್ದಾರೆ. ಇದರಲ್ಲಿ ಅನುಮಾನ ಏಕೆ?

* ನೀವು ಮುಖ್ಯಮಂತ್ರಿಯಾದರೂ ಲೋಕಸಭಾ ಚುನಾವಣೆವರೆಗೆ (2019) ಎನ್ನುವ ಮಾತುಗಳ ಬಗ್ಗೆ ಏನು ಹೇಳುವಿರಿ?

ಅದೆಲ್ಲ ಸುಳ್ಳು. ಮೇ 17ಕ್ಕೆ ಮುಖ್ಯಮಂತ್ರಿಯಾಗುವುದು ಖಚಿತ. ಅದರ ನಂತರ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ.

* ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌– ಬಿಜೆಪಿ ಎರಡೂ ಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುವ ಅಭಿಪ್ರಾಯ ಇದೆ...

ಹಾಗೇನೂ ಇಲ್ಲ. ಕಾಂಗ್ರೆಸ್‌ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿತ್ತು. ಸೋನಿಯಾ ಗಾಂಧಿ ಗೋವಾ ಚುನಾವಣೆ ಸಂದರ್ಭದಲ್ಲಿ ನೀರು ಬಿಡಲು ಸಾಧ್ಯ ಇಲ್ಲ ಎಂದಿದ್ದರು. ಅದನ್ನು ಪ್ರಧಾನಿ ಪ್ರಸ್ತಾಪಿಸಿ, ಸೌಹಾರ್ದಯುತವಾಗಿ ವಿವಾದ ಬಗೆಹರಿಸುವುದಾಗಿ ಹೇಳಿದ್ದಾರೆ. ಅಮಿತ್‌ ಶಾ ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ರಾಜಕೀಯ ಏನೂ ಇಲ್ಲ.

* ನಿಮ್ಮ ಆತ್ಮೀಯ ಸ್ನೇಹಿತ ಕೆ.ಎಸ್‌.ಈಶ್ವರಪ್ಪ ಅವರನ್ನು ಈ ಬಾರಿ ಗೆಲ್ಲಿಸುತ್ತೀರೋ ಸೋಲಿಸುತ್ತೀರೋ?

(ನಗುತ್ತಾ...) ನೂರಕ್ಕೆ ನೂರರಷ್ಟು ಈಶ್ವರಪ್ಪ ಗೆಲ್ಲುತ್ತಾರೆ. ಈ ವಿಷಯದಲ್ಲಿ ಅನುಮಾನವನ್ನೇ ಇಟ್ಟುಕೊಳ್ಳಬೇಡಿ.

* ನಿಮ್ಮ ಪಕ್ಷಕ್ಕೆ ಯಾವ ಕಾರಣಕ್ಕೆ ವೋಟ್‌ ಹಾಕಬೇಕು?

ಹಿಂದೆ ನಮ್ಮ ಸರ್ಕಾರ ಇದ್ದಾಗ ಒಳ್ಳೆಯ ಕೆಲಸ ಮಾಡಿದ್ದೇವೆ. ಹಾಗೆಯೇ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಪರವಾದ ಕೆಲಸ ಮಾಡುತ್ತಿದೆ. ರೈತರು ಕಡುಕಷ್ಟದಲ್ಲಿ ಇದ್ದಾರೆ. ಅವರ ಸಾಲ ಮನ್ನಾ ಮಾಡಲು‌, ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 10 ಗಂಟೆ 3–ಫೇಸ್‌ ವಿದ್ಯುತ್‌ ನೀಡಲು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರಬೇಕಾಗಿದೆ. ಭ್ರಷ್ಟ ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ತೊಲಗಿಸಬೇಕಾಗಿದೆ. ರಾಜ್ಯವನ್ನು ಕಾಂಗ್ರೆಸ್‌ ಮುಕ್ತ ಮಾಡಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.