ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮಾಸ್ತ್ರ’ಕ್ಕೆ ‘ಅಹಿಂದ’ ಪ್ರತ್ಯಸ್ತ್ರ

ಪ್ರಧಾನಿ ಮೋದಿ– ಸೋನಿಯಾ ಗಾಂಧಿ ವಾಕ್ಸಮರ
Last Updated 8 ಮೇ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಲು ಎರಡು ದಿನ ಮಾತ್ರ ಬಾಕಿ ಇದ್ದು, ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ. ಮತದಾರರ ಮನಸ್ಸು ಗೆಲ್ಲಲು ಮೂರೂ ಪಕ್ಷಗಳ ನಾಯಕರು ಭಾರಿ ಕಸರತ್ತು ಮುಂದುವರಿಸಿದ್ದಾರೆ.

ಪ್ರಚಾರ ಅಂಗಳದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಯೋಗಿ ಆದಿತ್ಯನಾಥ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‍ ಗಾಂಧಿ, ಜೆಡಿಎಸ್‌ ವರಿಷ್ಠ ದೇವೇಗೌಡ ಮಂಗಳವಾರ ಬಿರುಗಾಳಿಯನ್ನೇ ಎಬ್ಬಿಸಿದರು.

ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಮತ್ತು ಆ ಪಟ್ಟ ಕಿತ್ತು ಕೊಳ್ಳುವ ಪಣತೊಟ್ಟಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ‘ಕಿಂಗ್‌’ ಆಗುವ ಉಮೇದಿನಲ್ಲಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಮಾಡಿದರು.

ವಿಜಯಪುರದಲ್ಲಿ ಮಾತನಾಡಿದ ಮೋದಿ, ‘ಬಸವಣ್ಣನವರ ಹೆಸರು ಹೇಳಿಕೊಂಡು ಜಾತಿ, ಧರ್ಮಗಳನ್ನು ಒಡೆಯುತ್ತಿರುವ ನಿಮ್ಮ ಹುನ್ನಾರ ಯಶಸ್ವಿಯಾಗುವುದಿಲ್ಲ. ಈ ಪುಣ್ಯಭೂಮಿಯ ಜನರನ್ನು ಒಡೆದಾಳಲು ಸಾಧ್ಯವಿಲ್ಲ’ ಎಂದು ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಪ್ರಸ್ತಾಪಿಸದೇ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಜಲಸಂಪನ್ಮೂಲ ಸಚಿವರು, ಉನ್ನತ ಶಿಕ್ಷಣ ಹಾಗೂ ಗಣಿ ಸಚಿವರು ಜಾತಿ ಒಡೆಯುವ ಷಡ್ಯಂತ್ರ ರಚಿಸಿದ್ದಾರೆ. ಅಧಿಕಾರಕ್ಕಾಗಿ ಜಾತಿ, ಧರ್ಮ ಒಡೆಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಬಸವಣ್ಣನ ಪ್ರಜಾಪ್ರಭುತ್ವ, ಮಹಿಳಾ ಸಮಾನತೆಯ ವಿಷಯವನ್ನು ವಿಶ್ವಕ್ಕೆ ಸಾರುವ ಕೆಲಸವನ್ನು ಮಾಡುತ್ತಿದೆ’ ಎಂದು ಮೋದಿ ಹೇಳಿದರು.

‘ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರಿಗೆ ದೇಶದ ಬಡ ಮಹಿಳೆಯರ ಸಂಕಟ ಹೇಗೆ ಅರ್ಥವಾಗುತ್ತದೆ’ ಎಂದು ಸೋನಿಯಾ–ರಾಹುಲ್‌ ವಿರುದ್ಧವೂ ಅವರು ಕೊಪ್ಪಳದಲ್ಲಿ ಹರಿಹಾಯ್ದರು.

ವಿಜಯಪುರದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ‘ಮೋದಿ ಸುಳ್ಳುಗಾರ. ಇತಿಹಾಸ ತಿರುಚುವುದರಲ್ಲಿ ನಿಸ್ಸೀಮ’ ಎಂದು ತಿರುಗೇಟು ಕೊಟ್ಟರು.

‘ನಾಲ್ಕು ವರ್ಷಗಳ ಅಧಿಕಾರದ ಅವಧಿಯಲ್ಲಿ ಬಡವರು, ರೈತರು, ಮಹಿಳೆಯರು ಸೇರಿದಂತೆ ಅಹಿಂದ ವರ್ಗಕ್ಕೆ ಏನು ಮಾಡಿದ್ದೀರಿ? ಲೋಕ
ಪಾಲ್‌ ಮಸೂದೆ ಏನಾಯಿತೆಂಬುವುದು ಯಾರಿಗೂ ಗೊತ್ತಿಲ್ಲ. ಭ್ರಷ್ಟರನ್ನು ಪಕ್ಕಕ್ಕೆ ಕೂರಿಸಿಕೊಂಡು ಮಾತನಾಡುತ್ತಿದ್ದೀರಿ’ ಎಂದು ಕುಟುಕಿದರು.

‘ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಎಲ್ಲೆಡೆ ಘೋಷಿಸುತ್ತಿದ್ದೀರಿ. ಮೊದಲು ನಿಮ್ಮ ಪರಿಸ್ಥಿತಿ ಎಲ್ಲಿಗೆ ಬರಲಿದೆ ಎಂಬುದನ್ನು ಅರಿಯಿರಿ’ ಎಂದೂ ಲೇವಡಿ ಮಾಡಿದರು.

‘ಕಾಂಗ್ರೆಸ್‌ ತತ್ವ ಬಸವ ತತ್ವವಾಗಿದೆ. ಸಿದ್ಧಾಂತವೂ ಇದೇ ಆಗಿದೆ. ಆದರೆ, ನೀವು ಮಾತ್ರ ಬಸವಣ್ಣನ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೀರಿ. ಕರ್ನಾಟಕದಲ್ಲಿನ ಜನರು ನಿಮ್ಮನ್ನು ತಿರಸ್ಕರಿಸುವುದು ಖಚಿತ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ’ ಎಂದೂ ಸೋನಿಯಾ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾತನಾಡಿದ ಎಚ್‌.ಡಿ.ದೇವೇಗೌಡ, ‘ಈ ಬಾರಿ 10ರಿಂದ 12 ಪಕ್ಷೇತರರು ಗೆಲುವು ಪಡೆಯಬಹುದು ಎಂಬುದು ನನ್ನ ಲೆಕ್ಕಾಚಾರ. ಬಿಎಸ್‌ಪಿಗೆ 2–3 ಸ್ಥಾನಗಳು ಲಭಿಸಬಹುದು. ಪಕ್ಷೇತರರ ಜತೆ ಸೇರಿ ಸರ್ಕಾರ ರಚಿಸುವ ದೃಢವಾದ ನಂಬಿಕೆಯಿದೆ. ನನಗೆ ಭ್ರಮೆ ಇಲ್ಲವೇ ಇಲ್ಲ. ನನ್ನದೇ ಆದ ಲೆಕ್ಕಾಚಾರಗಳಿಲ್ಲದೆ ಯಾವುದೇ ಮಾತುಗಳನ್ನಾಡುವುದಿಲ್ಲ’ ಎಂದರು.

ಜೆಡಿಎಸ್‌ ಪರ ಬೆಳಗಾವಿಯಲ್ಲಿ ಪ್ರಚಾರ ನಡೆಸಿದ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ‘ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ನಿವೃತ್ತಿ ಪಡೆದು ಗುಜರಾತ್‌ಗೆ ಹೋಗುವುದು ಖಚಿತ’ ಎಂದರು.

* ಮಗನ ಮೇಲೆ ಭರವಸೆ ಇಲ್ಲದ್ದರಿಂದ ತಾಯಿಯನ್ನು (ಸೋನಿಯಾ) ಕರೆದು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ

–ನರೇಂದ್ರ ಮೋದಿ, ಪ್ರಧಾನಿ

* ಮೋದಿಯ ಬಣ್ಣದ ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ. ನಿರುದ್ಯೋಗಿಗಳಿಗೆ ಕೆಲಸ ಸಿಗುವುದಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ

–ಸೋನಿಯಾ ಗಾಂಧಿ, ಕಾಂಗ್ರೆಸ್‌ ಹಿರಿಯ ನಾಯಕಿ

* ರಾಜ್ಯದಲ್ಲಿ ಜೆಡಿಎಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಪಕ್ಷೇತರರ ನೆರವಿನಿಂದ ಸರ್ಕಾರ ರಚಿಸುವುದು ಶತಸ್ಸಿದ್ಧ

-ಎಚ್‌.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT