ಸೋಮವಾರ, ಮಾರ್ಚ್ 8, 2021
30 °C

ರಾಜರಾಜೇಶ್ವರಿ ನಗರದಲ್ಲಿ ಗುರುತಿನ ಚೀಟಿ ಪತ್ತೆ: ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿ ನಗರದಲ್ಲಿ ಗುರುತಿನ ಚೀಟಿ ಪತ್ತೆ: ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಕೆ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫ್ಲ್ಯಾಟ್‌ನಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಚುನಾವಣಾಧಿಕಾರಿ ಕಚೇರಿಯು ಕೇಂದ್ರ ಚುನಾವಣಾ ಆಯೋಗಕ್ಕೆ ವಿಸ್ತೃತ ವರದಿ ಸಲ್ಲಿಸಿದೆ.

ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಈಗಾಗಲೇ ಪ್ರಾಥಮಿಕ ತನಿಖೆ ಪೂರ್ಣಗೊಂಡಿದೆ. ಇದರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕ್ರಮ ಪ್ರಕಟಿಸಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಭಾರಿ ಪ್ರಮಾಣದಲ್ಲಿ ಮತದಾರರ ಗುರುತಿನ ಚೀಟಿಯನ್ನು ಸಂಗ್ರಹಿಸಿಟ್ಟಿರುವುದು ಅಪರಾಧ. ಕೊಳೆಗೇರಿ ವಾಸಿಗಳಿಗೆ ಆಮಿಷ ಒಡ್ಡುವ ಉದ್ದೇಶದಿಂದಲೇ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸಿರುವುದು ಖಚಿತವಾಗಿದೆ. ಇದರ ಹಿಂದೆ ಯಾರು ಇದ್ದಾರೆ ಎಂಬುದರ ವಿಚಾರಣೆ ನಡೆಯುತ್ತಿದೆ ಎಂದೂ ಅವರು ಹೇಳಿದರು.

ಕ್ಷೇತ್ರದಲ್ಲಿ ಈಗ 4,71,459 ಮತದಾರರು ಇದ್ದಾರೆ. ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಇತರ ಎಲ್ಲ ಕ್ಷೇತ್ರಗಳಿಗಿಂತಲೂ ಈ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರ ಸಂಖ್ಯೆ ಶೇ 10ರಷ್ಟು ಹೆಚ್ಚಾಗಿತ್ತು. ಈ ಪ್ರಮಾಣದ ಏರಿಕೆ ಬೇರೆ ಯಾವುದೇ ಕ್ಷೇತ್ರದಲ್ಲೂ ಕಂಡುಬಂದಿಲ್ಲ ಎಂದೂ ಅವರು ತಿಳಿಸಿದರು.

ಆಯೋಗವು ವಶಪಡಿಸಿಕೊಂಡ ಸ್ಥಳದಲ್ಲಿ ಹೊಸ ಮತ್ತು ಹಳೆಯ ಮತದಾರರ ಗುರುತಿನ ಚೀಟಿಗಳು ಸಿಕ್ಕಿವೆ. ಇವು ನೈಜವಾದ ಗುರುತಿನ ಚೀಟಿಗಳು. ಅಲ್ಲದೆ, ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸುವಾಗ ನೀಡುವ ಸ್ವೀಕೃತಿ ಪತ್ರಗಳ ಕಂತೆಗಳೂ ಸಿಕ್ಕಿವೆ. ಅದರಲ್ಲಿ ಬಿಬಿಎಂಪಿ ಮೊಹರು 6,342 ಸ್ವೀಕೃತಿ ಪತ್ರಗಳಲ್ಲಿ ಇದೆ, 20,700 ಸ್ವೀಕೃತಿ ಪತ್ರಗಳಲ್ಲಿ ಇಲ್ಲ ಎಂದು ಸಂಜೀವ್‌ ಕುಮಾರ್ ತಿಳಿಸಿದರು.

ಇಲ್ಲಿ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಮೂಲಕ ಆಯೋಗದ ಸಿಸ್ಟಮ್‌ ಹ್ಯಾಕ್ ಮಾಡಿ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತಿದೆ ಎಂಬ ವದಂತಿ ಹರಡಿತ್ತು. ಆದ ಕಾರಣ ಸ್ಥಳಕ್ಕೆ ಭೇಟಿ ನೀಡಿದ್ದೆ. ಆದರೆ, ಅಲ್ಲಿ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿದ್ದು ಕಂಡು ಬರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಆಯುಕ್ತರಿಗೆ ಜೆಡಿಎಸ್‌ ಪತ್ರ

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡುವಂತೆ ಜೆಡಿಎಸ್‌, ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.

‘ಈ ಪ್ರಕರಣದಲ್ಲಿ ಸ್ಥಳೀಯ ಶಾಸಕರ ಕೈವಾಡ ಇದೆ. ನಮಗಿರುವ ಮಾಹಿತಿಯ ಪ್ರಕಾರ, 30 ಸಾವಿರಕ್ಕೂ ಹೆಚ್ಚು ಅಸಲಿ, ನಕಲಿ ಮತದಾರರ ಗುರುತಿನ ಚೀಟಿಗಳನ್ನು ಅವರು ತಮ್ಮ ವಶದಲ್ಲಿ ಇಟ್ಟಕೊಂಡಿದ್ದಾರೆ’ ಎಂದು ಪತ್ರದಲ್ಲಿ ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ತಿಳಿಸಿದ್ದಾರೆ.

ತಮಿಳುನಾಡಿನ ತಂಜಾವೂರು ಮತ್ತು ಅರಕುರಿಚಿ ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹುದೇ ಸ್ಥಿತಿ ಉದ್ಭವಿಸಿದಾಗ, ಆಯೋಗವು ಚುನಾವಣೆ ಮುಂದೂ

ಡಿತ್ತು. ಆದ್ದರಿಂದ, ರಾಜರಾಜೇಶ್ವರಿ ನಗರದಲ್ಲೂ ಇಂತಹುದೇ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ಮನವಿ

ನವದೆಹಲಿ: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಮತದಾರರ ಸಾವಿರಾರು ಗುರುತಿನ ಚೀಟಿಗಳು ಪತ್ತೆಯಾಗಿರುವ ಕುರಿತು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‌ ಮತ್ತು ಬಿಜೆಪಿ ನಿಯೋಗಗಳು ಬುಧವಾರ ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿವೆ.

ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಅವರನ್ನು ಮಧ್ಯಾಹ್ನ ಭೇಟಿ ಮಾಡಿದ ಕಾಂಗ್ರೆಸ್‌ ಪಕ್ಷದ ಹಿರಿಯ ವಕ್ತಾರ ಆನಂದ ಶರ್ಮಾ ನೇತೃತ್ವದ ನಿಯೋಗವು, ಬಿಜೆಪಿ ಮುಖಂಡರಿಗೆ ಸೇರಿರುವ ಈ ಫ್ಲ್ಯಾಟ್‌ನಲ್ಲಿ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಏಕೆ ಎಂಬ ವಿಷಯ ಬಹಿರಂಗಗೊಳ್ಳಬೇಕಿದೆ ಎಂದು ಒತ್ತಾಯಿಸಿತು.

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯು ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಕೇವಲ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಮುಖಂಡರ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ನಿಯೋಗ ಆರೋಪಿಸಿದೆ.

ಕರ್ನಾಟಕದಲ್ಲಿ ಠಿಕಾಣಿ ಹೂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಚುನಾವಣೆಯಲ್ಲಿ ಜಯ ಗಳಿಸಲು ಇಂತಹ ಪಿತೂರಿ ನಡೆಸಿದ್ದಾರೆ ಎಂದುಶರ್ಮಾ ಸುದ್ದಿಗಾರರೆದುರು ಆರೋಪಿಸಿದರು.

ಚುನಾವಣೆ ಮುಂದೂಡಲು ಮನವಿ: ಕಾಂಗ್ರೆಸ್‌ ಪಕ್ಷವು ಮತದಾರರ ಮೇಲೆ ಪ್ರಭಾವ ಬೀರುವ ಕೆಲಸಕ್ಕೆ ಮುಂದಾಗಿರುವುದು ಈ ಮೂಲಕ ಸಾಬೀತಾಗಿದ್ದು, ಕೂಡಲೇ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕು ಎಂದು ಬಿಜೆಪಿ ನಿಯೋಗವೂ ಆಯೋಗವನ್ನು ಆಗ್ರಹಿಸಿದೆ.

ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವುದು ಕಾಂಗ್ರೆಸ್‌ನ ಕುಕೃತ್ಯಕ್ಕೆ ಸಾಕಷ್ಟು ಸಾಕ್ಷ್ಯ ಒದಗಿಸಿದೆ. ಈ ಪ್ರಕರಣದ ಕುರಿತು ತನಿಖೆ ನಡೆಸಿ, ಸತ್ಯಾಂಶವನ್ನು ಹೊರಗೆಳೆಯುವ ಮೂಲಕ ಚುನಾವಣೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಬೇಕಿದೆ ಎಂದು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಸ್ಮೃತಿ ಇರಾನಿ ಹಾಗೂ ಮುಖ್ತಾರ್‌ ಅಬ್ಬಾಸ್‌ ನಕ್ವಿ ಅವರನ್ನು ಒಳಗೊಂಡ ನಿಯೋಗ ಕೋರಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.