ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠ ಜಾತಿಗಳ ಕೇರಿಗೆ ಪ್ರವೇಶ ಸಿಕ್ಕಿದೆ, ಸದ್ಯಕ್ಕೆ ಅಷ್ಟು ಸಾಕು-:ಬಿಎಸ್‌ಪಿ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ದುಡ್ಡು ನುಂಗುವ ದೈತ್ಯಕಾಯವಾಗಿ ಬೆಳೆದು ನಿಂತಿರುವಚುನಾವಣಾ ಯಂತ್ರ, ಸರಳ ಸಾಮಾನ್ಯ ಅಭ್ಯರ್ಥಿಗಳನ್ನು ಜಜ್ಜಿ ಮುಂದೆ ಸಾಗುವ ಹಾಲಿ ವ್ಯವಸ್ಥೆಯಲ್ಲೂ, ಪ್ರವಾಹಕ್ಕೆ ಎದುರಾಗಿ ಈಜುವ ಅಭ್ಯರ್ಥಿಗಳು ಸಣ್ಣ ಪುಟ್ಟ ಪಕ್ಷಗಳಲ್ಲಿ ಹಲವರಿದ್ದಾರೆ. ಮಾಯಾವತಿ ಅವರ ಬಿಎಸ್‌ಪಿ ಉತ್ತರ ಭಾರತದಲ್ಲಿ ದೊಡ್ಡ ಪಕ್ಷವಾದರೂ ರಾಜ್ಯದಲ್ಲಿ ಸಣ್ಣ ಪಕ್ಷವೇ ಸರಿ.

2008ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಗಳಿಸಿದ್ದ ಶೇಕಡಾವಾರು ಮತಗಳ ಪ್ರಮಾಣ 2.74. 2013ರ ವೇಳೆಗೆ ಈ ಪ್ರಮಾಣ 0.94ಕ್ಕೆ ಕುಸಿದಿತ್ತು. 2013ರ ಚುನಾವಣೆಯ ಒಂಬತ್ತು ಕ್ಷೇತ್ರಗಳಲ್ಲಿ ಬಿಎಸ್‌ಪಿ ಗಳಿಸಿದ ಮತಗಳ ಸಂಖ್ಯೆಯು ಜೆಡಿಎಸ್‌ ಸೋಲಿನ ಅಂತರಕ್ಕಿಂತ ಜಾಸ್ತಿ ಇತ್ತು. ಈ ಅಂಶವನ್ನು ಪರಿಗಣಿಸಿ ಜೆಡಿಎಸ್‌ ಮಾಯಾವತಿಯವರ ಕೈ ಕುಲುಕಿದೆ.

20 ಸೀಟುಗಳಲ್ಲಿ ಸ್ಪರ್ಧಿಸಿರುವ ದಲಿತ ಮೂಲದ ಈ ಪಕ್ಷದ ಹುರಿಯಾಳುಗಳಲ್ಲಿ ದಲಿತರು ಮಾತ್ರವಲ್ಲದೆ ಲಿಂಗಾಯತ, ಕುರುಬ, ಹಿಂದುಳಿದ ವರ್ಗಗಳವರೂ ಇದ್ದಾರೆ ಎಂಬುದು ಹೆಚ್ಚು ಮಂದಿಗೆ ತಿಳಿದಂತಿಲ್ಲ. ಚಾಮರಾಜನಗರ, ಗುಂಡ್ಲುಪೇಟೆ, ಬಾಗಲಕೋಟೆಯಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಗದಗದಲ್ಲಿ ಮುಸಲ್ಮಾನ ಮತ್ತು ಬ್ಯಾಡಗಿ, ಹೊನ್ನಾಳಿಯಲ್ಲಿ ಹಿಂದುಳಿದ ವರ್ಗದ ಹುರಿಯಾಳುಗಳು.

ಅಷ್ಟೇ ಅಲ್ಲ, ಈ ಪಕ್ಷದ ದಲಿತ ಹುರಿಯಾಳುಗಳಲ್ಲಿ ಹಲವರು ಅತ್ಯಂತ ಹೆಚ್ಚು ಶೈಕ್ಷಣಿಕ ಅರ್ಹತೆ ಗಳಿಸಿದವರು ಮತ್ತು ಬಿಎಸ್‌ಪಿ ಸಿದ್ಧಾಂತದಲ್ಲಿ ಹುರಿಗೊಂಡ ಯುವಕರು. ಹಲವು ಉಮೇದುವಾರರು ಬೈಸಿಕಲ್, ಸ್ಕೂಟರ್‌ನಲ್ಲಿ ಅಡ್ಡಾಡಿ ಭೋಂಗಾ (ಧ್ವನಿವರ್ಧಕ) ಹೆಗಲಿಗೆ ಕಟ್ಟಿಕೊಂಡು ಪ್ರಚಾರ ನಡೆಸಿದರು.

ಉದಾಹರಣೆಗೆ, ರಾಯಭಾಗದ ಬಿಎಸ್‌ಪಿ ಅಭ್ಯರ್ಥಿ ಡಾ. ರಾಜೀವ ಸೋಮಪ್ಪ ಕಾಂಬಳೆ ಸ್ಕೂಟರ್ ಹಿಂಬದಿಯ ಸೀಟಿನಲ್ಲಿ ಕುಳಿತು ಅಡ್ಡಾಡಿ ಚುನಾವಣಾ ಪ್ರಚಾರ ಮಾಡಿದರು. ಪತ್ರಿಕೋದ್ಯಮದಲ್ಲಿ ಪಿಎಚ್.ಡಿ ಪದವಿ ಗಳಿಸಿರುವ ಈತ, ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳಲ್ಲೇ ಅತ್ಯಂತ ಹೆಚ್ಚು ಶೈಕ್ಷಣಿಕ ಅರ್ಹತೆ ಗಳಿಸಿರುವವರು. ಸರ್ಕಾರಿ ಕೆಲಸಕ್ಕೆ ಸೇರಲಿಲ್ಲ. ಬಿಎಸ್‌ಪಿಯತ್ತ ಆಕರ್ಷಿತರಾಗಿ 1999ರಷ್ಟು ಹಿಂದೆಯೇ ಚಿಕ್ಕೋಡಿಯಿಂದ ಸ್ಪರ್ಧಿಸಿದ್ದರು. 2004ರಲ್ಲಿಯೂ ಅವರು ಬಿಎಸ್‌ಪಿ ಅಭ್ಯರ್ಥಿ. ರಾಜೀವ್ ಊರ ಹೊರಗೆ ದಲಿತ ಕೇರಿಯಲ್ಲಿ ವಾಸಿಸುವ ಎರಡು ಕೊಠಡಿಗಳ ಸರಳ  ಹೆಂಚಿನಮನೆ ಅವರ ತಂದೆ ಕಟ್ಟಿಸಿದ್ದು. ಕೈಯಲ್ಲಿ 50 ಸಾವಿರ ನಗದು ಬಿಟ್ಟರೆ ಬೇರೆ ಆಸ್ತಿಪಾಸ್ತಿ ಇಲ್ಲ. ಚುನಾವಣೆಯ ಸೋಲುಗಳು ರಾಜೀವ್ ಅವರ ಸ್ಥೈರ್ಯವನ್ನು ಕುಗ್ಗಿಸುವುದಿಲ್ಲ. ಸೋಲಬೇಕು, ಸೋಲಿಸಬೇಕು ಮತ್ತು ಕಡೆಯಲ್ಲಿ ಗೆಲ್ಲಬೇಕು ಎಂಬುದು ಕಾನ್ಶಿರಾಂ ಅವರು ಹೇಳಿಕೊಟ್ಟ ಪಾಠ ಎಂದು ಅವರು ನೆನೆಯುತ್ತಾರೆ.

ಚಿಕ್ಕೋಡಿಯ ಬಿಎಸ್‌ಪಿ ಅಭ್ಯರ್ಥಿ ಸದಾಶಿವಪ್ಪ ವಾಲ್ಕೆ, ಕುರುಬ ಜನಾಂಗಕ್ಕೆ ಸೇರಿದವರು. ರೇಷ್ಮೆ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಚಿಕ್ಕೋಡಿಯ ಮಣ್ಣಿಗೆ ಮರಳಿದವರು. ಜೆಡಿಎಸ್‌ನಿಂದ ಸ್ಪರ್ಧಿಸ ಬಯಸಿದ್ದರು. ಸೀಟು ಹೊಂದಾಣಿಕೆಯಲ್ಲಿ ಚಿಕ್ಕೋಡಿ ಬಿಎಸ್‌ಪಿ ಪಾಲಾದ ಕಾರಣ ಪಕ್ಷವನ್ನು ಬದಲಿಸಿದರು. ಬಿಎಸ್‌ಪಿ ಪದಾಧಿಕಾರಿಗಳ ಮಾತುಗಳಲ್ಲಿ ಹೇಳುವುದಾದರೆ, ನೂರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿರುವ ಇವರು ‘ಹುಕ್ಕೇರಿ ಪಾಳೇಗಾರರಿಗೆ’ ಸವಾಲು ಎಸೆಯುವ ಸಾಮರ್ಥ್ಯ ಉಳ್ಳವರು.

ಹೊಂದಾಣಿಕೆಯ ಮೂಲಕ ಬಿಎಸ್‌ಪಿ ಪಾಲಿಗೆ ಬಂದಿರುವ 20ರಲ್ಲಿ ಮೀಸಲು ಕ್ಷೇತ್ರಗಳು 12. ಇವುಗಳ ಪೈಕಿ ಗೆಲ್ಲುವ ಅವಕಾಶವನ್ನು ಕಂಡಿರುವ ಏಕೈಕ ಕ್ಷೇತ್ರ ಚಾಮರಾಜನಗರದ ಕೊಳ್ಳೇಗಾಲ. ಮಹೇಶ್ ಗೆದ್ದರೆ ಅದು ರಾಜ್ಯದಲ್ಲಿ ಬಿಎಸ್‌ಪಿಯ ಮೊದಲ ಗೆಲುವೇನೂ ಅಲ್ಲ. ಸೈಯದ್ ಜುಲ್ಫಿಕರ್ ಹಶ್ಮಿ ಬಿಎಸ್‌ಪಿ ಅಭ್ಯರ್ಥಿಯಾಗಿ ಬೀದರ್‌ನಿಂದ 1994ರಷ್ಟು ಹಿಂದೆಯೇ ವಿಧಾನಸಭೆಗೆ ಆರಿಸಿ ಬಂದಿದ್ದರು. ಮಾಜಿ ಕೆಎಎಸ್ ಅಧಿಕಾರಿಯಾಗಿದ್ದ ಮಹೇಶ್ ರಾಜೀನಾಮೆ ನೀಡಿ 1999ರಲ್ಲಿ ಬಿಎಸ್‌ಪಿ ಸೇರಿದವರು.

ಕಲಬುರ್ಗಿ ದಕ್ಷಿಣದ ಅಭ್ಯರ್ಥಿ ಸೂರ್ಯಕಾಂತ ನಿಂಬಾಳ್ಕರ್ ಕಾರ್ಪೊರೇಟರ್ ಆಗಿದ್ದವರು. 43ರ ಪ್ರಾಯದವರು. ಸಕ್ರಿಯ ಯುವ ಮುಂದಾಳು. ಚಿತ್ತಾಪುರದಲ್ಲಿ ದೇವರಾಜ್ ಅಭ್ಯರ್ಥಿ. 27ರ ಹರೆಯ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ. ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕ ಈತ. ಕಾಂಗ್ರೆಸ್ ಪರವಾಗಿ ಉಮೇದುವಾರಿಕೆ ವಾಪಸು ಪಡೆಯುವಂತೆ ಬಹಳ ಒತ್ತಡವಿತ್ತು. ಆಮಿಷ ಮತ್ತು ಬೆದರಿಕೆಯನ್ನೂ ಒಡ್ಡಲಾಯಿತು. ನಾಮಪತ್ರ ವಾಪಸಿಗೆ ಕಡೆಯ ದಿನಾಂಕ ತೀರುವ ತನಕ ಬಿಎಸ್‌ಪಿ ಕಾರ್ಯಕರ್ತರು ಈ ಅಭ್ಯರ್ಥಿ
ಯನ್ನು ಬಚ್ಚಿಟ್ಟಿದ್ದರು.

ಬೀದರ್ ಉತ್ತರದಲ್ಲಿ ಮಾರಸಂದ್ರ ಮುನಿಯಪ್ಪ ನಿಂತಿದ್ದಾರೆ. ಆನೇಕಲ್ ಅಭ್ಯರ್ಥಿ ಡಾ. ಜಿ.ಶ್ರೀನಿವಾಸ್ ಕೂಡ ಜೆ.ಎನ್.ಯು.ನಿಂದ ನಾಲ್ಕು ವರ್ಷಗಳಷ್ಟು ಹಿಂದೆಯೇ ರಾಜ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಗಳಿಸಿ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರು.

ಸರ್ಕಾರಿ ಉದ್ಯೋಗಗಳಲ್ಲಿರುವ ದಲಿತರಿಂದ ಚುನಾವಣಾ ವೆಚ್ಚಕ್ಕಾಗಿ ಕಳೆದ ಜನವರಿ 26ರಿಂದ ‘ಬಹುಜನ ಸ್ವಾಭಿಮಾನ ನಿಧಿ’ ಸಂಗ್ರಹವಾಗಿದೆ. ನಗದು ದೇಣಿಗೆ ನೀಡಲಾರದವರು ಧ್ವಜ, ವಾಹನ ವೆಚ್ಚ, ಭಿತ್ತಿಪತ್ರ, ಮತಗಟ್ಟೆ ವೆಚ್ಚ ಭರಿಸಿದ್ದಾರೆ. ನಮ್ಮ ಪಕ್ಷ ಮತದಾರರಿಗೆ ಹಣ ನೀಡುವುದಿಲ್ಲ, ಕಾರ್ಯಕರ್ತರ ಕೈಗೂ ಕಾಸು ಕೊಡುವುದಿಲ್ಲ. ಊಟ- ತಿಂಡಿ, ವಾಹನದ ಪೆಟ್ರೋಲ್ ಖರ್ಚು ಮಾತ್ರ ಭರಿಸಲಾಗುವುದು. ಕೆಲವೆಡೆ ಸಂಬಂಧಪಟ್ಟ ಹಳ್ಳಿಯವರು ಸಮುದಾಯ ಭವನಗಳಲ್ಲಿ ಅಡುಗೆ ಮಾಡಿ ಬಡಿಸುತ್ತಾರೆ. ಇನ್ನು ಹಲವು ಗ್ರಾಮಗಳಲ್ಲಿ ಪಕ್ಷವೇ ಅಕ್ಕಿ ಬೇಳೆ ಕೊಟ್ಟು ಮಾಡಿಸುತ್ತದೆ. ಇನ್ನೂ ಕೆಲವೆಡೆ ಮನೆಗೆ ನಾಲ್ಕು ಖಡಕ್ ರೊಟ್ಟಿ ಕೊಟ್ಟು ಬಿಡ್ತಾರೆ. ಶೇ 60-70ರಷ್ಟು ರೊಟ್ಟಿ ದಲಿತ ಕುಟುಂಬಗಳಿಂದ ಮತ್ತು ಉಳಿದದ್ದು ಇತರ ಸಮುದಾಯಗಳ ಕುಟುಂಬಗಳಿಂದ ಸಂಗ್ರಹ ಆಗುತ್ತಿದೆ. ಹೀಗೆ ಸಂಗ್ರಹವಾದ ರೊಟ್ಟಿಯನ್ನು ಎಲ್ಲ ವರ್ಗಗಳ ಕಾರ್ಯಕರ್ತರೂ ಒಟ್ಟಿಗೆ ಕುಳಿತು ಉಣ್ಣುವುದು ವಿಶೇಷ ಎನ್ನುತ್ತಾರೆ ಬಿಎಸ್‌ಪಿಯ ರಾಜ್ಯ ಚುನಾವಣಾ ಉಸ್ತುವಾರಿ ನೋಡಿಕೊಳ್ಳುವ ಮುಂದಾಳುಗೋಪಿನಾಥ್.

‘ಮೈತ್ರಿ ಇದ್ದಿದ್ದರೆ ಸಿರಗನಹಳ್ಳಿ ಪ್ರಕರಣ ನಡೆಯುತ್ತಿರಲಿಲ್ಲ’

ರಾಜ್ಯದ ಸಾಮಾಜಿಕ ಏಣಿ ಶ್ರೇಣಿ ವ್ಯವಸ್ಥೆಯಲ್ಲಿ ಎಣ್ಣೆ- ಸೀಗೇಕಾಯಿಯಂತಿರುವ ಜೆಡಿಎಸ್‌ ಮತ್ತು ಬಿಎಸ್‌ಪಿ ಒಟ್ಟಿಗೇ ಬಂದಿರುವುದು ವಿಚಿತ್ರ ವೈರುಧ್ಯ ಅಲ್ಲವೇ ಎಂಬ ಪ್ರಶ್ನೆಗೆ ಬಿಎಸ್‌ಪಿಯ ರಾಜ್ಯ ಚುನಾವಣಾ ಉಸ್ತುವಾರಿ ಗೋಪಿನಾಥ್ ಉತ್ತರ-

‘ನಮ್ಮ ಮತಗಳು ಜಾತ್ಯತೀತ ದಳಕ್ಕೆ ವರ್ಗವಾಗುವ ಕಾರಣ, ಈ ಮೈತ್ರಿಯಿಂದ ಆ ಪಕ್ಷಕ್ಕೇ ಹೆಚ್ಚು ಅನುಕೂಲ. ನಮ್ಮ ನೋಟ ಭವಿಷ್ಯದ ಅನುಕೂಲದೆಡೆ ನೆಟ್ಟಿದೆ. ಇತರೆ ಮೇಲ್ವರ್ಗದ ಸಮುದಾಯಗಳ ಬಳಿಗೆ ಹೋಗುವುದಕ್ಕೆ ಈ ಮೈತ್ರಿ ನಮಗೆ ದಾರಿ ತೆರೆದಿದೆ. ಬೆಳಗಾವಿಯ ಚಿಕ್ಕೋಡಿ- ರಾಯಭಾಗ ಭಾಗದಲ್ಲಿ ಕುರುಬರು ಮಾಳಿಗರು (ಹೂ ಕಟ್ಟುವವರು ಮತ್ತು ತರಕಾರಿ ಬೆಳೆಯುವವರು), ಚತುರ್ಥ ಲಿಂಗಾಯತರು, ಬಡಿಗೇರ ಸಮುದಾಯಗಳ ವಸತಿ ಪ್ರದೇಶಗಳಿಗೆ ನಮಗೆ ಪ್ರವೇಶ ದೊರೆತಿದೆ. ಅವರು ನಮ್ಮನ್ನು ತಿಳಿದುಕೊಳ್ಳಲು ಹೆಚ್ಚಿನ ಅವಕಾಶ ಆಗಿದೆ. ಪೂರ್ವಗ್ರಹಗಳು ದೂರವಾಗುವ ಸನ್ನಿವೇಶ ಒದಗಿದೆ’.

‘ನಮ್ಮ ಬೆನ್ನ ಹಿಂದೆ ನಮ್ಮ ಕುರಿತು ಅವರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಾಜಕೀಯವಾಗಿ ದೊಡ್ಡ ಲಾಭ ಆಗದಿದ್ದರೂ ಭವಿಷ್ಯದ ದಿನಗಳಿಗೆ ಗಟ್ಟಿ ನೆಲೆ ನಿರ್ಮಾಣ ಆಗುತ್ತದೆ. ರಾಜಕೀಯವಾಗಿ ನೆಲಮಟ್ಟದಲ್ಲಿ ಪಕ್ಷಕ್ಕೆ ಮತ್ತೊಮ್ಮೆ ಚಲನೆ ದೊರೆಯುತ್ತಿದೆ. ಈ ಮೈತ್ರಿ ಮೊದಲೇ ಕೈಗೂಡಿದ್ದರೆ, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಸಿಗರನಹಳ್ಳಿ ಪ್ರಕರಣ ನಡೆಯುತ್ತಲೇ ಇರಲಿಲ್ಲ’.

ಆದರೆ, ಪರಿಸ್ಥಿತಿ ಗೋಪಿನಾಥ್ ಹೇಳುವಷ್ಟು ಸರಳವಿಲ್ಲ. ಸಿಗರನಹಳ್ಳಿಯಲ್ಲಿ ಮೂರು ವರ್ಷಗಳ ಹಿಂದೆ ಬಸವೇಶ್ವರ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಿದ್ದ ಸ್ಥಳೀಯ ಒಕ್ಕಲಿಗರು ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಪ್ರತಿರೋಧ ಮತ್ತು ಪೊಲೀಸ್ ರಕ್ಷಣೆಯಲ್ಲಿ ಇಬ್ಬರು ದಲಿತ ಮಹಿಳೆಯರು ಕಡೆಗೂ ದೇವಸ್ಥಾನ ಪ್ರವೇಶಿಸಿದ್ದರು. ಜೆಡಿಎಸ್‌ ಆಗ ಯಥಾಸ್ಥಿತಿಯ ಮುಂದುವರಿಕೆಯನ್ನು ಬೆಂಬಲಿಸಿತ್ತು.

ದಳದ ವಿರುದ್ಧ ದನಿಯೆತ್ತಿದ್ದ ಬಿಎಸ್‌ಪಿ ಕಾರ್ಯಕರ್ತರು ಇದೀಗ ಅದೇ ಪಕ್ಷದ ಪರವಾಗಿ ಪ್ರಚಾರ ನಡೆಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಬಿಎಸ್‌ಪಿ ಬೆಂಬಲಿಗ ಮತದಾರರು ಮತ್ತು ಕಾರ್ಯಕರ್ತರಲ್ಲಿ ಅನೇಕರು ಈ ಮೈತ್ರಿಯನ್ನು ಮನಃಪೂರ್ವಕವಾಗಿ ಒಪ್ಪಿಲ್ಲ. ಅಕ್ಕ ಮಾಯಾವತಿ ಹೀಗೆ ಮಾಡುತ್ತಾರೆಂದು ನಿರೀಕ್ಷಿಸಿರಲಿಲ್ಲ, ಅವರ ಮಾತನ್ನು ನಡೆಸಿಕೊಡುವುದು ತಮ್ಮ ಕರ್ತವ್ಯ ಎಂದು ಕೈ ಚೆಲ್ಲುವುದುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT