ಸೋಮವಾರ, ಮಾರ್ಚ್ 1, 2021
31 °C
ಅಕ್ರಮವಾಗಿ ಗುರುತಿನ ಚೀಟಿ ಸಂಗ್ರಹ *ನ್ಯಾಯಾಲಯಕ್ಕೆ ಶರಣಾದ ಫ್ಲ್ಯಾಟ್‌ ಒಡತಿ

ಮೂವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಬೆಂಗಳೂರು: ಚುನಾವಣಾ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣ ಸಂಬಂಧ ಮೂವರು ಕಾಂಗ್ರೆಸ್‌ ಕಾರ್ಯಕರ್ತರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಿನ್ನತಂಬಿ, ಶರವಣ ಹಾಗೂ ಚಿನ್ನದೊರೈ ಬಂಧಿತರು. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೊಳೆಗೇರಿ ಪ್ರದೇಶಗಳಿಗೆ ಭೇಟಿ ನೀಡಲಾರಂಭಿಸಿದ್ದ ಇವರು, ಅಲ್ಲಿಯ ಮತದಾರರಿಗೆ ಹಣದ ಆಮಿಷವೊಡ್ಡಿ ಚೀಟಿಗಳನ್ನು ಪಡೆದುಕೊಂಡಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

‘ಜಾಲಹಳ್ಳಿಯ ‘ಎಸ್‌ಎಲ್‌ವಿ ಪಾರ್ಕ್‌ ವ್ಯೂ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ ನಂಬರ್ 115ರಲ್ಲಿ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಾಹಿತಿ ಪಡೆದಿದ್ದ ಬಿಜೆಪಿ ಕಾರ್ಯಕರ್ತರು, ಮೇ 8ರಂದು ಅಲ್ಲಿಗೆ ಹೋಗಿ ಪರಿಶೀಲಿಸಿದ್ದರು. ನಂತರ, ಸ್ಥಳಕ್ಕೆ ಹೋಗಿದ್ದ ಚುನಾವಣಾಧಿಕಾರಿಗಳು ಚೀಟಿಗಳಿರುವುದನ್ನು ಪತ್ತೆ ಹಚ್ಚಿದ್ದರು. ಅದೇ ವೇಳೆ, ಈ ಮೂವರು ಆರೋಪಿಗಳು ಫ್ಲ್ಯಾಟ್‌ನಲ್ಲೇ ಇದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡರು’ ಎಂದರು.

’ಯಾರ ಪರವಾಗಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಬಂಧಿತರು ಬಾಯ್ಬಿಡುತ್ತಿಲ್ಲ. ಸದ್ಯ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ. ಪ್ರಕರಣವು ಗಂಭೀರವಾಗಿರುವುದರಿಂದ, ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ನ್ಯಾಯಾಲಯಕ್ಕೆ ಶರಣಾದ ಫ್ಲ್ಯಾಟ್‌ ಒಡತಿ: ‘ಫ್ಲ್ಯಾಟ್‌ ಮಾಲೀಕರಾದ ಮಂಜುಳಾ ನಂಜಾಮರಿ ಸಹ ಆರೋಪಿಯಾಗಿದ್ದು, ಅವರು ನ್ಯಾಯಾಲಯಕ್ಕೆ ಶುಕ್ರವಾರ ಶರಣಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ತಿಂಗಳ ಹಿಂದೆಯೇ ರೇಖಾ ಎಂಬುವರಿಗೆ ಫ್ಲ್ಯಾಟ್‌ ಬಾಡಿಗೆ ಕೊಡಲಾಗಿತ್ತು. ಅವರೇ ಇತರೆ ಆರೋಪಿಗಳ ಜತೆ ಸೇರಿ ಸಂಚು ರೂಪಿಸಿ ಚೀಟಿಗಳನ್ನು ಸಂಗ್ರಹಿಸಿಟ್ಟಿದ್ದರು. ಮನೆ ಮಾಲೀಕರಾಗಿದ್ದರಿಂದ ಮಂಜುಳಾ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದೆವು. ಅವರು ನ್ಯಾಯಾಲಯಕ್ಕೆ ಶರಣಾದ ಬಳಿಕ ಜಾಮೀನು ಸಹಮಂಜೂರು ಆಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯದ ಅನುಮತಿ ಕೋರಲಿದ್ದೇವೆ’ ಎಂದರು.

ಶಾಸಕರ ಭಾವಚಿತ್ರವಿರುವ ಕ್ಯಾನ್‌ಗಳು ಜಪ್ತಿ: ‘ಶಾಸಕ ಮುನಿರತ್ನ ಭಾವಚಿತ್ರವಿದ್ದ ನೀರಿನ ಕ್ಯಾನ್‌ಗಳು ಹಾಗೂ ಕರಪತ್ರಗಳು ಫ್ಲ್ಯಾಟ್‌ನಲ್ಲಿ ಸಿಕ್ಕಿದ್ದು, ಅವೆಲ್ಲವನ್ನೂ ಜಪ್ತಿ ಮಾಡಿದ್ದೇವೆ. ಬಂಧಿತ ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ, ಮುನಿರತ್ನ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯದಲ್ಲೇ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದು ಜಾಲಹಳ್ಳಿ ಪೊಲೀಸರು ಹೇಳಿದರು.

‘ಚುನಾವಣಾಧಿಕಾರಿಗಳು ದಾಳಿ ಮಾಡಿದ್ದ ವೇಳೆ ಫ್ಲ್ಯಾಟ್‌ನಲ್ಲಿ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಇದ್ದರು. ಅವರಲ್ಲಿ ನಾಲ್ವರು ಲ್ಯಾಪ್‌ಟಾಪ್‌ಗಳಲ್ಲಿ ಕೆಲಸ ಮಾಡುವುದಲ್ಲಿ ನಿರತರಾಗಿದ್ದರು. ಉಳಿದವರು ಜೆರಾಕ್ಸ್‌ ಯಂತ್ರಗಳಲ್ಲಿ ಗುರುತಿನ ಚೀಟಿಗಳ ನಕಲು ಪ್ರತಿಗಳನ್ನು ಮುದ್ರಿಸುತ್ತಿದ್ದರು. ಅವರೆಲ್ಲರ ಹೇಳಿಕೆಗಳನ್ನು ಪಡೆಯಲಾಗಿದ್ದು, ಅವುಗಳ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.

ಆರೋಪಿಗಳ ಪತ್ತೆಗೆ ವಿಶೇಷ ತಂಡ: ಪ್ರಕರಣದ ಪ್ರಮುಖ ಆರೋಪಿ ಸಾರಿದ್ ಮೊಮೆನ್ ಸೇರಿದಂತೆ ಹಲವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್‌, ಇನ್‌ಸ್ಪೆಕ್ಟರ್‌ ನೇತೃತ್ವದ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.

‘ಆರೋಪಿಗಳೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಮೂವರ ಬಂಧನದ ಬಳಿಕ ಅವರೆಲ್ಲರೂ ನಾಪತ್ತೆ ಆಗಿದ್ದಾರೆ. ಕುಟುಂಬದವರು ಹಾಗೂ ಸ್ನೇಹಿತರಿಂದ ಮಾಹಿತಿ ಪಡೆದು ಕೊಂಡು ಅವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಜಾಮೀನು ರಹಿತ ಪ್ರಕರಣ ‌

ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹಾಗೂ ಹಲ್ಲೆ ನಡೆಸಿದ ಆರೋಪದಡಿ ಬಿಜೆಪಿ ಕಾರ್ಯಕರ್ತ ರಾಕೇಶ್‌ ನೀಡಿದ್ದ ದೂರಿನನ್ವಯ ಶಾಸಕ ಮುನಿರತ್ನ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳುವಂತೆ 24ನೇ ಎಸಿಎಂಎಂ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ. ರಾಕೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ದೂರು ದಾರರು ಉಲ್ಲೇಖಿಸಿದ ಅಂಶಗಳನ್ನು ಕಡೆಗಣಿಸಿ ತಮ್ಮಿಷ್ಟದಂತೆ ಎಫ್‌ಐಆರ್‌ ದಾಖಲಿಸಿಕೊಂಡ ಜಾಲಹಳ್ಳಿ ಠಾಣೆ ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

‘ನಾನು ಕೊಟ್ಟ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಜತೆಗೆ, ಮುನಿರತ್ನ ಅವರನ್ನು ಪ್ರಕರಣದಿಂದ ಕೈಬಿಟ್ಟಿದ್ದರು. ಹೀಗಾಗಿ, ನ್ಯಾಯಾಲಯದ ಮೊರೆ ಹೋಗಿದ್ದೆ. ವಂಚನೆ (ಐಪಿಸಿ 420), ನಕಲಿ ದಾಖಲೆ ಸೃಷ್ಟಿ (ಐಪಿಸಿ 468) ಹಾಗೂ ಪೋರ್ಜರಿ (ಐಪಿಸಿ 471) ಆರೋಪಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಿಕೊಂಡು ತನಿಖೆ ನಡೆಸುವಂತೆ ನ್ಯಾಯಾಲಯ ಹೇಳಿದೆ ’ ಎಂದು ರಾಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಕ್ಷೆ ಪ್ರಮಾಣ ಕಡಿಮೆ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಗರ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣಗಳ ಪೈಕಿ ಶೇ 48ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ದಂಡ ವಿಧಿಸಲಾಗಿದೆ.

‘2013ರ ವಿಧಾನಸಭಾ ಚುನಾವಣೆ ವೇಳೆ ಸುಮಾರು 200 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ ಹಲವು ಪ್ರಕರಣಗಳ ವಿಚಾರಣೆ ಇಂದಿಗೂ ನ್ಯಾಯಾಲಯಕ್ಕೆ ನಡೆಯುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಶಿಕ್ಷೆ ಘೋಷಿಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಕನಿಷ್ಠ ₹250 ಹಾಗೂ ಗರಿಷ್ಠ ₹25 ಸಾವಿರ ದಂಡ ವಿಧಿಸಲಾಗಿದೆ. ಯಾರೊಬ್ಬರಿಗೂ ಜೈಲು ಶಿಕ್ಷೆ ಆಗಿಲ್ಲ. ಹೀಗಾಗಿ, ಈ ಬಾರಿ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದರು.

‘ದಂಡ ಪಾವತಿಸಿದರಾಯಿತು ಎಂಬ ಮನೋಸ್ಥಿತಿ ಹೊಂದಿರುವ ಎಲ್ಲ ಪಕ್ಷಗಳ ಕಾರ್ಯಕರ್ತರು, ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಅಂಥವರ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಳ್ಳುತ್ತಿದ್ದೇವೆ. ಆ ಪೈಕಿ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಅಧಿಕಾರಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.