ಭಾನುವಾರ, ಮಾರ್ಚ್ 26, 2023
31 °C

ವಿದ್ಯುತ್, ನೀರಿಲ್ಲದ ಯರಗಂಬಳ್ಳಿ ಮತದಾನ ಬಹಿಷ್ಕರಿಸುವುದಾಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್, ನೀರಿಲ್ಲದ ಯರಗಂಬಳ್ಳಿ ಮತದಾನ ಬಹಿಷ್ಕರಿಸುವುದಾಗಿ ಪ್ರತಿಭಟನೆ

ಯಳಂದೂರು: ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ ಆದಿಜಾಂಬವರ ಬಡಾವಣೆಯಲ್ಲಿ ಕಳೆದ 10 ದಿನಗಳಿಂದಲೂ ವಿದ್ಯುತ್ ಇಲ್ಲದೆ ಇಡೀ ಬಡಾವಣೆ ಕತ್ತಲಲ್ಲಿ ಮುಳುಗಿದೆ. ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದು, ಶುಕ್ರವಾರ ಸಂಜೆ ಇಲ್ಲಿನ ವಾಸಿಗಳು ಇದರ ಬಗ್ಗೆ ಪ್ರತಿಭಟನೆ ನಡೆಸಿ ಮತದಾನವನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.

ಈ ಬಡಾವಣೆಯ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ವಿದ್ಯುತ್ ಪರಿವರ್ತಕ ಕೆಟ್ಟಿ 10 ದಿನವಾದರೂ ಇದನ್ನು ದುರಸ್ತಿಪಡಿಸಿಲ್ಲ. ಪರಿಣಾಮ ಇಡೀ ಬಡಾವಣೆ ಕತ್ತಲಲ್ಲಿ ಮುಳುಗಿದೆ. ಕುಡಿಯುವ ನೀರಿನ ತೊಂಬೆಗಳು ನೀರಿಲ್ಲದೆ ಬಣಗುಡುತ್ತಿವೆ. ಕೈಪಂಪುಗಳು ಕೆಟ್ಟು ನಿಂತಿದ್ದು ಗ್ರಾಮದ ಹೊರಭಾಗದಲ್ಲಿ ಇರುವ ಏಕೈಕ ಕೊಳವೆ ಬಾವಿಯಿಂದ ನೀರು ತುಂಬುವ ಅನಿವಾರ್ಯತೆ ಇದೆ. ಇದರೊಂದಿಗೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡೆಕ್ ಒಡೆದಿದ್ದು ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.

‘ಮೂಲ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲಿನ ಆಡಳಿತ ವಿಫಲವಾಗಿದೆ. ಪ್ರತಿ ಬಾರಿ ಮತ ಕೇಳಲು ಬರುವ ರಾಜಕೀಯ ಮುಖಂಡರು ನಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆಯೂ ಇಲ್ಲಿನ ನಾಗರೀಕರು ಸ್ಥಳೀಯ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿ ನಮಗೆ ಭರವಸೆ ನೀಡದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’ ಎಂದು ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

‘ಯರಗಂಬಳ್ಳಿ ಗ್ರಾಮ ಪಂಚಾಯಿತಿಯ 3ನೇ ವಾರ್ಡ್‌ಗೆ ಸೇರುವ ನಮ್ಮ ಬೀದಿಯಲ್ಲಿ ಸಮಸ್ಯೆಗಳು ಹೆಚ್ಚಿವೆ. ಇಲ್ಲಿನ ಬೂತ್ ಸಂಖ್ಯೆ 222 ಆಗಿದೆ. ಒಟ್ಟು 440 ಮತದಾರರು ಇಲ್ಲಿದ್ದಾರೆ. ಆದರೆ ನಮ್ಮನ್ನು ಕೇವಲ ಓಟಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಚುನಾವಣೆಯ ಸಂದರ್ಭದಲ್ಲೂ ಮೂಲ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ವಹಿಸುತ್ತಿಲ್ಲ. ಹಾಗಾಗಿ ನಮಗೆ ಭರವಸೆ ದೊರೆಯದೆ ಇದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’ ಎಂದು ಗ್ರಾಮದ ಲಿಂಗರಾಜು, ನಾಗೇಶ, ರವಿ, ಲೋಕೇಶ, ಸೋಮೇಶ, ಶಿವಣ್ಣ, ಪುಟ್ಟ ಬಸವಯ್ಯ ಆರೋಪಿಸಿದರು.

ಕರೆಂಟ್‌ ಇಲ್ಲದಿರುವುದರಿಂದ ವಿದ್ಯುತ್ ಸಮಸ್ಯೆ ಅಧಿಕವಾಗಿದೆ. ನಾವು ಊರ ಆಚೆ ಇರುವ ಒಂದೇ ಒಂದು ಕೈ ಪಂಪಿನಿಂದ ನೀರು ತರುವ ಅನಿವಾರ್ಯತೆ ಇದೆ. ಬಿರು ಬೇಸಿಗೆಯಾಗಿರುವುದರಿಂದ ಎಷ್ಟೇ ಕಷ್ಟ ಬಂದರೂ ನೀರು ತುಂಬಿಸುವ ಅಗತ್ಯ ಇದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಆಡಳಿತ ವಿಫಲವಾಗಿದೆ’ ಎಂದು ಗ್ರಾಮದ ಪುಟ್ಟಸಿದ್ದಮ್ಮ, ನಿಂಗಮ್ಮ ಮಾದಮ್ಮ, ಗೌರಮ್ಮ, ಪುಟ್ಟಣ್ಣ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.