ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಯತ್ನವ ಮಾಡೋಣ...

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ರವೀಶ್‍ ಚುರುಕಿನ ವಿದ್ಯಾರ್ಥಿ. ಒಳ್ಳೆಯ ಹುಡುಗ. ಓದಿನಲ್ಲಿಯೂ ತಕ್ಕ ಮಟ್ಟಿಗೆ ಮುಂದೆಯೇ ಇದ್ದ. ಅದೇನು ಕಾರಣವೋ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಪಾಸಾಗಿ ಬಿಟ್ಟ. ಮನೆಯಲ್ಲಿನ ವಾತಾವಾರಣ ವಿಷಾದಕರವಾಯಿತು. ರವೀಶನ ಪೋಷಕರು ಪ್ರಜ್ಞಾವಂತರು. ಅವನನ್ನು ಹಂಗಿಸಲು ಹೋಗಲಿಲ್ಲ. ‘ಹೋಗಲಿ ಬಿಡೋ, ಮತ್ತೆ ಬರೆದು ಪಾಸಾಗುವಿಯಂತೆ’ ಎಂದು ಧೈರ್ಯ ತುಂಬಿ ಹಿಂದೆಯೇ ಯೋಜಿಸಿದ ಪ್ರವಾಸಕ್ಕೆ ಕರೆದುಕೊಂಡು ಹೋಗಿಬಿಟ್ಟರು.

ಆದರೆ ನಪಾಸಾಗಿದ್ದ ಕಾವ್ಯಾಳಿಗೆ ರವೀಶನಿಗಿದ್ದ ಅದೃಷ್ಟವಿರಲಿಲ್ಲ! ಮನೆಯಲ್ಲಿ ಬೈಗುಳಾಯಿತು. ಬಂಧುಗಳು ನೆರೆಹೊರೆಯವರೂ, ಸಂಬಂಧಪಡದವರೂ ಬಾಯಿಯ ತೀಟೆ ತೀರಿಸಿಕೊಂಡರು. ತಾಯಿಗೆ ಹುಷಾರಿಲ್ಲ. ಮನೆಯ ಕೆಲಸವನ್ನು ಮಾಡಿ, ಕಾಯಿಲೆಯ ತಾಯಿಯನ್ನೂ ನೋಡಿಕೊಂಡು ಪರೀಕ್ಷೆ ಎದುರಿಸಬೇಕಿದ್ದ ಕಾವ್ಯಾಳಿಗೆ ನಿಗದಿತ ಯಶಸ್ಸು ಸಿಗಲಿಲ್ಲ. ಆದರೆ ಕಾವ್ಯಾ ಎದೆಗುಂದಿ ಕೂರುವ ಪೈಕಿಯಾಗಿರಲಿಲ್ಲ! ಆ ಶಾಲೆಯಲ್ಲಿದ್ದ ಪುಟ್ಟ ಗ್ರಂಥಾಲಯದಲ್ಲಿದ್ದ ಅನೇಕ ಪುಸ್ತಕಗಳನ್ನು ಓದಿ ಮುಗಿಸಿದ್ದಳು. ಒಮ್ಮೆ ನಪಾಸಾದರೆ ಅಲ್ಲಿಗೆ ಜೀವನವೇನೂ ಮುಗಿಯುವುದಿಲ್ಲ, ಮುಂದೆ ದಾರಿ ದೇಶೋವಿಶಾಲವಾಗಿದೆ ಎಂಬ ಅರಿವು ಅವಳ ಸುಪ್ತಮನಸ್ಸಿನಲ್ಲಿತ್ತು. ಧೈರ್ಯ ಮಾಡಿದಳು.

ಇದನ್ನು ಓದುತ್ತಿರುವ ನಿಮ್ಮಲ್ಲಿ ಅನೇಕರು ಈ ರವೀಶ, ಕಾವ್ಯಾ ಆಗಿರಬಹುದು. ಅಥವಾ ಬೇಜವಾಬ್ದಾರಿಯಿಂದಲೇ ಓದದೇ ನಪಾಸಾಗಿರಬಹುದು. ಈಗ ತಲೆತಾಗಿದಂತಾಗಿ ಎಚ್ಚರಿಕೆಯ ಭಾವ ಬಂದಿರಬಹುದು. ಆದರೆ, ಅಯ್ಯೋ! ಕಾರ್ಯ ಮಿಂಚಿ ಹೋಯಿತೇ! ಎಂದು ಕೊರಗುವ ಅವಶ್ಯಕತೆಯೇನೂ ಇಲ್ಲ! ಇನ್ನೊಂದೇ ತಿಂಗಳಲ್ಲಿ ಬರಲಿರುವ ಸಪ್ಲಿಮೆಂಟರಿ ಪರೀಕ್ಷೆಯನ್ನು ಬರೆದು ಪಾಸಾಗಿ, ನಿಮ್ಮ ಅದೇ ಗೆಳೆಯರೊಂದಿಗೆ ಹರಟುತ್ತಾ ಮುಂದಿನ ತರಗತಿಗೆ ಹೋಗಿಬಿಡಬಹುದು!

ಸೋಲು ಎಂಬುದಕ್ಕೆ ಜಗತ್ತಿನಲ್ಲಿ ಅಸ್ತಿತ್ವವೇ ಇಲ್ಲ. ತುಂಬ ತಪ್ಪಾದ ಹಾಗೂ ಅನಾವಶ್ಯಕ ಪದ ಈ ಸೋಲು ಎಂಬುದು. ನಿಜದಲ್ಲಿ ಅದು ಜೀವನವನ್ನು ಮತ್ತೊಮ್ಮೆ ಆರಂಭಿಸಲು ಸಿಗುವ ಸದವಕಾಶ. ಜೊತೆಗೆ ಹೀಗೆ ನಪಾಸಾಗಿರುವವರು (ಅಥವಾ ಜೀವನದಲ್ಲಿ ಸೋಲುಂಡವರು) ನೀವೊಬ್ಬರೇ ಅಲ್ಲ. ಈಗಿನ ಹತ್ತನೇ ತರಗತಿ ಫಲಿತಾಂಶವನ್ನೇ ಗಮನಿಸಿ. ಅದು ಶೇ 70. ಅಂದರೆ ನಪಾಸಾಗಿರುವವರು ಲಕ್ಷಾಂತರ ಜನ ಇದ್ದಾರೆ! ಈ ಎಲ್ಲರಿಗೂ ಸರಿಪಡಿಸಿಕೊಳ್ಳುವ ಸುವರ್ಣಾವಕಾಶವಿದ್ದೇ ಇದೆ. ಯಾರದೇ ಅಡ್ಡ ಮಾತುಗಳಿಗೆ ಕಿವಿಕೊಡಬೇಡಿ. ಸರಿಪಡಿಸಬೇಕು ಎಂದು ನೀವೇ ತೀರ್ಮಾನಿಸಿರುವಾಗ ಇತರರ ಮಾತಿಗೆ ಬೆಲೆಕೊಡಬೇಕಾದ ಅವಶ್ಯಕತೆಯೇ ಇಲ್ಲ.

ಜೀವನದಲ್ಲಿ ಒಮ್ಮೊಮ್ಮೆ ಇಂತಹ ಸಂದರ್ಭಗಳು ಬಂದುಬಿಡುತ್ತವೆ. ಇದಕ್ಕೆ ನಾವು ಯುಕ್ತವಾಗಿ ಪ್ರತಿಕ್ರಿಯೆ ನೀಡಬೇಕು. ಆಗ ಕಷ್ಟ ಎದುರಿಸುವ ಕ್ರಿಯೆ ಅಭ್ಯಾಸವಾಗಿ ಜೀವನಗಟ್ಟಿಗೊಳ್ಳುತ್ತದೆ. ಯುದ್ಧದ ಅಥವಾ ಸಂದಿಗ್ಧದ ಸಂದರ್ಭದಲ್ಲಿ ಮಿಲಿಟರಿಯವರು ಒಂದು ಹೆಸರಿಟ್ಟು ಕಾರ್ಯಾಚರಣೆ ನಡೆಸುತ್ತಾರಲ್ಲವೇ? ಹಾಗೆಯೇ, ಒಂದು ಹೆಸರಿಟ್ಟು ನಿಮ್ಮ ಪರೀಕ್ಷೆ ಪಾಸುಮಾಡಿಕೊಳ್ಳುವ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಿ. ಕ್ರಮ ಹೀಗೆ:

ಮೊತ್ತಮೊದಲಿಗೆ ಒಂದೆರೆಡು ಗಂಟೆಗಳ ಕಾಲ ಬಿಡುವು ಮಾಡಿಕೊಳ್ಳಿ. ನಪಾಸಾಗಿದ್ದಕ್ಕೆ ನೀವು ಅನುಭವಿಸಿದ ಅವಮಾನ, ಕೇಳಿದ ಕೆಟ್ಟಮಾತುಗಳು, ನಿಮ್ಮ ಭಯ ಇತ್ಯಾದಿಗಳನ್ನು ಬದಿಗಿಡಿ. ಮೊಬೈಲ್‍ ಆಫ್‍ ಮಾಡಿ. ಮನೆಯಲ್ಲಿ ಯಾತಕ್ಕೂ ಕರೆಯಬೇಡಿ, ಎಂದು ಹೇಳಿ. ಒಂದೆಡೆ ಕೂತು ನಿಧಾನವಾಗಿ ಯೋಚಿಸಿ ಯಾಕೆ ಪರೀಕ್ಷೆಯನ್ನು ಪಾಸು ಮಾಡಲಾಗಲಿಲ್ಲ ಎಂದು ಕಂಡುಕೊಳ್ಳಿ. ಆ ಕಾರಣವೇ ನಿಮಗೆ ಮುಂದಿನ ದಾರಿಯನ್ನು ತೋರುತ್ತದೆ, ಈ ಪರೀಕ್ಷೆಗೆ ಮಾತ್ರವಲ್ಲ, ಜೀವನಕ್ಕೂ.

ಈಗ ಎಷ್ಟು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೀರಿ ನೋಡಿಕೊಳ್ಳಿ. ಅದು ಒಂದೇ ಇರಬಹುದು ಅಥವಾ ಎಲ್ಲ ವಿಷಯಗಳೂ ಇರಬಹುದು. ತೊಂದರೆಯಿಲ್ಲ. ಈ ಎಲ್ಲವನ್ನೂ ನೀವು ಒಂದು ವರ್ಷಕಾಲ ಅಧ್ಯಯನ ಮಾಡಿರುವುದೇ ಹಾಗಾಗಿ ಹೆಚ್ಚು ಯೋಚಿಸಬೇಕಾಗಿಲ್ಲ.

ಈಗ ನಪಾಸಾದ ವಿಷಯಗಳಲ್ಲಿ ಕಷ್ಟ, ಸುಲಭ ಎಂದೆಲ್ಲ ವಿಂಗಡಿಸಬೇಡಿ. ಹೆಚ್ಚು ಅಂಕಗಳು ಗಳಿಸಬೇಕು ಎನ್ನುವತ್ತ ಗಮನಕೊಡಿ. ಪ್ರಶ್ನೆಪತ್ರಿಕೆ ಹಾಗೂ ಮಾದರಿ ಪ್ರಶ್ನೆಪತ್ರಿಕೆಯನ್ನು ನೋಡಿದರೆ ನಿಮಗೆ ಯಾವ ಯಾವ ಅಧ್ಯಾಯಗಳು ಅಂಕಗಳಿಕೆಗೆ ಮುಖ್ಯ ಎಂಬುದು ತಿಳಿಯುತ್ತದೆ. ಅದಕ್ಕೆ ಹೆಚ್ಚಿನ ಒತ್ತು ಕೊಟ್ಟು ಓದಿ. ಇಲ್ಲಿ ವಿಷಯವಾರು ಸೂತ್ರಗಳನ್ನು ಹಾಕಿಕೊಳ್ಳಬೇಕು. ಕನ್ನಡ, ಹಿಂದಿ ಹೀಗೆ ಭಾಷೆಗಳಾದರೆ ಪ್ರಬಂದ, ವ್ಯಾಕರಣ, ಕಂಠಪಾಠ ಮಾಡಬೇಕಾದ ಪದ್ಯ, ಎರಡು ಮೂರು ಅಂಕಗಳ ಪ್ರಶ್ನೆ ಇವನ್ನು ಗಟ್ಟಿ ಮಾಡಿಕೊಂಡುಬಿಟ್ಟರೆ ಪಾಸಾಗಲು ಬೇಕಾದ ಅಂಕಗಳು ಬಂದುಬಿಡುತ್ತವೆ!

ಗಣಿತವಾದರೆ ಇಲ್ಲಿಯೂ ಕೆಲವು ಅಧ್ಯಾಯಗಳಿಂದಲೇ ಸರಿಸುಮಾರು ಇಪ್ಪತ್ತು ಅಂಕಗಳವರೆಗೆ ಗಳಿಸಲು ಸಾಧ್ಯ! ಅವನ್ನು ಚೆನ್ನಾಗಿ ಅಭ್ಯಾಸ ಮಾಡಿ. ಅವಶ್ಯವಿರುವ ಸೂತ್ರಗಳನ್ನು ಬಾಯಿಪಾಠ ಮಾಡಿ (ಸಮೀಕರಣ, ಟ್ರಿಗೊನೋಮೆಟ್ರಿ…). ರೇಖಾಗಣಿತದ ಥಿಯರಮ್‍ಗಳನ್ನು ಗಟ್ಟಿಮಾಡಿಕೊಳ್ಳಿ. ರೇಖಾಗಣಿತದ ರಚನೆಗಳು ಹೆಚ್ಚು ಅಂಕಗಳನ್ನು ತರುತ್ತವೆ, ಅವನ್ನು ಅಭ್ಯಾಸಮಾಡಿ ಕರಗತ ಮಾಡಿಕೊಳ್ಳಿ. ವಿಜ್ಞಾನದಲ್ಲಿಯೂ ಹೀಗೆಯೇ ಹೆಚ್ಚು ಅಂಕಗಳನ್ನು ಗಳಿಸಿಕೊಡುವ ಅಧ್ಯಾಯಗಳಿವೆ. ಗಮನಿಸಿ. ಪ್ರಯೋಗಶಾಲೆಯಲ್ಲಿನ ತಯಾರಿಕೆ, ಚಿತ್ರಗಳು, ಕೆಲವಸ್ತುಗಳ ಗುಣಲಕ್ಷಣಗಳು ಮತ್ತು ವ್ಯತ್ಯಾಸಗಳನ್ನು ಪಟ್ಟಿಮಾಡಿದರೆ ಅಂಕಗಳು ದೊರೆಯುತ್ತವೆ. ಆ ಕುರಿತು ಗಮನವಹಿಸಿರಿ.

ನಿಮಗೆ ಸಹಾಯ ಮಾಡಲು ನಿಮ್ಮ ಶಿಕ್ಷಕರು ಸಿದ್ಧರಿರುತ್ತಾರೆ. ಎರಡನೇ ಯೋಚನೆ ಮಾಡದೇ ಅವರನ್ನು ಸಂಪರ್ಕಿಸಿ. ಮೊದಲು ನಪಾಸಾದೆ ಎಂದು ಒಂದೆರೆಡು ಮಾತು ಅನ್ನಬಹುದು. ನೀವು ಆತ್ಮಾವಲೋಕನ ಮಾಡಿಕೊಂಡಿದ್ದನ್ನು ಹೇಳಿ. ‘ಆಗ ಹಾಗಾಯಿತು, ಇನ್ನು ಮುಂದೆ ಹಾಗಾಗಲು ಬಿಡುವುದಿಲ್ಲ’ ಎಂದು ಆತ್ಮವಿಶ್ವಾಸದಿಂದ ಹೇಳಿರಿ. ಅವರ ನೆರವು ಖಂಡಿತ ನಿಮಗೆ ಸಿಗುತ್ತದೆ. ಸಂಕೋಚವಿಲ್ಲದೆ ಪಡೆದುಕೊಳ್ಳಿ.

ಶಿಕ್ಷಣ ಇಲಾಖೆ ಎಲ್ಲ ವಿಷಯಗಳಿಗೂ ಪಾಸಿಂಗ್ ಪ್ಯಾಕೇಜ್‍ ಎಂದು ನೀಡಿದೆ. ಅದನ್ನು ಎಚ್ಚರಿಕೆಯಿಂದ ಗಮನಿಸಿ. ಇಲ್ಲಿಯೂ ಶಿಕ್ಷಕರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಅಭ್ಯಾಸಮಾಡಿ. ನೀವಂದುಕೊಂಡಷ್ಟು ಕಷ್ಟ ಖಂಡಿತ ಇಲ್ಲ!

ನಿಮಗೆ ಸಮಯ ಒಂದು ತಿಂಗಳಿಗಿಂತ ತುಸುಹೆಚ್ಚು ಸಿಗುತ್ತದೆ. ಇದು ಸಾಕೋಸಾಕಾಗುತ್ತದೆ. ಒಂದೇ ತಿಂಗಳು ಇರುವುದು ಎಂದು ಯೋಚಿಸಲೇಬೇಡಿ. ಒಳ್ಳೆಯ ಕಾರ್ಯಕ್ಕೆ ಹೆಚ್ಚು ಸಮಯ ಬೇಕಾಗದು!

ಒಂದು ವಿಚಾರ ಗಮನದಲ್ಲಿರಲಿ: ಈ ಒಂದು ತಿಂಗಳಿನಲ್ಲಿ ನೀವು ಸಿದ್ಧರಾಗಿ ಪರೀಕ್ಷೆ ಪಾಸುಮಾಡಿಬಿಟ್ಟರೆ ಅದು ಒಂದು ವರ್ಷವನ್ನು ಉಳಿಸುತ್ತದೆ! ಹಾಗಾಗಿ, ಎಲ್ಲ ಪ್ರಯತ್ನವನ್ನೂ ಮಾಡಿ. ಒಂದು ಕ್ರಮವಾಗಿ ಹೋಗಿ.

ಒಂದು ಕಠಿಣ ವೇಳಾಪಟ್ಟಿಯನ್ನು ಹಾಕಿಕೊಳ್ಳಿ. ಈ ತಿಂಗಳು ಹಿಂದೆ ನೀವೆಂದೂ ಮಾಡದಷ್ಟು ಓದು, ಅಭ್ಯಾಸ ಈಗಾಗಬೇಕು. ನಿಮ್ಮ ಮುಂದಿನ ಜೀವನದ ಇಂಥದೇ ಸಂದರ್ಭಗಳಿಗೆ ಇದು ಸ್ಫೂರ್ತಿ ನೀಡುವಂತಿರಬೇಕು. ಈ ತಿಂಗಳು ನಿಮ್ಮ ಮೊಬೈಲ್‍ ಆಫ್‍ ಇರಲಿ. ಅಂರ್ತಜಾಲ, ಸಿನಿಮಾ ದೂರದರ್ಶನ ಎಲ್ಲವನ್ನು ದೂರಸರಿಸಿ. ಓದಿನ ಮೇಲೆ ಕೇಂದ್ರೀಕರಿಸಿ. ಅತಿಹೆಚ್ಚು ಅಂಕಗಳು ಶತಃಸಿದ್ಧ.

ನಿಮ್ಮ ಪಠ್ಯಪುಸ್ತಕವನ್ನು ಪೂರ್ತಿಯಾಗಿ ತಿರುವಿ ಹಾಕಿ ಬರದಿರುವುದನ್ನು ಗುರುತುಹಾಕಿಟ್ಟುಕೊಳ್ಳಿ. ಅವನ್ನು ಅಭ್ಯಾಸ ಮಾಡಿ ತಿಳಿಯಿರಿ ಅಥವಾ ಶಿಕ್ಷಕರ ಸಹಾಯ ಪಡೆದು ಕಲಿಯಿರಿ.

ಬಹಳ ಮುಖ್ಯ ಎಂಬ ಅಂಶಗಳನ್ನು ಒಂದೆಡೆ ಬರೆದಿಟ್ಟು ದಿನವೂ ಅವನ್ನು ಮನನ ಮಾಡಿರಿ. ಪ್ರತಿ ವಿಷಯಗಳ ಮುಖ್ಯಾಂಶಗಳನ್ನು ಸಮಯ ಸಿಕ್ಕಾಗಲೆಲ್ಲಾ ಓದಿ, ಸೂತ್ರಗಳನ್ನು ಹೇಳಿ, ಗಣಿತವಿದ್ದಲ್ಲಿ ಸಮಸ್ಯೆಗಳನ್ನು ಬಿಡಿಸಿ, ಥಿಯರಮ್‍ಗಳ ಸಾಧನೆಯನ್ನು ಮನದಟ್ಟು ಮಾಡಿಕೊಂಡೇ ಮುಂದಿನ ಕಾರ್ಯಕ್ಕೆ ಹೋಗಿ. ಪದ್ಯಗಳನ್ನು ಆಗಾಗ ಹೇಳಿಕೊಳ್ಳಿ.

ನಾಲ್ಕುದಿನಗಳೊಗೊಮ್ಮೆ ನೀವೇ ಅಥವಾ ನಿಮ್ಮ ಶಿಕ್ಷಕರಿಂದ ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಸಿದ್ಧತೆ ಸಾಲದು ಎಂದಾದರೆ ಹೆಚ್ಚಿಸಿ. ಅವಶ್ಯಕತೆ ಬಿದ್ದಲ್ಲಿ, ಕೆಲವೆಡೆ ಲಭ್ಯವಿರುವ ಕ್ರಾಶ್‍ ಕೋರ್ಸ್‍ಗಳ ಸಹಾಯ ಪಡೆಯಿರಿ. ಆದರೆ, ಅದೇ ಈ ಕ್ರಾಶ್‍ ಕೋರ್ಸ್‍ಗಳದ್ದೇ ಅಭ್ಯಾಸವಾಗಬಾರದು ವಿಷಯವನ್ನು ಚೆನ್ನಾಗಿ ತಿಳಿಯುವುದು ತುಂಬ ಮುಖ್ಯ ಎಂಬ ಅರಿವಿರಲಿ.

ಈ ಎಲ್ಲವನ್ನೂ ಮಾಡಿ ಖಂಡಿತ ಯಶಸ್ಸು ದೊರೆಯುತ್ತದೆ. ಒಂದು ಹಿನ್ನೆಡೆ ಜೀವನವನ್ನೇ ಮುನ್ನಡೆಸುವ ಮಾರ್ಗದರ್ಶಕವಾಗಿ ಬದಲಾಗಲಿ. ಏನೇ ಹಿಂಜರಿತ ಬಂದರೂ ಇದೇ ಮನನ-ವಿನಯ-ಅಧ್ಯಯನದ ಸೂತ್ರ ಮಾರ್ಗದರ್ಶಕವಾಗಲಿ. ನೆನಪಿರಲಿ, ಇದು ಸೋಲಲ್ಲ, ಅವಕಾಶ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT