ಕೈ ಹಿಡಿದರು, ಕೈ ಬಿಟ್ಟರು...

7
ಪುತ್ರನಿಗೆ ಭಾರಿ ಗೆಲುವು; ಅಪ್ಪನಿಗೆ ಮುಖಭಂಗ

ಕೈ ಹಿಡಿದರು, ಕೈ ಬಿಟ್ಟರು...

Published:
Updated:

ಮೈಸೂರು: ಸತತ ಎರಡು ಬಾರಿ ಅಪ್ಪನನ್ನು ಕೈ ಹಿಡಿದು ಮುಖ್ಯಮಂತ್ರಿ ‍ಪಟ್ಟಕ್ಕೇರಿಸಿದ್ದ ಮತದಾರರು, ಈ ಬಾರಿ ಪುತ್ರನನ್ನು ವಿಧಾನಸಭೆಗೆ ಕಳುಹಿಸಿದ್ದಾರೆ.‌

ಸಿದ್ದರಾಮಯ್ಯ ಪ್ರತಿನಿಧಿಸಿದ್ದ ವರುಣಾ ಕ್ಷೇತ್ರದಲ್ಲಿ ಡಾ.ಯತೀಂದ್ರ ಜಯಭೇರಿ ಮೊಳಗಿಸಿದ್ದಾರೆ. ಅದು ಭರ್ಜರಿ ಗೆಲುವು. ಮುಖ್ಯಮಂತ್ರಿಯಾಗಿ ತವರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳು ಫಲ ನೀಡಿವೆ. ಜೊತೆಗೆ ಸತತ ಎರಡು ವರ್ಷಗಳಿಂದ ಯತೀಂದ್ರ ಕೂಡ ಕ್ಷೇತ್ರದಲ್ಲಿ ಸುತ್ತಾಡಿ ಜನರೊಂದಿಗೆ ನಡೆಸಿದ ಒಡನಾಟ ಯಶಸ್ಸು ತಂದುಕೊಟ್ಟಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೇರು ಗಟ್ಟಿಯಾಗಿದೆ ಎಂಬುದು ಈ ಗೆಲುವು ದೃಢಪಡಿಸಿದೆ. ಕಾರ್ಯಕರ್ತರ ಪಡೆಯೂ ದೊಡ್ಡದಿದೆ ಎಂಬುದು ಸಾಬೀತಾಗಿದೆ.

ಬಿಜೆಪಿ ಅಭ್ಯರ್ಥಿ ಟಿ.ಬಸವರಾಜು ಎದುರು 58,616 ಮತಗಳಿಂದ ಗೆಲುವು ಸಾಧಿಸಲು ಅಭಿವೃದ್ಧಿಯೊಂದೇ ಕಾರಣವಲ್ಲ. ಬಿಜೆಪಿ ಒಳ ಜಗಳದ ಲಾಭವೂ ಪ್ರಮುಖ ಪಾತ್ರ ವಹಿಸಿದೆ. ಬಿ.ವೈ.ವಿಜಯೇಂದ್ರ ಅವರ ಸ್ಪರ್ಧೆಗೆ ತಡೆ ನೀಡಿದ ಬಳಿಕ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಯ ಸೋಲಿಗೆ ಪ್ರಯತ್ನಿಸಿದ್ದು ಈಗ ಬಹಿರಂಗವಾಗಿ ಉಳಿದಿಲ್ಲ. ವಿದೇಶದಲ್ಲಿನ ಕೆಲಸವನ್ನು ತೊರೆದು ಬಂದ ಜೆಡಿಎಸ್‌ ಅಭ್ಯರ್ಥಿ ಅಭಿಷೇಕ್‌ ಅವರು ಪ್ರಚಾರದ ಅಖಾಡಕ್ಕಿಳಿದಿದ್ದೇ ತಡವಾಗಿ.

ಇತ್ತ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸಂಪೂರ್ಣವಾಗಿ ಎಡವಿದರು. ಕ್ಷೇತ್ರದ ಮತದಾರರ ನಾಡಿಮಿಡಿತವನ್ನು ಅರಿಯಲು ಅವರಿಗೆ ಸಾಧ್ಯವಾಗಲಿಲ್ಲ. 2006ರ ಉಪಚುನಾವಣೆಯಲ್ಲಿ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇ ಕೊನೆ. ಆ ಚುನಾವಣೆ ನಡೆದು 12 ವರ್ಷಗಳಾದವು. ಅಲ್ಲದೆ, ಅವರ ಅನುಪಸ್ಥಿತಿಯಲ್ಲಿ ಪ್ರಚಾರವೂ ಸರಿಯಾಗಿ ನಡೆಯಲಿಲ್ಲ. ಅವರನ್ನು ಹೊರತುಪಡಿಸಿ ಪ್ರಭಾವಿ ನಾಯಕರೂ ಇರಲಿಲ್ಲ. 23 ಸುತ್ತುಗಳ ಮತ ಎಣಿಕೆಯಲ್ಲಿ ಒಮ್ಮೆಯೂ ಸಿದ್ದರಾಮಯ್ಯ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ.

ಜಿಟಿಡಿ ನೆರವಿಗೆ ಕಾರ್ಯಕರ್ತರ ಪಡೆ

ಮೈಸೂರು: ಐದು ವರ್ಷಗಳಲ್ಲಿ ಗಟ್ಟಿಯಾಗಿ ಬೇರೂರಿದ್ದ ಜೆಡಿಎಸ್‌ ಕಾರ್ಯಕರ್ತರ ಪಡೆ, ಅಧಿಕ ಸಂಖ್ಯೆಯಲ್ಲಿರುವ ಒಕ್ಕಲಿಗರು, ಕ್ಷೇತ್ರದ ಶಾಸಕರು ಸುಲಭವಾಗಿ ಸಿಗುತ್ತಾರೆ ಎಂಬ ಅಂಶಗಳು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಅವರ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು.

ಜೊತೆಗೆ ದಲಿತ ಮುಖ್ಯಮಂತ್ರಿ ಕೂಗು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿ ಜಿಡಿಟಿ ಕೈ ಹಿಡಿದಿದೆ. ಸಿದ್ದರಾಮಯ್ಯ ಅವರು ಪ್ರಚಾರ ಕೈಗೊಂಡಾಗ ಈ ವಿಚಾರದಲ್ಲಿ ಹಲವು ಬಾರಿ ದಲಿತರಿಂದ ಪ್ರತಿರೋಧ ಎದುರಿಸಬೇಕಾಯಿತು. ಈ ಕ್ಷೇತ್ರದಲ್ಲೂ ಒಳ ಒಪ್ಪಂದದ ಆರೋಪವನ್ನು ಬಿಜೆಪಿ ಎದುರಿಸಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry