ಮೋದಿ, ಶಾ ಬಿರುಗಾಳಿಗೆ ‘ಕೈ’ ದೂಳಿಪಟ

7
ಕುಂದಿದ ರಾಹುಲ್‌ ಪ್ರಭಾವ: ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗದಲ್ಲಿ ಅರಳಿದ ಕಮಲ

ಮೋದಿ, ಶಾ ಬಿರುಗಾಳಿಗೆ ‘ಕೈ’ ದೂಳಿಪಟ

Published:
Updated:

ದಾವಣಗೆರೆ: ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಬಿರುಗಾಳಿಗೆ ಕಾಂಗ್ರೆಸ್‌ ದೂಳಿಪಟವಾಗಿದೆ. ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಕಮಲ ಅರಳಿದೆ. ಈ ಗೆಲುವಿನ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹವಾ ಹಾಗೂ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ ಎದ್ದು ಕಾಣುತ್ತದೆ. ಇವರಿಬ್ಬರ ಮಧ್ಯೆ ರಾಹುಲ್‌ ಪ್ರಭಾವಳಿ ಮಂಕಾದಂತೆ ಗೋಚರಿಸುತ್ತದೆ.

2013ರ ಚುನಾವಣೆಯಲ್ಲಿ ದಾವಣಗೆರೆಯ 8 ಕ್ಷೇತ್ರಗಳಲ್ಲಿ 7 ಕಾಂಗ್ರೆಸ್‌ ವಶವಾಗಿತ್ತು. ಚಿತ್ರದುರ್ಗದ 6 ಕ್ಷೇತ್ರಗಳಲ್ಲಿ 4 ’ಕೈ’ ಪಾಲಾಗಿತ್ತು. ಶಿವಮೊಗ್ಗದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ತಲಾ ಮೂರು ಹಾಗೂ ಒಂದರಲ್ಲಿ ಮಾತ್ರ ಬಿಜೆಪಿ ನೆಲೆ ನಿಂತಿತ್ತು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಹುಲ್‌ ಗಾಂಧಿ ಪ್ರಚಾರದ ಬಳಿಕ ಮೂರು ಜಿಲ್ಲೆಗಳ ರಾಜಕೀಯ ಚಿತ್ರಣ ಬದಲಾಗಿದೆ. ದಾವಣಗೆರೆಯ 6 ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಚಿತ್ರದುರ್ಗದ 5 ಹಾಗೂ ಶಿವಮೊಗ್ಗದ 6 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮೋದಿ ಹಾಗೂ ಅಮಿತ್ ಶಾ ಪ್ರವಾಸ ಬಿಜೆಪಿಗೆ ಮತ್ತೆ ನೆಲೆ ಕಂಡುಕೊಳ್ಳಲು ನೆರವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮತ್ತೊಂದೆಡೆ, ರಾಹುಲ್‌ ಪ್ರಭಾವ ಬೀರದಿರುವುದೂ ಮೇಲ್ನೋಟಕ್ಕೆ ಕಂಡುಬರುತ್ತದೆ.

ಫೆ.27ರಂದು ದಾವಣಗೆರೆಯಲ್ಲಿ ನಡೆದ ‘ರೈತಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಮೋದಿ ಭಾಗವಹಿಸಿದ್ದರು. ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ನೇಗಿಲು ಉಡುಗೊರೆ ನೀಡಿ ರೈತರ ಮತ ಸೆಳೆಯಲು ಯತ್ನಿಸಿದ್ದರು. ಮೋದಿ ಪ್ರಯತ್ನಕ್ಕೆ ಇಲ್ಲಿ ಮಿಶ್ರಫಲ ದೊರೆತಿದೆ. ದಾವಣಗೆರೆ ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌ ಗೆದ್ದಿದ್ದಾರೆ. ದಕ್ಷಿಣದಲ್ಲಿ ‘ಕೈ’ ಅಲುಗಾಡಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಮರು ಆಯ್ಕೆಯಾಗಿದ್ದಾರೆ.

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಮೇ 5ರಂದು ಶಿವಮೊಗ್ಗಕ್ಕೆ ತೆರಳಿದ್ದ ಮೋದಿ ಅಲ್ಲೂ ಭರ್ಜರಿ ಭಾಷಣ ಮಾಡಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ಮೋದಿಗೆ ಸಿಹಿ ಸಿಕ್ಕಿದೆ. ಈಶ್ವರಪ್ಪ ಗೆಲುವು ಸಾಧಿಸಿದ್ದಾರೆ. ಮೇ 6ರಂದು ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿದ್ದರು. ಅಲ್ಲೂ ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ಜಯಗಳಿಸಿದ್ದಾರೆ.

ಅಮಿತ್ ಶಾ ಜ.10ರಂದು ಹೊಳಲ್ಕೆರೆಯಲ್ಲಿ ಪರಿವರ್ತನಾ ಯಾತ್ರೆ ನಡೆಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ಸಚಿವ ಆಂಜನೇಯ ಅವರನ್ನೇ ಮಣಿಸಿದ್ದಾರೆ.

ಮಾರ್ಚ್‌ 26ರಂದು ಶಿವಮೊಗ್ಗ, ಮಾ.27ರಂದು ಹರಿಹರ, ಚಿತ್ರದುರ್ಗದಲ್ಲಿ ಅಮಿತ್ ಶಾ ‘ಮುಷ್ಠಿ ಧಾನ್ಯ ಅಭಿಯಾನ ನಡೆಸಿ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಯತ್ನ ಮಾಡಿದ್ದರು. ಈ ಮೂರು ಕ್ಷೇತ್ರಗಳಲ್ಲಿ ಹರಿಹರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಮಠಮಂದಿರಗಳ ಭೇಟಿಯೂ ಗೆಲುವಿಗೆ ಪರೋಕ್ಷ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಏ.3ರಂದು ಶಿವಮೊಗ್ಗ, ಏ.27ರಂದು ದಾವಣಗೆರೆಯಲ್ಲಿ ರೋಡ್‌ ಷೋ, ಮೇ 7ರಂದು ಹರಪನಹಳ್ಳಿಯಲ್ಲಿ ಪ್ರಚಾರ, ಹೀಗೆ, ಅಮಿತ್ ಶಾ ಸಾಲು ಸಾಲು ಪ್ರವಾಸ ಚುನಾವಣಾ ಫಲಿತಾಂಶದಲ್ಲಿ ಬಿಂಬಿತವಾಗಿದೆ.

ಅಮಿತ್ ಶಾ ಹಾಗೂ ಮೋದಿ ಬಂದುಹೋದ ಮೂರು ಜಿಲ್ಲೆಗಳ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದರೆ, ದಾವಣಗೆರೆ ದಕ್ಷಿಣ, ಹರಿಹರ, ಭದ್ರಾವತಿ ಹಾಗೂ ಚಳ್ಳಕೆರೆ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದಕ್ಕಿಲ್ಲ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಏ.3ರಂದು ಶಿವಮೊಗ್ಗ, ಹರಿಹರ, ದಾವಣಗೆರೆ, ಏ.4ರಂದು ಹೊಳಲ್ಕೆರೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿದ್ದರು. ಆದರೆ, ರಾಹುಲ್‌ ಪ್ರಭಾವ ಗೆಲುವಿನ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಹರಿಹರ, ದಾವಣಗೆರೆ ದಕ್ಷಿಣದಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿದೆ.

ಮೋದಿ ಪ್ರಚಾರ; ಎಲ್ಲೆಲ್ಲಿ ಗೆಲುವು ?

ದಾವಣಗೆರೆ

ಶಿವಮೊಗ್ಗ

ಚಿತ್ರದುರ್ಗ

ಅಮಿತ್ ಶಾ ಪ್ರಚಾರ ಎಲ್ಲಿ ಗೆಲುವು

ಹೊಳಲ್ಕೆರೆ

ಹಿರಿಯೂರು

ಶಿವಮೊಗ್ಗ

ಚಿತ್ರದುರ್ಗ

ಹರಪನಹಳ್ಳಿ

ತೀರ್ಥಹಳ್ಳಿ

ಶಾ ಪ್ರಚಾರ; ಎಲ್ಲೆಲ್ಲಿ ಸೋಲು

ಹರಿಹರ

ದಾವಣಗೆರೆ ದಕ್ಷಿಣ

ರಾಹುಲ್ ಪ್ರಚಾರ; ಎಲ್ಲೆಲ್ಲಿ ಗೆಲುವು

ಹರಿಹರ‌

ದಾವಣಗೆರೆ ದಕ್ಷಿಣ

ರಾಹುಲ್ ಪ್ರಚಾರ; ಎಲ್ಲೆಲ್ಲಿ ಸೋಲು

ಹೊಳಲ್ಕೆರೆ

ಶಿವಮೊಗ್ಗ

ದಾವಣಗೆರೆ ಉತ್ತರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry