ಗುರುವಾರ, 25 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಬೊ ಅಂಗಡಿಯಲ್ಲಿ ಕೊಂಬೊ ಆಫರ್!

Last Updated 18 ಮೇ 2018, 13:25 IST
ಅಕ್ಷರ ಗಾತ್ರ

ಸಿನಿಮಾ: ರ‍್ಯಾಂಬೊ 2

ನಿರ್ಮಾಣ: ಶರಣ್‌ ಬಿ.ಕೆ. ಮತ್ತು ಅಂಟ್ಲಾಂಟ ನಾಗೇಂದ್ರ

ನಿರ್ದೇಶನ: ಅನಿಲ್‌ಕುಮಾರ್

ತಾರಾಗಣ: ಶರಣ್, ಆಶಿಕಾ ರಂಗನಾಥ್, ಚಿಕ್ಕಣ್ಣ, ಸಾಧುಕೋಕಿಲ, ರವಿಶಂಕರ್, ಕುರಿ ಪ್ರತಾಪ್‌

ಗಟ್ಟಿಯಾದ ಕಥೆ, ಬಿಗಿಯಾದ ನಿರೂಪಣೆ, ಸಮರ್ಥವಾದ ಪಾತ್ರಪೋಷಣೆ ಇವ್ಯಾವವೂ ಇಲ್ಲದೆ, ಒಂದಿಷ್ಟು ಮಜ ಕೊಡುವ ಸರಕು ತುಂಬಿ ಸಿನಿಮಾ ಮಾಡಿಯೂ ಗೆಲ್ಲಬಹುದು ಎಂಬ ಗಾಂಧಿನಗರದ ಜನಪ್ರಿಯ ನಂಬಿಕೆಗೆ ಮತ್ತೊಂದು ಪುರಾವೆ ‘ರ‍್ಯಾಂಬೊ 2’ ಸಿನಿಮಾ.

ಹೂರಣದಲ್ಲಿ ನಂಬಿಕೆ ಇಲ್ಲದೇ ಹೋದಾಗ ಹೊದಿಕೆಯನ್ನು ಆಕರ್ಷಕ ಮಾಡುವ, ಹೊಸ ಹೊಸ ಆಫರ್‌ಗಳನ್ನು ನೀಡುವ ಮಾರಾಟದ ತಂತ್ರದ ಮೇಲೆಯೇ ರೂಪುಗೊಂಡ ಸಿನಿಮಾ ಇದು. ಪ್ರತಿಯೊಂದು ಪ್ರೇಮ್‌ ಅನ್ನೂ ಕಲರ್‌ಫುಲ್‌ ಮಾಡುವ ಚಪಲವನ್ನೂ ಈ ತಂತ್ರದ ಭಾಗವಾಗಿಯೇ ನೋಡಬಹುದು.

ಸಭ್ಯತೆಯ ಗಡಿರೇಖೆಯ ಆಚೀಚೆ ಓಡಾಡುತ್ತಲೇ ಕಚಗುಳಿಯಿಡುವ ಸಂಭಾಷಣೆ, ಆಶಿಕಾ ಮುದ್ದು ಮುಖ, ಚಿಕ್ಕಣ್ಣ ಅವರ ಮಾತಿನ ಪಟಾಕಿ ಎಲ್ಲವೂ ಇದೆ. ಮೊದಲರ್ಧ ಇವುಗಳ ಮೂಲಕವೇ ಸುತ್ತುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಕಥೆಯ ಹಳಿಯನ್ನು ತಪ್ಪಿಸಿ ಸಸ್ಪೆನ್ಸ್‌, ಥ್ರಿಲ್ಲರ್, ಹಾರರ್, ಮೆಲೊಡ್ರಾಮಾ ಎಲ್ಲವನ್ನೂ ತುರುಕಲು ಯತ್ನಿಸಿದ್ದಾರೆ. ಒಂದೇ ತಟ್ಟೆಯಲ್ಲಿ ಎಲ್ಲವನ್ನೂ ಉಣಬಡಿಸುವ ಅವರ ಪ್ರಯತ್ನದಲ್ಲಿ ಸ್ವಾದ ಮಾಯವಾಗಿದೆ.

ನಾಯಕ ಕ್ರಿಶ್‌ ಎಲ್ಲದರಲ್ಲಿಯೂ ವೆರೈಟಿ ಹುಡುಕುವವ. ತನ್ನ ಬಾಳಸಂಗಾತಿ ಆಗುವ ಹುಡುಗಿಯೂ ವೆರೈಟಿ ಆಗಿರಬೇಕು ಎನ್ನುವುದು ಅವನ ಅಭಿಲಾಷೆ. ಆದ್ದರಿಂದಲೇ ಸಿಕ್ಕ ಸಿಕ್ಕ ಹುಡುಗಿಯರ ಜತೆ ಸ್ನೇಹ ಬೆಳೆಸಿ ಅವರನ್ನು ಒಂದು ದಿನದ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಪರೀಕ್ಷೆ ಮಾಡುವ ಅಭ್ಯಾಸ ಇರುವವ. ನಾಯಕಿ ಮಯೂರಿ ತನ್ನ ಬದುಕಿನ ಆಮಿಷಗಳನ್ನು ತೀರಿಸಿಕೊಳ್ಳಲು ಹುಡುಗರನ್ನು ಸ್ನೇಹಿತರನ್ನಾಗಿಸಿಕೊಂಡು ಎ.ಟಿ.ಎಂ ಕಾರ್ಡ್‌ ರೀತಿ ಬಳಸಿಕೊಳ್ಳುವವಳು.

ಈ ಇಬ್ಬರೂ ಕಾರ್‌ನಲ್ಲಿ ಲಾಂಗ್‌ಡ್ರೈವ್ ಡೇಟಿಂಗ್‌ ಹೋಗುತ್ತಾರೆ. ಅವರ ಜತೆಗೆ ದಾರಿಯಲ್ಲಿ ಡಿ.ಜೆ. (ದೇವನಹಳ್ಳಿ ಜಗ್ಗ) ಕೂಡ ಜತೆಯಾಗುತ್ತಾನೆ. ಅವರ ಕಾರ್‌ ಅನ್ನು ಇನ್ನೊಂದು ಅನಾಮಿಕ ಕಾರ್‌ ಹಿಂಬಾಲಿಸಿ ಆ್ಯಕ್ಸಿಡೆಂಟ್‌ ಮಾಡಲು ಯತ್ನಿಸುತ್ತದೆ. ಆ ಕಾರಿನಲ್ಲಿ ಇರುವವರು ಯಾರು? ಅವರು ಯಾಕೆ ನಾಯಕನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎನ್ನುವ ಸಸ್ಪೆನ್ಸ್‌ ಕಥೆಯ ಮೇಲೆ ದ್ವಿತೀಯಾರ್ಧ ಕಟ್ಟಲಾಗಿದೆ.

ಸಿನಿಮಾ ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಇನ್ನೊಂದು ಮೆಲೊಡ್ರಾಮಾ ಕಟ್ಟಲು ಹೊರಟಿದ್ದು ಚಿತ್ರಕಥೆಯನ್ನು ಜಾಳಾಗಿಸಿದೆ. ಖಡಕ್ ಧ್ವನಿಯ ಖಳನ ವೇಷದಲ್ಲಿ ರವಿಶಂಕರ್ ಇಷ್ಟವಾಗುತ್ತಾರೆ; ಆದರೆ ಅವರ ಪಾತ್ರ ಜೋಕರ್‌ನಾ, ಮಾಂತ್ರಿಕನಾ ಎನ್ನುವುದೇ ಬಗೆಹರಿಯುವುದಿಲ್ಲ. ಸಾಧುಕೋಕಿಲ ಮತ್ತು ಜಹಾಂಗೀರ್ ಅವರ ಪಾತ್ರಗಳು ಇಲ್ಲದಿದ್ದರೂ ಏನೂ ನಷ್ಟವಾಗುತ್ತಿರಲಿಲ್ಲ. ಆಶಿಕಾ ಇನ್ನೂ ನಟನೆಯಲ್ಲಿ ಪಳಗಬೇಕಿದೆ.

ಎತ್ತೆತ್ತಲೋ ಹರಿಹಾಯುವ ಕಥೆ ಕೊನೆಕೊನೆಗೆ ಕಿರಿಕಿರಿ ಹುಟ್ಟಿಸುತ್ತದೆ. ಸಾಕಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ ಸಿನಿಮಾ ಚುರುಕುಗೊಳಿಸುವ ಅವಕಾಶವನ್ನು ನಿರ್ದೇಶಕರೂ ಸಂಕಲನಕಾರರೂ ಜತೆಯಾಗಿ ಕೈಚೆಲ್ಲಿದ್ದಾರೆ.

‘ರ‍್ಯಾಂಬೊ 2’ ಎಂಬ ತಟ್ಟೆಯಲ್ಲಿ ಒಂದಿಷ್ಟು ತಿನಿಸುಗಳನ್ನು ಕಲಸಿ ಇಡಲಾಗಿದೆ. ಪ್ರೇಕ್ಷಕ ಒಂದಿಷ್ಟನ್ನು ಕಷ್ಟಪಟ್ಟು ಸಹಿಸಿಕೊಂಡರೆ ಅಲ್ಲಲ್ಲಿ ಇಷ್ಟವಾದ ತುಣುಕುಗಳೂ ಸಿಗಬಹುದು. ಇಲ್ಲವೇ ಹಣ ಕೊಟ್ಟ ತಪ್ಪಿಗೆ ಇರುವುದರಲ್ಲಿಯೇ ವಾಸಿ ಅನಿಸಿದ್ದನ್ನು ಹೆಕ್ಕಿಕೊಂಡು, ಉಳಿದ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT