ಶುಕ್ರವಾರ, ಫೆಬ್ರವರಿ 26, 2021
29 °C

ಹೊಸ ಲುಕ್‌ಗೆ ‘ಹಗ್ಗದ ಆಭರಣ’

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಹೊಸ ಲುಕ್‌ಗೆ ‘ಹಗ್ಗದ ಆಭರಣ’

ಆಭರಣಗಳ ವಿನ್ಯಾಸಕ್ಕೆ ಏನು ಬೇಕಾದರೂ ಸ್ಫೂರ್ತಿಯಾಗಬಹುದು. ಹೂವು, ಹಕ್ಕಿ, ಹಣ್ಣು, ಕೀಟ... ಏನೆಲ್ಲವನ್ನೂ ವಿನ್ಯಾಸಕ್ಕೆ ಒಗ್ಗಿಸಬಹುದು. ಹೊಸತನದ ಸುತ್ತ ಗಿರಕಿ ಹೊಡೆಯುವುದೇ ಆಭರಣ ವಿನ್ಯಾಸ ಲೋಕದ ಸವಾಲೂ ಹೌದಲ್ಲವೇ? ಅಂಥ ಹೊಸತನಕ್ಕೆ ಈಗ ‘ಹಗ್ಗದ’ ಶೈಲಿಯ ಆಭರಣವೂ ಸೇರಿಕೊಂಡಿದೆ.

ಇದೀಗ ಹಗ್ಗದ ವಿನ್ಯಾಸವನ್ನೇ ಆಭರಣಕ್ಕೂ ಒಗ್ಗಿಸಿ ಟ್ರೆಂಡ್ ಹುಟ್ಟುಹಾಕಿದ್ದಾರೆ ಕೆಲ ವಿನ್ಯಾಸಕರು. ಅದರ ಹೆಸರೇ, ಈಗ ಹೆಚ್ಚು ಪ್ರಚಲಿತದಲ್ಲಿರುವ ‘ರೋಪ್ ಜ್ಯುವೆಲ್ಲರಿ’.

ಹಗ್ಗದಂತೆ ಕಾಣುವ ಈ ಆಭರಣಗಳು ಈಗ ದೊಡ್ಡ ಟ್ರೆಂಡ್ ಆಗಿವೆ. ಸೆಲೆಬ್ರಿಟಿಗಳಿಗೂ ಇದು ಭಾರೀ ಪ್ರಿಯ. ಸೋನಂ ಕಪೂರ್, ಶಿಲ್ಪಾ ಶೆಟ್ಟಿ, ಆಲಿಯಾ ಭಟ್ ಈ ಬಾಲಿವುಡ್ ತಾರೆಯರೆಲ್ಲಾ ರೋಪ್‌ ಜ್ಯುವೆಲ್ಲರಿಯ ಅಂದಕ್ಕೆ ಮಾರು ಹೋದವರೇ. ಇತ್ತೀಚೆಗೆ ರ‍್ಯಾಂಪ್‌ ಮೇಲೆ ಹುಡುಗಿಯರ ಕುತ್ತಿಗೆಯಲ್ಲಿ ಹಗ್ಗದ ಆಭರಣಗಳ ಹವಾ ಜೋರಾಗಿರುವುದೇ ಇದಕ್ಕೆ ಸಾಕ್ಷಿ. ಕಾಲೇಜು ಹುಡುಗಿಯರಿಗೂ ಅಚ್ಚುಮೆಚ್ಚು.

ನೋಡಲು ಅಗಲವಾಗಿ ಕಂಡರೂ ಹಗುರ. ಇದೇ ಇದರ ಪ್ಲಸ್ ಪಾಯಿಂಟ್‌. ಇದರಲ್ಲೂ ಥರಾವರಿ ಬಗೆಯಿವೆ. ಮಣಿ, ನೂಲು, ಫೈಬರ್‌, ಪ್ಲಾಸ್ಟಿಕ್‌ ವೈರ್‌ ಹೀಗೆ ಬೇರೆ ಬೇರೆ ಸಾಮಗ್ರಿಗಳನ್ನು ಬಳಸಿಯೇ ಹಗ್ಗದಂಥ ವಿನ್ಯಾಸವನ್ನು ಹೆಣೆಯಬಹುದು. ಉಲ್ಲನ್, ಬಟ್ಟೆಯಿಂದಲೂ ಹೆಣೆದು ಇದನ್ನು ಮ್ಯಾಚಿಂಗ್‌ನಂತೆ ತೊಟ್ಟುಕೊಳ್ಳುವುದು ಈಗ ಹೊಸದು.

ಆಕಾರದಲ್ಲೂ ಆಯ್ಕೆ ಸಾಕಷ್ಟಿದೆ. ಸಣ್ಣದ್ದು, ದೊಡ್ಡದ್ದು, ಅಗಲದ್ದು, ಸಿಂಗಲ್ ರೋಪ್, ಮಲ್ಟಿ ರೋಪ್, ಲೇಯರ್‌ ಬೇಕೆಂದಷ್ಟು ಆಯ್ಕೆಗಳು. ಎಳೆಎಳೆಯಾಗಿಯೂ ತೊಡುವುದು ಯುವತಿಯರ ಮೆಚ್ಚುಗೆ. ದಿರಿಸಿಗೆ ತಕ್ಕಂತೆ ಅದರಲ್ಲೂ ವ್ಯತ್ಯಾಸ ಮಾಡಿಕೊಳ್ಳಬಹುದಾದ್ದು ಇದನ್ನು ತೊಟ್ಟುಕೊಳ್ಳುವವರು ಬಯಸುತ್ತಿರುವ ಅಂಶ.

‘ಆರ್ಟ್‌ ಡೆಕೊ’ ಶೈಲಿ ಹಾಗೂ ಎಲ್ಲವೂ ಮಿಳಿತಗೊಂಡಿರುವ ‘ಆಬ್ಸ್‌ಟ್ರಾಕ್ಟ್’ ಶೈಲಿ ಇದರಲ್ಲಿ ವಿಶೇಷ. ಕಲಂಕಾರಿ ವಸ್ತ್ರದಲ್ಲಿ ಇದನ್ನು ಹೊರತಂದಿರುವುದೇ ದೇಸಿ ಶೈಲಿ. ಈ ಆಭರಣಕ್ಕೆ ಬಳಸುವ ಬಣ್ಣಗಳಲ್ಲೂ ವಿಭಿನ್ನತೆಯಿರುತ್ತದೆ. ಒಂದಕ್ಕೊಂದು ವಿರುದ್ಧವಾದ, ಕಾಂಟ್ರಾಸ್ಟ್‌ ಬಣ್ಣಗಳನ್ನು ಸೇರಿಸುವುದು ಈ ಆಭರಣದ ಲುಕ್‌ಗೆ ಕಾರಣ.

ರೋಪ್ ಜ್ಯುವೆಲ್ಲರಿಯಲ್ಲಿ ನೆಕ್‌ಲೇಸ್‌ ಶೈಲಿಯೇ ಹೆಚ್ಚಿದ್ದರೂ ಬ್ರೇಸ್‌ಲೆಟ್‌, ಕಿವಿಯೋಲೆಗಳು ಯುವತಿಯರ ಫ್ಯಾಷನ್‌ನ ಹಿಟ್‌ಲಿಸ್ಟ್‌ನಲ್ಲಿ ಸೇರಿಕೊಂಡಿವೆ. ಅದರಲ್ಲೂ ಹಲವು ಸಾಧ್ಯತೆಗಳನ್ನು ವಿನ್ಯಾಸಕರು ಕಂಡುಕೊಳ್ಳುತ್ತಿದ್ದಾರೆ.

ಬುಡಕಟ್ಟು ಜನಾಂಗದ ಮಹಿಳೆಯರು ತೊಡುತ್ತಿದ್ದ ದೊಡ್ಡ ದೊಡ್ಡ ಆಭರಣಗಳ ಶೈಲಿಯೇ ಇದಕ್ಕೆ ಮೂಲವಂತೆ. ಅದೇ ಈಗಿನ ಹುಡುಗಿಯರಿಗೆ ತಕ್ಕಂತೆ ಈಗ ಸ್ಟೈಲಿಶ್ ರೂಪ ಪಡೆದುಕೊಂಡಿದೆ. ಬೊಹೆಮಿಯನ್ ಶೈಲಿ ಬಯಸುವವರಿಗಂತೂ ಇದು ಹೇಳಿಮಾಡಿಸಿದಂತಿದೆ. ಒಂದೇ ರೀತಿಯ, ಒಂದೇ ಬಣ್ಣದ ಆಭರಣಗಳಿಗಿಂತ ಭಿನ್ನತೆಯನ್ನು ಬಯಸುವವರಿಗೆ ತಕ್ಕುದಾದದ್ದು. ಸ್ವಾತಂತ್ರ್ಯದ ರೂಪಕವಾಗಿ ಹುಡುಗಿಯರು ಇದನ್ನು ಧರಿಸುತ್ತಿದ್ದಾರೆ.

ಮೊದಲು ಮಣಿಗಳಿಂದಷ್ಟೇ ಪ್ರಾರಂಭವಾದ ಈ ಆಭರಣದಲ್ಲಿ ಈಗೀಗ 3ಡಿ ಪ್ರಯೋಗಗಳು ನಡೆಯುತ್ತಿವೆ.ಇಂಥದ್ದೇ ದಿರಿಸಿಗೆಂದು ಇವೇನು ಸೀಮಿತವಾಗಿಲ್ಲ. ಜೀನ್ಸ್, ಸೀರೆ, ಅದಕ್ಕೆ ತಕ್ಕಂತೆ ಮಿಕ್ಸ್ ಅಂಡ್ ಮ್ಯಾಚ್ ಮಾಡಿ ತೊಡಬಹುದು. ದೇಸಿ ದಿರಿಸಿನಿಂದ ಹಿಡಿದು ಪಾಶ್ಚಾತ್ಯ ಬಟ್ಟೆಗಳಿಗೂ ಹೊಂದಿಕೊಳ್ಳುವುದೇ ಇದರ ಶೈಲಿ ಮುನ್ನೆಲೆಗೆ ಬರಲು ಕಾರಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.