ಶನಿವಾರ, ಫೆಬ್ರವರಿ 27, 2021
31 °C

ಕುಡ್ಲುತೀರ್ಥದ ಜುಮುರು ಸ್ನಾನ

ಡಾ ಸುಬ್ರಮಣ್ಯ ಮಾಚಿಕೊಪ್ಪ Updated:

ಅಕ್ಷರ ಗಾತ್ರ : | |

ಕುಡ್ಲುತೀರ್ಥದ ಜುಮುರು ಸ್ನಾನ

ನೀವು ಕರ್ನಾಟಕದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿರಬಹುದು. ಆದರೆ ನಾನು ಪರಿಚಯಿಸಲು, ಹೇಳಲು ಹೊರಟಿರುವ ಈ ಕುಡ್ಲುತೀರ್ಥ ಮಾತ್ರ ಎಲ್ಲಕ್ಕಿಂತ ವಿಶಿಷ್ಟವಾದದ್ದು.

ನೀವು ಈ ಸುಂದರ ಜಲಪಾತವನ್ನು ನೋಡದಿದ್ದರೆ, ಆ ಜಲಪಾತಕ್ಕೆ ತಲೆಯೊಡ್ಡಿ ಸ್ನಾನ ಮಾಡದಿದ್ದರೆ, ಆ ಗುಂಡಿಯಲ್ಲಿ ಮುಳುಗೇಳದಿದ್ದರೆ – ಸಾಹಸ, ಪ್ರವಾಸ, ಚಾರಣಕ್ಕೆ ಸಂಬಂಧಿಸಿದಂತೆ ಒಂದು ತಿರುಗಾಟ ಬಾಕಿಯಿದೆಯಂತಲೇ ಅರ್ಥ. ಬನ್ನಿ.. ಬನ್ನಿ... ಇನ್ನೂ ಎರಡು ತಿಂಗಳು ಬೇಸಿಗೆಯಿದೆ. ಕುಡ್ಲುತೀರ್ಥಕ್ಕೆ ಬನ್ನಿ. ಏನದು ಈ ಜಲಪಾತದ ವೈಶಿಷ್ಟ್ಯ?

ಕರ್ನಾಟಕದಲ್ಲಿ ಅನೇಕ ಜಲಪಾತಗಳಿವೆ. ಭಾರತದ ಅತಿ ಎತ್ತರದ ಐದು ಜಲಪಾತಗಳಲ್ಲಿ ಎರಡು ಇರುವುದು ಕರ್ನಾಟಕದಲ್ಲೇ. ಇವುಗಳಲ್ಲಿ ಅನೇಕ ಜಲಪಾತಗಳನ್ನು ನಾವು ದೂರದಿಂದ ನೋಡಬಹುದು. ಹತ್ತಿರ ಹೋಗುವುದು ಕಷ್ಟಸಾಧ್ಯ. ಜಲಪಾತದ ಧಾರೆಗೆ ತಲೆಯೊಡ್ದುವುದಂತೂ ಕನಸಿನ ಮಾತೇ. ಉದಾಹರಣೆಗೆ ಗಗನಚುಕ್ಕಿ, ಉಂಚಳ್ಳಿ, ಜೋಗ.

ಇನ್ನು ಕೆಲವು ಜಲಪಾತಗಳು ಅವುಗಳ ಬುಡದವರೆಗೂ ಹೋಗಿ ನೀರಾಟವಾಡಿ ಬರಬಹುದು. ಆದರೆ ನೀರಿನ ಧಾರೆಗೆ ತಲೆಯೊಡ್ಡುವುದು ಕಷ್ಟ. ಇನ್ನು ಕೆಲವು ಜಲಪಾತಗಳ ಕೆಳಗೆ ಹೋಗಿ ತಲೆಯೊಡ್ಡಿ ಆರಾಮವಾಗಿ ಸ್ನಾನ ಮಾಡಬಹುದು. ಆದರೆ ಮಜಾ ಕಡಿಮೆ. ನೀರು ಬೀಳುವ ಎತ್ತರ ಕಡಿಮೆಯಿರುತ್ತದೆ.

ಆದರೆ - ಅತಿ ಎತ್ತರದಿಂದ ಬೀಳುವ, ಜಲಪಾತದ ಬುಡದವರೆಗೂ ಹೋಗಬಹುದಾದ, ಜಲಪಾತದ ಮುಖ್ಯಧಾರೆಗೆ ಆರಾಮವಾಗಿ ತಲೆಯೊಡ್ಡಬಹುದಾದ ಅಪರೂಪದ ಕೆಲವೇ ಜಲಪಾತಗಳಲ್ಲಿ ಒಂದು ಕುಡ್ಲುತೀರ್ಥ ಜಲಪಾತ.

ಹೋಗುವುದು ಹೇಗೆ?

ಆಗುಂಬೆ ಘಾಟಿ ಇಳಿಯುತ್ತಿರುವಂತೆ ಸೋಮೇಶ್ವರ ಎಂಬ ಊರು ಸಿಗುತ್ತದೆ. ಸೋಮೇಶ್ವರದಿಂದ ಉಡುಪಿಯ ದಿಕ್ಕಿನಲ್ಲಿ ಹೋಗುವಾಗ, ಹೆಬ್ರಿಗೂ ಹಿಂದೆ, ಕೆಲವೇ ಕಿಲೋಮೀಟರುಗಳಲ್ಲಿ ಸಿಗುವ ಪುಟ್ಟ ಊರೇ ಸೀತಾನದಿ. ಇಲ್ಲಿ ಎಡಕ್ಕೆ ಸಾಗುವ ಚಿಕ್ಕ ದಾರಿಯಲ್ಲಿ ಹೋದರೆ ಕುಡ್ಲುತೀರ್ಥಕ್ಕೆ ತಲುಪಬಹುದು. ಮಾಹಿತಿ ಫಲಕ ಎಲ್ಲೆಡೆ ಇದೆ. 13 – 14 ಕಿ.ಮೀ. ಕಚ್ಚಾ ದಾರಿ. ಮಾರುತಿ 800 ಕೂಡ ಹೋಗಬಹುದು. ನಿಧಾನ ಹೋಗಬೇಕಷ್ಟೆ. ಸ್ವಂತ ವಾಹನ ಅಗತ್ಯ.

ಈಗ ನೀವು ಅರಣ್ಯ ಇಲಾಖೆಯ ತಪಾಸಣಾ ಕೇಂದ್ರದಲ್ಲಿದ್ದೀರಿ. ಎದುರು ಕಡಿದಿಟ್ಟಂತೆ ಪಶ್ಚಿಮ ಘಟ್ಟ ಕಾಣುತ್ತಿದೆ. ನಾನು ದಶಕಗಳ ಹಿಂದೆ ಬಂದಾಗ ತಪಾಸಣಾ ಕೇಂದ್ರ ಇರಲಿಲ್ಲ. ಈಗ ಪ್ರವೇಶ ಶುಲ್ಕವೂ ಇದೆ. (₹ 50 ). ಪ್ಲಾಸ್ಟಿಕ್ ಕೊಟ್ಟೆಗಳ ತಪಾಸಣೆ ಇದೆ. ಲೆಕ್ಕ ಕೊಟ್ಟು ₹ 100 ಸಂದಾಯ ಮಾಡಿಯೇ ಹೋಗಬೇಕು. ಅಷ್ಟೂ ಪ್ಲಾಸ್ಟಿಕ್ ಕೊಟ್ಟೆಗಳನ್ನು ಬರುವಾಗ ತಂದರೆ ಮಾತ್ರ ಆ ಹಣ ವಾಪಸ್. (ಇದರಿಂದಾಗಿ ಜಲಪಾತದ ಪರಿಸರ ಸಾಕಷ್ಟು ಸ್ವಚ್ಛವಿದೆ). ಆದರೆ ಸಂಜೆ ನಾಲ್ಕು ಗಂಟೆಯ ಮೇಲೆ ಜಲಪಾತದ ಪರಿಸರದಲ್ಲಿ ಇರುವಂತಿಲ್ಲ. ವಾಪಸ್ ಬರಬೇಕು. ಆದ್ದರಿಂದ ಮಧ್ಯಾಹ್ನ ಎರಡು ಘಂಟೆಯ ಒಳಗೆ ಈ ತಪಾಸಣಾ ಸ್ಥಳ ತಲುಪುವುದು ಒಳ್ಳೆಯದು.

ಇಲ್ಲಿಂದ ಜಲಪಾತದ ಬುಡದವರೆಗೆ ಮಳೆಕಾಡಿನೊಳಗೆ ಒಂದೂವರೆ ಕಿ.ಮೀ.ಗಳ ಏರುನಡಿಗೆ. ಕೆಲವೆಡೆ ಸಿಮೆಂಟು ಮೆಟ್ಟಿಲುಗಳೂ ಆಗಿವೆ. ಐವತ್ತು ವರ್ಷ ಮೇಲ್ಪಟ್ಟವರಿಗೆ, ತುಂಬಾ ದಪ್ಪವಿರುವವರಿಗೆ, ಗಂಟು ನೋವು ಇರುವವರಿಗೆ ನಡೆಯುವುದು ಕಷ್ಟವೇ. ದಾರಿಯಲ್ಲಿ ಗೋಡೆಯಂಥ ಕಾಲುಗಳನ್ನು ಹೊಂದಿರುವ ದೊಡ್ಡ ಮರ ನಿಮ್ಮೊಡನೆ ಸೆಲ್ಫಿಗಾಗಿ ಕಾದಿದೆ.

ಒಂದೂವರೆ ಕಿ.ಮೀ. ಏರುದಾರಿಯ ಕೊನೆಯಲ್ಲಿ ಒಂದಿಷ್ಟು ಇಳಿದಕೂಡಲೇ ನಿಮ್ಮೆದುರು ಕಾಣುವುದೇ – ಮೂರು ಕಡೆ ಕಡಿದಿಟ್ಟಂತೆ ಪದರ ಪದರ ಕಲ್ಲು ಬೆಟ್ಟ – ಇನ್ನೊಂದೆಡೆ ಮುಗಿಲೆತ್ತರ ಕಾನನ – ಬಾವಿಯಂಥ ಜಾಗ. ಹಾಗೂ ಆ ಕಲ್ಲು ಬೆಟ್ಟದಿಂದ ನೂರಾರು ಅಡಿ ಎತ್ತರದಿಂದ ಧುಮುಕುವ ನೀರಧಾರೆ. ಇದೇ ಕುಡ್ಲುತೀರ್ಥ.

ಬಂಡೆಯಿಂದ ಬಂಡೆಗೆ ಹಾರುತ್ತ ಸೀದಾ ಜಲಪಾತದ ಬುಡಕ್ಕೇ (ಬದಿಯಿಂದ) ಹೋಗಿ ಯಾವ ಬಂಡೆಕಲ್ಲುಗಳಿಗೂ ತಾಗದೇ ಅಷ್ಟೆತ್ತರದಿಂದ ನೇರವಾಗಿ ಪಾತಾಳಕ್ಕೆ ಬೀಳುವ ಆ ನೀರಧಾರೆಗೆ ಮೈಯೊಡ್ಡಿದರೆ ಆ ಅನುಭವ ರೋಮಾಂಚಕಾರಿ. ವರ್ಣಿಸಲಸದಳ. ಈಚೆ ಬಂದಕೂಡಲೇ ನಮ್ಮ ಚರ್ಮವೇ ಹೇಳುತ್ತದೆ. ಕೆಂಪುಕೆಂಪಾಗುತ್ತದೆ! ನನಗಂತೂ ಕೈ ಬೆರಳುಗಳು ಇಪ್ಪತ್ತು ನಿಮಿಷ ತುರಿಸುತಿತ್ತು. ನೀರು ಬೀಳುವ ಜಾಗದಲ್ಲಿ ಯಾವ ಅಪಾಯವೂ ಇಲ್ಲ.

ಮೊಣಕಾಲಷ್ಟು ಆಳ ನೀರಿನಲ್ಲಿ ಕೂತೂ ಅಭ್ಯಂಜನ ಸುಖ ಸವಿಯಬಹುದು. ನಡು ಬೇಸಿಗೆಯಲ್ಲೂ ಮೈ ಚುರುಗುಟ್ಟುವಷ್ಟು ನೀರಿರುತ್ತದೆ. ಮಳೆಗಾಲದಲ್ಲಿ ಹೇಗಿರುತ್ತೋ ದೇವರೇ ಬಲ್ಲ. ಆ ಕಾಲದಲ್ಲಿ ಪ್ರವೇಶ ಇಲ್ಲ.

ನೈಸರ್ಗಿಕ ಈಜುಕೊಳ

ಈಜುವವರಿಗಂತೂ ಇಲ್ಲೊಂದು ನೈಸರ್ಗಿಕ ಈಜುಕೊಳವೇ ಇದೆ. ಜಲಪಾತದ ಮುಂಭಾಗದಲ್ಲಿ ಆಳದ ಗುಂಡಿಯಿದೆ. ಆರಾಮವಾಗಿ ಮನದಣಿಯೇ ಈಜಬಹುದು. ಈಜು ಬಾರದವರು ಜಲಪಾತಕ್ಕೆ ಮೈಯೊಡ್ಡುವಾಗ ಈ ಗುಂಡಿಗೆ ಬೀಳದಂತೆ ಸ್ವಲ್ಪ ಎಚ್ಚರವಹಿಸಬೇಕು. ಈಜು ಬಾರದವರಿಗೂ ಈ ಗುಂಡಿಯ ಹೊರಬದಿ ಕಡಿಮೆ ನೀರಿರುವ ಜಾಗವಿದೆ. ನೀರಂತೂ ಸ್ಫಟಿಕಶುಭ್ರ.

ಹೆಬ್ರಿ ಸುತ್ತಮುತ್ತಲ ಐದಾರು ತಾಲ್ಲೂಕಿನವರಿಗೆ ಒಂದು ದಿನದ ಮನರಂಜನೆಯ ತಾಣ. ಉಡುಪಿ-ಶೃಂಗೇರಿ, ಕೊಲ್ಲೂರು-ಶೃಂಗೇರಿ, ಕೊಲ್ಲೂರು-ಧರ್ಮಸ್ಥಳ – ಹೋಗುವ ಪರಿಸರಪ್ರೇಮಿಗಳು ಈ ತಾಣದ ಭೇಟಿಗೆ ಅರ್ಧದಿನ ಮೀಸಲಿಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.