ಸೋಮವಾರ, ಮಾರ್ಚ್ 30, 2020
19 °C

ಮುಕ್ಕಾಗದ ಮೋದಿ ಬ್ರ್ಯಾಂಡ್‌ನ ವರ್ಚಸ್ಸು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಮುಕ್ಕಾಗದ ಮೋದಿ ಬ್ರ್ಯಾಂಡ್‌ನ ವರ್ಚಸ್ಸು

ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಎದುರಿಸಿದ ಕೆಲ ರಾಜ್ಯಗಳಲ್ಲಿನ ಪ್ರವಾಸ ಸಂದರ್ಭದಲ್ಲಿ ಒಂದು ವಿಶೇಷ ಸಂಗತಿ ನನ್ನ ಅನುಭವಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ದೇಶದಾದ್ಯಂತ ಎಲ್ಲಿಯೂ ಕುಂದು ಕಂಡು ಬರದಿರುವದು ಆ ವಿಶೇಷ ವಿದ್ಯಮಾನವಾಗಿದೆ. ಅನೇಕ ವಿಚಾರಗಳ ಬಗ್ಗೆ ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಬೆಲೆ ಏರಿಕೆ, ಅದರಲ್ಲೂ ವಿಶೇಷವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ತುಟ್ಟಿಯಾಗಿರುವುದು, ಉದ್ಯೋಗಾವಕಾಶಗಳು ಇಲ್ಲದಿರುವುದು, ವಹಿವಾಟು ಕುಸಿದಿರುವುದು, ನೋಟು ರದ್ದತಿ, ಜಿಎಸ್‌ಟಿ ಜಾರಿ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪರಿಸ್ಥಿತಿಗೆ ಬಿಜೆಪಿ ಮತ್ತು ಕೇಂದ್ರ ಹಾಗೂ ರಾಜ್ಯಗಳಲ್ಲಿನ ಸರ್ಕಾರಗಳೇ ಕಾರಣ ಎಂದೂ ಬೊಟ್ಟು ಮಾಡಿ ತೋರಿಸಲಾಗುತ್ತಿದೆ.

ಈ ಎಲ್ಲ ಟೀಕೆಗಳು ಪ್ರಧಾನಿ ಮೋದಿ ಅವರ ವಿರುದ್ಧ ವ್ಯಕ್ತವಾಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಮೋದಿ ವ್ಯಕ್ತಿತ್ವವು ಈಗ ವಿಶಿಷ್ಟ ಬ್ರ್ಯಾಂಡ್‌ ಆಗಿ ಬೆಳೆದಿದೆ. ಅವರದ್ದೇ ಆದ ಸರ್ಕಾರ, ಪಕ್ಷ, ವರ್ತಮಾನದ ವಿದ್ಯಮಾನಗಳು, ನಿಂದೆಗಳಿಗೆಲ್ಲ ಹೊರತಾದ ಬ್ರ್ಯಾಂಡ್‌ ಅದಾಗಿದೆ. ಈ ಬ್ರ್ಯಾಂಡ್‌, ಅವರ ವ್ಯಕ್ತಿತ್ವವನ್ನುಇತರ ಬೆಳವಣಿಗೆಗಳಿಂದ ಬೇರ್ಪಡಿಸಿ ಅಭೇದ್ಯ ರಕ್ಷಣಾ ಕೋಟೆ ಒದಗಿಸಿದೆ. ಈ ವಿದ್ಯಮಾನವು ನಮ್ಮ ರಾಜಕೀಯ ಇತಿಹಾಸದಲ್ಲಿಯೇ ಅಸಾಮಾನ್ಯ ಸಂಗತಿಯಾಗಿದೆ. ಬಾಹ್ಯ ಪ್ರಭಾವಗಳಿಂದ ತಮ್ಮ ವ್ಯಕ್ತಿತ್ವ ಕಿಂಚಿತ್ತೂ ಮುಕ್ಕಾಗದಂತೆ ಮೋದಿ ಅವರೇ ಸ್ವತಃ ಈ ರಕ್ಷಣಾ ಕೋಟೆಯನ್ನು ನಿರ್ಮಿಸಿಕೊಂಡಿರುವುದು ಇನ್ನೊಂದು ಹೆಗ್ಗಳಿಕೆಯಾಗಿದೆ.

ವಂಶಾಡಳಿತ, ವಿಶೇಷ ಸೌಲಭ್ಯಗಳ ಹಿನ್ನೆಲೆಯಿಂದ ಬಂದವರೇ ರಾಜಕೀಯದಲ್ಲಿ ಮಿಂಚುವ ದೇಶಿ ರಾಜಕಾರಣದಲ್ಲಿ, ಮೋದಿ ಪರಿಶ್ರಮಪಟ್ಟು ಇಷ್ಟೆತ್ತರ ಬೆಳೆದಿದ್ದಾರೆ. ಅವರೊಂದು ‘ಸೂಪರ್‌ ಬ್ರ್ಯಾಂಡ್‌’ ಆಗಿ ಗಮನ ಸೆಳೆಯುತ್ತಿದ್ದಾರೆ. ಮೋದಿ ಅವರ ರಾಜಕೀಯ ಮತ್ತು ಹಾನಿಕಾರಕವಾದ ಅವರ ಆರ್ಥಿಕ ಧೋರಣೆಗಳ ಹೊರತಾಗಿಯೂ ಅವರನ್ನು ಅಸಂಖ್ಯಾತ ಭಾರತೀಯರು ಅತಿಯಾಗಿ ಕೊಂಡಾಡುತ್ತಿದ್ದಾರೆ.

ಅವರನ್ನು ಕೊಂಡಾಡುವವರು ದೇಶದಾದ್ಯಂತ ಸಾಕಷ್ಟು ಜನರಿದ್ದರೂ, ವಿವಿಧ ಸಮುದಾಯಗಳಲ್ಲಿನ ದೊಡ್ಡ ಸಂಖ್ಯೆಯ ಜನರು ಅವರನ್ನು ದ್ವೇಷಿಸುತ್ತಾರೆ. ಅಲ್ಪಸಂಖ್ಯಾತರು, ಸಿದ್ಧಾಂತಕ್ಕೆ ಬದ್ಧರಾಗಿರುವ ಸಮಾಜವಾದಿಗಳು ಮತ್ತು ಇತ್ತೀಚಿನ ದಿನಗಳಲ್ಲಿ ದಲಿತರೂ ಅವರನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ. ಇದರ ಹೊರತಾಗಿಯೂ ಅವರ ಬ್ರ್ಯಾಂಡ್‌ ವರ್ಚಸ್ಸಿಗೆ ಹೆಚ್ಚಿನ ಧಕ್ಕೆ ಬಾರದಿರುವುದು ಅನುಭವಕ್ಕೆ ಬರುತ್ತಿದೆ.

ರಾಜೀವ್‌ ಗಾಂಧಿ ಅವರೂ ಸಾಕಷ್ಟು ಜನಾನುರಾಗಿಯಾಗಿದ್ದರು. ಅಂತಹ ದೊಡ್ಡ ತಪ್ಪೇನೂ ಮಾಡಿರದಿದ್ದರೂ ಅವರ ಈ ಜನಪ್ರಿಯತೆ 18 ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. 1984ರಲ್ಲಿ ಆರಂಭವಾದ ಜನಪ್ರಿಯತೆ ಬಹಳ ದಿನ ಉಳಿಯಲಿಲ್ಲ. ಅವರ ಜನಪ್ರಿಯತೆಯ ಅವನತಿಯು ವಿಪತ್ತಿನ ರೂಪದಲ್ಲಿ ಅಪ್ಪಳಿಸಿತ್ತು. ಅದನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಇನ್ನಷ್ಟು ಸರಳವಾಗಿ ಹೇಳುವುದಾದರೆ, ಆ ಮೊದಲ 18 ತಿಂಗಳಲ್ಲಿ ರಾಜೀವ್‌ ಗಾಂಧಿ ಅವರು ಏನೇ ಮಾತನಾಡಿದರೂ ನಮ್ಮ ತಾಯಂದಿರು ಕಣ್ಣೀರು ಹಾಕುತ್ತಿದ್ದರು. 19ನೇ ತಿಂಗಳಿನಿಂದ ಅವರು ಏನೇ ಹೇಳಿದರೂ ನಮ್ಮ ಮಕ್ಕಳು ಅಪಹಾಸ್ಯ ಮಾಡಲು ಆರಂಭಿಸುತ್ತಿದ್ದರು. ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಪ್ರಧಾನಿ, ಏಕಾಏಕಿ ಹಾಸ್ಯದ ಸರಕಾಗಿ ಬದಲಾಗಿ ಬಿಟ್ಟಿದ್ದರು.

ಈ ಸಂದರ್ಭದಲ್ಲಿಯೇ ಆಡಳಿತ ವಿರೋಧಿ ಅಲೆ ಎನ್ನುವ ವಿಚಾರವೂ ಚಲಾವಣೆಗೆ ಬಂದಿತು. ನಿರ್ದಿಷ್ಟ ಅವಧಿವರೆಗೆ ಅಧಿಕಾರದಲ್ಲಿ ಇರುವ ಪ್ರತಿಯೊಬ್ಬ ರಾಜಕಾರಣಿಯ ಭವಿಷ್ಯದ ಮೇಲೆ ಇದು ಪರಿಣಾಮ ಬೀರತೊಡಗಿತ್ತು. ಇಂತಹ ವಿದ್ಯಮಾನದಿಂದ ಮೋದಿ ರಕ್ಷಣೆ ಪಡೆದಿರುವರೇ ಎನ್ನುವ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.

ನನ್ನ ತಲೆ ಸರಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು ಎಂದು ನನಗೆ ಅನಿಸುತ್ತದೆ ಎಂಬುದನ್ನು ಕೇಳಿ ನಿಮಗೆ ಅಚ್ಚರಿ ಎನಿಸಬಹುದು. ನಾನು ಇಲ್ಲಿ ಮಂಡಿಸುತ್ತಿರುವ ವಾದ ಸರಣಿಗೆ ನನ್ನ ವಿರುದ್ಧ ತೀವ್ರ ಟೀಕೆಗಳೂ ವ್ಯಕ್ತವಾಗಲಿವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಉದ್ಯೋಗಕ್ಕೆ ಅರ್ಜಿ ಹಾಕುವುದಿರಲಿ ಅಥವಾ ರಾಜ್ಯಸಭೆಗೆ ಟಿಕೆಟ್ ಪಡೆಯುವುದಿರಲಿ ಅಲ್ಲೆಲ್ಲ ವ್ಯಕ್ತಿ ಪೈಜಾಮದ ಒಳಗೆ ಹಾಕಿಕೊಂಡಿರುವ ಖಾಕಿ ಪ್ಯಾಂಟ್ ಮುಖ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಭಕ್ತಿ’ಯೂ ಪರಿಗಣನೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಇಂತಹ ವಾದ ಪ್ರಸ್ತಾಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಲವರು ಪ್ರಶ್ನಿಸಬಹುದು.

ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ತಂದುಕೊಡುವಲ್ಲಿ ವಿಫಲರಾದ ಒಂದು ವಾರದ ಒಳಗೆ ನಾವು ಹೀಗೆ ಮಾತನಾಡಬಹುದೇ. ಗುಜರಾತ್‌ನಲ್ಲಿ ಬಿಜೆಪಿಯು ಅಲ್ಪಮಟ್ಟಿಗಿನ ಬಹುಮತ ಗಳಿಸಲಷ್ಟೇ ಯಶಸ್ವಿಯಾಯಿತು. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ನಿರ್ಣಾಯಕವಾಗಿ ಮಟ್ಟಹಾಕಲು ಸಾಧ್ಯವಾಗಲಿಲ್ಲ. ಈ ಫಲಿತಾಂಶಗಳು ಬಿಜೆಪಿಯ ಜನಪ್ರಿಯತೆ ಕುಗ್ಗುತ್ತಿರುವುದನ್ನು ಸೂಚಿಸುವುದಿಲ್ಲವೇ? ಅಧಿಕಾರದಲ್ಲಿ ಇರುವ ಪಕ್ಷದ ವಿರುದ್ಧದ ಜನಾಭಿಪ್ರಾಯವು ಬಿಜೆಪಿ ವಿರುದ್ಧವೂ ಕೆಲಸ ಮಾಡುತ್ತಿದೆ. ಇದೇ ಮಾತನ್ನು ನೀವು ಮೋದಿ ಅವರ ಜನಪ್ರಿಯತೆಗೂ ಅನ್ವಯಿಸುವೀರಾ? ಚುನಾವಣೆ ನಡೆದ ರಾಜ್ಯಗಳಲ್ಲಿನ ಜನಾಭಿಪ್ರಾಯಗಳ ನಾಡಿಮಿಡಿತದ ಬಗ್ಗೆ ಪತ್ರಕರ್ತರು ಮತ್ತು ರಾಜಕೀಯ ಪಂಡಿತರು ಅಷ್ಟೇನೂ ವಿಶ್ವಾಸಾರ್ಹ ಮಾಹಿತಿ ಮೂಲಗಳಾಗಿರುವುದಿಲ್ಲ. ಆದರೆ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿ ಪರ ಮತದಾರರಲ್ಲಿ ಹೆಚ್ಚಿನ ಒಲವು ಇದ್ದಿರಲಿಲ್ಲ. ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಹುರುಪು ತುಂಬಿದ ನಂತರವೇ ಬಿಜೆಪಿಯ ಪರ ಬೀಸುವ ಗಾಳಿಯಲ್ಲಿ ಭಾರಿ ಬದಲಾವಣೆ ಕಂಡುಬಂದಿತ್ತು. ಈ ಹಿಂದೆ ಯಾರೊಬ್ಬರೂ ಈ ಪರಿ ಬಿರುಗಾಳಿ ರೀತಿಯಲ್ಲಿ ಪ್ರಚಾರ ಹಮ್ಮಿಕೊಂಡಿರಲಿಲ್ಲ.

ಮೋದಿ ಅವರು ಗುಜರಾತ್‌ನಲ್ಲಿ 34 ಕಡೆ ಮತ್ತು ಕರ್ನಾಟಕದಲ್ಲಿ 21 ಕಡೆ ಚುನಾವಣಾ ಪ್ರಚಾರ ಮಾಡಿದರು. ಆರಂಭದಲ್ಲಿ 15 ಕಡೆಗಳಲ್ಲಿ ಅವರು ಪ್ರಚಾರ ನಡೆಸುವ ಕಾರ್ಯಕ್ರಮ ಇತ್ತು. ಪ್ರಚಾರದ ಹೊಣೆಯನ್ನು ಮೋದಿ ಅವರು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದರಿಂದಲೇ ಪಕ್ಷವು ಗುಜರಾತ್‌ನಲ್ಲಿ ಸರಳ ಬಹುಮತ ಪಡೆದುಕೊಂಡರೆ, ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಯಿತು.

ಕರ್ನಾಟಕದಲ್ಲಿನ ಜನಾಭಿಪ್ರಾಯವು ಚುನಾವಣೆಗೂ ಮುಂಚಿನ ಬಹುತೇಕ ಸಮೀಕ್ಷೆಗಳಲ್ಲಿ ಸರಿಯಾಗಿಯೇ ಪ್ರತಿಫಲನಗೊಂಡಿತ್ತು. ಮೋದಿ ಅವರು ಪೂರ್ಣ ಪ್ರಮಾಣದಲ್ಲಿ ಚುನಾವಣಾ ಕಣಕ್ಕೆ ಧುಮುಕುವ ಮುಂಚೆ ಈ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಚುನಾವಣೆಯ ಕೊನೆಯ ಕಾಲಘಟ್ಟದಲ್ಲಿ ಮೋದಿ ಅವರು ಪಕ್ಷಕ್ಕೆ ಬಲ ತುಂಬಿರದಿದ್ದರೆ ಬಿಜೆಪಿ ಸಂಖ್ಯಾಬಲ ಇನ್ನಷ್ಟು ಕುಸಿಯುವ ಸಾಧ್ಯತೆ ಇತ್ತು.

ಪ್ರಚಾರದ ಭಾರವನ್ನು ಮೋದಿ ತಮ್ಮ ಮೇಲೆ ಹೊತ್ತುಕೊಂಡು ಪರಿಶ್ರಮ ಪಟ್ಟಿರದಿದ್ದರೆ ಬಿಜೆಪಿಯು ಈಗಿನ ಸಂಖ್ಯಾ ಬಲವನ್ನೂ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಜನಬೆಂಬಲವೇನೂ ಇದ್ದಿರಲಿಲ್ಲ. ಈ ಎಲ್ಲ ಪ್ರತಿಕೂಲತೆಗಳ ಹೊರತಾಗಿಯೂ ಮೋದಿ ಅವರ ಜನಪ್ರಿಯತೆಗೆ ಧಕ್ಕೆ ಒದಗಿರಲಿಲ್ಲ.

ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದವರು ಪಕ್ಷಕ್ಕೆ ಹೊರೆಯಾಗಿದ್ದವರು. ಬಿ. ಎಸ್‌. ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಇದ್ದವು. ಆದರೆ ಮೋದಿ ಭಾಗವಹಿಸಿದ್ದ 21 ಬಹಿರಂಗ ಪ್ರಚಾರ ಸಭೆಗಳು ಬಿಜೆಪಿಗೆ ಗಮನಾರ್ಹವಾಗಿ ನೆರವಾದವು. ಉತ್ತರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಮೋದಿ ತಮಗಾಗಿ ಮತಯಾಚನೆ ಮಾಡಿದರು. ಇನ್ನೊಂದೆಡೆ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮೋದಿ ವಿರುದ್ಧ ಮತ ಕೇಳಿದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಪರ ಮತ ಯಾಚಿಸಿದರು.

ರಾಜಕೀಯ ಮುಖಂಡನೊಬ್ಬ ತನ್ನದೇ ಪಕ್ಷದ ವರ್ಚಸ್ಸಿಗೆ ಆಗಿರುವ ಧಕ್ಕೆ ಮತ್ತು ಅದರ ವೈಫಲ್ಯಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದೇ. ಎಲ್ಲ ಪ್ರತಿಕೂಲತೆಗಳನ್ನು, ವೈರಿಗಳನ್ನು ಮೆಟ್ಟಿನಿಲ್ಲಲು ಸಾಧ್ಯವೇ. ಇಂತಹ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಲು ಕೆಲ ವಾಸ್ತವ ಸಂಗತಿಗಳನ್ನು ಪರಾಂಬರಿಸಬೇಕು.

ಮೋದಿ ಅವರ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಆರ್ಥಿಕತೆಯು ಸ್ಥಿರತೆ ಕಾಯ್ದುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಉದ್ಯೋಗಾವಕಾಶಗಳು ಹೆಚ್ಚುತ್ತಿಲ್ಲ. ನೆರೆ ಹೊರೆ ದೇಶಗಳ ಬಾಂಧವ್ಯದ ವಿಷಯದಲ್ಲಿ ಭಾರತದ ಮಹತ್ವ ಕುಗ್ಗಿದೆ. ಸಹಬಾಳ್ವೆಯ ತತ್ವ ವಿಷಮಿಸಿದೆ. ಅಲ್ಪಸಂಖ್ಯಾತರನ್ನು ಅಧಿಕಾರದ ಮೊಗಸಾಲೆಯಿಂದ ದೂರ ಇರಿಸಲಾಗುತ್ತಿದೆ. ಅನೇಕರು ನೋವುಣ್ಣುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಪಕ್ಷದ ಅನೇಕ ಮುಂಚೂಣಿ ನಾಯಕರು ಅಪ್ರಯೋಜಕರಾಗಿದ್ದರೂ ಜನರು ಮೋದಿ ಅವರಿಗಾಗಿ ಬಿಜೆಪಿಗೆ ಮತ ನೀಡುತ್ತಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರೇ ಪಕ್ಷವನ್ನು ಮುನ್ನಡೆಸುವಾಗ ಮತದಾರರ ಒಲವು– ನಿಲುವುಗಳು ಏನಿರಬಹುದು. ಎಸ್‌ಪಿ– ಬಿಎಸ್‌ಪಿ ಅಂತಹ ಮೈತ್ರಿಕೂಟಗಳು ಇನ್ನಷ್ಟು ಅಸ್ತಿತ್ವಕ್ಕೆ ಬರಬಹುದು. ಆದರೆ, ಅಂತಹ ಪ್ರಯತ್ನಗಳು ದೊಡ್ಡ ಪರಿಣಾಮವನ್ನೇನೂ ಬೀರಲಾರವು.

ಕರ್ನಾಟಕದ ಪಯಣದ ಸಂದರ್ಭದಲ್ಲಿ ಶಿರಹಟ್ಟಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜ್‌ನ ಹೊರಭಾಗದಲ್ಲಿ ನಾವು ಕಾರ್‌ನಿಂದ ಇಳಿದು ವಿದ್ಯಾರ್ಥಿನಿಯರ ಜತೆ ಮಾತಿಗೆ ಇಳಿದೆವು. ಮನೆಗೆ ತೆರಳಲು ಬಸ್‌ಗಾಗಿ ಕಾದುನಿಂತಿದ್ದ ಯುವತಿಯರನ್ನು ಮಾತಿಗೆ ಎಳೆದಾಗ ಅವರ ಮನದಿಂಗಿತ ಗೊತ್ತಾಯಿತು. ಅವರೆಲ್ಲ ಮುಂದಿನ ವರ್ಷ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಆ ಗುಂಪಿನಲ್ಲಿದ್ದ ಯಾರನ್ನು ಮಾತನಾಡಿಸಿದರೂ ಉತ್ತರ ಒಂದೇ ಬಗೆಯ

ಲ್ಲಿತ್ತು. ಅದು ನನಗೆ ಕೌತುಕ ಎನಿಸಿತು. ಈ ಸಂಭಾಷಣೆಯನ್ನು ವಿವರವಾಗಿ ವೀಕ್ಷಿಸಿ ವಿಶ್ಲೇಷಿಸಬಹುದು ಎನ್ನುವ ಕಾರಣಕ್ಕೆ ಅದನ್ನೆಲ್ಲ ವಿಡಿಯೊ ಮಾಡಿಕೊಂಡೆ.

‘ಮೋದಿ ಅವರ ಕಾರಣಕ್ಕೇನೆ ಮುಂದಿನ ಬಾರಿ ಬಿಜೆಪಿಗೆ ವೋಟ್‌ ಮಾಡುತ್ತೇನೆ’ ಎಂದೇ ಗುಂಪಿನಲ್ಲಿದ್ದ ಪ್ರತಿಯೊಬ್ಬರೂ ಹೇಳಿಕೊಂಡರು. ಸ್ವಚ್ಛ ಭಾರತ ನಿಜವಾಗಿಯೂ ಕಾರ್ಯಗತಗೊಳ್ಳುತ್ತಿದೆ. ಹಳ್ಳಿಗಳಲ್ಲಿಯೂ ಈ ಪ್ರಜ್ಞೆ ಜಾಗೃತವಾಗಿದೆ. ನಾವೆಲ್ಲ ಈಗ ಡಿಜಿಟಲ್‌ ಭಾರತದ ಭಾಗವಾಗುತ್ತಿದ್ದೇವೆ. ಮೋದಿ ಅವರು ಜಾಗತಿಕವಾಗಿ ನಮ್ಮ (ಭಾರತೀಯರ) ವರ್ಚಸ್ಸನ್ನು ವೃದ್ಧಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದ್ದಾರೆ– ಎಂದು ಅವರೆಲ್ಲ ತಮ್ಮ ಮೋದಿ ಗುಣಗಾನದ ನಿಲುವಿಗೆ ಕಾರಣಗಳನ್ನು ನೀಡಿದ್ದರು. ‘ಇದೇ ಸತ್ಯ. ಮಿಕ್ಕಿದ್ದೆಲ್ಲವೂ ಸುಳ್ಳು’ ಎಂದು ಅವರೆಲ್ಲ ಭಾವಿಸಿದ್ದರಿಂದ ನಾವು ಅವರ ಜತೆ ವಾದ ಮಾಡುವುದು ಉಚಿತವಲ್ಲ ಎನ್ನುವ ತೀರ್ಮಾನಕ್ಕೆ ಬಂದೆವು.

ರಾಹುಲ್‌ ಗಾಂಧಿ ಬಗ್ಗೆ ನಿಮ್ಮ ನಿಲುವೇನು ಎಂದು ಕೇಳಿದಾಗ, ‘ಅವರು ಒಳ್ಳೆಯ ವ್ಯಕ್ತಿ ಇರಬಹುದು. ನನಗೆ ಅವರ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ’ ಎನ್ನುವುದು ಅವರೆಲ್ಲರ ಉತ್ತರವಾಗಿತ್ತು. ‘ಮೋದಿ ಅವರೊಬ್ಬರೇ ನಾಯಕ ಎನ್ನುವುದಷ್ಟೇ ನನಗೆ ಗೊತ್ತು. ಅವರ ಸಂದೇಶಗಳಲ್ಲಿ ನಮಗೆ ನಂಬಿಕೆ ಇದೆ’ ಎನ್ನುವುದು ವಿದ್ಯಾರ್ಥಿನಿಯರ ಒಟ್ಟಾರೆ ಮಾತಿನ ತಾತ್ಪರ್ಯವಾಗಿತ್ತು.

2014ರ ಲೋಕಸಭಾ ಚುನಾವಣೆ ನಂತರ ನನ್ನ ಒಂದು ಅಂಕಣದಲ್ಲಿ ನಾನು, ‘ಯುವ ಭಾರತವು ಯಾವುದೇ ಸಿದ್ಧಾಂತಕ್ಕೆ ಅಂಟಿಕೊಂಡಿಲ್ಲ. ಯಾರಿಗೂ ಋಣಿಯಾಗಿರಬೇಕಾದ ಅಗತ್ಯ ಇಲ್ಲ ಎನ್ನುವ ಮನೋಭಾವ ಯುವ ಜನಾಂಗದಲ್ಲಿ ಮನೆ ಮಾಡಿದೆ. ತಮ್ಮ ಹಳೆಯ ತಲೆಮಾರಿನವರ ತ್ಯಾಗ– ಬಲಿದಾನ ಮತ್ತು ಕೊಡುಗೆಗಳ ಬಗ್ಗೆ ಅವರಿಗೆ ಕಿಂಚಿತ್ತೂ ಅಭಿಮಾನ ಇಲ್ಲ’ ಎಂದು ಬರೆದಿದ್ದೆ. ಅಂತಹ ಮನಸ್ಥಿತಿಯ ಯುವ ಸಮೂಹದಲ್ಲಿ ಈಗ ಮೋದಿ ಅವರೊಬ್ಬರೇ ನಾಯಕರಾಗಿದ್ದಾರೆ. ಅವರನ್ನು ಬಿಟ್ಟರೆ ಬೇರೆ ನಾಯಕನೂ ಅವರಿಗೆ ಗೊತ್ತಿಲ್ಲ. ರಾಜ್ಯದ ಇತರ ಭಾಗಗಳಲ್ಲಿ ನನಗೆ ಎದುರಾದ ಯುವ ಮತದಾರರ ಜತೆ ನಡೆಸಿದ ಸಂಭಾಷಣೆಯು ನನಗೆ ಈ ಸಂಗತಿ ದೃಢಪಡಿಸಿತು. ದೇಶದಾದ್ಯಂತ ಇದೇ ಬಗೆಯ ಮನೋಭಾವ ಇರುವುದೂ ನನ್ನ ಅನುಭವಕ್ಕೆ ಬಂದಿತು. ಹಳೆಯ ನಿಷ್ಠಾವಂತರ ಧೋರಣೆ ಮಾತ್ರ ಬದಲಾಗಿಲ್ಲ. ಇದೇ ಕಾರಣಕ್ಕೆ ಮೋದಿ ವಿರೋಧಿಗಳು ಈಗಲೂ ದೊಡ್ಡ ಪ್ರಮಾಣದಲ್ಲಿ ವೋಟ್‌ಗಳನ್ನು ಪಡೆಯುತ್ತಿದ್ದಾರೆ.

ಆದರೆ, ಯುವ ಜನರು ಈಗ ಸಂಪೂರ್ಣವಾಗಿ ಭಿನ್ನವಾದ ರಾಜಕೀಯ ಮತ್ತು ಮತದಾರ ಶಕ್ತಿಯಾಗಿ ರೂಪುಗೊಂಡಿದ್ದಾರೆ. ಮುಂದಿನ ವರ್ಷ 14 ಕೋಟಿ ಹೊಸ ಮತದಾರರು ಲೋಕಸಭೆಯ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಅವರೆಲ್ಲರ ಪಾಲಿಗೆ ರಾಜಕೀಯ ನಿಷ್ಠೆ ಎನ್ನುವುದು ಏನಿದ್ದರೂ ಮೋದಿಮಯ ಆಗಿರಲಿದೆ.

ಇದನ್ನೆಲ್ಲ ಮೋದಿ ಹೇಗೆ ಸಾಧಿಸಿದರು. ಉತ್ತಮ ವಿಚಾರ ಮತ್ತು ಸಂದೇಶಗಳನ್ನು ನೀಡುವಲ್ಲಿ ಅವರು ಪರಿಪೂರ್ಣತೆ ಸಾಧಿಸಿದ್ದಾರೆ. ಸ್ವಚ್ಛತೆ, ಪ್ರಾಮಾಣಿಕತೆ, ಶಿಕ್ಷಣ, ಮತ್ತು ತಂತ್ರಜ್ಞಾನ ಬಳಕೆಗೆ ಒತ್ತು ನೀಡಿದ್ದರು. ಇವುಗಳ ವಿಷಯದಲ್ಲಿ ಯುವ ತಲೆಮಾರಿನವರಿಗೆ ಬರೀ ಭರವಸೆ ನೀಡದೆ ಅವರಿಗೆ ಹೊಣೆ ಒಪ್ಪಿಸಿದ್ದರು. ಸ್ವಚ್ಛತೆಯ ಮಂತ್ರ ಬೋಧನೆ, ಮಕ್ಕಳನ್ನು ಶಾಲೆಗೆ ಕಳಿಸುವುದರ ಮಹತ್ವ ಮನದಟ್ಟು ಮಾಡಿಕೊಟ್ಟು, ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರ ಪ್ರಯೋಜನಗಳನ್ನು ತಿಳಿ ಹೇಳಿದ್ದರು. ಜನಧನ್‌, ಆಧಾರ್‌ ಮತ್ತು ಮುದ್ರಾ ಬ್ಯಾಂಕ್‌ನ ಪ್ರಯೋಜನ ಪಡೆದುಕೊಳ್ಳಲು ಜನರನ್ನು ಸನ್ನದ್ಧಗೊಳಿಸಿದ್ದರು.

ಇಂತಹ ಕ್ರಮಗಳ ಮೂಲಕ ತಮ್ಮ ಸುತ್ತ ಜನಪ್ರಿಯತೆಯ ವಿಶಿಷ್ಟ ಪ್ರಭಾವಳಿ ಸೃಷ್ಟಿಯಾಗುವಂತೆ ಮಾಡಿದ್ದರು. ನೋಟುಗಳ ರದ್ದತಿಯಂತಹ ಅವಿವೇಕದ ಮತ್ತು ಅನಾಹುತಕಾರಿ ನಿರ್ಧಾರದ ಸಂದರ್ಭದಲ್ಲಿಯೂ ಅವರು ಜನರಿಗೆ ಮಂಕುಬೂದಿ ಎರಚಿದ್ದರು. ‘ಈ ನಿರ್ಧಾರದಿಂದ ನಿಮಗೆಲ್ಲ ತೊಂದರೆ ಆಗಲಿದೆ ಎನ್ನುವುದು ನನಗೆ ಗೊತ್ತು. ಭಾರತವನ್ನು ಉತ್ತಮ ದೇಶವನ್ನಾಗಿ ಬದಲಿಸಲು ಇಷ್ಟು ಸಣ್ಣ ತೊಂದರೆ ಎದುರಿಸಲು ನೀವು ಸಿದ್ಧರಿಲ್ಲವೇ?’ ಎಂದೂ ಪ್ರಶ್ನಿಸಿದ್ದರು.

ನಮ್ಮ ರಾಜಕೀಯ ಇತಿಹಾಸದಲ್ಲಿ ಮೋದಿ ಅವರದ್ದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಮೋದಿ ವಿರೋಧಿಗಳು ಅವರನ್ನು ದ್ವೇಷಿಸುತ್ತಾರೆ. ಈ ವಾದ ಮಂಡಿಸಿರುವ ನನ್ನನ್ನೂ ಅವರು ದ್ವೇಷಿಸುತ್ತಾರೆ. ರಾಜಕೀಯದಲ್ಲಿ ವಾಸ್ತವವನ್ನು ಒಪ್ಪಿಕೊಳ್ಳುವುದೇ ಮುಖ್ಯವಾಗಿರುತ್ತದೆ. ಅದು ನಿಮಗೆ ಇಷ್ಟವಾಗದಿದ್ದರೆ, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ನೆಲೆಗಟ್ಟಿನಲ್ಲಿ ಚಿಂತನೆ ಮಾಡಬೇಕಾಗುತ್ತದೆ. ಗುಜರಾತ್‌ ಮತ್ತು ಕರ್ನಾಟಕದಲ್ಲಿ ಅಧಿಕಾರ ಕೈವಶ ಮಾಡಿಕೊಳ್ಳಲು ಬಿಜೆಪಿ ನಡೆಸಿದ ಹೋರಾಟವು 2019ರ ಚುನಾವಣೆ ಬಗ್ಗೆ ಲೆಕ್ಕ ಹಾಕಲು ವೇದಿಕೆ ಒದಸಿದೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)