ಐತಿಹಾಸಿಕ ಬಾವಿಗೆ ಇದೇನು ಗತಿ!

7
ಪಾಲಿಕೆ ನಿರ್ಲಕ್ಷ್ಯಕ್ಕೆ ಕೈಗನ್ನಡಿ; ವರ್ಷವಿಡೀ ನೀರಿನಿಂದ ತುಂಬಿರುವ ತೆರೆದಬಾವಿ

ಐತಿಹಾಸಿಕ ಬಾವಿಗೆ ಇದೇನು ಗತಿ!

Published:
Updated:
ಐತಿಹಾಸಿಕ ಬಾವಿಗೆ ಇದೇನು ಗತಿ!

ಕಲಬುರ್ಗಿ: ಬೇಸಿಗೆ ಬಂತೆಂದರೆ ನಗರ ಕಾದ ಕುಲುಮೆಯಂತಾಗುತ್ತದೆ. ಜಲಮೂಲಗಳು ಬತ್ತಿಹೋಗುತ್ತವೆ. ಆದರೆ, ಇಲ್ಲಿನ ಮಹದೇವ ನಗರದಲ್ಲಿರುವ ಐತಿಹಾಸಿಕ ಬಾವಿ ಇದಕ್ಕೆಲ್ಲ ಅಪವಾದ!

ಮಳೆ– ಚಳಿ– ಬೇಸಿಗೆ ಕಾಲ ಯಾವುದಾದರೂ ಸರಿ, ಈ ಬಾರಿಯಲ್ಲಿ ವರ್ಷವಿಡೀ ನೀರು ತುಂಬಿತುಳುಕುತ್ತದೆ. ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಈ ಬಾವಿ 20 ಅಡಿ ಆಳವಿದೆ. ನಮಗೆ ಗೊತ್ತಿರುವ ಹಾಗೆ; ಈ ಬಾವಿಯಲ್ಲಿ ನೀರು ಬತ್ತಿಹೋದ ಉದಾಹರಣೆ ಇಲ್ಲ ಎನ್ನುತ್ತಾರೆ ನಿವಾಸಿಗಳು.

ಮಹದೇವನಗರದ ನಿವಾಸಿಗಳಿಗೆ ಈ ಬಾವಿ ಎಂದರೆ ಎಲ್ಲಿಲ್ಲಿದ ಪ್ರೀತಿ. ಪ್ರತಿದಿನವೂ ದಡದಲ್ಲಿ ಪೂಜೆ ಸಲ್ಲಿಸುವ ರೂಢಿಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಇಷ್ಟೊಂದು ಭಕ್ತಿ ತೋರುವ ಜನ ಅದರ ಸಂರಕ್ಷಣೆಗೆ ಮಾತ್ರ ಮನಸ್ಸು ಮಾಡಿಲ್ಲ.

ಆಯತಾಕಾರದಲ್ಲಿ ವಿಶಾಲವಾಗಿ ಕಟ್ಟಲಾದ ಈ ಬಾವಿ ಕಣ್ಮನ ಸೆಳೆಯುವಂತಿದೆ. ಮಕ್ಕಳ ಕೈಯಲ್ಲಿ ಮಡಿಚಿಟ್ಟ ಚಾಕೊಲೇಟಿನಂತೆ ಆಚೀಚೆ ಪ್ರವೇಶಾವಕಾಶವಿದೆ. ಮೆಟ್ಟಿಲುಗಳೂ ಗಟ್ಟಿಮುಟ್ಟಾಗಿದ್ದು ಸುಲಭವಾಗಿ ಯಾರು ಬೇಕಾದರೂ ಇಳಿದು– ಹತ್ತಬಹುದು.

ಜನ ಬಾವಿಯ ಮೇಲೆ ಎಷ್ಟು ಭಕ್ತಿ ತೋರಿಸುತ್ತಾರೋ ಅಷ್ಟೇ ನಿರ್ಲಕ್ಷ್ಯವನ್ನೂ ಹೊಂದಿದ್ದಾರೆ. ಮನೆಯ ತಾಜ್ಯವೆಲ್ಲ ಈಗ ಬಾವಿ ಒಡಲು ಸೇರಿದೆ.

ಮತ್ತೆ ಕೆಲವರು ಇಲ್ಲಿಯೇ ಬಟ್ಟೆ ತೊಳೆದು ಗಲೀಜು ನೀರು ಸೇರಿಸುತ್ತಾರೆ. ಚೌಕಾಕಾರದ ಗೋಡೆಗೆ ಹಾಕಿದ ಕಲ್ಲುಗಳು ಅಲ್ಲಲ್ಲಿ ಉದುರುಬಿದ್ದಿವೆ. ಒಂದು ಮಗ್ಗುಲ್ಲಿ ಗಿಡಗಂಟಿ

ಬೆಳೆದು ಬಾವಿಯ ಸ್ಥಿತಿ ಮತ್ತಷ್ಟು ಕೆಡುವಂತಾಗಿದೆ.

ಇದೆಲ್ಲ ಕಾರಣಕ್ಕೆ ಜನರಿಗೆ ಜೀವಜಲ ನೀಡಬೇಕಿದ್ದ ಈ ತಾಣ ಪ್ರಾಣಕಂಟಕವಾಗುವ ಸ್ಥಿತಿ ತಲುಪಿದೆ. ಯಾರೋ ಹಸಿರು ಬಣ್ಣ ಕಲಸಿದ್ದಾರೆ ಎನ್ನುವಷ್ಟರ ಮಟ್ಟಿಗೆ ಇದರ ನೀರು ಮಲಿನವಾಗಿದೆ. ಇದನ್ನು ಶುದ್ಧಗೊಳಿಸಿದರೆ ಮತ್ತೆ ಮೊದಲಿನ ಕಳೆ ಬರಲಿದೆ. ಇದರಿಂದ ಈ ಭಾಗದ ಬಹುಪಾಲು ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎನ್ನುತ್ತಾರೆ ಇಲ್ಲಿನ ನಿವಾಸಿ ಶಾಂತಮ್ಮ.‌

ಪಾಲಿಕೆ ಸದಸ್ಯ ಏನಂತಾರೆ?: ನಗರಪಾಲಿಕೆ ವಾರ್ಡ್‌ ಸಂಖ್ಯೆ 33ರ ಸದಸ್ಯ ಪ್ರಮೋದ ತಿವಾರಿ ಅವರಿಗೆ ಬಾವಿ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಈ ಬಗ್ಗೆ ವಿಚಾರಿಸಿದರೆ, ಮೊದಲು ಬಾವಿ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ.

ನಗರಪಾಲಿಕೆ ಎಂಜಿನಿಯರ್‌ ಮುನಾಫ್ ಪಟೇಲ್‌ ಮಾತನಾಡಿ, ‘ಬಾವಿಯ ನೀರನ್ನು ಸ್ವಚ್ಛಗೊಳಿಸುವ ಉದ್ದೇಶವಿದ್ದು, ಆದಷ್ಟು ಬೇಗ ಕೆಲಸ ಪ್ರಾರಂಭಿಸುತ್ತೇವೆ. ಸುತ್ತಲೂ ಗೋಡೆ ನಿರ್ಮಾಣಕ್ಕೆ ಕನಿಷ್ಠ ₹3 ಲಕ್ಷ ಖರ್ಚಾಗುತ್ತದೆ. ವಾರ್ಡ್‌ ಸದಸ್ಯರ ಜತೆ ಮಾತನಾಡಿ ನೀರನ್ನು ತೆಗೆಸಿ, ಬಾವಿ ಸುತ್ತಲೂ ಬೇಲಿ ಹಾಕಿಸಲು ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ.

ತೆಗೆದಷ್ಟೂ ನೀರು

ಕಲಬುರ್ಗಿ: ಬಾವಿಯ ನೀರನ್ನು ಅರ್ಧದಷ್ಟು ಹೊರಹಾಕಲಾಗಿತ್ತು. ಒಂದು ವಾರದೊಳಗೆ ಮತ್ತೆ ನೀರು ಭರ್ತಿಯಾಗಿದೆ. ಈ ರೀತಿಯ ನೀರಿನ ಸೆಲೆ ನಗರದ ಮಧ್ಯದಲ್ಲಿ ಇರುವುದು ಪರಿಸರ ಪ್ರಿಯರನ್ನೂ ಅಚ್ಚರಿಗೆ ತಳ್ಳಿದೆ.‌‌ ಇದು ತೆರೆದ ಬಾವಿಯಾದ್ದರಿಂದ ಬಾವಿಯ ಸುತ್ತಲೂ ಮಕ್ಕಳು ಆಟವಾಡುವಾಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಬೇಲಿ ಅಥವಾ ಕಂಪೌಂಡ್‌ ನಿರ್ಮಿಸಬೇಕು ಎಂಬುದು ಸುತ್ತಲಿನ ಜನರ ಬೇಡಿಕೆ.

**

ಜಲಮೂಲಗಳ ರಕ್ಷಣೆ ಕೇವಲ ಅಧಿಕಾರಿಗಳಿಂದಲೇ ಸಾಧ್ಯವಿಲ್ಲ. ಸಾರ್ವಜನಿಕರೂ ಈ ನಿಟ್ಟಿನಲ್ಲಿ ಶ್ರಮಿಸಬೇಕು. ಬಾವಿಯನ್ನು ಸಂರಕ್ಷಿಸಲಾಗುವುದು

– ಮುನಾಫ್ ಪಟೇಲ್, ಪರಿಸರ ಎಂಜಿನಿಯರ್

ಭಾಗ್ಯ ಆರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry