ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂತುಕುಡಿ ಸ್ಟರ್‌ಲೈಟ್ ಘಟಕ ಮುಚ್ಚಲು ತಮಿಳುನಾಡು ಸರ್ಕಾರ ಆದೇಶ

ಜನಾಭಿಪ್ರಾಯಕ್ಕೆ ಮಣಿದ ಸರ್ಕಾರ
Last Updated 28 ಮೇ 2018, 13:21 IST
ಅಕ್ಷರ ಗಾತ್ರ

ಚೆನ್ನೈ: ತೂತುಕುಡಿಯಲ್ಲಿರುವ ವಿವಾದಾತ್ಮಕ ಸ್ಟರ್‌ಲೈಟ್ ತಾಮ್ರ ಸಂಸ್ಕರಣ ಘಟಕವನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸುವುದಾಗಿ ತಮಿಳುನಾಡು ಸರ್ಕಾರ ಸೋಮವಾರ ಪ್ರಕಟಿಸಿದೆ. ವೇದಾಂತ ಗ್ರೂಪ್ ಈ ಘಟಕದ ಮಾಲೀಕತ್ವ ಹೊಂದಿದೆ.

‘ಅದಿರು ಸಂಸ್ಕರಣ ಘಟಕವನ್ನು ಮುಚ್ಚಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಉಪ ಮುಖ್ಯಮಂತ್ರಿ ಒ.ಪನ್ನಿರ್‌ಸೆಲ್ವಂ, ಹಿರಿಯ ಸಚಿವರು ಮತ್ತು ಅಧಿಕಾರಿಗಳು ಇದ್ಧ ಸಭೆಯಲ್ಲಿ ಘಟಕ ಮುಚ್ಚುವ ತೀರ್ಮಾನ ತೆಗೆದುಕೊಳ್ಳಲಾಯಿತು’ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹೇಳಿದರು.

ಯಾವ ಆಧಾರದ ಮೇಲೆ ಘಟಕ ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ಸಮರ್ಪಕ ಉತ್ತರ ನೀಡಲಿಲ್ಲ.

ತಮಿಳುನಾಡು ವಿಧಾನಸಭೆ ಅಧಿವೇಶನ ಆರಂಭವಾಗುವ ಒಂದು ದಿನ ಮೊದಲು ರಾಜ್ಯ ಸರ್ಕಾರ ಘಟಕ ಮುಚ್ಚುವ ಆದೇಶ ಹೊರಡಿಸಿರುವ ಬೆಳವಣಿಗೆಯನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ. ಸರ್ಕಾರವು ಸ್ಟರ್‌ಲೈಟ್ ಘಟಕದ ಪರವಾಗಿದೆ ಎನ್ನುವ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕುವುದು ಈ ಆದೇಶದ ಉದ್ದೇಶ ಎನ್ನಲಾಗಿದೆ.

1996ರಲ್ಲಿ ಕಾರ್ಯಾರಂಭ ಮಾಡಿದ ಈ ಘಟಕದ ಒಟ್ಟು ಮೌಲ್ಯ ₹2100 ಕೋಟಿ ಎಂದು ಅಂದಾಜಿಸಲಾಗಿದೆ. ತಾಮ್ರ ಸಂಸ್ಕರಣ ಘಟಕದ ವಿರುದ್ಧ ಕಳೆದವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಗೋಲಿಬಾರ್ ಮಾಡಿದ್ದರು. ಈ ವೇಳೆ 13 ಮಂದಿ ಸಾವನ್ನಪ್ಪಿದ್ದರು.

ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದ ಸ್ಟರ್‌ಲೈಟ್ ಘಟಕದಿಂದ ನಮ್ಮ ಬದುಕು ಹಾಳಾಗುತ್ತಿದೆ. ಈ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಒತ್ತಾಯಿಸಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದರು. ಘಟಕವು ಕಾರ್ಯಾರಂಭ ಮಾಡಿದ ದಿನದಿಂದಲೂ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ₹2500 ಕೋಟಿ ವೆಚ್ಚದಲ್ಲಿ ಘಟಕದ ಕಾರ್ಯಚಟುವಟಿಕೆಯನ್ನು ವಿಸ್ತರಿಸಲಾಗುವುದು ಎಂದು ಕಂಪನಿ ಕಳೆದ ಫೆಬ್ರುವರಿಯಲ್ಲಿ ಘೋಷಿಸಿತ್ತು. ನಂತರದ ದಿನಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದವು.

ಕಳೆದ ಮಾರ್ಚ್‌ನಲ್ಲಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಘಟಕದ ಲೈಸೆನ್ಸ್ ನವೀಕರಣ ಕೋರಿಕೆಯನ್ನು ತಳ್ಳಿಹಾಕಿತ್ತು. ಇದಾದ ನಂತರ ಸ್ಟರ್‌ಲೈಟ್ ಘಟಕ ತಾತ್ಕಾಲಿಕವಾಗಿ ಕಾರ್ಯಸ್ಥಗಿತಗೊಳಿಸಿತ್ತು. ಕಳೆದ ಮಂಗಳವಾರದ ಪ್ರತಿಭಟನೆಯ ನಂತರ ತಮಿಳುನಾಡು ವಿದ್ಯುತ್ ಸರಬರಾಜು ಮಂಡಳಿ ಘಟಕಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT