ಗಿಲ್ಗಿಟ್ – ಬಾಲ್ಟಿಸ್ತಾನ ವಿವಾದ: ಭಾರತದ ಅಧಿಕಾರಿಗೆ ಸಮನ್ಸ್

7
ಜಮ್ಮ–ಕಾಶ್ಮೀರ ವಿವಾದಿತ ಭೂಭಾಗ ಎಂದ ಪಾಕಿಸ್ತಾನ

ಗಿಲ್ಗಿಟ್ – ಬಾಲ್ಟಿಸ್ತಾನ ವಿವಾದ: ಭಾರತದ ಅಧಿಕಾರಿಗೆ ಸಮನ್ಸ್

Published:
Updated:
ಗಿಲ್ಗಿಟ್ – ಬಾಲ್ಟಿಸ್ತಾನ ವಿವಾದ: ಭಾರತದ ಅಧಿಕಾರಿಗೆ ಸಮನ್ಸ್

ಇಸ್ಲಾಮಾಬಾದ್: ಗಿಲ್ಗಿಟ್–ಬಾಲ್ಟಿಸ್ತಾನ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಹೇಳಿಕೆಯನ್ನು ಖಂಡಿಸಿರುವ ಪಾಕಿಸ್ತಾನವು, ಭಾರತದ ಉಪ ಹೈಕಮಿಷನರ್ ಜೆ.ಪಿ. ಸಿಂಗ್ ಅವರಿಗೆ ಸಮನ್ಸ್ ನೀಡಿದೆ.

ವಿವಾದಿತ ಗಿಲ್ಗಿಟ್–ಬಾಲ್ಟಿಸ್ತಾನ್ ಪ್ರದೇಶ ಸೇರಿದಂತೆ ಇಡೀ ಜಮ್ಮು–ಕಾಶ್ಮೀರವು ಭಾರತದ ಅಂಗ ಎಂಬ ಭಾರತದ ಹೇಳಿಕೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಭಾರತದ ಹೇಳಿಕೆ ನಿರಾಶಾದಾಯಕ ಹಾಗೂ ಆಧಾರವಿಲ್ಲದ್ದು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ. ಈ ಸಂಬಂಧ ಪಾಕಿಸ್ತಾನದ ಟಿಪ್ಪಣಿಯನ್ನು ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ.

‘ಗಿಲ್ಗಿಟ್–ಬಾಲ್ಟಿಸ್ತಾನ್ 2018ರ ಆದೇಶ’ವನ್ನು ಮೇ 21ರಂದು ಪಾಕಿಸ್ತಾನದ ಸಂಪುಟ ಸಭೆ ಅನುಮೋದಿಸಿತ್ತು. ಇದಕ್ಕೆ ಅಲ್ಲಿನ ವಿಧಾನಸಭೆಯ ಅನುಮೋದನೆಯೂ ಸಿಕ್ಕಿತ್ತು. ವಿವಾದಿತ ಪ್ರದೇಶವನ್ನು ತನ್ನ ಐದನೇ ಪ್ರಾಂತ್ಯವಾಗಿ ಸೇರ್ಪಡೆಗೊಳಿಸಿಕೊಳ್ಳುವ ಪಾಕಿಸ್ತಾನ ಸರ್ಕಾರದ ಯತ್ನ ಈ ಆದೇಶದಲ್ಲಿ ಕಂಡುಬರುತ್ತದೆ.

ಸಮನ್ಸ್ ನೀಡಿದ್ದ ಭಾರತ: ಪಾಕಿಸ್ತಾನ ಸಂಪುಟ ಸಭೆ ಅನುಮೋದನೆ ಖಂಡಿಸಿ, ಪಾಕಿಸ್ತಾನದ ಉಪ ಹೈಕಮಿಷನರ್ ಸೈಯದ್ ಹೈದರ್ ಅವರಿಗೆ ಭಾನುವಾರ ಸಮನ್ಸ್ ನೀಡಿದ್ದ ಭಾರತ, ತನ್ನ ಪ್ರತಿಭಟನೆ ದಾಖಲಿಸಿತ್ತು. 1947ರ ಬಳಿಕ ಗಿಲ್ಗಿಟ್–ಬಾಲ್ಟಿಸ್ತಾನ ಪ್ರದೇಶ ಸೇರಿದಂತೆ ಇಡೀ ಜಮ್ಮು–ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬ ಭಾರತದ ನಿಲುವನ್ನು ಸ್ಪಷ್ಟಪಡಿಸಿತ್ತು.

‘ಕಾಶ್ಮೀರಿಗಳ ಸಬಲೀಕರಣ ಉದ್ದೇಶ’: ‘ವಿವಾದಿತ ಪ್ರದೇಶದ ಜನರ ಸಬಲೀಕರಣಕ್ಕಾಗಿ ಈ ಕ್ರಮ ಅನಿವಾರ್ಯ. ಇದರಿಂದ ವಿನಾಯಿತಿ ಇಲ್ಲ. ಶಾಂತಿಯುತ ಮಾತುಕತೆ ಮೂಲಕ ವಿವಾದ ಬಗೆಹರಿಯುವ ತನಕ ವಿಶ್ವಸಂಸ್ಥೆಯ ನಿರ್ಣಯಗಳನ್ನು ಪಾಕಿಸ್ತಾನ ಪಾಲಿಸುತ್ತದೆ’ ಎಂದು ಫೈಸಲ್ ಹೇಳಿದ್ದಾರೆ.

‘ಪಾಕಿಸ್ತಾನವು ಅಂತರರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯ ರಾಷ್ಟ್ರವಾಗಿದ್ದು, ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅನುಸಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.

ಸಾಂವಿಧಾನಿಕ ರೂಪ ನೀಡಲು ಯತ್ನ

ಆಡಳಿತದ ಅನುಕೂಲಕ್ಕಾಗಿ ಪಾಕಿಸ್ತಾನವು ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಗಿಲ್ಗಿಟ್–ಬಾಲ್ಟಿಸ್ತಾನವು ಒಂದು ಪ್ರದೇಶವಾದರೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತೊಂದು. ಗಿಲ್ಗಿಟ್–ಬಾಲ್ಟಿಸ್ತಾನವನ್ನು ಪಾಕಿಸ್ತಾನ ಈಗಲೂ ಪ್ರತ್ಯೇಕ ಭೌಗೋಳಿಕ ಪ್ರದೇಶ ಎಂದೇ ಗುರುತಿಸುತ್ತಾ ಬಂದಿದೆ. ಚೀನಾದ ವಿವಾದಿತ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಎಸಿ) ಇದೇ ಪ್ರದೇಶದ ಮೇಲೆ ಹಾದುಹೋಗುತ್ತದೆ. ವಿವಾದಿತ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಚೀನಾ ಆಕ್ಷೇಪ ಎತ್ತಿರುವ ಕಾರಣ, ಪಾಕಿಸ್ತಾನವು ಈ ಪ್ರದೇಶಕ್ಕೆ ಸಾಂವಿಧಾನಿಕ ರೂಪ ನೀಡಲು ಯತ್ನ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry