ಗೋನೂರು ಕೆರೆಯಲ್ಲಿ ಮೀನು ಶಿಕಾರಿ ಸುಗ್ಗಿ

7
ಬರದ ನಾಡಿನಲ್ಲಿ ಗರಿಗೆದರಿದ ಮೀನುಗಾರಿಕೆ l ದಿನಕ್ಕೆ ₹ 1,000ವರೆಗೂ ಆದಾಯ ಗಳಿಕೆ

ಗೋನೂರು ಕೆರೆಯಲ್ಲಿ ಮೀನು ಶಿಕಾರಿ ಸುಗ್ಗಿ

Published:
Updated:
ಗೋನೂರು ಕೆರೆಯಲ್ಲಿ ಮೀನು ಶಿಕಾರಿ ಸುಗ್ಗಿ

ಚಿತ್ರದುರ್ಗ: ಮೀನುಗಾರಿಕೆಗೆ ಕರಾವಳಿಯೇ ಆಗಬೇಕಿಲ್ಲ. ಜಿಲ್ಲೆಯ ಕೆರೆಗಳು ಕೂಡ ಮೀನು ಕೃಷಿಗೆ ಬಹುದೊಡ್ಡ ಮೂಲ. ಬರದ ನಾಡು ಎಂದೇ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯ ಮೀನುಗಳು ಸ್ಥಳೀಯರ ಬೇಡಿಕೆ ನೀಗಿಸಲು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.

ಚಿತ್ರದುರ್ಗ ಸಮೀಪದ ಗೋನೂರು ಕೆರೆಯಲ್ಲಿ ಈಗ ಮೀನು ಶಿಕಾರಿಯ ಸುಗ್ಗಿ ಆರಂಭವಾಗಿದೆ. ಪ್ರತಿದಿನ ಮೂರು–ನಾಲ್ಕು ಕ್ವಿಂಟಲ್ ಮೀನು ಉತ್ಪಾದನೆ ಆಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಕೆಲವರು ಕೆರೆ ಬಳಿಯೇ ಧಾವಿಸಿ ಮೀನು ಖರೀದಿಸುತ್ತಿದ್ದಾರೆ.

ಮೀನು ಶಿಕಾರಿಯನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಚಳ್ಳಕೆರೆ ತಾಲ್ಲೂಕಿನ ದೇವರಹಳ್ಳಿ ಹಾಗೂ ಗೌರಿಪುರದ ಅನೇಕ ಕುಟುಂಬಗಳು ಮೀನುಗಾರಿಕೆ ಮಾಡುತ್ತಾ ಬದುಕು ಮುನ್ನಡೆಸುತ್ತಿದ್ದಾರೆ. ಕೆರೆಯ ದಡದಲ್ಲಿ ವಾಸಕ್ಕಾಗಿ ಚಿಕ್ಕ ಟೆಂಟ್‌ ಹಾಕಿಕೊಂಡಿದ್ದಾರೆ.

ಎರಡು ಮೂರು ವರ್ಷಗಳ ಹಿಂದೆ ತೀವ್ರ ಬರಗಾಲಕ್ಕೆ ತುತ್ತಾಗಿ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರಿನ ಕೊರತೆ ಉಂಟಾಗಿತ್ತು. ಇದರಿಂದ ಮೀನುಗಾರಿಕೆಗೂ ಹಿನ್ನಡೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದಾಗಿ ಮೀನುಗಾರಿಕೆ ಗರಿಗೆದರಿದೆ.

‘ಮೀನುಗಾರಿಕೆ ಇಲಾಖೆಯಿಂದ ಸಾಲ ಸೌಲಭ್ಯ ಸಿಕ್ಕಿದೆ. ಮೀನು ಶಿಕಾರಿ ಮಾಡಲು ಬೇಕಾದ ಬಲೆಯನ್ನು ಕೊಟ್ಟಿದ್ದಾರೆ. ಸ್ವಂತ ಬಲೆ ತೆಗೆದುಕೊಳ್ಳಲು ₹ 10 ಸಾವಿರ ಬೇಕಾಗುತ್ತದೆ. ಇಲಾಖೆಯಿಂದ ಒಂದು ಸಾವಿರಕ್ಕೆ ಬಲೆ, ದಾರ, ಟೇಪು ನೀಡಿದ್ದಾರೆ. 25 ವರ್ಷಗಳಿಂದ ಮೀನುಗಾರಿಕೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸಿದ್ದವೀರಣ್ಣ ಹಾಗೂ ಜಯಮ್ಮ.

‘ಪ್ರತಿದಿನ ಸಂಜೆ 5 ಗಂಟೆಗೆ ಕೆರೆಯಲ್ಲಿ ಬಲೆ ಬಿಡುತ್ತೇವೆ. ಬೆಳಿಗ್ಗೆ 3 ಗಂಟೆಗೆ 6 ತೆಪ್ಪಗಳೊಂದಿಗೆ ಕೆರೆಗೆ ಇಳಿಯುತ್ತೇವೆ. 6 ಗಂಟೆ ಹೊತ್ತಿಗೆ ವಾಪಸ್ಸಾಗುತ್ತೇವೆ. ಪ್ರತಿಯೊಂದು ತೆಪ್ಪದಲ್ಲಿ 50ರಿಂದ 70 ಕೆ.ಜಿ. ಮೀನು ತರುತ್ತೇವೆ’ ಎನ್ನುತ್ತಾರೆ ಅವರು.

ಮೀನಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಮೀನಿನ ಬೆಲೆ ₹ 150 ರಿಂದ ₹ 170 ಇದೆ. ಮೀನು ಹಿಡಿದವರಿಗೆ ಕೆ.ಜಿ.ಗೆ ಶೇ 20ರಷ್ಟು ಕಮಿಷನ್ ಸಿಗುತ್ತದೆ. ದಿನಕ್ಕೆ ₹ 500 ರಿಂದ ₹ 1 ಸಾವಿರದ ವರೆಗೆ ಆದಾಯ ಗಳಿಸುತ್ತಾರೆ. ಇದರಲ್ಲಿಯೇ ಜೀವನ ಸಾಗುತ್ತದೆ.

ನೀರು ಖಾಲಿಯಾದ್ರೆ ಕೂಲಿ: ಕಳೆದ ವರ್ಷ ಅಲ್ಪ ಮಳೆಯಾದ ಪರಿಣಾಮ ಕೆರೆಗಳಲ್ಲಿ ನೀರು ಕಡಿಮೆಯಾಗಿತ್ತು. ಆದರೂ ಮೀನು ಕೃಷಿಗೆ ಯಾವುದೇ ತೊಂದರೆ ಆಗಿರಲಿಲ್ಲ. ವರ್ಷ ಪೂರ್ತಿ ಮೀನಿನ ಶಿಕಾರಿ ನಡೆದಿತ್ತು. ಕೆರೆಯಲ್ಲಿ ನೀರು ಖಾಲಿಯಾದರೆ ಇವರು ಗ್ರಾಮಗಳಿಗೆ ಮರಳುತ್ತಾರೆ. ಕೂಲಿ ಕೆಲಸ ಆಶ್ರಯಿಸುತ್ತಾರೆ.

‘ವರ್ಷದಾದ್ಯಂತ ನಾವು ಮೀನುಗಾರಿಕೆ ವೃತ್ತಿ ಮಾಡುತ್ತೇವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 5 ಕೆರೆಗಳ ಉಸ್ತುವಾರಿ ನೋಡಿಕೊಳ್ಳುತ್ತೇವೆ. ಗೋನೂರು, ಮಲ್ಲಾಪುರ, ಎಂ.ಡಿ.ಕೋಟೆಯ ಮಾಳಿಗೆ, ಕಲ್ಲಹಳ್ಳಿ, ಮಧುರೆ ಕೆರೆಗಳಲ್ಲಿ ಮೀನಿನ ಶಿಕಾರಿ ಮಾಡಿ ಜೀವನ ಸಾಗಿಸುತ್ತೇವೆ’ ಎನ್ನುತ್ತಾರೆ ಗಂಗಪ್ಪ.

**

ವರ್ಷದ ಎಲ್ಲ ದಿನ ಮೀನುಗಾರಿಕೆ ಮಾಡುತ್ತೇವೆ. ಗೌರಸಮುದ್ರ ಮಾರಮ್ಮನ ಜಾತ್ರೆಗೆ ವರ್ಷಕ್ಕೊಮ್ಮೆ ಊರಿಗೆ ಹೋಗುತ್ತೇವೆ. ಉಳಿದಂತೆ ಕೆರೆದಡದಲ್ಲಿಯೇ ಜೀವನ

– ಕರಿಯಪ್ಪ, ಮೀನುಗಾರ, ಗೋನೂರು ಕೆರೆ

–ಬೋರೇಶ್‌ ಎಂ.ಜೆ. ಬಚ್ಚಬೋರನಹಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry