ಮಂಗಳವಾರ, ಜೂನ್ 22, 2021
21 °C

ನಮ್ಮ ಬದುಕು ದುಸ್ತರ: ಯಾರಿಗೂ ಬೇಡದವರ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಬದುಕು ದುಸ್ತರ: ಯಾರಿಗೂ ಬೇಡದವರ ಕಥೆ

-ಹನ್ನಾ ಬೀಚ್, ನ್ಯೂಯಾರ್ಕ್ ಟೈಮ್ಸ್ 

ಥಾಯ್ಲೆಂಡ್‌ನಿಂದ ಹೊರದಬ್ಬಿಸಿಕೊಂಡು ಅಂತರರಾಷ್ಟ್ರೀಯ ಸಮುದ್ರ ಪ್ರವೇಶಿಸಿದ್ದ ‘ಫೀನಿಕ್ಸ್’ ದೋಣಿಯ ಮೇಲೆ ದೂರದ ಕ್ಷಿತಿಜಕ್ಕೆ ಕಣ್ಣು ನೆಟ್ಟು ನಿಂತಿದ್ದೆವು. ಈಗಲೋ- ಆಗಲೋ ಸಾಯುವ ಸ್ಥಿತಿಯಲ್ಲಿರುವ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತ ಯಾವುದಾದರೂ ಮೀನುಗಾರಿಕಾ ದೋಣಿಯು ಬರಬಹುದು. ಅವರಿಗೆ ಅಗತ್ಯ ನೆರವು ಕೊಟ್ಟು ಕಾಪಾಡಬೇಕು ಎನ್ನುವುದು ನಮ್ಮ ಕಾಳಜಿ. ಒಂದು ವಾರದ ಸತತ ನಿರೀಕ್ಷೆ ವಿಫಲವಾಯಿತು. ಒಂದು ದೋಣಿಯೂ ನಾವಿದ್ದ ಕಡೆಗೆ ಬರಲಿಲ್ಲ, ನಮ್ಮ ಕಣ್ಣಿಗೆ ಬೀಳಲೂ ಇಲ್ಲ.

ನಾನಿದ್ದ ದೋಣಿಯನ್ನು ಮಾಲ್ಟಾ ಮೂಲದ ದತ್ತಿ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ಸಮುದ್ರ ಮಾರ್ಗದಲ್ಲಿ ವಲಸೆ ಹೋಗುವ ನಿರಾಶ್ರಿತರನ್ನು ಕಾಪಾಡಲು ಆ ದೋಣಿಯಲ್ಲಿದ್ದವರು ಕಟಿಬದ್ಧರಾಗಿದ್ದರು. ಈ ಹಿಂದೆ ಅವರೆಲ್ಲರೂ ಮೆಡಿಟರೇನಿಯನ್ ಸಮುದ್ರದಲ್ಲಿ ಕಾರ್ಯನಿರ್ವಹಿಸಿ ಸಾವಿರಾರು ಮಂದಿಯ ಜೀವ ಕಾಪಾಡಿದ್ದರು. ಥಾಯ್ಲೆಂಡ್ ಮಾರ್ಗವಾಗಿ ಮಲೇಶಿಯಾ ತಲುಪಲು ಯತ್ನಿಸುತ್ತಿರುವ 36 ಮಂದಿ ಲಡಕಾಸಿ ಮೀನುಗಾರಿಕೆ ದೋಣಿಯೊದರಲ್ಲಿ ಮ್ಯಾನ್ಮಾರ್‌ನಿಂದ ಹೊರಟಿದ್ದಾರೆ ಎಂಬ ಮಾಹಿತಿ ಆಧರಿಸಿ ಫೀನಿಕ್ಸ್‌ನಲ್ಲಿ ನಾವು ಕಾದು ನಿಂತಿದ್ದೆವು.

ಕಡಲು ದಾಟಲು ಯತ್ನಿಸುತ್ತಿರುವ ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ ಈ ವರ್ಷ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕಳೆದವರ್ಷ ಕನಿಷ್ಠ 80 ಸಾವಿರ ಮಂದಿ ಅಂಡಮಾನ್ ಸಮುದ್ರಮಾರ್ಗ ಬಳಸಿ ಮ್ಯಾನ್ಮಾರ್‌ನಿಂದ ಪಾರಾಗಲು ಯತ್ನಿಸಿದ್ದರು. ಅವರ ಪೈಕಿ ನೂರಾರು ಮಂದಿ ಹಾದಿಮಧ್ಯೆ ಸತ್ತಿದ್ದರು.

ಇದಕ್ಕೇನು ಕಾರಣ ಗೊತ್ತೆ? ರೋಹಿಂಗ್ಯಾಗಳು ಗಣನೀಯ ಸಂಖ್ಯೆಯಲ್ಲಿದ್ದ ಮ್ಯಾನ್ಮಾರ್‌ನ (ಬರ್ಮಾ) ರಾಖಿನೆ ಪ್ರಾಂತ್ಯದಲ್ಲಿ ಮಿಲಿಟರಿ ಮತ್ತು ನಾಗರಿಕ ಗುಂಪುಗಳ ದೌರ್ಜನ್ಯ ಮೇರೆ ಮೀರಿದೆ. ಅತ್ಯಾಚಾರ, ಹತ್ಯಾಕಾಂಡ ಮತ್ತು ಬಲವಂತದ ಒಕ್ಕಲೆಬ್ಬಿಸುವಿಕೆಯಿಂದ ರೋಹಿಂಗ್ಯಾಗಳು ಕಂಗಾಲಾಗಿ

ದ್ದಾರೆ. ‘ಫೀನಿಕ್ಸ್‌’ನ ಕ್ಯಾಪ್ಟನ್ ಮ್ಯಾಕ್ರೋ ಕೌಚಿ ಅವರಿಗೆ ಇದೆಲ್ಲವೂ ಗೊತ್ತು. ಮ್ಯಾನ್ಮಾರ್‌ನಿಂದ ಹೊರಟ ಮೀನುಗಾರಿಕೆ ದೋಣಿಯು ಎಷ್ಟು ವೇಗದಲ್ಲಿ ಚಲಿಸಬಲ್ಲದು ಎಂಬುದನ್ನು ಲೆಕ್ಕಹಾಕಿದ ಕೌಚಿ, ತಮ್ಮ ಬಳಿಯಿದ್ದ ನಕಾಶೆಗಳನ್ನು ಗಮನಿಸಿ, ತಾವು ಸಹಾಯಕ್ಕೆ ಧಾವಿಸಬಹುದಾದ ಸಂಭಾವ್ಯ ಸ್ಥಳವನ್ನು ಗುರುತು ಮಾಡಿಕೊಂಡರು.

ಕೌಚಿ ಅವರೇನೋ ಹೀಗೆ ಹೇಳಬಹುದು. ಆದರೆ ಇಂಥ ದುರಂತಗಳನ್ನು ರೋಹಿಂಗ್ಯಾಗಳು ತಪ್ಪಿಸಿಕೊಳ್ಳಲು ಸಾಧ್ಯವೇ? ಕಳೆದ ಏಪ್ರಿಲ್‌ನಲ್ಲಿ ಇಂಡೊನೇಶಿಯಾಕ್ಕೆ 10 ಮಂದಿ ರೋಹಿಂಗ್ಯಾಗಳು ವಲಸೆ ಹೊರಟಿದ್ದರು. 20 ದಿನಗಳ ಪಯಣದ ಕೊನೆಯಲ್ಲಿ ಅರ್ಧದಷ್ಟು ಮಂದಿ ದೋಣಿಯ

ಲ್ಲಿಯೇ ಸತ್ತು ಹೋಗಿದ್ದರು ಮಾರ್ಗಮಧ್ಯೆ ಸತ್ತವರನ್ನು, ಬದುಕಿದ್ದವರು ಸಮುದ್ರಕ್ಕೆ ಎಸೆಯಬೇಕಾಯಿತು.

ನಮ್ಮ ‘ಫೀನಿಕ್ಸ್’ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ನಡುವಣ ಅಂತರರಾಷ್ಟ್ರೀಯ ಸಮದ್ರದಲ್ಲಿತ್ತು. ಚಂಡಮಾರುತದ ಪ್ರಭಾವದಿಂದ ಸಾಗರ ಪ್ರಕ್ಷುಬ್ಧವಾಗಿತ್ತು.

ತಾವು ಹುಟ್ಟಿದ ನೆಲದಲ್ಲಿಯೇ ಪರಕೀಯರಾದ ರೋಹಿಂಗ್ಯಾ ಮುಸ್ಲಿಮರದು ವಿಶಿಷ್ಟ ಕಥೆ. ಹತ್ತಾರು ಬುಡಕಟ್ಟುಗಳು ಜೊತೆಜೊತೆಗೆ ವಾಸಿಸುತ್ತಿರುವ ಮ್ಯಾನ್ಮಾರ್‌ ಅನ್ನು ರೋಹಿಂಗ್ಯಾಗಳು ತಮ್ಮದು ಎಂದುಕೊಂಡಿದ್ದರು. ಈ ಹಿಂದೆ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳು ವಕೀಲರು, ವೈದ್ಯರು ಮತ್ತು ಆಸ್ತಿವಂತರೂ ಆಗಿ ನೆಮ್ಮದಿಯ ಬದುಕು ಸಾಗಿಸಿದ್ದರು. ಆದರೆ ಸರ್ಕಾರದ ಧೋರಣೆ ಬದಲಾದಂತೆ ಅವರ ಬದುಕೂ ಹೊಸ ತಿರುವು ತೆಗೆದುಕೊಂಡಿತು.

ಬೌದ್ಧ ಧರ್ಮೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಿಲಿಟರಿ ಸರ್ಕಾರ ರೋಹಿಂಗ್ಯಾ ವಿರುದ್ಧ ತಿರುಗಿಬಿತ್ತು. ಇದೀಗಮ್ಯಾನ್ಮಾರ್ ಆಳುತ್ತಿರುವ ನಾಗರಿಕ ಸರ್ಕಾರಕ್ಕೂ ರೋಹಿಂಗ್ಯಾಗಳು ಬೇಕಾಗಿಲ್ಲ. ‘ರೋಹಿಂಗ್ಯಾಗಳು ದೇಶಭ್ರಷ್ಟರು’ ಎನ್ನುವುದು ಅಲ್ಲಿನ ಸರ್ಕಾರದ ವಾದ. ಇದ್ದ ದೇಶದಲ್ಲಿ ಹಿಂಸಾ

ಚಾರ ಹೆಚ್ಚಾಯಿತೆಂದು ಹೊರಹೊರಟರೆ ಜಗತ್ತಿನ ಯಾವ ದೇಶವೂ ಇವರಿಗೆ ಆಶ್ರಯ ಕೊಡಲು ತಯಾರಿಲ್ಲ.

ಕಳೆದ ವರ್ಷ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ಮತ್ತು ಉದ್ರಿಕ್ತ ಗುಂಪುಗಳು ರೋಹಿಂಗ್ಯಾ ಹಳ್ಳಿಗಳ ಮೇಲೆ ದಾಳಿ ಮಾಡಿದ ನಂತರ, ಸುಮಾರು 7 ಲಕ್ಷ ರೋಹಿಂಗ್ಯಾಗಳು ದೇಶಬಿಟ್ಟು ಓಡಿದರು. ಜನಾಂಗೀಯ ಹತ್ಯಾಕಾಂಡದ ಯತ್ನದಿಂದ ತಪ್ಪಿಸಿಕೊಂಡು ಬಾಂಗ್ಲಾ ತಲುಪಿದವರಿಗೆ ಆಶ್ರಯವೂ ಸಿಕ್ಕಿತು. ರೋಹಿಂಗ್ಯಾಗಳಿಗಾಗಿ ವಿಶ್ವದ ಅತಿದೊಡ್ಡ ನಿರಾಶ್ರಿತರ ಆಶ್ರಯ ತಾಣ ನಿರ್ಮಿಸಿದ ಬಾಂಗ್ಲಾದೇಶವು ಸಹ ಅವರನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಅವರನ್ನು ಸಾಮೂಹಿಕವಾಗಿ ದೇಶದಿಂದ ಹೊರಹಾಕುವ ಕುರಿತು ಬಹಿರಂಗವಾಗಿಯೇ ಬಾಂಗ್ಲಾ ಸರ್ಕಾರ ಮಾತಾಡುತ್ತಿದೆ.

ಮ್ಯಾನ್ಮಾರ್‌ಗೆ ಪೂರ್ವಕ್ಕಿರುವ ಥಾಯ್ಲೆಂಡ್ ಸಹ ರೋಹಿಂಗ್ಯಾಗಳನ್ನು ಸ್ವಾಗತಿಸುತ್ತಿಲ್ಲ. ಮಲೇಶಿಯಾ ಪ್ರವೇಶಿಸಲು ಅವಕಾಶವನ್ನೂ ಮಾಡಿಕೊಡುತ್ತಿಲ್ಲ. ಥಾಯ್ಲೆಂಡ್ ಅಧಿಕಾರಿಗಳು ನಮಗೆ ಪ್ರವೇಶ ನಿರಾಕರಿಸಿದ ಕಾರಣ ಫೀನಿಕ್ಸ್ ಮತ್ತೆ ಅಂತರರಾಷ್ಟ್ರೀಯ ಸಮುದ್ರಕ್ಕೆ ಬರಬೇಕಾಯಿತು. ‘ನಾವು ನೆಲೆ ಬದಲಿಸಿದೆವು. ಈಗ ನಮಗೆ ಮ್ಯಾನ್ಮಾರ್‌ನಿಂದ ರೋಹಿಂಗ್ಯಾಗಳನ್ನು ಹೊತ್ತುತರುತ್ತಿರುವ ದೋಣಿ ಸಿಗುತ್ತೋ ಇಲ್ಲವೋ?’ ಎಂಬ ಚಿಂತೆ ಕ್ಯಾಪ್ಟನ್ ಕೌಚಿ

ಅವರನ್ನು ಕಾಡುತ್ತಿತ್ತು. ಹೆಚ್ಚುಕಡಿಮೆ ಇದೇ ಹೊತ್ತಿಗೆ ನಮಗೆ ನಾವು ಎದುರುನೋಡುತ್ತಿದ್ದ ನಿರಾಶ್ರಿತರ ದೋಣಿಯನ್ನು ಮ್ಯಾನ್ಮಾರ್‌ ತೀರ ರಕ್ಷಕ ಪಡೆಯ ದೋಣಿಗಳು ಅಡ್ಡಗಟ್ಟಿದ ಸುದ್ದಿ ಬಂತು. ಅದರಲ್ಲಿದ್ದವರ ಮೇಲೆ ಅಕ್ರಮ ವಲಸೆಯ ಆರೋಪ ಹೊರಿಸಿ ಬಂಧಿಸಲಾಯಿತು.

ಮ್ಯಾನ್ಮಾರ್ ಸರ್ಕಾರದ ಈ ನಡೆ ಬಲು ವಿಚಿತ್ರವಾಗಿದೆ. ‘ರೋಹಿಂಗ್ಯಾಗಳು ಬಾಂಗ್ಲಾದಿಂದ ಬಂದವರು’ ಎಂದು ಮ್ಯಾನ್ಮಾರ್ ಸರ್ಕಾರ ಹೇಳುತ್ತದೆ. ಇದೇ ಕಾರಣಕ್ಕೆ ಅವರ ಮೇಲೆ ಅಕ್ರಮ ವಲಸೆಯ ಅರೋಪ ಮಾಡಲಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಅವರನ್ನು ಹೊರಗೆ ಹೋಗಲು ಮ್ಯಾನ್ಮಾರ್ ಏಕೆ ಬಿಡುತ್ತಿಲ್ಲ?

‘ಅವರಿಗೆ ನಾವು ಇಲ್ಲಿರಬಾರದು, ಬೇರೆಡೆಗೆ ಹೋಗಲೂಬಾರದು. 1.20 ಲಕ್ಷ ರೋಹಿಂಗ್ಯಾಗಳನ್ನು ಬಂಧನದಲ್ಲಿ ಇರಿಸಲಾಗಿದೆ. ನಾವು ಹೇಗೆ ಬದುಕಬೇಕು’ ಎನ್ನುವುದು ಸಿಟ್ವೆಯಲ್ಲಿರುವ ರೋಹಿಂಗ್ಯಾ ವಕೀಲ ಕ್ಯಾವ್ ಹ್ಲಾ ಅಂಗ್ ಅವರ ಪ್ರಶ್ನೆ. ‘ನಮ್ಮ ಬದುಕು ದುಸ್ತರವಾಗಿದೆ’ ಎನ್ನುವ ಅವರ ಮಾತು ರೋಹಿಂಗ್ಯಾಗಳ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿ.

ದಿ ನ್ಯೂಯಾರ್ಕ್ ಟೈಮ್ಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.