ಸಮ್ಮಿಶ್ರ ಸರ್ಕಾರದ ಆಯಸ್ಸು ಕಡಿಮೆ

4
ಧಾರವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಶೆಟ್ಟರ್‌ ಹೇಳಿಕೆ

ಸಮ್ಮಿಶ್ರ ಸರ್ಕಾರದ ಆಯಸ್ಸು ಕಡಿಮೆ

Published:
Updated:

ಧಾರವಾಡ: ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಬೇಕೇ ಹೊರತು, ರೈತರ ಹಿತವಲ್ಲ. ಸಾಲ ಮನ್ನಾ ವಿಷಯದಲ್ಲಿ ಅವರು ನಿರ್ಧಾರ ಬದಲಿಸಿದ್ದೇ ಇದಕ್ಕೆ ಸಾಕ್ಷಿ. ಹೀಗಾಗಿ, ಸಮ್ಮಿಶ್ರ ಸರ್ಕಾರ ಬಹುದಿನಗಳವರೆಗೆ ಅಧಿಕಾರದಲ್ಲಿ ಉಳಿಯುವುದಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್‌ ಭವಿಷ್ಯ ನುಡಿದರು.

ಧಾರವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಮತದಾರರು ಮತ್ತು ಕಾರ್ಯಕರ್ತರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಜಿಲ್ಲೆಯೇ ಸಾಕ್ಷಿ. ಶಾಸಕರಾಗಿ ತಮ್ಮ ಕೆಲಸ ಮಾಡುವುದನ್ನು ಬಿಟ್ಟು, ಧರ್ಮ ಒಡೆಯಲು ಮುಂದಾಗಿದ್ದ ಮಂತ್ರಿಯನ್ನೂ ಸೇರಿದಂತೆ ಜಿಲ್ಲೆಯ ಮತ್ತೊಬ್ಬ ಮಂತ್ರಿಯನ್ನು ಮನೆಗೆ ಕಳುಹಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಕೂಡಾ ಹೊರತಾಗಿಲ್ಲ’ ಎಂದು ಪರೋಕ್ಷವಾಗಿ ವಿನಯ ಕುಲಕರ್ಣಿ ಹಾಗೂ ಸಂತೋಷ ಲಾಡ್‌ ಅವರನ್ನು ಟೀಕಿಸಿದರು.

‘ಧಾರವಾಡ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಅಮೃತ ದೇಸಾಯಿ ಅವರು ಕ್ಷೇತ್ರದ ಅಭಿವೃದ್ಧಿಯನ್ನೂ ಅಮೃತದಷ್ಟೇ ಆರೋಗ್ಯಕಾರಿಯಾಗಿ ಅಭಿವೃದ್ಧಿಪಡಿಸಲಿ’ ಎಂದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಧಾರವಾಡ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ಸ್ವಾತಂತ್ರ್ಯ ಹೋರಾಟದಂತೆ ನಡೆದ ಕ್ಷೇತ್ರದ ಚುನಾವಣೆ ನಂತರ ಜನರಿಗೆ ಸ್ವಾತಂತ್ರ್ಯ ಹಾಗೂ ನೆಮ್ಮದಿ ಸಿಕ್ಕಿದೆ. ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಎಲ್ಲಾ ಪ್ರಮುಖ ಹುದ್ದೆಗಳು ದಕ್ಷಿಣ ಕರ್ನಾಟಕದ ಪಾಲಾಗಿವೆ. ಉತ್ತರ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿದೆ. ಹೀಗಾಗಿ, ಈ ಭಾಗದ ಜನರ ಧ್ವನಿಯಾಗಿ ಬಿಜೆಪಿ ಹೋರಾಟ ಮಾಡಲಿದೆ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಆಟ ನಡೆಯುವುದಿಲ್ಲ. ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ 22ರಲ್ಲಿ ಬಿಜೆಪಿ ಜಯಗಳಿಸಲಿದೆ. ಪ್ರಹ್ಲಾದ ಜೋಶಿ ಅವರನ್ನು ಆರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಬೊಮ್ಮಾಯಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಮೃತ ದೇಸಾಯಿ ಮಾತನಾಡಿ, ‘ಈ ಕ್ಷೇತ್ರದಲ್ಲಿ 20 ಸಾವಿರ ಮತಗಳ ಅಂತರದಿಂದ ಯಾರೊಬ್ಬರೂ ಈವರೆಗೂ ಗೆಲುವು ಸಾಧಿಸಿರಲಿಲ್ಲ. ಕುಟುಂಬದ 29 ವರ್ಷಗಳ ವನವಾಸ ತೊರೆಯಲು ಬಿಜೆಪಿ ಅವಕಾಶ ನೀಡಿದೆ’ ಎಂದರು.

ಜಯತೀರ್ಥ ಕಟ್ಟಿ, ಶಂಕರಣ್ಣ ಬಿಜವಾಡ, ಈರಣ್ಣ ಜಡಿ, ಸವಿತಾ ಅಮೆಶೆಟ್ಟಿ, ಪ್ರೇಮಾ ಕೋಮಾರ ದೇಸಾಯಿ, ಭಾವನಾ ಬೇಲೂರು, ಈರೇಶ ಅಂಚಟಗೇರಿ  ಇದ್ದರು.

ಕಣ್ಣೀರು ಹಾಕಿದ ಸೀಮಾ ಮಸೂತಿ

ಕಾರ್ಯಕ್ರಮಕ್ಕೆ ಬಂದಿದ್ದ ಸೀಮಾ ಮಸೂತಿ ಅವರನ್ನು ಪಕ್ಷದ ಕಿರಿಯ ನಾಯಕರನ್ನು ಆಹ್ವಾನಿಸಿದ ಮೇಲೆ ಕೊನೆಯದಾಗಿ ವೇದಿಕೆಗೆ ಆಹ್ವಾನಿಸಲಾಯಿತು. ಬೇಸರದಿಂದಲೇ ವೇದಿಕೆ ಏರಿದ ಅವರು, ಕಣ್ಣೀರು ಹಾಕಿದರು. ಯಾರೂ ಅವರನ್ನು ಸಮಾಧಾನ ಮಾಡಲು ಮುಂದಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry