ಉಗ್ರರ ಅಪ್ರಚೋದಿತ ದಾಳಿಗೆ ತಕ್ಕ ಉತ್ತರ: ಸಚಿವೆ ನಿರ್ಮಲಾ ದೃಢ ನುಡಿ

7

ಉಗ್ರರ ಅಪ್ರಚೋದಿತ ದಾಳಿಗೆ ತಕ್ಕ ಉತ್ತರ: ಸಚಿವೆ ನಿರ್ಮಲಾ ದೃಢ ನುಡಿ

Published:
Updated:
ಉಗ್ರರ ಅಪ್ರಚೋದಿತ ದಾಳಿಗೆ ತಕ್ಕ ಉತ್ತರ: ಸಚಿವೆ ನಿರ್ಮಲಾ ದೃಢ ನುಡಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸುವ ಅಪ್ರಚೋದಿತ ದಾಳಿಗೆ ಸೇನೆಯು ತಕ್ಕ ಉತ್ತರ ನೀಡಲಿದೆ. ಇದಕ್ಕೆ ರಮ್ಜಾನ್‌ ಪ್ರಯುಕ್ತ ಘೋಷಿಸಲಾಗಿರುವ ಕದನ ವಿರಾಮ ಅಡ್ಡಿ ಆಗದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಪಾಕಿಸ್ತಾನದ ಸೇನೆ ಅಥವಾ ಗಡಿ ಕಾವಲು ಯೋಧರು ಗಡಿ ನಿಯಂತ್ರಣ ರೇಖೆಯ ಆಚೆಯಿಂದ ನಡೆಸುವ ಅಪ್ರಚೋದಿತ ದಾಳಿಗಳಿಗೂ ಪ್ರತ್ಯುತ್ತರ ನೀಡಲಾಗುವುದು. ವಿವಾದ ಇಲ್ಲದ ಗಡಿ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸಿದರೂ ಸುಮ್ಮನೆ ಇರುವುದಿಲ್ಲ ಎಂದು ನಿರ್ಮಲಾ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರದ ಎನ್‌ಡಿಎ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ವಿವರಿಸುವುದಕ್ಕೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಮುಸ್ಲಿಮರ ಪವಿತ್ರ ರಮ್ಜಾನ್‌ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ತಡೆ ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಮೇ 16ರಂದು ಪ್ರಕಟಿಸಿದ್ದರು. ಈ ಕದನವಿರಾಮದ ಅವಧಿಯಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಹಾಗಾಗಿ, ಕದನವಿರಾಮ ಘೋಷಣೆಯ ಕೇಂದ್ರದ ನಡೆಯ ತರ್ಕ ಏನು ಎಂಬ ಪ್ರಶ್ನೆ ಕೇಳಿ ಬಂದಿದೆ.

ಕೇಂದ್ರದ ನಿರ್ಧಾರ ಉಗ್ರರಿಗೆ ವರವಾಗಿ ಪರಿಣಮಿಸಿದೆಯೇ ಎಂಬ ಪ್ರಶ್ನೆಗೆ ನಿರ್ಮಲಾ ಅವರು ನೇರವಾಗಿ ಉತ್ತರ ನೀಡಲಿಲ್ಲ. ಕದನವಿರಾಮದ ನಿರ್ಧಾರವು ಅದರ ಉದ್ದೇಶವನ್ನು ಈಡೇರಿಸಿದೆಯೇ ಎಂಬುದನ್ನು ವಿಶ್ಲೇಷಿಸುವಲ್ಲಿ ರಕ್ಷಣಾ ಸಚಿವಾಲಯಕ್ಕೆ ಯಾವುದೇ ಪಾತ್ರ ಇಲ್ಲ ಎಂದರು.

‘ಗಡಿ ಕಾಯುವುದು ನಮ್ಮ ಕೆಲಸ. ಹಾಗಾಗಿ ಅಪ್ರಚೋದಿತ ದಾಳಿ ನಡೆದರೆ ತಕ್ಕ ಉತ್ತರ ನೀಡುತ್ತೇವೆ’ ಎಂದರು.

**

ರಕ್ಷಣೆಗೆ ಹಣದ ಕೊರತೆ ಇಲ್ಲ

ಯುಪಿಎ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಶಸ್ತ್ರಾಸ್ತ್ರ ಕೊರತೆ ಇತ್ತು. ಆದರೆ, ಈಗ ಅಂತಹ ಯಾವುದೇ ಕೊರತೆ ಇಲ್ಲ ಎಂದು ನಿರ್ಮಲಾ ತಿಳಿಸಿದ್ದಾರೆ.

‘2014ರ ಮೇಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎನ್‌ಡಿಎ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ಬೇಕಾದಷ್ಟು ಅನುದಾನ ಒದಗಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮದ್ದುಗುಂಡು ಕೊರತೆ ಇತ್ತು ಎಂಬುದು ನಿಜ. ಆಗ ಕೊರತೆ ಯಾಕೆ ಎದುರಾಗಿತ್ತು ಎಂಬುದನ್ನು ನಮ್ಮ ವಿರುದ್ಧ ಆರೋಪ ಮಾಡುವವರೇ ತಿಳಿಸಬೇಕು’ ಎಂದು ಹೇಳಿದರು.

ಹೊರಗಿನಿಂದ ಎದುರಾಗುವ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಅಗತ್ಯವಾದಷ್ಟು ಮದ್ದುಗುಂಡು ಇಲ್ಲ ಎಂದು ಕಾಂಗ್ರೆಸ್‌ ಪಕ್ಷವು ಮಾಡಿದ ಆರೋಪಕ್ಕೆ ನಿರ್ಮಲಾ ಹೀಗೆ ಪ್ರತಿಕ್ರಿಯಿಸಿದರು. ಸೇನೆಯಲ್ಲಿ ಶಸ್ತ್ರಾಸ್ತ್ರ ಕೊರತೆ ಇದೆ ಎಂದು ಮಹಾಲೇಖಪಾಲರ ಕಳೆದ ವರ್ಷದ ವರದಿಯಲ್ಲಿಯೂ ಹೇಳಲಾಗಿತ್ತು.

*

ಗಡಿ ಕಾಯುವುದು, ದೇಶವನ್ನು ಸುರಕ್ಷಿತವಾಗಿ ಇರಿಸುವುದು ನಮ್ಮ ಹೊಣೆ. ಹಾಗಾಗಿ ಅಪ್ರಚೋದಿತ ದಾಳಿಗೆ ತಕ್ಕ ಉತ್ತರ ಕೊಡದೇ ಬಿಡುವುದಿಲ್ಲ.

ನಿರ್ಮಲಾ ಸೀತಾರಾಮನ್‌, ರಕ್ಷಣಾ ಸಚಿವೆ

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry