ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದಿರಲಿ

7
ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಪರಿಸರಾಸಕ್ತರು

ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದಿರಲಿ

Published:
Updated:
ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದಿರಲಿ

ಶಿವಮೊಗ್ಗ: ಶಿವಮೊಗ್ಗ ನಗರದ ಹಲವೆಡೆ ಮಂಗಳವಾರ ವಿವಿಧ ಇಲಾಖೆ, ಶಾಲೆ, ಕಾಲೇಜು, ಸಂಘ ಸಂಸ್ಥೆ, ಸಂಘಟನೆ ಹಾಗೂ ಪರಿಸರಾಸಕ್ತರಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಹಲವೆಡೆ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಪರಿಸರ ಆಸಕ್ತರು ನಗರದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಇನ್ನು ಕೆಲವೆಡೆ ಗಿಡಮರಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕೆಲವು ಶಾಲೆ, ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಮಂಡಳಿ, ಇಲಾಖೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ‘ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ’ ಎಂಬ ಘೋಷಣೆಯಡಿ ಶಿವಮೊಗ್ಗ ಸಮೀಪದ ಮುದ್ದಿನಕೊಪ್ಪ ಟ್ರೀ ಪಾರ್ಕ್‌ ಹಾಗೂ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ನಟರಾಜನ್ ಮಾತನಾಡಿ, ‘ಪರಿಸರ ಸಮತೋಲನ ಕಾಯ್ದುಕೊಳ್ಳಲು ಅರಣ್ಯಗಳು ಸಹಕಾರಿ. ಪರಿಸರದ ಅಗತ್ಯತೆ, ಕಾಳಜಿ, ಅರಿವು ಹೊಂದಿರುವುದರ ಜತೆಗೆ, ಪರಿಸರಕ್ಕೆ ನೀಡುತ್ತಿರುವ ಕೊಡುಗೆ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ಅದರ ಉಳಿವಿಗಾಗಿ ಜಾಗೃತರಾಗಬೇಕು’ ಎಂದರು.

ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪರಿಸರ ಸಂರಕ್ಷಣೆಯ ಪ್ರಕ್ರಿಯೆ ನಿರಂತರವಾಗಿರಬೇಕು. ಪ್ರತಿಯೊಬ್ಬರೂ ಗಿಡವನ್ನು ನೆಟ್ಟು, ಅವುಗಳನ್ನು ಉಳಿಸಿ ಬೆಳೆಸಲು ಸಂಕಲ್ಪ ಮಾಡಬೇಕು. ಶಿಕ್ಷಕರು ಸಹ ದಿನಕ್ಕೆ ಐದು ನಿಮಿಷವಾದರೂ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಪೋಷಕರು ಸಹ ತಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿಯೇ ತಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಗಿಡ ಮರಗಳನ್ನು ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ ಮಾತನಾಡಿ, ‘ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ನಾವು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟು ಅವುಗಳನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ತೆಗೆದುಕೊಳ್ಳಬೇಕು. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ  ಸೀಮಿತವಾಗಿರದೇ ಅದು ನಿತ್ಯ ನಿರಂತರವಾಗಿರಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್.ಮರಿಯಪ್ಪ, ವಕೀಲರ ಸಂಘದ ಅಧ್ಯಕ್ಷ ಜಿ.ಮಧು, ಪರಿಸರ ಅಧಿಕಾರಿ ವೈ.ಎಸ್.ಹರಿಶಂಕರ್, ನಿರ್ದೇಶಕ ಜಿ.ಎಲ್.ಜನಾರ್ದನ್, ಕ್ಷೇತ್ರ ಶಿಕ್ಷಣಾಧಿಕಾರಿ ಗೀತಾ, ವಕೀಲರಾದ ತಿಲಕ ಮಧುಸೂದನ್, ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಎ.ಎಸ್.ಚಂದ್ರಶೇಖರ್, ಡಯಟ್ ಉಪನ್ಯಾಸಕ ನಾಗೇಂದ್ರಪ್ಪ, ಪ್ರಾಚ್ಯವಸ್ತು ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಶಾಲಾ ಮಕ್ಕಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾ, ಉಚಿತ ವಾಹನ ಹೊಗೆ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು.

ವಿವಿದೆಡೆ ಪರಿಸರ ದಿನಾಚರಣೆ: ನಗರದ ಸರ್ವೋದಯ ಶಾಲೆ, ನಗರ ಕೇಂದ್ರ ಗ್ರಂಥಾಲಯ, ಡಿವಿಎಸ್ ಕಲಾ ಮತ್ತು ವಿಜ್ಷಾನ ಕಾಲೇಜು, ಐಡಿಎಫ್‌ಸಿ ಬ್ಯಾಂಕ್‌, ಗ್ರೀನ್ ವ್ಯೂ ಕ್ಲಾರ್ಕ್‌ ಇನ್ ಮತ್ತು ಸಮೃದ್ಧಿ ಸಂಸ್ಥೆ, ನಿರಂತರ ಸಂಸ್ಥೆ, ಪರೋಪಕಾರಂ ಸಂಸ್ಥೆ, ಕಮಲಾ ನೆಹರು ಮಹಿಳಾ ಕಾಲೇಜು, ಜನಶಿಕ್ಷಣ ಸಂಸ್ಥೆ, ಮಲವಗೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವನಸಿರಿ ಗೋಪಾಳ ನಿವಾಸಿಗಳ ಸಂಘ, ಇಂಡೋ ಕಿಟ್ಸ್ ಪ್ರಾಥಮಿಕ ಶಾಲೆ ಸೇರಿದಂತೆ ಹಲವೆಡೆ ಪರಿಸರ ದಿನಾಚರಣೆ ಆಚರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry