ಕಾಂಗ್ರೆಸ್‌ ಅತೃಪ್ತರ ಬಂಡಾಯ

7
ಲಿಂಗಾಯತ, ಕುರುಬ, ಲಂಬಾಣಿ, ಮಾದಿಗರ ಆಕ್ರೋಶ

ಕಾಂಗ್ರೆಸ್‌ ಅತೃಪ್ತರ ಬಂಡಾಯ

Published:
Updated:
ಕಾಂಗ್ರೆಸ್‌ ಅತೃಪ್ತರ ಬಂಡಾಯ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ‘ದೋಸ್ತಿ’ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಕಾಂಗ್ರೆಸ್‌ನ ಸಚಿವಾಕಾಂಕ್ಷಿಗಳಲ್ಲಿ ಭುಗಿಲೆದ್ದಿರುವ ಅತೃಪ್ತಿ, ಆಕ್ರೋಶ ಗುರುವಾರ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯದ ವಿವಿಧೆಡೆ ಶಾಸಕರು ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ವರಿಷ್ಠರ ವಿರುದ್ಧ ಹರಿಹಾಯ್ದಿದ್ದಾರೆ.

ಹಿರಿಯ ಶಾಸಕರಾದ ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಡಾ. ಸುಧಾಕರ್‌, ಎಂಟಿಬಿ ನಾಗರಾಜ್‌ ಬಹಿರಂಗವಾಗಿಯೇ ನಾಯಕರ ವಿರುದ್ಧ  ಕಿಡಿಕಾರಿದ್ದಾರೆ. ಶೀಘ್ರದಲ್ಲೇ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಿ, ಪಕ್ಷಕ್ಕೆ ಸಡ್ಡು ಹೊಡೆಯಲು ಸಿದ್ಧತೆ ನಡೆಸಿರುವುದು ಕಾಂಗ್ರೆಸ್‌ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಮಧ್ಯೆ, ಲಿಂಗಾಯತ, ಕುರುಬ, ಮಾದಿಗ (ಪರಿಶಿಷ್ಟ ಜಾತಿಯ ಎಡಗೈ ಬಣ), ಲಂಬಾಣಿ ಮತ್ತಿತರ ಸಮುದಾಯದ ಮುಖಂಡರು, ತಮ್ಮ ಸಮುದಾಯಕ್ಕೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಭಿನ್ನಮತ ತಣಿಸುವ ಪ್ರಯತ್ನ ಆರಂಭಿಸಿರುವ ಬೆನ್ನಲ್ಲೆ, ‘ಗೊಂದಲ ಸೃಷ್ಟಿಗೆ ಅವಕಾಶ ನೀಡಬೇಡಿ’ ಎಂದು ಪಕ್ಷದ ಹೈಕಮಾಂಡ್ ಎಚ್ಚರಿಕೆ ನೀಡಿದೆ.

ಕೆಲವು ಹಿರಿಯರಿಗೆ ಮುಂದಿನ ಹಂತದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ, ಪ್ರಮುಖ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನದ ಆಶ್ವಾಸನೆ ನೀಡಲಾಗಿದೆ. ಅದನ್ನು ಮೀರಿ ಭಿನ್ನಮತೀಯ ಚಟುವಟಿಕೆಗೆ ನಡೆಸಿದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ವರಿಷ್ಠರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಬಸ್‌ಗಳ ಮೇಲೆ ಕಲ್ಲು: ಶಾಸಕ ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಕಾರ್ಯಕರ್ತರು, ಬಸ್‌ಗಳ ಮೇಲೆ ಕಲ್ಲು ತೂರಿದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದಕ್ಕೂ ಮೊದಲು ಪ್ರತಿಭಟನೆ ನಡೆಸಿದ್ದ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು, ಕಾಂಗ್ರೆಸ್‌ ಕಚೇರಿ ಬಳಿಯ ಹೂಕುಂಡ ಒಡೆದು, ಬ್ಯಾನರ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು.

ರೋಷನ್‌ ಬೇಗ್ ಮತ್ತು ರಾಮಲಿಂಗಾರೆಡ್ಡಿ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಾಸಕ ಡಾ. ಕೆ. ಸುಧಾಕರ್ ಬೆಂಬಲಿಗರು ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ, ಕೈ ನಾಯಕರ ವಿರುದ್ಧ ಕಿಡಿಕಾರಿದರು. ‘ಈ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಕಾಂಗ್ರೆಸ್ ನಾಶವಾಗಿ ಹೋಗುತ್ತದೆ’ ಎಂದು ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಷ್ಟಗಿಯ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸ್ಥಳೀಯ ಪುರಸಭೆಯ ಏಳು ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ನಾಯಕರಾದ ಜೆಡಿಎಸ್‌ನ ಬಸವರಾಜ ಹೊರಟ್ಟಿ ಹಾಗೂ ಕಾಂಗ್ರೆಸ್‌ನ ಎಂ.ಬಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ವಿಶ್ವ ಲಿಂಗಾಯತ ಮಹಾಸಭಾ ಸದಸ್ಯರು ಹುಬ್ಬಳ್ಳಿಯ ಬಸವ ವನದಲ್ಲಿ ಗುರುವಾರ ಅಹೋರಾತ್ರಿ ಧರಣಿ ನಡೆಸಿದರು.

ಸರಣಿ ಸಭೆ: ಗುರುವಾರ ಬೆಳಿಗ್ಗೆಯೇ ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.‌ ತಮ್ಮ ನಿವಾಸ ಎಂ.ಬಿ. ಪಾಟೀಲರನ್ನು ಕರೆಸಿಕೊಂಡ ಸಿದ್ದರಾಮಯ್ಯ, ಮನವೊಲಿಸಲು ಪ್ರಯತ್ನಿಸಿದರು. ಕೃಷ್ಣ ಬೈರೇಗೌಡ ಮತ್ತು ದಿನೇಶ್ ಗುಂಡೂರಾವ್ ಕೂಡಾ ಅವರ ಜೊತೆ ಮಾತುಕತೆ ನಡೆಸಿದರು.

‘ಪಟ್ಟಿಯಲ್ಲಿ ಹೆಸರಿದ್ದರೂ ಕೊನೆಕ್ಷಣದಲ್ಲಿ ಕೈಬಿಡಲು ಕಾರಣವೇನು ಎಂದು ಅಸಮಾಧಾನ ವ್ಯಕ್ತಪಡಿಸಿದ ಪಾಟೀಲರು, ‘ಸಮಾಜಕ್ಕಾಗಿ, ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ನನ್ನನ್ನ ಪಕ್ಷ ಕಡೆಗಣಿಸಿದ್ದು ಎಷ್ಟು ಸರಿ’ ಎಂದು ಕಣ್ಣೀರು ಹಾಕಿದರು.

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ಬೆಂಬಲಿಗರು ‘ಕಾವೇರಿ’ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

‘ಸಿದ್ದರಾಮಯ್ಯ ಬಳಿ ಖಾರವಾಗಿಯೇ ಮಾತನಾಡಿದ್ದೇನೆ. ‘ವರಿಷ್ಠರು ತಪ್ಪಿಸಿದ್ದಾರೋ, ನೀವು ಏನಾದರೂ ಹೇಳಿದ್ದಿರೊ ಎಂದು ಸಿದ್ದರಾಮಯ್ಯಗೆ ಪ್ರಶ್ನಿಸಿದ್ದೇನೆ’ ಎಂದು ಶಾಸಕ ಎಂಟಿಬಿ ನಾಗರಾಜ್ ‌ಹೇಳಿದರು.

‘ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿ, ರಾಜ್ಯ ಮಹಿಳಾ ಘಟಕವನ್ನು ಹೇಗೆ ಬೆಳೆಸಿದ್ದೇನೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದರೂ ಸಚಿವ ಸ್ಥಾನ ಕೊಟ್ಟಿಲ್ಲ’ ಎಂದು ಲಕ್ಷ್ಮಿ ಹೆಬ್ಬಾಳ್ಕರ ಆಕ್ರೋಶ ವ್ಯಕ್ತಪಡಿಸಿದರು.

ಅಸಮರ್ಥ ಸಚಿವರಿಗೆ ಕೊಕ್‌: ಪರಮೇಶ್ವರ
‘ನೂತನ ಸಚಿವರ ಸಾಮರ್ಥ್ಯವನ್ನು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಮೌಲ್ಯಮಾಪನ ಮಾಡಲಿದೆ. ಖಾತೆ ನಿಭಾಯಿಸಲು ವಿಫಲರಾದವರನ್ನು ಸಂಪುಟದಿಂದ ಕೈಬಿಟ್ಟು, ಸೂಕ್ತರಿಗೆ ಅವಕಾಶ ಕಲ್ಪಿಸುವುದಾಗಿ ಹೈಕಮಾಂಡ್ ಈಗಾಗಲೇ ಹೇಳಿದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

‘ಸಚಿವ ಸ್ಥಾನ ಹಂಚಿಕೆಗೂ ಮೊದಲು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ರಾಹುಲ್‌ ಗಾಂಧಿ ಚರ್ಚೆ ನಡೆಸಿದ್ದಾರೆ. ದಿನೇಶ್‌ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ಡಿ.ಕೆ. ಶಿವಕುಮಾರ್‌ ಜೊತೆಗೂ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಬಳಿಕ ಪಟ್ಟಿ ಅಂತಿಮಗೊಳಿಸಲಾಗಿದೆ’ ಎಂದೂ ವಿವರಿಸಿದರು. ‘ಸ್ಥಾನ ಹಂಚಿಕೆ ವಿಷಯದಲ್ಲಿ ಯಾರ ದುರುದ್ದೇಶವೂ ಇಲ್ಲ. ಪರಮೇಶ್ವರ ಸೇಡು ತೀರಿಸಿಕೊಂಡಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದು ಸುಳ್ಳು. ಸೇಡಿನ ಮನಸ್ಥಿತಿ ನನ್ನದಲ್ಲ. ಅಷ್ಟಕ್ಕೂ ಈ ತೀರ್ಮಾನ ನನ್ನದೊಬ್ಬನದೇ ಅಲ್ಲ’ ಎಂದರು.

ಖಾತೆಗಾಗಿ ‘ಕೈ’ ಕಿತ್ತಾಟ: ಹೊರಬೀಳದ ಪಟ್ಟಿ
25 ಸಚಿವರು ಪ್ರಮಾಣ ವಚನ ಸ್ವೀಕರಿಸಿ 30 ಗಂಟೆ ಕಳೆದರೂ ಖಾತೆ ಹಂಚಿಕೆಯಾಗಿಲ್ಲ.

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚರ್ಚಿಸಿ ತಮ್ಮ ಪಕ್ಷಕ್ಕೆ ಹಂಚಿಕೆಯಾಗಿರುವ ಖಾತೆಗಳ ಹಂಚಿಕೆ ಮಾಡಿದ್ದು, ಅಧಿಕೃತವಾಗಿ ಪ್ರಕಟಿಸಿಲ್ಲ.

ಆದರೆ, ಕಾಂಗ್ರೆಸ್‌ಗೆ ಹಂಚಿಕೆಯಾಗಿರುವ ಖಾತೆಗಳ ಪೈಕಿ ಆಯಕಟ್ಟಿನ ಖಾತೆಗಳಿಗೆ ಹಿರಿಯರು ಹಾಗೂ ಕಿರಿಯರು ಪಟ್ಟು ಹಿಡಿದಿದ್ದಾರೆ. ‘ಕೈ’ ಪಾಳಯದ ಪ್ರಭಾವಿಗಳ ಮಧ್ಯೆ ನಡೆಯುತ್ತಿರುವ ಖಾತೆ ಕಿತ್ತಾಟದಿಂದಾಗಿ ಆ ಪಕ್ಷದ ಪಟ್ಟಿ ಅಂತಿಮವಾಗಿಲ್ಲ. ಇದು ವಿಳಂಬಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ವೀರಶೈವ ಮಹಾಸಭಾ ಎಚ್ಚರಿಕೆ
ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದನ್ನು ಪ್ರತಿಭಟಿಸಿ ದಾವಣಗೆರೆಯಲ್ಲಿ ಜಿಲ್ಲೆಯ ವೀರಶೈವ ಮಹಾಸಭಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. 48 ಗಂಟೆಗಳಲ್ಲಿ ಶಾಮನೂರು ಅವರಿಗೆ ಸಚಿವ ಸ್ಥಾನ ನೀಡದೇ ಇದ್ದರೆ ದಾವಣಗೆರೆ ಬಂದ್ ನಡೆಸುವುದಾಗಿ ಅವರು ಎಚ್ಚರಿಸಿದರು.

ಜೆಡಿಎಸ್‌ನಲ್ಲೂ ಅತೃಪ್ತಿ: ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಸತ್ಯನಾರಾಯಣ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಕಾರ್ಯಕರ್ತರು ಶಿರಾದಲ್ಲಿ ಪ್ರತಿಭಟನೆ ನಡೆಸಿದರು.

**

ಅತೃಪ್ತರ ಜೊತೆ ಮಾತನಾಡಲು ದೊಡ್ಡಸ್ಥಿಕೆ ಇಲ್ಲ. ಅವರನ್ನು ಭೇಟಿ ಮಾಡಿ ಚರ್ಚಿಸುವೆ. ಆದಷ್ಟು ಶೀಘ್ರದಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆ ಆಗಲಿದೆ
– ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ

**

ನಾನೇನು ಅನ್ಯಾಯ ಮಾಡಿದ್ದೇನೆ. ನನಗೆ ಸಚಿವ ಸ್ಥಾನ ಸಿಗದೇ ಇರುವುದು ಯಕ್ಷ ಪ್ರಶ್ನೆಯಾಗಿದೆ. ದೇವೇಗೌಡರು ಈ ಬಗ್ಗೆ ಬಹಿರಂಗವಾಗಿ ತಿಳಿಸಲಿ
  –ಬಸವರಾಜ ಹೊರಟ್ಟಿ, ಜೆಡಿಎಸ್‌ನ ಹಿರಿಯ ನಾಯಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry