ಉತ್ತರಕನ್ನಡ ಜಿಲ್ಲೆಯಲ್ಲಿ ಗಾಳಿ, ಮಳೆ: ವಿದ್ಯುತ್ ಸ್ಪರ್ಶಿಸಿ ಮೂರು ಜಾನುವಾರು ಸಾವು

7
ವಿದ್ಯಾರ್ಥಿಗಳ ಪರದಾಟ

ಉತ್ತರಕನ್ನಡ ಜಿಲ್ಲೆಯಲ್ಲಿ ಗಾಳಿ, ಮಳೆ: ವಿದ್ಯುತ್ ಸ್ಪರ್ಶಿಸಿ ಮೂರು ಜಾನುವಾರು ಸಾವು

Published:
Updated:
ಉತ್ತರಕನ್ನಡ ಜಿಲ್ಲೆಯಲ್ಲಿ ಗಾಳಿ, ಮಳೆ: ವಿದ್ಯುತ್ ಸ್ಪರ್ಶಿಸಿ ಮೂರು ಜಾನುವಾರು ಸಾವು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಾರುತ ಚುರುಕಾಗಿದ್ದು, ಶುಕ್ರವಾರ ಸಂಜೆಯಿಂದ ಉತ್ತಮ ಮಳೆಯಾಗುತ್ತಿದೆ. ರಾತ್ರಿಯಿಡೀ ಜಿಟಿಜಿಟಿ ಮಳೆ ಬಿದ್ದಿದ್ದು, ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ರಭಸವಾಗಿ ಸುರಿಯಿತು.

ಶುಕ್ರವಾರ ರಾತ್ರಿ ಸುರಿದ ಗಾಳಿ, ಮಳೆಯಿಂದಾಗಿ ಅಂಕೋಲಾ ತಾಲ್ಲೂಕಿನ ಅಲಗೇರಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಒಂದು ಹಸು, ಎರಡು ಎತ್ತುಗಳು ಮೃತಪಟ್ಟಿವೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಬೆಳಿಗ್ಗೆ ಶಾಲೆ, ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದರು. ಶಾಲಾ ಬ್ಯಾಗ್ ಬೆನ್ನಿಗೇರಿಸಿ, ಅದರ ಮೇಲಿನಿಂದ ರೈನ್‌ಕೋಟ್ ಧರಿಸಿ ಸೈಕಲ್ ತುಳಿಯುತ್ತ ಶಾಲೆ ತಲುಪಿದರಾದರೂ ಸಮವಸ್ತ್ರ ಒದ್ದೆಯಾಗಿ ಕಿರಿಕಿರಿ ಅನುಭವಿಸಿದರು. ಛತ್ರಿ ಹಿಡಿದು ನಡೆದುಕೊಂಡ ಬಂದ ವಿದ್ಯಾರ್ಥಿಗಳು ಗಾಳಿ, ಮಳೆಯಿಂದಾಗಿ ಸಂಪೂರ್ಣ ತೋಯ್ದು ಹೋಗಿದ್ದರು.

ಶಿರಸಿ, ಸಿದ್ದಾಪುರವೂ ಸೇರಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲೂ ಉತ್ತಮ ಮಳೆಯಾಗುತ್ತಿದ್ದು, ದಿನವಿಡೀ ಜಿಟಿಜಿಟಿ ಮಳೆ ಬೀಳುತ್ತಿದೆ. ಇದು ರೈತರಲ್ಲಿ ಹರ್ಷ ತಂದಿದ್ದು, ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇನ್ನೂ ಎರಡು ದಿನ ರಭಸದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಜಿಲ್ಲೆಯ ಕರಾವಳಿಯಲ್ಲಿ ಅರಬ್ಬಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದೆ. ಕಾರವಾರದಲ್ಲಿ ಪ್ರವಾಸಿಗರಿಗೆ ಮುಖ್ಯ ಆಕರ್ಷಣೆಯಾಗಿರುವ ರವೀಂದ್ರನಾಥ ಟ್ಯಾಗೋರ್ ಕಡಲತೀರ ಭಣಗುಟ್ಟುತ್ತಿದೆ. ನಗರದ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ನೀರು ನಿಂತಿದ್ದು, ಸೂಕ್ತ ನಿರ್ವಹಣೆ ಮಾಡದ ನಗರಸಭೆ ವಿರುದ್ಧ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಾರವಾರದಲ್ಲಿ ವಿದ್ಯಾರ್ಥಿಗಳು ರೈನ್‌ಕೋಟ್ ಧರಿಸಿ ಶಾಲೆಯಿಂದ ಮನೆಗೆ ತೆರಳುತ್ತಿರುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry