ಸಂಪುಟದಲ್ಲಿ ಕುರುಬರಿಗೆ ಪ್ರಾತಿನಿಧ್ಯ; ಒತ್ತಾಯ

7

ಸಂಪುಟದಲ್ಲಿ ಕುರುಬರಿಗೆ ಪ್ರಾತಿನಿಧ್ಯ; ಒತ್ತಾಯ

Published:
Updated:
ಸಂಪುಟದಲ್ಲಿ ಕುರುಬರಿಗೆ ಪ್ರಾತಿನಿಧ್ಯ; ಒತ್ತಾಯ

ಬೆಂಗಳೂರು: ಕುರುಬ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಹಾಲುಮತ ಮಹಾಸಭಾದ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಯಿತು.

ಕುರುಬ ಸಮುದಾಯಕ್ಕೆ ಕಾಂಗ್ರೆಸ್‌ ಅನ್ಯಾಯ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಕುರುಬ ಸಮಾಜದ ಎಂಟು ಶಾಸಕರು ಆಯ್ಕೆಯಾಗಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಶೇ 90ರಷ್ಟು ಕುರುಬರು ಕಾಂಗ್ರೆಸನ್ನು ಬೆಂಬಲಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ಗೆ 22 ಸಚಿವ ಸ್ಥಾನ ಪಡೆಯುವ ಅವಕಾಶವಿದೆ. ಈ ಸಾಧ್ಯತೆ ಇದ್ದರೂ ಸಮುದಾಯಕ್ಕೆ ಸರಿಯಾದ ಸ್ಥಾನಮಾನ ನೀಡಿಲ್ಲ ಎಂದು ಮುಖಂಡರು ದೂರಿದರು.

ಮಹಾಸಭಾದ ಬೆಂಗಳೂರು ಘಟಕದ ಅಧ್ಯಕ್ಷ ನಾಗರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ  ಮಹದೇವರಾಜು, ಕಿರಣ್‌ ಅಣ್ಣಯ್ಯಪ್ಪ ಇದ್ದರು.

ಪರಮೇಶ್ವರ ನಿವಾಸದೆದುರು ಪ್ರತಿಭಟನೆ: ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಬಲಿಗರು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ಬೆಂಬಲಿಗರಿಂದ ಮನವಿ ಸ್ವೀಕರಿಸಿದ ಪರಮೇಶ್ವರ, ‘ಐವಾನ್ ಡಿಸೋಜಾ ಅವರು ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಈಗಾಗಲೇ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸ್ಥಾನ ನೀಡಲಾಗಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಶೀಲಿಸುತ್ತೇನೆ’ ಎಂದು ಬೆಂಬಲಿಗರಿಗೆ ಭರವಸೆ ನೀಡಿದರು.

ವಾಗ್ವಾದ: ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮುನಿಯಪ್ಪ ಬೆಂಬಲಿಗರು ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಸಾದಹಳ್ಳಿ ಗೇಟ್ ಬಳಿ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಬೆಂಬಲಿಗರು ಮತ್ತು ಸಂಸದರ ನ‌ಡುವೆ ವಾಗ್ವಾದ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry