ಶನಿವಾರ, ಮೇ 28, 2022
21 °C

ಭಾಷಣಗಳಲ್ಲಿ ಇರಬೇಕಾದ ಎಚ್ಚರ

ಡಾ. ರಾಜೇಗೌಡ ಹೊಸಹಳ್ಳಿ Updated:

ಅಕ್ಷರ ಗಾತ್ರ : | |

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಸಿದ್ಧತೆಗಳು ಇನ್ನು ಆರಂಭವಾಗಲಿವೆ. ಅದಕ್ಕಾಗಿ ಗೋರಿಗಳನ್ನು ಅಗೆದು ಮೂಳೆಗಳ ಮೂಲಕ ಡಿಎನ್ಎ ಪರೀಕ್ಷೆ ಮಾಡಲಾಗುತ್ತಿದೆ. ನೆಹರೂ ಪುಣ್ಯತಿಥಿ ನಿಮಿತ್ತದಲ್ಲಿ ವಿ.ಡಿ. ಸಾವರ್ಕರ್ ಅವರ ಹಿಂದುತ್ವವನ್ನು ಪುನರ್ ಪರೀಕ್ಷೆಗೊಡ್ಡಿದ್ದು ಇದರಲ್ಲೊಂದು. ಈ ಸಮಯದಲ್ಲಿ ಪ್ರಧಾನಿಗೆ ದೇಶದ ರೈತರು ನೆನಪಾಗಿಬಿಡುತ್ತಾರೆ. ಪರಿಸರದ ಅಳಿವು ಕಾಡುತ್ತದೆ. ಚರಿತ್ರೆ ಮರುತಿರುವು ಪಡೆದುಬಿಡುತ್ತದೆ.

ನೆಹರೂ ಪುಣ್ಯತಿಥಿಯಂದು ಸಾವರ್ಕರ್ ಹೊಗಳಿಕೆ ಯಾಕಾಗಿ? ದೇಶ ವಿಭಜನೆಗೆ ಮುಸ್ಲಿಂ ಲೀಗ್ ಜೊತೆ ಬ್ರಿಟಿಷರೊಡನೆ ಸಹಕರಿಸಿದವರು ಯಾರು? ದೀನ- ದಲಿತರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಹಿಂದುತ್ವದ ಊನತೆಯೂ ಕಾರಣವಲ್ಲವೇ? ಇಂದು ಮತಕ್ಷೇತ್ರಗಳನ್ನು ಜಾತಿ– ಧರ್ಮದ ಹೆಸರಿನಲ್ಲಿ ವಿಭಜಿಸುವ ಹುನ್ನಾರ ನಡೆಯುತ್ತಿದೆಯೇ? ಇವೆಲ್ಲವೂ ದೇಶವನ್ನು ಕಾಡುತ್ತಿರುವ ಗಂಭೀರ ಪ್ರಶ್ನೆಗಳು. 1857ರ ಸಿಪಾಯಿ ದಂಗೆಗೂ ಭಾರತವನ್ನು ಬ್ರಿಟಿಷರಿಗೊಪ್ಪಿಸಿದ ಪ್ಲಾಸಿ ಕದನಕ್ಕೂ ನೂರು ವರ್ಷಗಳ ಅಂತರವಿತ್ತು.

ದಕ್ಷಿಣದಲ್ಲಿ ಆಗ ಟಿಪ್ಪು ಆಳ್ವಿಕೆ ಪತನವಾಗಿತ್ತು. ಸೋತು ಗತಿಗೆಟ್ಟ ಅನೇಕ ರಾಜರಂತೆ, ಟಿಪ್ಪುವಿನ ಮಕ್ಕಳು ಸಹಾ ವೆಲ್ಲೂರು ದಂಗೆಯಲ್ಲಿ ಸಂಪೂರ್ಣ ಸೋಲುತ್ತಾರೆ. ಅದೇ ಸಮಯದಲ್ಲಿ ದಿಲ್ಲಿ ಗದ್ದುಗೆಯನ್ನು ಪುನಃ ದಕ್ಕಿಸಿಕೊಳ್ಳಲು ಮೊಘಲ್ ರಾಜಭಕ್ತಿಯಿಂದ ಸಿಪಾಯಿಗಳು ದಂಗೆ ಎದ್ದರು. ಅದರಲ್ಲಿ ಹಿಂದೂ– ಮುಸ್ಲಿಂ ವಿಭಜನೆ ಇರಲಿಲ್ಲ. ಇದರಿಂದ ಭಯಗೊಂಡ ಬ್ರಿಟಿಷರು ಹುನ್ನಾರದಲ್ಲಿ ವಿಭಜಿಸಿ ಆಳುವ ಆಲೋಚನೆಗೆ ಬಂದರು. ಅಷ್ಟರಲ್ಲಿ ಸುಧಾರಣೆ ನೆಪದಲ್ಲಿ ವಿಶ್ವದಲ್ಲಿ ಕಾಂಗ್ರೆಸ್ ಎಂಬ ಚಿಂತಕರ ಚಾವಡಿ ಕಾರ್ಯಾರಂಭಿಸಿತ್ತು. ಲ್ಯಾಟಿನ್ ಪದ ಮೂಲದ ಕಾಂಗ್ರೆಸ್ಸನ್ನು ಮುಂದೆ ಎ.ಒ. ಹ್ಯೂಮ್‌ ಎಂಬಾತ ಸ್ಥಳೀಯ ಅಕ್ಷರ ಬಲ್ಲವರೊಡನೆ ಸೇರಿ ಭಾರತೀಯ ಕಾಂಗ್ರೆಸ್ ಎಂಬ ಹೆಸರು ನೀಡಿ ಪ್ರಾರಂಭಿಸಿದ. ಬಾಲಗಂಗಾಧರ ತಿಲಕ್ ಇಂಥವರಲ್ಲಿ ಪ್ರಮುಖರು.

ಹಿಂದೂ ಧರ್ಮದ ಆಧಾರದ ಮೇಲೆ ರಾಷ್ಟ್ರ ನಿರ್ಮಾಣವಾಗಬೇಕೆಂಬುದು ಆಗಿನ ಕಾಂಗ್ರೆಸ್ ವಾದ. ಬಂಗಾಳ ವಿಭಜನೆಗೆ ವಿರೋಧ, ವಂದೇಮಾತರಂ... ಇವೆಲ್ಲ ಆಗಿನ ವಿಚಾರಗಳು. ಆಗಿನ್ನೂ ಭಾರತಕ್ಕೆ ಗಾಂಧೀಜಿ ಕಾಲಿಟ್ಟಿರಲಿಲ್ಲ. ಅಷ್ಟರಲ್ಲಾಗಲೇ ತೀವ್ರವಾದ, ಸೌಮ್ಯವಾದ ಬೇರು ಬಿಡುತ್ತಿದ್ದವು. ಗೋಖಲೆ ಅವರು ಸೌಮ್ಯವಾದಿಗಳ ನಾಯಕ. ಗಾಂಧೀಜಿ ಈ ದಾರಿಯವರು. ಆಗಿನ ರಾಷ್ಟ್ರೀಯ ವಾದವನ್ನು ಮುಸಲ್ಮಾನರು ಕೂಡ ವಿರೋಧಿಸಬಾರದೆಂದು ತಾಕೀತು ಮಾಡಲಾಗುತ್ತಿತ್ತು. ಅದರ ನಿಮಿತ್ತ ಗುಡಿಯ ಗಣಪತಿ, ಬೀದಿಯಲ್ಲಿ ಬಂದು ನಿಂತುಬಿಟ್ಟ. ಇದು ಯಾವ ಅತಿರೇಕದ ಮಟ್ಟಕ್ಕೆ ಹೋಯಿತೆಂದರೆ ಮೂಷಿಕಭಕ್ತಿ ಹನುಮನ ಭಕ್ತಿಗೂ ಮಿಗಿಲಾಯಿತು. ಇಲಿ ಕೊಲ್ಲುವ ಪ್ಲೇಗ್ ನಿಯಂತ್ರಣ ಸಮಿತಿಯ ಅಧ್ಯಕ್ಷರಾಗಿದ್ದ ರ‍್ಯಾಂಡ್ ಹಾಗೂ ಅವರ ಬೆಂಗಾವಲು ಪಡೆಯ ಅಯರ್ಸ್ಟ್‌ ಎಂಬುವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಅಂಡಮಾನ್‌ನಲ್ಲಿ ವಿ.ಡಿ. ಸಾವರ್ಕರ್ ವಿಮಾನ ನಿಲ್ದಾಣವಿದೆ. ಅಲ್ಲಿನ ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಗುಣಗಾನವುಂಟು. ಲೈಟ್ ಅಂಡ್ ಸೌಂಡ್ ಪ್ರಚಾರವುಂಟು. ಸಾವರ್ಕರ್ (1365 ಕಿ.ಮೀ.) ಸಮುದ್ರದಲ್ಲಿ ಈಜಿ ದಡ ಸೇರಿ ‘ವೀರ’ಸಾವರ್ಕರ್ ಆದರೆಂಬುದು ಅಡ್ಡಕತೆ. ಇದರ ಹಿಂದೆ ಚರಿತ್ರೆಯ ಪುಟಗಳ ಉದ್ದ ಕತೆಯೊಂದಿದೆ. ಅದು ಈಗಿನ ಕೇಂದ್ರ ಪತ್ರಾಗಾರದಲ್ಲಿರುವ, 1913ರ ಪತ್ರ. ಜೈಲಿನಿಂದ ಬಿಡುಗಡೆಯಾಗಲು ಸಾವರ್ಕರ್ ಬ್ರಿಟಿಷ್ ಸರ್ಕಾರಕ್ಕೆ ಬರೆದುಕೊಟ್ಟ ತಪ್ಪೊಪ್ಪಿಗೆ ಹೀಗಿದೆ: ‘ನಾವು ಜೈಲಿನಲ್ಲಿರುಷ್ಟು ದಿನ ಮಹಾರಾಣಿಯವರ ಸಾವಿರಾರು ಭಾರತೀಯ ಪ್ರಜೆಗಳಿಗೆ ನಿಜವಾದ ಹರ್ಷವಿರಲು ಸಾಧ್ಯವಿಲ್ಲ. ಯಾಕೆಂದರೆ ರಕ್ತಸಂಬಂಧ ಹೆಚ್ಚು ಗಟ್ಟಿ... ನಾನು ಯಾವುದೇ ರೀತಿಯಲ್ಲಾದರೂ ಸರ್ಕಾರದ ಸೇವೆ ಮಾಡಲು ಸಿದ್ಧನಿದ್ದೇನೆ’. ಈಗ ಹೇಳಿ, ನೆಹರೂ ಪುಣ್ಯತಿಥಿಯ ದಿನ ಸಾವರ್ಕರ್ ಕುರಿತ ಹೊಗಳಿಕೆಯ ಅವಶ್ಯಕತೆ ಇತ್ತೇ?

ಒಡೆದು ಆಳುವ ಬ್ರಿಟಿಷರ ನೀತಿಗೆ ಕಾಂಗ್ರೆಸ್ ಕೇವಲ ಚದುರಂಗದ ಮಣೆ. ಮುಂದೆ ಆರ್‌ಎಸ್‌ಎಸ್, ಮುಸ್ಲಿಂ ಲೀಗ್, ಆನಂತರದಲ್ಲಿ ನೇತಾಜಿ ಪಕ್ಷ, ಸಮಾಜವಾದ, ಕಮ್ಯುನಿಸ್ಟ್... ಇತ್ಯಾದಿಗಳೆಲ್ಲವೂ ಕಾಂಗ್ರೆಸ್‌ನಿಂದ ಬೇರೆಯಾಗುತ್ತಾ ಸಾಗಿರುವುದು ಇತಿಹಾಸ. ಕಾಂಗ್ರೆಸ್ ಕೂಡ ‘ಹಾವಿನ ಮೊಟ್ಟೆಗಳನ್ನು ಮರಿ ಮಾಡಿ ಕಳುಹಿಸುವ ಗೂಡು’ ಎಂದು ಗಾಂಧೀಜಿಗೆ ಅರಿವಿತ್ತು. ಹಾಗಾಗಿ 1934ರಿಂದಲೇ ಗಾಂಧೀಜಿ ನಾಲ್ಕಾಣೆ ಸದಸ್ಯರು ಕೂಡ ಅಲ್ಲ. ಆದರೆ ಎಲ್ಲ ಪಕ್ಷಗಳು ಅವರ ಬಳಿ ಬರುತ್ತಿದ್ದವೇ ಹೊರತು ಅವರದು ಮಾತ್ರ ಸ್ಥಿರ ಚಿತ್ತ.

ಪ್ರಧಾನಿಯವರು ತಮ್ಮ ಗುರು ಸಮಾನರಾದ ಸಾವರ್ಕರ್ ಅವರನ್ನು ಕವಿಯೆಂದು, ಉದಾತ್ತ ಚಿಂತನೆಯವರೆಂದು ಹೊಗಳುತ್ತಾರೆ. ನಿಜ, ಹಾಗಾಗಿಯೇ ಸಾವರ್ಕರ್ ಶಿಷ್ಯ, ಕವಿ ವಾಜಪೇಯಿ ಕೂಡ ಪಾರ್ಲಿಮೆಂಟಿನಲ್ಲಿ ಸಾವರ್ಕರ್ ಚಿತ್ರಪಟವನ್ನು ಗಾಂಧೀಜಿಗೆ ಸಮಾನವಾಗಿ ಹಾಕಿ ‘ಹೈಕಮಾಂಡ್’ ಋಣ ತೀರಿಸುತ್ತಾರೆ. ಪಂಡಿತ ನೆಹರೂ ಅವರ ವಿಚಾರವಾದ, ಚಾರಿತ್ರಿಕ ತಿಳಿವಳಿಕೆ ಜಗ ಮೆಚ್ಚಿದ್ದು. ವೈರತ್ವ ಮಾಡುವಾಗ ದೇಶದ ನಾಯಕರ ಬಗ್ಗೆ ಎಚ್ಚರದಿಂದಿರಬೇಕು. ಚರಿತ್ರೆ ಗೊತ್ತಿಲ್ಲದಿದ್ದರೆ ಆಸ್ಥಾನ ಪಂಡಿತರಿಂದ ಕೇಳಿ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಈಚೆಗೆ ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯನವರ ಕುರಿತು ನೀಡಿದ ಹೇಳಿಕೆ ವಿವಾದವಾಗುತ್ತಿರಲಿಲ್ಲ.

ಭಾಷಣ ಒಂದು ಕಲೆ ನಿಜ. ಆದರೆ ಅದರೊಳಗೆ ಚರಿತ್ರೆಯ ತಿರುಳಿರಬೇಕು. ಮುಂಗಾಣ್ಕೆಯ ಅರಿವಿರಬೇಕು. ಸಾವರ್ಕರ್ ಮುಚ್ಚಿ ನೀಡಿದ ಗುಂಡು, ಗೋಡ್ಸೆ ಕೈಯಲ್ಲಿ ಸಿಡಿಯಿತು. ಆದರೆ ಗುಂಡು ನೀಡಿದವರಿಗೆ ಶಿಕ್ಷೆಯಾಗಲಿಲ್ಲ. ಇದು ಮರೆಯಲ್ಲಿ ಬಿಲ್ಲು ಹೂಡಿದ ಶ್ರೀರಾಮನ ಬಾಣವು ವಾಲಿ ಸಂತಾನವನ್ನು ವಧಿಸಿದ ಬಗೆಯದ್ದು. ‘ಆರ್‌ಎಸ್‌ಎಸ್ ತಪ್ಪುದಾರಿಗೆಳೆಯಲ್ಪಟ್ಟ ದೇಶಭಕ್ತರ ಕೂಟ... ಅವರು ಕಳ್ಳರೋ ಡಕಾಯಿತರೋ ಅಲ್ಲ. ಅವರು ದೇಶವನ್ನು ಪ್ರೀತಿಸುವ ದೇಶಭಕ್ತರು. ಅವರ ಆಲೋಚನಾ ಧಾಟಿ ತಪ್ಪು ದಾರಿಗಿಳಿದಿದೆ’ ಎಂದು ಪಟೇಲರು 1948ರ ಜನವರಿ 6ರಂದು ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ್ದರು.

ಚರಿತ್ರೆಯಲ್ಲಿ ಹೀಗೆ ಅನೇಕ ತಪ್ಪುಗಳಾಗಿರುತ್ತವೆ.

ಅವುಗಳನ್ನು ತಿದ್ದಿಕೊಳ್ಳುತ್ತಾ ಹೋಗುವುದೇ ಬುದ್ಧರಾಗುವ ಪರಿ ಎಂದು ಬೇರೆ ಹೇಳಬೇಕಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.