ಅಂಗನವಾಡಿ ಕಾರ್ಯಕರ್ತೆಯರಿಂದ ಸಹಿ ಸಂಗ್ರಹ

7
ಮುಂಡರಗಿಯಲ್ಲಿ ಚಳವಳಿ ಆರಂಭ

ಅಂಗನವಾಡಿ ಕಾರ್ಯಕರ್ತೆಯರಿಂದ ಸಹಿ ಸಂಗ್ರಹ

Published:
Updated:

ಮುಂಡರಗಿ: ಐಸಿಡಿಎಸ್‌ ಬಲಗೊಳಿಸಲು ಪ್ಯಾಕೆಟ್ ಆಹಾರ ಪದ್ಧತಿ ಮತ್ತು ಸೌಲಭ್ಯಗಳ ನೇರ ವರ್ಗಾವಣೆಯ ಕ್ರಮವನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತೆಯರು ಭಾನುವಾರ ಪಟ್ಟಣದಲ್ಲಿ ಸಾಮೂಹಿಕ ಸಹಿ ಚಳವಳಿ ಆರಂಭಿಸಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಶಂಕರ ದೇವರಮನಿ ಮಾತನಾಡಿ, ‘ನೇರ ಮತ್ತು ಷರತ್ತುಬದ್ಧ ನಗದು ವರ್ಗಾವಣೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಐಸಿಡಿಎಸ್‌ ಸೇವೆಗೆ ಆಧಾರ್‌ ಕಾರ್ಡ್ ಜೋಡಣೆಯನ್ನು ಕಡ್ಡಾಯ ಮಾಡಬಾರದು. ಐಸಿಡಿಎಸ್‌ ಅನ್ನು ಯಾವುದೇ ಸ್ವರೂಪದಲ್ಲಿಯೂ ಖಾಸಗೀಕರಣಗೊಳಿಸಬಾರದು’ ಎಂದು ಒತ್ತಾಯಿಸಿದರು.

‘ಭಾರತ ಸರ್ಕಾರವು ಅಂಗನ ವಾಡಿಯ ಆಹಾರ, ಆರೋಗ್ಯ, ಶಿಕ್ಷಣವನ್ನು ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳಿಗೆ ಬಲಿ ಕೊಡಲು ಖಾಸಗಿ ನರ್ಸರಿಗಳನ್ನು ತೆರೆಯಲು ಅವಕಾಶ ಮಾಡಿಕೊಡುತ್ತಿದೆ. ಅದರ ಜೊತೆಗೆ ಅಂಗನವಾಡಿಗಳಿಗೆ ಅನುದಾನವನ್ನು ಕಡಿತ ಮಾಡುತ್ತಿರುವುದು ಬೇಸರ ಸಂಗತಿಯಾಗಿದೆ’ ಎಂದು ಅವರು ತಿಳಿಸಿದರು.

ಶಿವಾನಂದ ಬೋಸ್ಲೆ ಮಾತನಾಡಿ, ‘ಅಂಗನವಾಡಿಯಲ್ಲಿ ಒಂದು ಮಗುವಿಗೆ ಸರ್ಕಾರದಿಂದ ಪ್ರತಿ ತಿಂಗಳಿಗೆ ₹158 ಖರ್ಚು ಮಾಡಲಾಗುತ್ತದೆ. ಈ ಹಣವನ್ನು ಈಗ ಮಗುವಿನ ಪೋಷಕರ ಖಾತೆಗೆ ನೇರವಾಗಿ ಜಮಾ ಮಾಡಲು ಹೊರಟಿದೆ. ಇದರಿಂದ ಅಂಗನವಾಡಿಯಲ್ಲಿ ದೊರೆಯುವ ಆಹಾರವನ್ನು ಅವರಿಂದ ಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.

’ಸರ್ಕಾರದ ಈ ಕ್ರಮವನ್ನು ಖಂಡಿಸಿ ದೇಶದಾದ್ಯಂತ 1 ಕೋಟಿ ಸಹಿ ಸಂಗ್ರಹ ಮಾಡಲಾಗುತ್ತಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಸರ್ಕಾರ ರೂಪಿಸುತ್ತಿರುವ ಕೆಲವು ಯೋಜನೆಗಳು ಅವೈಜ್ಞಾನಿಕವಾಗಿದ್ದು, ಅವುಗಳನ್ನು ಬದಲಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಿ.ಬಿ.ಶೆಳಕೆ, ರೇಣುಕಾ ನವಲಗುಂದ, ವಿಶಾಲಾಕ್ಷಿ ದೇವರಮನಿ, ಗಿರಿಜವ್ವ ವಡ್ಡರ, ಈರಮ್ಮ ತಂಟ್ರಿ, ಬಸಮ್ಮ ನೀಲಪ್ಪಗೌಡ, ಆರ್.ಡಿ.ಕಮ್ಮಾರ, ನಿಂಗವ್ವ ಲಿಂಗಶೆಟ್ಟರ, ಎ.ಜೆ.ಸಾಲಿಮಠ, ಬಿ.ಜಿ.ಅಜ್ಜಣ್ಣವರ, ಆರ್.ಎಂ.ಮುಲ್ಲಾ, ಎಂ.ಎಂ.ಆಶಾದಕರ, ಎಸ್.ಎಸ್.ರಾಯ್ಕರ, ಎ.ಬಿ.ಶಿವಶೆಟ್ಟರ್, ಪಿ.ಡಿ.ಹಟ್ಟಿ, ಎಸ್.ಆರ್.ಅರ್ಕಸಾಲಿ, ಎನ್.ಎಚ್.ಹಲಗೇರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry