ಮತ್ತೆ ಕಾಣಿಸಿಕೊಂಡ ಸೈನಿಕ ಹುಳು!

7
ಆತಂಕದಲ್ಲಿ ರೈತ ವರ್ಗ * ಭಯ ಬೇಡ ಎಂದ ಕೃಷಿ ಇಲಾಖೆ ಅಧಿಕಾರಿಗಳು

ಮತ್ತೆ ಕಾಣಿಸಿಕೊಂಡ ಸೈನಿಕ ಹುಳು!

Published:
Updated:
ಮತ್ತೆ ಕಾಣಿಸಿಕೊಂಡ ಸೈನಿಕ ಹುಳು!

ದಾವಣಗೆರೆ: ಕಳೆದ ವರ್ಷ ಫಸಲಿಗೆ ಬಂದಿದ್ದ ಸಾವಿರಾರು ಎಕರೆ ಬೆಳೆಯನ್ನು ಮೇಯ್ದು ಮುಕ್ಕಿದ್ದ ಸೈನಿಕ ಹುಳುಗಳು ಮತ್ತೆ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.

ಹಿಂದಿನ ಹಂಗಾಮಿನಲ್ಲಿ ಧಾನ್ಯಗಳು ಕಾಳುಗಟ್ಟುವ ಸಂದರ್ಭದಲ್ಲಿ ದಾಳಿ ನಡೆಸಿದ ಸೈನಿಕ ಹುಳುಗಳು, ಇಡೀ ಹೊಲವನ್ನೇ ಬಯಲು ಮಾಡಿದ್ದವು. ಆದರೆ, ಈ ವರ್ಷ ಬಿತ್ತನೆ ಮಾಡಿದ ಹತ್ತಾರು ದಿನಗಳಲ್ಲೇ ಸೈನಿಕ ಹುಳುಗಳು ಕಾಣಿಸಿಕೊಂಡಿವೆ. ಈಗಷ್ಟೇ ಚಿಗುರುತ್ತಿರುವ ಪೈರಿನ ಸುಳಿಯನ್ನೇ ತಿನ್ನುತ್ತಿವೆ.

ಹರಪನಹಳ್ಳಿ ತಾಲ್ಲೂಕಿನ ಜಂಗಮ ತುಂಬಿಕೆರೆಯಲ್ಲಿ ಐದು ಎಕರೆಯಷ್ಟು ಪ್ರದೇಶದ ಮೆಕ್ಕೆಜೋಳ ಬೆಳೆಯನ್ನು ಸೈನಿಕ ಹುಳುಗಳು ತಿಂದಿವೆ. ಅರ್ಧದಿಂದ ಮುಕ್ಕಾಲು ಅಡಿ ಎತ್ತರಕ್ಕೆ ಬೆಳೆದಿದ್ದ ರೈತ ನಾಗರಾಜ ಎಂಬುವವರ ಹೊಲದಲ್ಲಿ ಸೈನಿಕ ಹುಳುಗಳು ಕಾಣಿಸಿಕೊಂಡಿವೆ. ಇದೇ ತಾಲ್ಲೂಕಿನ ಶ್ರೀನಿವಾಸಪುರದಲ್ಲೂ ಸೈನಿಕಹುಳುಗಳು ದಾಳಿ ನಡೆಸಿರುವುದು ಕಂಡು ಬಂದಿದೆ.

ಸತತವಾಗಿ ಮಳೆ ಬರದೇ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದಾಗ ಸೈನಿಕಹುಳು ಕಾಟ ಹೆಚ್ಚಿರುತ್ತದೆ. ಮಳೆ ಬಂದರೆ ಈ ಹುಳು ಕಾಟ ಅಷ್ಟು ಇರಲಾರದು ಎಂಬುದು ರೈತರ ಅನುಭವದ ಮಾತು. ಆದರೆ, ಈ ವರ್ಷ ಉತ್ತಮ ಮಳೆ ಬರುತ್ತಿದ್ದರೂ ಕೆಲವೆಡೆ ಸೈನಿಕ ಹುಳು ಕಾಣಿಸಿಕೊಂಡಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಸ್ವಾಭಾವಿಕವಾಗಿ ನಿಯಂತ್ರಣಕ್ಕೆ: ಹರಪನಹಳ್ಳಿ ತಾಲ್ಲೂಕಿನಲ್ಲಿ ಸೈನಿಕ ಹುಳು ಕಾಣಿಸಿಕೊಂಡಿರುವ, ಚಿಗುರುವ ಹಂತದಲ್ಲಿರುವ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಕೃಷಿ ಇಲಾಖೆಗೆ ಮಾಹಿತಿಯಿದೆ. ರೈತರಿಗೆ ಹುಳು ಕಾಟ ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್‌.

ಮೂರು ವರ್ಷ ಸತತವಾಗಿ ತೇವಾಂಶ ಕಡಿಮೆಯಾಗಿದ್ದರಿಂದ ‘ಪ್ಯೂಪ’ ಸ್ಥಿತಿಯಲ್ಲಿದ್ದ ಸೈನಿಕ ಹುಳುಗಳು ಭೂಮಿಯಾಳದಲ್ಲಿ ಅಡಗಿಕೊಂಡಿದ್ದವು. ಕಳೆದ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಸೈನಿಕ ಹುಳುಗಳು ಭಾರಿ ಸಂಖ್ಯೆಯಲ್ಲಿ ಒಮ್ಮೆಗೇ ಬೆಳೆ ಮೇಲೆ ದಾಳಿ ನಡೆಸಿದವು. ಇದರಿಂದಾಗಿ ಸೈನಿಕ ಹುಳು ಬಾಧೆ ನಿಯಂತ್ರಣ ಕಷ್ಟವಾಯಿತು.

ಆದರೆ, ಕಳೆದ ಬಾರಿಯಂತೆ ಹೆಚ್ಚು ಉಷ್ಣಾಂಶ ಈ ಹಂಗಾಮಿನಲ್ಲಿ ಇಲ್ಲ. ಹೀಗಾಗಿ ಸೈನಿಕ ಹುಳುಗಳ ಬಾಧೆ ಒಮ್ಮೆಗೇ ಆಗುವುದಿಲ್ಲ. ಉತ್ತಮ ಮಳೆಯಾಗುತ್ತಿರುವುದರಿಂದ ಸ್ವಾಭಾವಿಕವಾಗಿಯೇ ಸೈನಿಕ ಹುಳು ಹಾವಳಿ ನಿಯಂತ್ರಣಕ್ಕೆ ಬರಲಿದೆ ಎಂಬುದು ಅವರ ಅಭಿಪ್ರಾಯ.

ಸುಳಿಗೆ ಔಷಧ ಸಿಂಪಡಿಸಿ

ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಮೆಕ್ಕೆಜೋಳಕ್ಕೆ ಔಷಧೋಪಚಾರ ಮಾಡಿದರೆ ಬೆಳೆ ಸುಧಾರಣೆಯಾಗಲಿದೆ. ಹುಳು ಕಾಟವೂ ತಪ್ಪಲಿದೆ ಎನ್ನುತ್ತಾರೆ ಶರಣಪ್ಪ.

ಒಂದು ಲೀಟರ್‌ ನೀರಿಗೆ 10 ಮಿಲಿ ಗ್ರಾಂನಷ್ಟು ಕ್ಲೋರೊಪೈರಿಪಾಸ್‌ ಬೆರೆಸಿ ಮೆಕ್ಕೆಜೋಳದ ಸುಳಿಗೆ ಔಷಧವನ್ನು ಸಿಂಪಡಿಸಬೇಕು. ಮೆಕ್ಕೆಜೋಳದ ಗರಿಗಳು ನೆನೆಯುವಷ್ಟು ಔಷಧ ಸಿಂಪಡಿಸುವುದು ಅಗತ್ಯ. ಅಷ್ಟಾಗಿಯೂ ಹುಳು ಬಾಧೆ ನಿಯಂತ್ರಣಕ್ಕೆ ಬಾರದಿದ್ದರೆ, ರೈತರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಹಾವಳಿ ಹೆಚ್ಚಿದರೆ ನಿಯಂತ್ರಣ ಕಷ್ಟ

ಅಸಂಖ್ಯ ಸಂಖ್ಯೆಯಲ್ಲಿ ಬೆಳೆಯನ್ನು ತಿಂದು ತೇಗುವ ಹುಳುಗಳು ರಾತ್ರೋರಾತ್ರಿ ದಾಳಿಯಿಡುತ್ತವೆ. ರಾತ್ರಿ ಬೆಳಗಾಗುವುದರೊಳಗೆ ಹೊಲವೇ ಖಾಲಿಯಾಗುತ್ತದೆ. ಇಷ್ಟು ವೇಗವಾಗಿ ದಾಳಿಯಿಡುವ ಹುಳುಗಳನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಕಳೆದ ವರ್ಷವೂ ಸೈನಿಕ ಹುಳು ದಾಳಿ ಇದೇ ರೀತಿ ಹಾಕಿತ್ತು. ಈ ಅಂಶ ರೈತರ ಆತಂಕ ಹೆಚ್ಚುವುದಕ್ಕೆ ಪ್ರಮುಖ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry