ಸೋಮವಾರ, ಮಾರ್ಚ್ 30, 2020
19 °C

ಕಾವ್ಯಪರಂಪರೆಗೆ ನಾಟ್ಯ ಮಾರ್ಗಂ

ಸುಗ್ಗನಹಳ್ಳಿ ಷಡಕ್ಷರಿ Updated:

ಅಕ್ಷರ ಗಾತ್ರ : | |

ಕಾವ್ಯಪರಂಪರೆಗೆ ನಾಟ್ಯ ಮಾರ್ಗಂ

ಭರತನಾಟ್ಯ ಮಾಧ್ಯಮದಲ್ಲಿ ಹೊಸಹೊಸ ಪ್ರಯೋಗಗಳು ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತವೆ. ಕೃತಿಗಳ ಆಯ್ಕೆಯಲ್ಲಿ, ಮಾರ್ಗಂಗೆ ಕೃತಿಗಳನ್ನು ಹೊಂದಿಸುವುದರಲ್ಲಿ, ನೃತ್ಯ ಸಂಯೋಜನೆಯಲ್ಲಿ - ಹೀಗೆ ಆ ಪ್ರಯೋಗಗಳು ವಿನ್ಯಾಸಗೊಳ್ಳುತ್ತವೆ. ಆದರೆ ಸಾಮಾನ್ಯವಾಗಿ ರಂಗಪ್ರವೇಶಗಳನ್ನು ಮಾಡುವಾಗ ಈ ಯಾವುದೇ ಪ್ರಯೋಗಗಳಿಗೆ ಒಡ್ಡಿಕೊಳ್ಳದೆ ಸಂಪ್ರದಾಯಕ್ಕನುಗುಣವಾಗಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸುವುದೇ ಹೆಚ್ಚು.

ಡಾ.ಮಾಲಿನಿ ರವಿಶಂಕರ್ ತಮ್ಮ ಶಿಷ್ಯೆ ಶಿವಾನಿ ಎಂ.ಹೆಚ್. ಅವರ ರಂಗಪ್ರವೇಶ ಕಾರ್ಯಕ್ರಮವನ್ನು ವಿನೂತನವಾಗಿ ವಿನ್ಯಾಸಗೊಳಿಸಿದ್ದರು. ಕನ್ನಡ ಸಾಹಿತ್ಯ ಬೆಳೆದುಬಂದ ಕಾಲಘಟ್ಟಗಳ ಪ್ರಾತಿನಿಧಿಕ ಕಾವ್ಯಗಳನ್ನು ಆಯ್ದುಕೊಂಡು, ಆ ಕಾವ್ಯಗಳಲ್ಲಿ ಶಿವಪರವಾದ ಕೃತಿಗಳನ್ನು ಆರಿಸಿಕೊಂಡು`ಕಾವ್ಯಶಿವ’ ಶೀರ್ಷಿಕೆಯಲ್ಲಿ ಕಾರ್ಯಕ್ರಮವನ್ನು ಹೆಣೆದಿದ್ದರು. ಕೇವಲ ಕನ್ನಡ ಕಾವ್ಯಗಳನ್ನು ಆರಿಸಿಕೊಂಡಿದ್ದಾರೆ ಅನ್ನುವುದೊಂದೇ ಅಲ್ಲ, ಆ ಕಾವ್ಯಗಳನ್ನು ಭರತನಾಟ್ಯದ ಮಾರ್ಗಂಗೆ ಅನುಗುಣವಾಗಿ ಹೆಣೆದಿದ್ದು ಹಾಗೂ ಎಲ್ಲ ಕಾಲಘಟ್ಟದ ಕಾವ್ಯಗಳಲ್ಲಿ ನೃತ್ಯಕ್ಕೆ ಸೂಕ್ತವಾದ ಗೇಯತೆಯಿದೆ ಎಂಬುದೂ ಕೂಡ ಈ ಅದ್ಭುತ ಪರಿಕಲ್ಪನೆಯ ವಿಶೇಷ.

ಪುಷ್ಪಾಂಜಲಿ ಮತ್ತು ದೇವತೆಗಳ ಸ್ತುತಿ ಮಾರ್ಗಂನ ಆರಂಭಿಕ ಸಂಪ್ರದಾಯ. ಅದರಂತೆ ಡಾ.ಮಾಲಿನಿ ರವಿಶಂಕರ್ ತಾವೇ ರಚಿಸಿರುವ `ಸಿರಿಗನ್ನಡಾಂಬೆ ನೃತ್ಯಾಂಜಲಿ ನಿನಗೆ’ ಸಾಲುಗಳೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ಪುರಂದರದಾಸರ `ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು’ ಕೃತಿಯ ಸಾಲುಗಳನ್ನು ಗಣಪತಿಯ ಸ್ತುತಿಗೆ, ಕುಮಾರವ್ಯಾಸನ ಪೀಠಿಕಾ ಭಾಗದಿಂದ ಆಯ್ದ `ವಾರಿಜಾಸನೆ ಸಕಲಶಾಸ್ತ್ರ ವಿಚಾರದುದ್ಭವೆ’ ಶ್ಲೋಕವನ್ನು ಸರಸ್ವತಿಯ ಸ್ತುತಿಗೆ ಮತ್ತು `ಗುರು ಕರುಣ ತೋರುವುದು ಹರನ’ ಎಂಬ ಸರ್ವಜ್ಞನ ವಚನದ ಮೂಲಕ ಶಿವದರ್ಶನಕ್ಕೆ ಗುರುಕರುಣ ಕಾರಣ ಎಂಬುದನ್ನು ಸಾಂಕೇತಿಸಿದರು. ಈ ಆರಂಭಿಕ ಕೃತಿಯಲ್ಲೇ ಡಾ.ಮಾಲಿನಿಯವರ ಅದ್ಭುತ ನೃತ್ಯ ಸಂಯೋಜನೆ ಮತ್ತು ಶಿವಾನಿಯವರ ನರ್ತನದ ಸೊಗಸು ಪರಿಣಾಮಕಾರಿಯಾಗಿ ವ್ಯಕ್ತವಾಯಿತು.

ಮಾರ್ಗಂನಲ್ಲಿ ಎರಡನೇ ಕೃತಿ ಕವಿತ್ವಂ. ರಾಘವಾಂಕ ಕವಿಯ ಸೋಮೇಶ್ವರ ಚಾರಿತ್ರದ ಶಿವನ ವರ್ಣನೆಯಿರುವ ಬೇರೆಬೇರೆ ಪದ್ಯಗಳ ಕೆಲವು ಸಾಲುಗಳನ್ನು ಆರಿಸಿಕೊಂಡು, ಪಾರಂಪರಿಕ ಸೊಲ್ಲುಗಳೊಂದಿಗೆ ಹದವಾಗಿ ಬೆರೆಸಿ ಗಂಭೀರನಾಟ್ಟ ರಾಗದಲ್ಲಿ ವಿನ್ಯಾಸಗೊಳಿಸಲಾಗಿತ್ತು.

12ನೇ ಶತಮಾನದ ವಚನ ಸಾಹಿತ್ಯವನ್ನು ಪ್ರತಿನಿಧಿಸಿದ್ದು ಬಸವಣ್ಣನವರ ವಚನ. ಹಿಂದೋಳ ರಾಗದಲ್ಲಿ `ನಾದಪ್ರಿಯ ಶಿವನೆಂಬರು’ ವಚನವನ್ನು ಸಾದರಪಡಿಸಿ, ಅದರಲ್ಲಿ ರಾವಣ ಆತ್ಮಲಿಂಗವನ್ನು ಪಡೆಯಲು ಶಿವನನ್ನು ಒಲಿಸಿಕೊಳ್ಳಲು ತನ್ನ ಶಿರಗಳನ್ನು ವೀಣೆಯ ಬುರುಡೆಗಳನ್ನಾಗಿ ಮಾಡಿ, ತನ್ನ ಉದರ ಬಗೆದು ಮೂಳೆಗಳನ್ನು ದಂಡಿಗೆಯನ್ನಾಗಿ ಮಾಡಿ, ನರಗಳನ್ನು ತಂತಿಗಳನ್ನಾಗಿಸಿ ವೀಣೆ ನುಡಿಸಿ ಒಲಿಸಿದರೂ ಅರೆಆಯುಷ್ಯದಿಂದ ಪಾರಾಗಲು ಸಾಧ್ಯವಾಗಲಿಲ್ಲ ಎಂಬುದನ್ನು ಪರಿಣಾಮಕಾರಿಯಾಗಿ ಸಂಯೋಜಿಸಲಾಗಿತ್ತು.

ಹರಿಹರನ ಕುಂಬಾರ ಗುಂಡಯ್ಯನ ರಗಳೆಯ ಕೆಲವು ಸನ್ನಿವೇಶಗಳನ್ನು ವರ್ಣದ ಚೌಕಟ್ಟಿಗೆ ಹೊಂದಿಸಲಾಗಿತ್ತು. `ಶಶಿಮೌಳಿಯ ಶರಣಂ, ಸಲ್ಲಲಿತ ಮಾಯಾ ನಿರಹರಣಂ’ ಸಾಲುಗಳೊಂದಿಗೆ ಆರಂಭವಾದ ಈ ಭಾಗದಲ್ಲಿ, ಹಲವು ಬಗೆಯ ಜತಿ-ಸ್ವರಗಳ ಜೋಡಣೆ ಸುಂದರವಾಗಿದ್ದು, ಪಾರಂಪರಿಕ ವರ್ಣದ ಚೌಕಟ್ಟಿಗೆ ಸುಂದರವಾಗಿ ಹೆಣೆಯಲಾಗಿತ್ತು. ಈ ಭಾಗದ ನರ್ತನದಲ್ಲಿ ಶಿವಾನಿಯ ಲಯದ ಮೇಲಿನ ಹಿಡಿತ ಮತ್ತು ಅಭಿನಯದ ಸಮತೋಲನವನ್ನು ಕಾಣಲು ಸಾಧ್ಯವಾಯಿತು.

ಕುಮಾರವ್ಯಾಸದ ಕಿರಾತಾರ್ಜುನೀಯ ಪ್ರಸಂಗದಲ್ಲಿ ಬರುವ ಎಲ್ಲ ನಾಟಕೀಯ ಅಂಶಗಳ ವಿಸ್ತರಣೆ ಮತ್ತು ಕಲಾವಿದೆಯಿಂದ ಅವುಗಳ ನಿರ್ವಹಣೆ ಎಲ್ಲವೂ ಸೊಗಸಾಗಿ ಮೇಳೈಸಿದವು.

ಹದಿನಾರನೇ ಶತಮಾನದ ಕಾಲಘಟ್ಟವನ್ನು ಪ್ರತಿನಿಧಿಸಿದ್ದು ಗೋಪಾಲದಾಸರ `ಒಲಿದೆ ಯಾತಕ್ಕಮ್ಮ ಗಿರಿಜೆ ವಾಮದೇವಂಗೆ’. ಇದು ಶಾಸ್ತ್ರೀಯ ಸಂಗೀತದ ನಿಂದಾಸ್ತುತಿಯ ಮಾದರಿಯಲ್ಲಿ ವ್ಯಕ್ತವಾಯಿತು. ಶಿವನನ್ನು ತೆಗಳುತ್ತಲೇ ಅವನ ಅಗಾಧ ವ್ಯಕ್ತಿತ್ವವನ್ನು ಸಾರುತ್ತಾ, ವೈರುಧ್ಯಗಳ ನಡುವೆ ಸುಖೀ ದಾಂಪತ್ಯದ ಆಶಯವನ್ನು ಇಲ್ಲಿ ತೆರೆದಿರಿಸಲಾಯಿತು.

ಸಮಕಾಲೀನ ಕವಿಪರಂಪರೆಯನ್ನು ಡಿ.ಎಸ್.ಕರ್ಕಿ ಅವರ ಶಿವನನ್ನು ಕುರಿತಾದ ಸಾಹಿತ್ಯವೊಂದರ ಸಾಲುಗಳನ್ನು ತಿಲ್ಲಾನಾದ ಶೊಲ್ಲುಕಟ್ಟುಗಳೊಂದಿಗೆ ಬಳಸಿಕೊಳ್ಳುವುದರ ಮೂಲಕ ಗೌರವಿಸಲಾಯಿತು.

ನೃತ್ಯ ಸಂಯೋಜನೆಯ ಜೊತೆಗೆ ಗುರು ಡಾ.ಮಾಲಿನಿ ರವಿಶಂಕರ್ ಅದ್ಭುತವಾಗಿ ನಟುವಾಂಗ ನಿರ್ವಹಿಸಿದರು. ಶ್ರೀ ಬಾಲಸುಬ್ರಹ್ಮಣ್ಯ ಶರ್ಮ ಎಲ್ಲ ಕಾವ್ಯಗಳಿಗೆ ಸೂಕ್ತ ರಾಗ ಸಂಯೋಜನೆಯ ಮಾಡಿ ಸೊಗಸಾಗಿ ಹಾಡಿದರು. ಉಳಿದಂತೆ ಶ್ರೀ ಜನಾರ್ಧನ್ ರಾವ್ (ಮೃದಂಗ), ಶ್ರೀ ಜಯರಾಂ ಕಿಕ್ಕೇರಿ (ಕೊಳಲು), ಶ್ರೀ ಹೇಮಂತ್ ಕುಮಾರ್ (ಪಿಟೀಲು), ಶ್ರೀ ಪ್ರಸನ್ನ ಕುಮಾರ್ (ರಿದಂಪ್ಯಾಡ್) ಉತ್ತಮ ಸಂಗೀತ ಸಹಕಾರ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)