ಬುಧವಾರ, ಜುಲೈ 6, 2022
22 °C

ದೊಡ್ಡಣ್ಣರಿಗೆ ನೀರಿಳಿಸುವ ‘ಪುಟ್ಟಣ್ಣ’ ಡೀಗೊ...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ದೊಡ್ಡಣ್ಣರಿಗೆ ನೀರಿಳಿಸುವ ‘ಪುಟ್ಟಣ್ಣ’ ಡೀಗೊ...

ಫುಟ್‌ಬಾಲ್ ಜ್ವರ. ಆದರೂ ಟೆನಿಸ್ ಆಟಗಾರ ಡೀಗೊ ಶ್ವಾರ್ಟ್ಜ್‌ಮನ್ ಕುರಿತು ತಿಳಿಯಬೇಕಿದೆ. ಅರ್ಜೆಂಟಿನಾದ ಈ ಪ್ರತಿಭಾವಂತನಿಗೂ ಫುಟ್‌ಬಾಲ್ ಹುಚ್ಚು. ಶಾಲೆಯಲ್ಲಿ ಪಾಠ ಕೇಳಿದ್ದಕ್ಕಿಂತ ಬ್ಯೂನಸ್ ಐರಿಸ್‌ನ ಬೊಂಬೆನೆರಾ ಕ್ರೀಡಾಂಗಣದಲ್ಲಿ ಬೊಕಾ ಜೂನಿಯರ್ಸ್ ಫುಟ್‌ಬಾಲ್ ಪಂದ್ಯಗಳನ್ನು ನೋಡಿದ್ದೇ ಹೆಚ್ಚು. ಯಾರು ಕೇಳಿದರೂ ಮ್ಯಾನೇಜ್‌ಮೆಂಟ್ ಪದವೀಧರ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದ ಡೀಗೊ ಶ್ವಾರ್ಟ್ಜ್‌ಮನ್, 2014ರಲ್ಲಿ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿ ನಡೆದಾಗ ಮಾಧ್ಯಮದವರ ಮಧ್ಯೆ ಕೂತಿದ್ದರು. ಪಕ್ಕದಲ್ಲಿ ‘ಜೆರುಸಲೇಂ ಪೋಸ್ಟ್’ ಪತ್ರಿಕೆಯ ವರದಿಗಾರ. ಯಾರಾದರೂ ಈ ಹುಡುಗನ ಸಂದರ್ಶನ ಮಾಡಲಿ ಎನ್ನುವುದು ಆ ವರದಿಗಾರನ ಬಯಕೆಯೂ ಆಗಿತ್ತು. ಆದರೆ, ಆಗ ಯಾರೊಬ್ಬರೂ

ಹತ್ತಿರಕ್ಕೂ ಸುಳಿದಿರಲಿಲ್ಲ.

ಹೋದ ವರ್ಷ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿ ನಡೆದಾಗ ಎರಡು ದಿನಗಳಲ್ಲಿ ಹದಿನೈದು ಪತ್ರಕರ್ತರು ಇದೇ ಆಟಗಾರನ ಸಂದರ್ಶನಕ್ಕೆ ಅನುಮತಿ ಕೇಳಿಕೊಂಡು ಸರತಿಯಲ್ಲಿ ನಿಂತಿದ್ದರು!

ಮೊನ್ನೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಗೆದ್ದಿದ್ದೇನೋ ಹೆಚ್ಚು ಸುದ್ದಿಯಾಯಿತು. ಡೀಗೊ ಸೋಲುಗಳೂ ಅಷ್ಟೇ ಮಹತ್ವ ಪಡೆಯತೊಡಗಿ ಎರಡು ವರ್ಷಗಳಾಗುತ್ತಿವೆ. ಹೋದ ವರ್ಷ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೋಕೊವಿಚ್ ಸ್ನಾಯುಗಳ ಕಸುವನ್ನು ಪರೀಕ್ಷೆಗೆ ಒಡ್ಡಿದ್ದು ಇದೇ ಡೀಗೊ.

ದಕ್ಷಿಣ ಅಮೆರಿಕದ ಶ್ರೇಷ್ಠ ಟೆನಿಸ್ ಆಟಗಾರರನ್ನು ಸೋಸಿದರೆ ಕಾಣುವ ಮೂರು ಹೆಸರುಗಳಲ್ಲಿ ಇವರದ್ದೂ ಒಂದು. ಯಹೂದಿ ಕುಟುಂಬದ ಕುಡಿ. ಕ್ಲಬ್ ನಾಟಿಕೊ ಹಕೋಜ್‌ನಲ್ಲಿ ಟೆನಿಸ್ ಆಡಲು ಆರಂಭಿಸಿದ್ದು ಏಳನೇ ವಯಸ್ಸಿನಲ್ಲಿ. 17 ತುಂಬುವ ಹೊತ್ತಿಗೆ ವೃತ್ತಿಪರ ಆಟಕ್ಕೆ ಒಡ್ಡಿಕೊಂಡಾಗಿತ್ತು. 2010ರಿಂದ 2012ರ ಅವಧಿಯಲ್ಲಿ ಇಂಟರ್ ನ್ಯಾಷನಲ್ ಟೆನಿಸ್ ಫೆಡರೇಷನ್ ಆಯೋಜಿಸಿದ ಟೂರ್ನಿಗಳಲ್ಲಿ 9ರಲ್ಲಿ ಗೆದ್ದು ಬೀಗಿದ ಪ್ರತಿಭೆ.

2016ರಲ್ಲಿ ಇಸ್ತಾನ್‌ಬುಲ್ ಓಪನ್ ಎಟಿಪಿ ಪ್ರಶಸ್ತಿಯಲ್ಲಿ ಮೊದಲು ಜಯಿಸಿದಾಗ ಪಕ್ಕದಲ್ಲಿ ನಿಂತಿದ್ದ ರನ್ನರ್ ಅಪ್ ಗ್ರಿಗರ್ ಡಿಮಿಟ್ರೊವ್ ಹುಬ್ಬು ಮೇಲಕ್ಕೆ ಹಾರಿತ್ತು. ಯಾಕೆಂದರೆ, ‘ಎಲ್ ಪೆಕ್’ ಎಂಬ ಅಡ್ಡಹೆಸರು ಡೀಗೊಗೆ ಇದೆ. ಅದರರ್ಥ ಕನ್ನಡದಲ್ಲಿ ‘ಪುಟ್ಟಣ್ಣ’. ಐದಡಿ ಏಳು ಇಂಚು ಎತ್ತರ ಇರುವ ಆಟಗಾರನಾದ್ದರಿಂದ ಈ ಹೆಸರು. ಆರು ಅಡಿ ಮೂರು ಇಂಚಿನ ಡಿಮಿಟ್ರೊವ್ ಹುಬ್ಬು ಯಾಕೆ ಹಾರಿತ್ತೆನ್ನುವುದು ತಿಳಿಯಿತಲ್ಲವೇ? ವಿಶ್ವದ 50 ಶ್ರೇಷ್ಠ ಸಮಕಾಲೀನ ಟೆನಿಸ್ ಆಟಗಾರರನ್ನು ಸಾಲಾಗಿ ನಿಲ್ಲಿಸಿದರೆ, ಎಲ್ಲರಿಗಿಂತ ಕುಳ್ಳ ಇವರೇ. ಅದಕ್ಕೇ ಇವರು ‘ಪುಟ್ಟಣ್ಣ’.

ಸ್ಪೇನ್ ನ ಡೇವಿಡ್ ಫೆರರ್ ಆಟದ ವೈಖರಿಗೆ ಇವರ ಶೈಲಿಯನ್ನು ಕೆಲವರು ಹೋಲಿಸುತ್ತಾರೆ. ಫೆರರ್ ಕೂಡ ಐದಡಿ ಒಂಬತ್ತು ಇಂಚಿನ ಆಟಗಾರ. ಹಾಗಿದ್ದೂ ಒಂದು ಕಾಲಘಟ್ಟದಲ್ಲಿ ಅವರು ವಿಶ್ವದ 3ನೇ ರ‍್ಯಾಂಕಿಂಗ್ ಆಟಗಾರ ಎನಿಸಿಕೊಂಡಿದ್ದರು.

ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ನಡಾಲ್ ವಿರುದ್ಧ ಮೊದಲ ಸೆಟ್ ಗೆದ್ದಾಗ ಡೀಗೊ ಹೆಚ್ಚೇನೂ ಬೀಗಲಿಲ್ಲ. ‘ನನ್ನಂಥವರು ಸೋತರಷ್ಟೇ ಎದುರಾಳಿ ಗೆಲ್ಲಲು ಸಾಧ್ಯ. ಆ ಸೋಲಿನಲ್ಲೂ ಹೊಸತೇನನ್ನೋ ಸಾಧಿಸಿರುತ್ತೇನೆ ಎನ್ನುವುದು ನನ್ನ ನಂಬಿಕೆ’-ಡೀಗೊ ಆಡಿದ ಈ ಮಾತೇ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.