ಅವ್ಯವಸ್ಥೆಯ ಆಗರ ವಾಯುವಿಹಾರ ರಸ್ತೆ

7
ತುಂಗಾ ನದಿಯ ದಡದ ಪಾದಚಾರಿ ಮಾರ್ಗದಲ್ಲಿ ನಿರ್ವಹಣೆ ಕೊರತೆ

ಅವ್ಯವಸ್ಥೆಯ ಆಗರ ವಾಯುವಿಹಾರ ರಸ್ತೆ

Published:
Updated:
ಅವ್ಯವಸ್ಥೆಯ ಆಗರ ವಾಯುವಿಹಾರ ರಸ್ತೆ

ಶಿವಮೊಗ್ಗ: ತುಂಗಾ ನದಿಯ ದಡದಲ್ಲಿ ವಾಯುವಿಹಾರಕ್ಕಾಗಿ ನಿರ್ಮಿಸಿರುವ ಪಾದಚಾರಿ ರಸ್ತೆಯು ರಾತ್ರಿ ಸಮಯದಲ್ಲಿ ಕಿಡಿಗೇಡಿಗಳ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದ್ದು, ಜನರು ಭಯ ಪಡುವಂತಾಗಿದೆ.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತುಂಗಾ ನದಿ ತಡೆಗೋಡೆ ನಿರ್ಮಾಣಕ್ಕೆ ಹಾಗೂ ಅಲ್ಲಿನ ಸ್ಥಳವನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅನುದಾನ ನೀಡಿದ್ದರು. ಆ ಅನುದಾನದಲ್ಲಿ ನಿರ್ಮಾಣಗೊಂಡ ತಡೆಗೋಡೆ ಹಾಗೂ ಅಲ್ಲಿನ ವಾಯುವಿಹಾರದ ಪಾದಾಚಾರಿ ರಸ್ತೆಯು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಮೋಜು ಮಸ್ತಿ ಮಾಡುವ ತಾಣವಾಗಿದೆ.

ಕಳಪೆ ಗುಣಮಟ್ಟದಲ್ಲಿ ನಿರ್ಮಾಣವಾಗಿರುವ ವಾಯುವಿಹಾರದ ಪಾದಚಾರಿ ರಸ್ತೆಗೆ ಹಾಕಿರುವ ಟೈಲ್ಸ್ ಹೊರಬರುತ್ತಿವೆ. ಈ ಯೋಜನೆಯಲ್ಲಿ ವಾಯುವಿಹಾರಿಗಳಿಗೆ ಕುಳಿತುಕೊಳ್ಳಲು ಪಾದಚಾರಿ ರಸ್ತೆಯ ಪಕ್ಕದಲ್ಲಿ ಬೆಂಚಿನ‌ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಆ ರಸ್ತೆಯ ಎರಡೂ ಬದಿಗಳಲ್ಲಿ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸುವ ವ್ಯವಸ್ಥೆಯೂ ಅರ್ಧಕ್ಕೆ ನಿಂತಿದೆ. ಅಲ್ಲಿ ಮುಳ್ಳುಗಿಡಗಳು ಬೆಳೆದಿದ್ದು, ವಿಷ ಜಂತುಗಳ ವಾಸಸ್ಥಳವಾಗಿದೆ. ಸಂಜೆಯ ಸಮಯದಲ್ಲಿ ವಾಯು ವಿಹಾರಕ್ಕೆಂದು ಬರುವವರ ಬಳಿ ಇರುವ ಹಣ ದೋಚಿರುವ ಹಲವು ಪ್ರಕರಣಗಳು ನಡೆದಿವೆ.

ಪಾದಚಾರಿ ರಸ್ತೆಯ ಪಕ್ಕದಲ್ಲಿ ಗುಂಡಿಗಳಿದ್ದು, ಮಳೆ‌ನೀರು ನಿಲ್ಲುತ್ತದೆ. ಅಲ್ಲಿಯೇ ಕಸದ ರಾಶಿ ತುಂಬಿದ್ದು, ದುರ್ವಾಸನೆ ಬೀರುತ್ತದೆ. ಕೊಳಚೆ ನೀರು ಶುದ್ಧೀಕರಿಸುವ ಘಟಕ ನಿರ್ಮಿಸಿ ಯುಜಿಡಿ ಮೂಲಕ ಆ ನೀರನ್ನು ನದಿಗೆ ಹರಿಸುವ ಯೋಜನೆಯೂ ಇನ್ನೂ ಪ್ರಾರಂಭವೇ ಆಗಿಲ್ಲ. ಇದರಿಂದ ಇಲ್ಲಿ ಶುದ್ಧಗಾಳಿ ಸಿಗುತ್ತಿಲ್ಲ ಎಂದು ವಾಯುವಿಹಾರಕ್ಕೆ ಬರುವ ಹಿರಿಯ ನಾಗರಿಕರು ದೂರುತ್ತಾರೆ.

‘ರಸ್ತೆಯಲ್ಲಿಯೇ ಬೇಕಾಬಿಟ್ಟಿ ದ್ವಿಚಕ್ರ ವಾಹನ ಚಲಾಯಿಸುವವರ ಹಾವಳಿ ಅಧಿಕವಾಗಿದೆ. ರಸ್ತೆಯ ಪಕ್ಕದಲ್ಲೇ ಮರಳು ಸಾಗಣೆ ಲಾರಿಗಳು ನಿಲ್ಲುತ್ತವೆ. ಕೆಲವರು ಅಲ್ಲಿಯೇ ಗುಜರಿ ವಾಹನಗಳನ್ನು ನಿಲ್ಲಿಸುತ್ತಾರೆ. ಕಸದ ರಾಶಿ ಪಕ್ಕದಲ್ಲೇ ಮದ್ಯದ ಬಾಟಲಿಗಳು ಬಿದ್ದಿರುತ್ತವೆ’ ಎಂದು ಸ್ಥಳೀಯ ಹನುಮಂತಪ್ಪ ಆರೋಪಿಸುತ್ತಾರೆ.

ಸಂಬಂಧಪಟ್ಟವರು ಮಾರ್ಗದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಭದ್ರತೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಸಮರ್ಪಕ ನಿರ್ವಹಣೆ ಇಲ್ಲ. ಒಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಬೆಳಿಗ್ಗೆ ಮತ್ತು ಸಂಜೆ ಬೀಟ್‌ ಮಾಡಲು ವ್ಯವಸ್ಥೆ ಮಾಡಬೇಕು

- ಎಚ್.ಕೆ. ಹನುಮಂತಪ್ಪ, ಸ್ಥಳೀಯ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry