ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್‌ | ವಲಸೆ ವಿರೋಧಿ ಪ್ರತಿಭಟನೆ: 100ಕ್ಕೂ ಅಧಿಕ ಬಂಧನ

Published : 5 ಆಗಸ್ಟ್ 2024, 1:19 IST
Last Updated : 5 ಆಗಸ್ಟ್ 2024, 1:19 IST
ಫಾಲೋ ಮಾಡಿ
Comments

ಲಂಡನ್: ಬ್ರಿಟನ್‌ನಾದ್ಯಂತ ವಲಸೆ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸರು ಇದುವರೆಗೆ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರು ಹಿಂಸಾತ್ಮಕ ಪ್ರತಿಭಟನೆಗಿಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಲಿವರ್‌ಪೂಲ್, ಹಲ್, ಬ್ರಿಸ್ಟಲ್, ಲೀಡ್ಸ್‌, ಬ್ಲ್ಲಾಕ್‌ಪೂಲ್, ಬೆಲ್‌ಫಾಸ್ಟ್‌, ನಾಟಿಂಗ್‌ಹ್ಯಾಂ ಮತ್ತು ಮ್ಯಾಂಚೆಸ್ಟರ್‌ ನಗರಗಳಲ್ಲಿ ಬಲಬಂಥೀಯ ಗುಂಪುಗಳ ಸದಸ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಹಲವೆಡೆ ಕಲ್ಲೆಸೆತ, ಬೆಂಕಿ ಇಡುವ ಘಟನೆಗಳು ವರದಿಯಾಗಿವೆ. ವಲಸಿಗರಿಗೆ ಆಶ್ರಯ ನೀಡಿರುವ ಹೋಟೆಲ್‌ವೊಂದರ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ. 

‘ಹಿಂಸೆಗೆ ಇಳಿದವರು ತಕ್ಕ ಬೆಲೆ ತೆರಲಿದ್ದಾರೆ’ ಎಂದು ಬ್ರಿಟನ್‌ನ ಗೃಹ ಕಾರ್ಯದರ್ಶಿ ಯಿವೆಟ್‌ ಕೂಪರ್‌ ಎಚ್ಚರಿಸಿದ್ದಾರೆ.

‘ಹಿಂಸೆ: ಸೇನೆಯೇ ಕ್ಷಮೆಯಾಚಿಸಬೇಕು’

ಇಸ್ಲಾಮಾಬಾದ್ (ಪಿಟಿಐ): ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕ್ಷಮೆಯಾಚಿಸಲು ನಿರಾಕರಿಸಿದ್ದು, ಹಿಂಸಾಚಾರಕ್ಕೆ ಸೇನೆಯೇ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ದಂತೆ 2023ರ ಮೇ 9ರಂದು ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದ ಆವರಣದಿಂದ ಮೇಜರ್ ನೇತೃತ್ವದ ಸೇನೆಯು ಖಾನ್ ಅವರನ್ನು ಬಂಧಿಸಿತ್ತು.

ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತಾನಾಡಿದ ಖಾನ್, ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.

ಖಾನ್ ಬಂಧನ ವಿರೋಧಿಸಿ ಪಾಕಿಸ್ತಾನ ತೆಹ್ರೀಕ್–ಎ–ಇನ್ಸಾಫ್ ಪಕ್ಷದ ಬೆಂಬಲಿಗರು ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಮತ್ತು ಗಲಭೆ ನಡೆಸಿದ್ದರು.

ಮೇ 7ರಂದು ಸೇನೆಯ ವಕ್ತಾರ ಮೇಜರ್ ಅಹ್ಮದ್ ಷರೀಫ್, ‘ತನ್ನ ಅರಾಜಕತೆಯ ರಾಜಕೀಯಕ್ಕಾಗಿ ಪಕ್ಷವು ಕ್ಷಮೆಯಾಚಿಸಿದರೆ ಮಾತ್ರ ಪಕ್ಷದೊಂದಿಗೆ ಯಾವುದೇ ಮಾತುಕತೆಗೆ ನಡೆಸಬಹುದು’ ಎಂದು ಹೇಳಿದ್ದರು.

ನಂತರ, ‘ಬ್ಲಾಕ್ ಡೇ ಹಿಂಸಾಚಾರ’ಕ್ಕಾಗಿ ಖಾನ್ ಕ್ಷಮೆಯಾಚಿಸಬೇಕು ಎಂದು ಹಲವು ವಲಯಗಳಿಂದ ಕರೆ ಬಂದಿತ್ತು.

ನಕಲಿ ದಾಖಲೆ; ಭಾರತಕ್ಕೆ ಮರಳಿದ ವಿದ್ಯಾರ್ಥಿ

ನ್ಯೂಯಾರ್ಕ್‌ (ಪಿಟಿಐ): ಅಮೆರಿಕ‌ದ ವಿಶ್ವವಿದ್ಯಾ ಲಯವೊಂದರಲ್ಲಿ ಪ್ರವೇಶ ಪಡೆಯಲು ದಾಖಲೆಗಳನ್ನು ನೀಡಿರುವ ಆರೋಪದಲ್ಲಿ ಬಂಧಿತನಾಗಿದ್ದ 19 ವರ್ಷದ ವಿದ್ಯಾರ್ಥಿಯು ಅಲ್ಲಿನ ಅಧಿಕಾರಿಗಳೊಂದಿಗೆ ಮಾಡಿಕೊಂಡ ಮನವಿ ಒಪ್ಪಂದದ ಆಧಾರದ ಮೇಲೆ ಭಾರತಕ್ಕೆ ಮರಳಲಿದ್ದಾನೆ.

ಪೆನ್ಸಿಲ್ವೇನಿಯಾದ ಖಾಸಗಿ ಸಂಶೋಧನಾ ವಿವಿಯಾದ ಲೇಹಿ ವಿವಿಯಲ್ಲಿ 2023– 24ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಆರ್ಯನ್‌ ಆನಂದ್‌ ಎಂಬಾತನು ನಕಲಿ ದಾಖಲೆಗಳನ್ನು ಸಲ್ಲಿಸಿದ್ದನು ಎನ್ನಲಾಗಿದೆ.

ವಿವಿಗೆ ಪ್ರವೇಶ ‍ಮತ್ತು ನಂತರ ಸ್ಕಾಲರ್‌ಶಿಪ್‌ ‍ಪಡೆಯುವ ಉದ್ದೇಶದಿಂದ ಆರ್ಯನ್‌, ತನ್ನ ತಂದೆ ನಿಧನ ಹೊಂದಿದ್ದಾಗಿ ನಕಲಿ ಮರಣ ದಾಖಲೆಗನ್ನು ಸೃಷ್ಟಿಸಿ ಸಲ್ಲಿಸಿದ್ದಾರೆ ಎಂಬುದು ಪೊಲೀಸ್‌ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ವಿವಿಯ ವಿದ್ಯಾರ್ಥಿ ದಿನ ಪತ್ರಿಕೆಯಾದ ‘ದಿ ಬ್ರೌನ್‌ ಆ್ಯಂಡ್‌ ವೈಟ್‌’ ಕಳೆದ ತಿಂಗಳು ವರದಿ ಮಾಡಿತ್ತು.

ತಪ್ಪೊಪ್ಪಿಕೊಂಡ ಆರ್ಯನ್‌ಗೆ ಜೂನ್‌ 12ರಂದು ಜಿಲ್ಲಾ ನ್ಯಾಯಾಲಯವು ₹20.94 ಲಕ್ಷ ಪಾವತಿಯೊಂದಿಗೆ ಜಾಮೀನು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT