ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 4 ವರ್ಷಗಳಲ್ಲಿ 139 ಅಪರಾಧಿಗಳ ಸಾವು

Last Updated 19 ಜುಲೈ 2021, 14:04 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ಪೊಲೀಸರು 2017ರಿಂದ ನಡೆಸಿದ ಎನ್‌ಕೌಂಟರ್‌ಗಳಲ್ಲಿ 139 ಅಪರಾಧಿಗಳ ಹತ್ಯೆಯಾಗಿದ್ದು, 3,196 ಮಂದಿ ಗಾಯಗೊಂಡಿದ್ದಾರೆ. ಈ ಎನ್‌ಕೌಂಟರ್‌ಗಳಲ್ಲಿ ಪೊಲೀಸ್‌ ಇಲಾಖೆ ತನ್ನ 13 ಸಿಬ್ಬಂದಿಯನ್ನು ಕಳೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಕುಖ್ಯಾತ ಅಪರಾಧಿಗಳು, ಅವರ ಸಹಚರರು ಮತ್ತು ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ.

‘2017ರಮಾರ್ಚ್ 20ರಿಂದ ಈ ವರ್ಷದ ಜೂನ್ 20ರವರೆಗೆ ನಡೆದ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ 139 ಅಪರಾಧಿಗಳು ಸಾವನ್ನಪ್ಪಿದ್ದರೆ, 3,196 ಮಂದಿ ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆಗಳಲ್ಲಿ 13 ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದು, 1,122 ಮಂದಿ ಗಾಯಗೊಂಡಿದ್ದಾರೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸರ್ಕಾರವು ಅಪರಾಧ ಸಹಿಸುವುದಿಲ್ಲ. ಸಂಘಟಿತ ಅಪರಾಧಗಳನ್ನು ಸಂಪೂರ್ಣ ಹತ್ತಿಕ್ಕಲಾಗಿದೆ. ದರೋಡೆಕೋರ ಕಾಯ್ದೆಯಡಿ ₹1,500 ಕೋಟಿ ಮೌಲ್ಯದ ಅಕ್ರಮ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷದ ಜನವರಿಯಿಂದ ಇಲ್ಲಿಯವರೆಗೆ ವಶಪಡಿಸಿಕೊಂಡ ₹1,300 ಕೋಟಿಯ ಆಸ್ತಿಯನ್ನೂ ಇದು ಒಳಗೊಂಡಿದೆ’ ಎಂದು ಅವರು ಹೇಳಿದರು.

ದರೋಡೆಕೋರ ಕಾಯ್ದೆಯಡಿ 13,700ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ 43,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ವಾರಾಣಸಿ ವಲಯದಲ್ಲಿ 420 ಪ್ರಕರಣಗಳಿದ್ದು, ₹200 ಕೋಟಿಗೂ ಹೆಚ್ಚಿನ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಗೋರಖ್‌ಪುರ ವಲಯದಲ್ಲಿ 208 ಪ್ರಕರಣಗಳಲ್ಲಿ ₹264 ಕೋಟಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಅವಸ್ಥಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ, ತಿಂಗಳ ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಜನರ ಕುಂದುಕೊರತೆಗಳನ್ನು ಆಲಿಸಲು ಮತ್ತು ಅವುಗಳನ್ನು ಪರಿಹರಿಸಲು ‘ಠಾಣಾ/ ಸಮಾಧಾನ್ ದಿವಾಸ್’ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT