ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 14 ಪ್ರಾದೇಶಿಕ ಪಕ್ಷಗಳಿಗೆ ಚುನಾವಣಾ ಬಾಂಡ್‌ ಮೂಲಕ ₹447 ಕೋಟಿ

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ವರದಿಯಲ್ಲಿ ಉಲ್ಲೇಖ; ಟಿಆರ್‌ಎಸ್ ಮುಂದೆ
Last Updated 11 ಅಕ್ಟೋಬರ್ 2021, 19:32 IST
ಅಕ್ಷರ ಗಾತ್ರ

ನವದೆಹಲಿ: ದೇಶದ 14 ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ₹447.49 ಕೋಟಿ ಮೊತ್ತವನ್ನು2019-20ರಲ್ಲಿ ಸಂಗ್ರಹಿಸಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ವರದಿ ಮಾಡಿದೆ. ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್‌ ಮೂಲಕಗಳಿಸಿವೆ ಎಂದು ಎಡಿಆರ್‌ ವರದಿ ಹೇಳಿದೆ.

ಒಟ್ಟಾರೆ 42 ಪ್ರಾದೇಶಿಕ ಪಕ್ಷಗಳು ಈ ಅವಧಿಯಲ್ಲಿ ₹877.95 ಕೋಟಿ ಆದಾಯ ಗಳಿಸಿವೆ. ಆದರೆ ಟಿಆರ್‌ಎಸ್, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಜೆಡಿಯು, ಜೆಡಿಎಸ್‌ ಮತ್ತು ಆರ್‌ಜೆಡಿ ಸೇರಿದಂತೆ 14 ಪಕ್ಷಗಳು ಮಾತ್ರ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿವೆ.

ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ ಟಿಆರ್‌ಎಸ್ ಮುಂದಿದ್ದು, ₹89.15 ಕೋಟಿ ಗಳಿಸಿದೆ.

ಟಿಡಿಪಿ ₹81.60 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ₹74.35 ಕೋಟಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷವು ₹50.50 ಕೋಟಿ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ₹45.50 ಕೋಟಿ, ಶಿವಸೇನಾ ₹40.98 ಕೋಟಿ, ಎಎಪಿ ₹17.77 ಕೋಟಿ ಜೆಡಿಯು ₹13 ಕೋಟಿ ಪಡೆದಿವೆ.

ಆರ್‌ಜೆಡಿ ₹2.5 ಕೋಟಿ, ಸಮಾಜವಾದಿ ಪಕ್ಷವು ₹10.84 ಕೋಟಿ, ಎಐಎಡಿಎಂಕೆ ₹6.05 ಕೋಟಿಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಪಡೆದಿವೆ.

ಎಚ್‌.ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ₹7.50 ಕೋಟಿ, ಅಕಾಲಿದಳ ₹6.5 ಕೋಟಿ, ಜೆಎಂಎಂ ಪಕ್ಷವು ₹1 ಕೋಟಿ ದೇಣಿಗೆ ಪಡೆದಿವೆ.

ಎಡಿಆರ್‌ನ ಹಿಂದಿನ ವರದಿಯಲ್ಲಿ ನಾಲ್ಕು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎನ್‌ಸಿಪಿ ಚುನಾವಣಾ ಬಾಂಡ್‌ಗಳ ಮೂಲಕ ₹2,993.82 ಕೋಟಿ (ಶೇ 62.92) ದೇಣಿಗೆ ಸಂಗ್ರಹಿಸಿದ್ದವು ಎಂದು ತೋರಿಸಿತ್ತು.

2019-20ರಲ್ಲಿ ಆಡಳಿತಾರೂಢ ಬಿಜೆಪಿಯ ಆದಾಯವು ಶೇ 50.34ರಷ್ಟು ಏರಿಕೆಯಾಗಿ ₹3,623.28 ಕೋಟಿಗೆ ತಲುಪಿತ್ತು.

ಮೂರು ರಾಷ್ಟ್ರೀಯ ಪಕ್ಷಗಳಾದ ಸಿಪಿಎಂ, ಸಿಪಿಐ ಮತ್ತು ಬಿಎಸ್‌ಪಿ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆಯನ್ನು ಸ್ವೀಕರಿಸಲಿಲ್ಲ.

ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ (₹ ಕೋಟಿಗಳಲ್ಲಿ)

ಟಿಆರ್‌ಎಸ್;130.46

ಶಿವಸೇನಾ;111.40

ವೈಎಸ್‌ಆರ್ ಕಾಂಗ್ರೆಸ್;92.73

ಟಿಡಿಪಿ;91.53

ಬಿಜೆಡಿ;90.35

ವರದಿಯ ಇತರ ಅಂಶಗಳು

* 42 ಪಕ್ಷಗಳ ಒಟ್ಟು ಆದಾಯದಲ್ಲಿ ಅಗ್ರ ಐದು ಪಕ್ಷಗಳ ಆದಾಯದ ಪಾಲು ಶೇ 58.83ರಷ್ಟಿದೆ

* 11 ಪ್ರಾದೇಶಿಕ ಪಕ್ಷಗಳ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲ

* ತಮ್ಮ ಆದಾಯದ ಒಂದು ಭಾಗವನ್ನು 2019-20ರವರೆಗೆ ಖರ್ಚು ಮಾಡದೇ ಉಳಿಸಲಾಗಿದೆ ಎಂದು 24 ಪ್ರಾದೇಶಿಕ ಪಕ್ಷಗಳು ಘೋಷಿಸಿವೆ

* ಟಿಡಿಪಿ, ಬಿಜೆಡಿ, ಡಿಎಂಕೆ, ಎಸ್‌ಪಿ, ಜೆಡಿಎಸ್, ಎಜೆಎಸ್‌ಯು, ಜೆವಿಎಂಪಿ, ಐಎನ್‌ಎಲ್‌ಡಿ, ಪಿಎಂಕೆ, ಎಂಜಿಪಿ, ಜಿಎಫ್‌ಪಿ, ಎಸ್‌ಡಿಎಫ್, ಎಂಎನ್‌ಎಫ್, ಎಐಎಫ್‌ಬಿ, ಎನ್‌ಪಿಎಫ್, ಜೆಕೆಪಿಡಿಪಿ, ಐಪಿಎಫ್‌ಟಿ ಮತ್ತು ಎಂಪಿಸಿ ಒಳಗೊಂಡು 18 ಪ್ರಾದೇಶಿಕ ಪಕ್ಷಗಳು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿರುವುದಾಗಿ ಘೋಷಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT