ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಇಂಡಿಯಾ ಮುಖ್ಯಸ್ಥ ಹ್ಯಾರಿಸ್‌ ಫಾರೂಕಿ ಬಂಧನ

Published 21 ಮಾರ್ಚ್ 2024, 14:02 IST
Last Updated 21 ಮಾರ್ಚ್ 2024, 14:02 IST
ಅಕ್ಷರ ಗಾತ್ರ

ಗುವಾಹಟಿ: ‘ಇಸ್ಲಾಮಿಕ್ ಸ್ಟೇಟ್‌ ಇಂಡಿಯಾ (ಐಎಸ್‌ ಇಂಡಿಯಾ) ಮುಖ್ಯಸ್ಥನ ಬಂಧನಕ್ಕೆ ಇಲಾಖೆ ಭಾರಿ ಸಿದ್ಧತೆ ಮಾಡಿಕೊಂಡಿತ್ತು. ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿಯನ್ನು 15 ದಿನ ಕಾಲ ಕೂಲಂಕಷವಾಗಿ ವಿಶ್ಲೇಷಣೆಗೆ ಒಳಪಡಿಸಿದ ನಂತರ ಬಹಳ ಎಚ್ಚರಿಕೆಯಿಂದ ಕಾರ್ಯಾಚರಣೆಯನ್ನು ಕಾರ್ಯಗತ ಮಾಡಲಾಯಿತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಗುರುವಾರ ಹೇಳಿದ್ದಾರೆ.

‘ಯಾವುದೇ ರೀತಿಯ ನ್ಯೂನತೆಗಳಿಲ್ಲದಂತೆ ಯೋಜನೆ ರೂಪಿಸಲಾಗಿತ್ತು. ಯೋಜನೆಯನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪವಾಗದಂತೆಯೂ ಎಚ್ಚರಿಕೆ ತೆಗೆದುಕೊಂಡು ಐಎಸ್‌ ಇಂಡಿಯಾ ಮುಖಸ್ಥನನ್ನು ಅಸ್ಸಾಂನಲ್ಲಿ ಬಂಧಿಸಲಾಯಿತು’ ಎಂದು ಹೇಳಿದ್ದಾರೆ.

ಐಎಸ್‌ ಇಂಡಿಯಾ ಮುಖ್ಯಸ್ಥ ಹ್ಯಾರಿಸ್‌ ಫಾರೂಕಿ ಅಲಿಯಾಸ್‌ ಹರೀಶ್‌ ಅಜ್ಮಲ್ ಫಾರೂಕಿ, ಆತನ ಸಹಚರ ಅನುರಾಗ್‌ ಸಿಂಗ್‌ ಅಲಿಯಾಸ್‌ ರೇಹಾನ್‌ನನ್ನು ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ. ಈ ಇಬ್ಬರು ಉಗ್ರರು ಬಾಂಗ್ಲಾದೇಶ ಗಡಿ ದಾಟಿ, ಬಂದಿದ್ದರು.

ಕಾರ್ಯಾಚರಣೆ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅಸ್ಸಾಂ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಐಜಿ ಪಾರ್ಥಸಾರಥಿ ಮಹಂತ, ‘ಐಎಸ್‌ನ ಈ ಇಬ್ಬರು ಸದಸ್ಯರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಗಿದೆ’ ಎಂದರು.

ಪಾರ್ಥಸಾರಥಿ ಮಹಂತ ಅವರು ಇಡೀ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

‘ಈ ಇಬ್ಬರ ಕುರಿತು ಕೇಂದ್ರೀಯ ತನಿಖಾ ಸಂಸ್ಥೆಯು 15 ದಿನಗಳ ಹಿಂದೆ ಮಾಹಿತಿ ರವಾನಿಸಿತು. ಧುಬ್ರಿ ಜಿಲ್ಲೆಯ ಕೆಲ ಸ್ಥಳಗಳಲ್ಲಿ ಐಎಸ್‌ ನಾಯಕರ ಚಲನವಲನ ಕಂಡುಬರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ನೀಡಲಾಯಿತು’ ಎಂದು ಪಾರ್ಥಸಾರಥಿ ವಿವರಿಸಿದರು.

‘ಮಾರ್ಚ್ 18ರ ವೇಳೆಗೆ, ಎಲ್ಲ ಮಾಹಿತಿ ಸಂಗ್ರಹಿಸಿ, ಕ್ರೋಡೀಕರಿಸಲಾಗಿತ್ತು. ಮಾರ್ಚ್ 19ರಂದು ಈ ಇಬ್ಬರು ಉಗ್ರರ ಚಲನವಲನ ಕುರಿತು ನಿರ್ದಿಷ್ಟ ಮಾಹಿತಿ ಲಭಿಸಿದ ನಂತರ, ಧುಬ್ರಿ ಜಿಲ್ಲೆಯ ಧರ್ಮಶಾಲಾ ಸ್ಥಳಕ್ಕೆ ತೆರಳಿದೆವು’ ಎಂದರು.

‘ಮಾರ್ಚ್ 20ರಂದು ನಸುಕಿನ 4 ರ ವೇಳೆಗೆ ಇಬ್ಬರು ಪುರುಷರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಗಮ್ಯ ಸ್ಥಾನ ಸೇರುವ ಸಂಬಂಧ, ವಾಹನವೊಂದರ ಹುಡುಕಾಟದಲ್ಲಿದ್ದರು’ ಎಂದು ವಿವರಿಸಿದರು.

‘ಐಎಸ್‌ನ ಸದಸ್ಯರ ಭಾವಚಿತ್ರಗಳು ಅದಾಗಲೇ ಪೊಲೀಸರ ಬಳಿ ಇದ್ದವು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದವರು ಹಾಗೂ ಭಾವಚಿತ್ರಗಳಲ್ಲಿದ್ದವರು ಒಂದೇ ಎಂಬುದು ದೃಢಪಟ್ಟ ನಂತರ ಅವರನ್ನು ಬಂಧಿಸಿ, ಗುವಾಹಟಿಗೆ ಕರೆತರಲಾಯಿತು’ ಎಂದು ಹೇಳಿದರು.

ರೇಹಾನ್
ರೇಹಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT