ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ವರ್ಷ ಹಳೆಯ ಹಲ್ಲೆ ಪ್ರಕರಣ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು

Last Updated 19 ಮೇ 2022, 21:22 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಕಠಿಣ ಸಜೆಯನ್ನು ಗುರುವಾರ ವಿಧಿಸಿದೆ. 34 ವರ್ಷಗಳ ಹಿಂದೆ 65 ವರ್ಷ ವಯಸ್ಸಿನ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ‘ಕಾನೂನಿಗೆ ಶರಣಾಗುತ್ತೇನೆ’ ಎಂದು ಸಿಧು ಹೇಳಿದ್ದಾರೆ.

ಈ ಹಿಂದೆ, ಅವರಿಗೆ ₹1,000 ದಂಡವನ್ನು ಮಾತ್ರ ವಿಧಿಸಲಾಗಿತ್ತು.

2018ರ ತೀರ್ಪಿನಲ್ಲಿ ಲೋಪ ವಾಗಿದೆ ಎಂಬುದು ದಾಖಲೆಗಳನ್ನು ನೋಡಿದರೇ ತಿಳಿಯುತ್ತದೆ ಮತ್ತು ಈ ಲೋಪವನ್ನು ಸರಿಪಡಿಸುವ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಸಂಜಯ್‌ ಕಿಶನ್‌ ಕೌಲ್‌ ಅವರ ಪೀಠವು ಹೇಳಿದೆ.

ಸಿಧು ಅವರು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟಗಾರ. ಎತ್ತರದ ದಷ್ಟಪುಷ್ಟ ವ್ಯಕ್ತಿ. ತಮಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿಗೆ ತಮ್ಮ ಕೈಯಿಂದ ಹೊಡೆದರೆ ಎಷ್ಟು ಜೋರಾಗಿ ಏಟು ಬೀಳಬಹುದು ಎಂಬುದೆಲ್ಲ ಸಿಧು ಅವರಿಗೆ ತಿಳಿದಿತ್ತು ಎಂಬ ಮಹತ್ವದ ವಿಚಾರವನ್ನು ಕೋರ್ಟ್‌ ಆಗ ನಿರ್ಲಕ್ಷಿಸಿತ್ತು ಎಂದು ಪೀಠವು ವಿವರಿಸಿದೆ.

‘ಕುಸ್ತಿಪಟು ಅಥವಾ ಕ್ರೆಕೆಟಿಗ ಅಥವಾ ಅತ್ಯಂತ ದಷ್ಟಪುಷ್ಟವಾದ ವ್ಯಕ್ತಿಯು ತಮ್ಮ ಕೈಯನ್ನು ಹೊಡೆಯುವುದಕ್ಕೆ ಬಳಸಿದರೆ, ಆ ಕೈಯನ್ನು ಒಂದು ಆಯುಧ ಎಂದೇ ಪರಿಗಣಿಸಬಹುದು’ ಎಂದು ಕೋರ್ಟ್‌ ತಿಳಿಸಿದೆ.

‘ಅಂದಿನ ಸನ್ನಿವೇಶದಲ್ಲಿ ಸಂಯಮ ಕಳೆದುಹೋಗಿರಬಹುದು. ಆದರೆ, ಸಂಯಮ ಕಳೆದು ಹೋದುದರ ಪರಿಣಾಮವನ್ನು ಅನುಭವಿಸಲೇಬೇಕಾಗುತ್ತದೆ’ ಎಂದೂ ಪೀಠವು ಹೇಳಿದೆ.

ಅಪರಾಧದ ತೀವ್ರತೆಗೆ ಅನುಗುಣ ವಾಗಿಯೇ ಶಿಕ್ಷೆ ವಿಧಿಸಬೇಕಾಗುತ್ತದೆ. ಅತ್ಯಂತ ಕಡಿಮೆ ಪ್ರಮಾಣದ ಶಿಕ್ಷೆಯು ಅಪರಾಧದ ಸಂತ್ರಸ್ತರನ್ನು ಅವಮಾನಿಸುತ್ತದೆ ಮತ್ತು ಹತಾಶಗೊಳಿಸುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಸಿಧು ಮತ್ತು ಅವರ ಗೆಳೆಯ ರೂಪಿಂದರ್‌ ಸಿಂಗ್‌ ಸಂಧು ಅವರು ಪಟಿಯಾಲಾದಲ್ಲಿ 1988ರ ಡಿಸೆಂಬರ್‌ 27ರಂದು ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಜಿಪ್ಸಿಯಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಗುರ್ನಾಮ್‌ ಸಿಂಗ್‌ ಮತ್ತು ಇತರ ಇಬ್ಬರು ಕಾರಿನಲ್ಲಿ ಅಲ್ಲಿಗೆ ಬಂದರು. ರಸ್ತೆ ಮಧ್ಯದಿಂದ ಜಿಪ್ಸಿ ತೆಗೆಯುವಂತೆ ಸಿಧು ಮತ್ತು ಸಂಧು ಅವರನ್ನು ಗುರ್ನಾಮ್‌ ಕೋರಿದ್ದರು. ಇದರಿಂದ ವಾಗ್ವಾದ ನಡೆದು, ಸಿಧು ಅವರು ಗುರ್ನಾಮ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಆರೋಪಿಸಿತ್ತು.

ಗುರ್ನಾಮ್‌ ಸಿಂಗ್‌ ಅವರು ಆಸ್ಪತ್ರೆಯಲ್ಲಿ ನಂತರ ಮೃತಪಟ್ಟರು. ಪಟಿಯಾಲದ ಸೆಷನ್ಸ್‌ ನ್ಯಾಯಾಲಯವು ಸಿಧು ಅವರನ್ನು 1999ರಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪಂಜಾಬ್‌–ಹರಿಯಾಣ ಹೈಕೋರ್ಟ್‌, ಸಿಧು ಅವರಿಗೆ 2006ರಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿತ್ತು.

ಸಿಧು ಅವರು ಸುಪ್ರೀಂ ಕೋರ್ಟ್‌ಗೆ 2018ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣವು 30 ವರ್ಷ ಹಳೆಯದು ಮತ್ತು ಸಿಧು ಅವರು ಆಯುಧವನ್ನೇನೂ ಬಳಸಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್‌, ಶಿಕ್ಷೆಯನ್ನು ರದ್ದು ಮಾಡಿತು. ₹1,000 ದಂಡವನ್ನು ಮಾತ್ರ ವಿಧಿಸಿತು. ಈ ಆದೇಶವನ್ನು ಮರುಪರಿಶೀಲಿಸಬೇಕು ಮತ್ತು ಸಿಧು ಅವರ ವಿರುದ್ಧ ಹೆಚ್ಚು ಗುರುತರವಾದ ಆರೋಪಗಳನ್ನು ಹೊರಿಸಬೇಕು ಎಂದು ಗುರ್ನಾಮ್‌ ಅವರ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸಿಧು ವಿರೋಧಿಸಿದ್ದರು. ಈಗ ಅದೇ ಅರ್ಜಿಯ ಆಧಾರದಲ್ಲಿ ಸಿಧು ಅವರಿಗೆ ಶಿಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT