ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಸೌರ್‌ ಬಾಲಕಿ ಅತ್ಯಾಚಾರ ಪ್ರಕರಣ: ಇಬ್ಬರಿಗೆ ಗಲ್ಲು

Last Updated 21 ಆಗಸ್ಟ್ 2018, 11:37 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶದ ಮಂದಸೌರ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಮಂದಸೌರ್‌ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಎರಡು ತಿಂಗಳಿಗೂ ಕಡಿಮೆ ಸಮಯದಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಹೊರಬಂದಿದೆ.

ಜೂನ್‌ 26ರಂದು ಶಾಲೆಯ ಹೊರಗೆ ತನ್ನ ಪಾಲಕರಿಗಾಗಿ ಕಾಯುತ್ತ ನಿಂತಿದ್ದ ಎರಡನೇ ತರಗತಿ ವಿದ್ಯಾರ್ಥಿಯನ್ನು ಎಳೆದು ಕರೆದೊಯ್ದಿದ್ದ ಇಬ್ಬರು ದಾಂಡಿಗರು, ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹಿಂಸಿಸಿದ್ದರು. ಆಕೆಯನ್ನು ಬಿಟ್ಟು ಹೊರಡುವುದಕ್ಕೂ ಮುನ್ನ ಕುತ್ತಿಗೆ ಸೀಳಿ ಕ್ರೌರ್ಯ ಮೆರೆದಿದ್ದರು. ಈ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಧ್ಯ ಪ್ರದೇಶದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್‌, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರವನ್ನು ಒತ್ತಾಯಿಸಿತ್ತು.

ಬಾಲಕಿ ಬಗ್ಗೆ ಮಾಹಿತಿ ದೊರೆತ 24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಘಟನೆ ನಡೆದ ಸ್ಥಳಗಳ ಸುತ್ತಲಿನ ಮನೆಗಳಿಂದ ಸಿಸಿಟಿವಿ ದೃಶ್ಯವಾಳಿ ಹಾಗೂ ಫೋಟೋಗಳನ್ನು ಗಮನಿಸಿ ಇರ್ಫಾನ್‌(20) ಮತ್ತು ಆಸಿಫ್‌(24)ನನ್ನು ಗುರುತಿಸಿ ಪತ್ತೆ ಮಾಡಲಾಯಿತು. ಆರೋಪಿಗಳನ್ನು ಧರಿಸಿದ್ದ ಶೂಗಳ ಬ್ರಾಂಡ್‌ನ್ನು ಸಿಸಿಟಿವಿ ದೃಶ್ಯಗಳಿಂದ ಗುರುತಿಸಿದ್ದ ಪೊಲೀಸರಿಗೆ, ಆರೋಪಿಗಳನ್ನು ಹಿಡಿಯಲು ಅದೇ ಪ್ರಮುಖ ಸಾಕ್ಷ್ಯಯಾಗಿತ್ತು.

ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ, ಕಳೆದ ತಿಂಗಳು ಇಬ್ಬರು ಆರೋಪಿಗಳ ವಿರುದ್ಧ 500 ಪುಟಗಳ ಆರೋಪ ಪಟ್ಟಿ ಸಲ್ಲಿಸಿತ್ತು. 20 ವರ್ಷ ವಯಸ್ಸಿನ ಆರೋಪಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಗಳು, ಇತರೆ ವಿಡಿಯೊಗಳು, ಪರೀಕ್ಷೆಗೆ ಒಳಪಡಿಸಿದ ಕೂದಲು ಸೇರಿ ಇತರ ದಾಖಲೆಗಳನ್ನು ಸಲ್ಲಿಸಿದ್ದರು.

ಬಾಲಕಿಯ ಕುತ್ತಿಗೆ, ಮುಖ, ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಇಂದೋರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಫಾಸ್ಟ್‌ ಟ್ರಾಕ್‌ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವಂತೆ ಹಾಗೂ ಶೀಘ್ರ ವಿಚಾರಣೆ ಸಂಬಂಧ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೆ ಮಧ್ಯ ಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಪತ್ರ ಬರೆದಿದ್ದರು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆಯೂ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT