ಜಮ್ಮು: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಜಮ್ಮುವಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಕಪೋರಾದ ಹಾಜಿಬಲ್ ಗ್ರಾಮದ ನಿವಾಸಿ ಬಿಲಾಲ್ ಅಹ್ಮದ್ ಕುಚೆ(32) ಮೃತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ 19 ಆರೋಪಿಗಳಲ್ಲಿ ಬಿಲಾಲ್ ಒಬ್ಬನಾಗಿದ್ದಾನು.
ಕಿಶ್ತ್ವಾರ್ ಜಿಲ್ಲಾ ಕಾರಾಗೃಹದಲ್ಲಿದ್ದಾಗ ಅನಾರೋಗ್ಯಕ್ಕೆ ಒಳಗಾಗಿದ್ದ ಬಿಲಾಲ್‌ನನ್ನು ಸೆಪ್ಟೆಂಬರ್ 17 ರಂದು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ರಾತ್ರಿ ಬಿಲಾಲ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಪ್ರಕರಣ ಸಂಬಂಧ ಬಿಲಾಲ್ ಸೇರಿ ಇತರ 18 ಆರೋಪಿಗಳ ವಿರುದ್ಧ 2020ರ ಆಗಸ್ಟ್ 25ರಂದು ಎನ್‌ಐಎ ದೋಷಾರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಏಳು ಮಂದಿಯಲ್ಲಿ ಈತನೂ ಒಬ್ಬನಾಗಿದ್ದಾನೆ.
2019ರ ಫೆಬ್ರುವರಿ 14ರಂದು ಪುಲ್ವಾಮಾದ ಲೆತಫೋರಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ ಮೂಲದ ಜೈಷ್–ಇ–ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕನೊಬ್ಬ ಸ್ಪೋಟಕ ತುಂಬಿದ್ದ ಕಾರನ್ನು ಸಿಆರ್‌ಪಿಎಫ್ ವಾಹನಕ್ಕೆ ನುಗ್ಗಿಸಿ ದಾಳಿ ನಡೆಸಿದ್ದನು.