ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ | ನಮಾಜ್‌ ಮಾಡಿದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಮತ್ತೆ ಮೂವರ ಬಂಧನ

Published 18 ಮಾರ್ಚ್ 2024, 10:21 IST
Last Updated 18 ಮಾರ್ಚ್ 2024, 10:21 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡಿದ್ದಕ್ಕೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಕ್ಷಿತಿಜ್ ಪಾಂಡೆ (22), ಜಿತೇಂದ್ರ ಪಟೇಲ್ (31) ಮತ್ತು ಸಾಹಿಲ್ ದುಧಾತಿಯಾ (21) ಎಂದು ಗುರುತಿಸಲಾಗಿದ್ದು, ಎಲ್ಲರೂ ಅಹಮದಾಬಾದ್ ನಿವಾಸಿಗಳಾಗಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಅಪರಾಧ ವಿಭಾಗವು ಭಾನುವಾರ ಹಿತೇಶ್ ಮೇವಾಡ ಮತ್ತು ಭರತ್ ಪಟೇಲ್ ಅವರನ್ನು ಬಂಧಿಸಿತ್ತು.

ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬಂದಿರುವ ಹಲವು ದೇಶಗಳ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಅವರ ಮೇಲೆ ಗುಂಪೊಂದು ಶನಿವಾರ ರಾತ್ರಿ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಗಾಯಗೊಂಡ ಶ್ರೀಲಂಕಾ ಮತ್ತು ತಜಿಕಿಸ್ತಾನದ ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗುಜರಾತ್ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದನ್ನು ನಾಗರಿಕ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ. ಹಲ್ಲೆ ಮಾಡಿದವರನ್ನು ಮತ್ತು ಹಲ್ಲೆ ತಡೆಯಲು ವಿಫಲರಾದ ಪೊಲೀಸರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿದೇಶಿ ವಿದ್ಯಾರ್ಥಿಗಳ ಸ್ಥಳಾಂತರ

ಅಹಮದಾಬಾದ್: ನಮಾಜ್ ಮಾಡಿದ್ದಕ್ಕೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆಯ ಹಿನ್ನೆಲೆಯಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿನ ವಿದೇಶಿ ವಿದ್ಯಾರ್ಥಿಗಳನ್ನು ಹೊಸ ವಸತಿ ನಿಲಯಕ್ಕೆ ಸ್ಥಳಾಂತರಿಸಲು ಮತ್ತು ವಿದೇಶಿ ವಿದ್ಯಾರ್ಥಿ ಸಲಹಾ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ನಿವೃತ್ತ ಸೇನಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ವಸತಿ ನಿಲಯಗಳ ಭದ್ರತೆಯನ್ನು ಹೆಚ್ಚಿಸುವಂತೆಯೂ ವಿ.ವಿ.ಯು ಭದ್ರತಾ ಸಂಸ್ಥೆಗಳಿಗೆ ತಿಳಿಸಿದೆ. ವಿದೇಶಿ ವಿದ್ಯಾರ್ಥಿಗಳನ್ನು ಮೂರು ದಿನದಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ವಿದ್ಯಾರ್ಥಿಗಳಿಗೆ ಮೀಸಲಾದ ವಸತಿ ನಿಲಯಕ್ಕೆ ಸ್ಥಳಾಂತರಿಸಬೇಕೆಂದು ತೀರ್ಮಾನಿಸಲಾಗಿದೆ ಎಂದು ವಿ.ವಿ ಉಪಕುಲಪತಿ ನೀರಜಾ ಗುಪ್ತಾ ಹೇಳಿದ್ದಾರೆ.  ‘ವಸತಿ ನಿಲಯದ ಎ–ಬ್ಲಾಕ್‌ನಲ್ಲಿ 75 ವಿದೇಶಿ ವಿದ್ಯಾರ್ಥಿಗಳಿದ್ದು ಶನಿವಾರ ರಾತ್ರಿ ಅಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ನಂತರ ಘರ್ಷಣೆ ಹೆಚ್ಚಾಗಿ ಕೆಲವು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡರು’ ಎಂದು ನೀರಜಾ ಗುಪ್ತಾ ತಿಳಿಸಿದ್ದಾರೆ.

‘ನ್ಯಾಯಾಲಯವು ತನಿಖಾ ಸಂಸ್ಥೆಯಲ್ಲ’

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಬೇಕೆಂದು ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. ಅನಿರುದ್ಧ ಪಿ.ಮಯೀ ಅವರಿದ್ದ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ‘ನ್ಯಾಯಾಲಯವನ್ನು ತನಿಖಾ ಸಂಸ್ಥೆಯಲ್ಲ. ಕೋರ್ಟ್ ಅನ್ನು ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಬದಲಿಸಬೇಡಿ. ನಾವು ತನಿಖಾಧಿಕಾರಿಗಳಲ್ಲ’ ಎಂದು ಪೀಠವು ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT