ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ವಿ.ವಿಯಲ್ಲಿ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

Published 17 ಮಾರ್ಚ್ 2024, 9:15 IST
Last Updated 17 ಮಾರ್ಚ್ 2024, 9:15 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡಿದ್ದಕ್ಕೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಇದು ನಡೆದಿದೆ. ಶ್ರೀಲಂಕಾ ಮತ್ತು ತಜಿಕಿಸ್ತಾನದ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘20–25 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಹಲ್ಲೆ ಕುರಿತು ತನಿಖೆಗೆ ಒಂಬತ್ತು ತಂಡಗಳನ್ನು ರಚಿಸಲಾಗಿದೆ. ಗೃಹ ಸಚಿವ ಹರ್ಷ್‌ ಸಾಂಘ್ವಿ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದು, ಘಟನೆಗೆ ಕಾರಣದರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ’ ಎಂದು ಪೊಲೀಸ್‌ ಆಯುಕ್ತ ಜಿ.ಎಸ್‌. ಮಲಿಕ್ ಹೇಳಿದರು.

‘ಶನಿವಾರ ರಾತ್ರಿ 10.50ರ ಸುಮಾರಿಗೆ ಘಟನೆ ನಡೆದಿದೆ. ಈ ವೇಳೆ ವಿದೇಶಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದರು. ಹಾಸ್ಟೆಲ್‌ ಆವರಣಕ್ಕೆ ನುಗ್ಗಿದ ಗುಂಪು, ನಮಾಜ್‌ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಮಸೀದಿಯಲ್ಲಿ ನಮಾಜ್‌ ಮಾಡುವಂತೆ ಹೇಳಿ ಹಲ್ಲೆ ನಡೆಸಿದೆ. ಕೆಲವರು ಹಾಸ್ಟೆಲ್‌ನತ್ತ ಕಲ್ಲು ತೂರಾಟ ನಡೆಸಿದ್ದಾರೆ. ವಿದ್ಯಾರ್ಥಿಗಳ ಕೊಠಡಿಗಳಿಗೆ ನುಗ್ಗಿ ಅಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ’ ಎಂದು ತಿಳಿಸಿದರು. 

ಅಫ್ಗಾನಿಸ್ತಾನ, ಉಜ್ಬೆಕಿಸ್ತಾನ, ತಜಿಕಿಸ್ತಾನ, ಶ್ರೀಲಂಕಾ ಮತ್ತು ಆಫ್ರಿಕಾ ಸೇರಿದಂತೆ ವಿದೇಶದ ಸುಮಾರು 300 ವಿದ್ಯಾರ್ಥಿಗಳು ಗುಜರಾತ್‌ ವಿ.ವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆಯು ಹಾಸ್ಟೆಲ್‌ನ ‘ಎ’ ಬ್ಲಾಕ್‌ನಲ್ಲಿ ನಡೆದಿದ್ದು, ಅಲ್ಲಿ ವಿದೇಶದ ಸುಮಾರು 75 ವಿದ್ಯಾರ್ಥಿಗಳು ತಂಗಿದ್ದಾರೆ. 

‘ಘಟನೆ ಬಗ್ಗೆ 10.51ರ ವೇಳೆಗೆ ಕಂಟ್ರೋಲ್‌ ರೂಂಗೆ ಕರೆ ಬಂದಿದ್ದು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ಧಾರೆ. ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ತನಿಖೆಗೆ ಕ್ರೈಂ ಬ್ರಾಂಚ್‌ನ ನಾಲ್ಕು ಹಾಗೂ ಡಿಸಿಪಿ ನೇತೃತ್ವದಲ್ಲಿ ಸ್ಥಳೀಯ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT