ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ನೇ ಲೋಕಸಭೆ: 45 ಮಸೂದೆಗಳು ಮಂಡನೆಯಾದ ದಿನವೇ ಅಂಗೀಕಾರ

ಎಡಿಆರ್‌ ಮತ್ತು ಎನ್‍ಇಡಬ್ಲ್ಯು ವಿಶ್ಲೇಷಣಾತ್ಮಕ ವರದಿ
Published 27 ಮಾರ್ಚ್ 2024, 11:45 IST
Last Updated 27 ಮಾರ್ಚ್ 2024, 11:45 IST
ಅಕ್ಷರ ಗಾತ್ರ

ನವದೆಹಲಿ: 17ನೇ ಲೋಕಸಭೆಯಲ್ಲಿ ಒಟ್ಟು 222 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ 45 ಮಸೂದೆಗಳು ಮಂಡನೆಯಾದ ದಿನವೇ ಅಂಗೀಕಾರವಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ತಿಳಿಸಿದೆ.

ಎಡಿಆರ್‌ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‍ಇಡಬ್ಲ್ಯು) ನಡೆಸಿರುವ ವಿಶ್ಲೇಷಣಾತ್ಮಕ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದ್ದು, ಇದು 17ನೇ ಲೋಕಸಭೆ ಮತ್ತು ಅದರ ಸದಸ್ಯರ ಕಾರ್ಯನಿರ್ವಹಣೆ ಬಗ್ಗೆ ಬೆಳಕು ಚೆಲ್ಲಿದೆ.

ವರದಿ ಪ್ರಕಾರ, 17ನೇ ಲೋಕಸಭಾ ಅವಧಿಯಲ್ಲಿ ಒಟ್ಟು 240 ಮಸೂದೆಗಳನ್ನು ಮಂಡಿಸಲಾಗಿತ್ತು. ಈ ಪೈಕಿ 222 ಮಸೂದೆಗಳನ್ನು ಅಂಗೀಕರಿಸಲಾಗಿದೆ. 11 ಮಸೂದೆಗಳನ್ನು ಹಿಂಪಡೆಯಲಾಗಿದೆ, ಆರು ಬಾಕಿ ಉಳಿದಿವೆ. ಒಂದು ಮಸೂದೆಗೆ ಮಾತ್ರ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ.

ಈ ಪೈಕಿ ಧನ ವಿನಿಯೋಗ ಮಸೂದೆಗಳು, ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ–2023 ಮತ್ತು ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ–2021 ಸಹ ಸೇರಿವೆ.

ಛತ್ತೀಸಗಢ ಸಂಸದರಿಂದ ಗರಿಷ್ಠ ಹಾಜರಾತಿ

17ನೇ ಲೋಕಸಭಾ ಅವಧಿಯಲ್ಲಿ ಸಂಸದರೊಬ್ಬರು ಸರಾಸರಿ 165 ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು 273 ಕಲಾಪಗಳ ಪೈಕಿ 189 ಕಲಾಪಗಳಿಗೆ ಹಾಜರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಛತ್ತೀಸಗಢದ ಸಂಸದರು ಸರಾಸರಿ ಗರಿಷ್ಠ ಹಾಜರಾತಿ ಹೊಂದಿದ್ದು, ರಾಜ್ಯದ 11 ಜನಪ್ರತಿನಿಧಿಗಳು 216 ಕಲಾಪಗಳಿಗೆ ಹಾಜರಾಗಿದ್ದಾರೆ. ಅರುಣಾಚಲ ಪ್ರದೇಶದ ಸಂಸದರು ಸರಾಸರಿ ಕನಿಷ್ಠ ಹಾಜರಾತಿ ಹೊಂದಿದ್ದು, ರಾಜ್ಯದ ಇಬ್ಬರು ಸಂಸದರು 127 ಕಲಾಪಗಳಿಗೆ ಮಾತ್ರವೇ ಹಾಜರಾಗಿದ್ದಾರೆ.

ವರದಿ ಪ್ರಕಾರ, ಮಹಾರಾಷ್ಟ್ರದ 49 ಸಂಸದರು ಸರಾಸರಿ ತಲಾ 315 ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ಮಣಿಪುರದ ಸಂಸದರು ಸರಾಸರಿ ತಲಾ 25 ಪ್ರಶ್ನೆಗಳನ್ನಷ್ಟೇ ಕೇಳಿದ್ದಾರೆ.

ಅತಿ ಹೆಚ್ಚು ಪ್ರಶ್ನೆ ಕೇಳಿದ ಪಕ್ಷಗಳ ಪೈಕಿ ಎನ್‌ಸಿಪಿ ಮೊದಲ ಸ್ಥಾನದಲ್ಲಿದ್ದು, ಐವರು ಸಂಸದರು ಸರಾಸರಿ ತಲಾ 410 ಪ್ರಶ್ನೆ ಕೇಳಿದ್ದಾರೆ. ಅಪ್ನಾ ದಳದ ಇಬ್ಬರು ಸಂಸದರು ಸರಾಸರಿ ತಲಾ ಐದು ಪ್ರಶ್ನೆಗಳನ್ನಷ್ಟೇ ಕೇಳಿದ್ದಾರೆ.

ಸಂಸತ್ ಕಲಾಪದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಪ್ರಮುಖ 10 ಸಂಸದರ ಪೈಕಿ ಬಿಜೆಪಿ ಸಂಸದ ಸುಕಾಂತ ಮುಜುಂದಾರ್‌ 596 ಪಶ್ನೆಗಳನ್ನು ಕೇಳುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT