ರಾಯಪುರ: ಛತ್ತೀಸ್‌ಗಢದಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ) ಸ್ಫೋಟಗೊಂಡ ಪರಿಣಾಮ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಿಜಾಪುರ ಜಿಲ್ಲೆಯ ತಾರೇಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಸಿಆರ್‌ಪಿಎಫ್ ಶಿಬಿರದಿಂದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಐಇಡಿ ಸ್ಪೋಟಗೊಂಡಿದೆ. ಈ ವೇಳೆ ಸಿಬ್ಬಂದಿ ಗಾಯಗೊಂಡಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ, ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐಇಡಿಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲು ನಡೆಸಿದ ಮೈನಿಂಗ್ ಕಾರ್ಯಾಚರಣೆಯಲ್ಲಿ, ಭದ್ರತಾ ಸಿಬ್ಬಂದಿಯೊಬ್ಬರ ಕಾಲಿಗೆ ಐಇಡಿ ಸಂಪರ್ಕ ಹೊಂದಿದ ತಂತಿ ತಗುಲಿದ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದರು.