ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ದೇಶದಲ್ಲಿ ಒಂದೇ ದಿನ 7,830 ಹೊಸ ಪ್ರಕರಣಗಳು ಪತ್ತೆ

Last Updated 13 ಏಪ್ರಿಲ್ 2023, 4:51 IST
ಅಕ್ಷರ ಗಾತ್ರ

ನವದೆಹಲಿ/ ಮುಂಬೈ: ದೇಶದಲ್ಲಿ ಕೋವಿಡ್‌ ಸೋಂಕು ನಿರ್ಮೂಲನೆಯ ಘಟ್ಟ ತಲುಪಿದೆ ಎಂಬ ಆರೋಗ್ಯ ತಜ್ಞರ ಹೇಳಿಕೆಯ ಬೆನ್ನಲ್ಲೇ ಬುಧವಾರ ಒಂದೇ ದಿನ 7,830 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ 1ರಂದು ದೇಶದಲ್ಲಿ 7,946 ಪ್ರಕರಣಗಳು ದಾಖಲಾಗಿದ್ದವು. ಏಳು ತಿಂಗಳ ಬಳಿಕ ಒಂದೇ ದಿನದಲ್ಲಿ ದೇಶದಲ್ಲಿ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿವೆ.

ನೆರೆಯ ಮಹಾರಾಷ್ಟ್ರದಲ್ಲೂ ಒಂದೇ ದಿನ ಸೋಂಕಿತರ ಸಂಖ್ಯೆ ಒಂದು ಸಾವಿರ ಗಡಿ ದಾಟಿದ್ದು, ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1,115 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,421ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಮುಂಬೈನಲ್ಲಿ 320 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ. ಹಾಗಾಗಿ, ಜನರು ಪರಸ್ಪರ ವ್ಯವಹರಿಸುವಾಗ ಗುಂಪುಗೂಡಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಒಳಿತು. ಜೊತೆಗೆ, ಕೋವಿಡ್‌ ನಿರ್ಬಂಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಕಟ್ಟೆಚ್ಚರ ನೀಡಿದೆ.

ಓಮೈಕ್ರಾನ್‌ ಉಪ ತಳಿ ಹಾವಳಿ: ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ. ಆದರೂ, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ದಿಟ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ ಇದೆ. ಸೋಂಕು ಉಲ್ಬಣಕ್ಕೆ ಓಮೈಕ್ರಾನ್‌ನ ಉಪ ತಳಿಯಾದ ಎಕ್ಸ್‌ಬಿಬಿ.1.16 ಕಾರಣ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 40,215ಕ್ಕೆ ಮಟ್ಟಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,31,016ಕ್ಕೇರಿದೆ. ಸೋಂಕು ಹರಡುವಿಕೆ ಪ್ರಮಾಣ ಶೇ 0.09ರಷ್ಟಿದ್ದು, ಚೇತರಿಕೆ ಪ್ರಮಾಣ ಶೇ 98.72ರಷ್ಟಿದೆ. ಮರಣ ಪ್ರಮಾಣ ದರ ಶೇ 1.19ರಷ್ಟಿದೆ. ಇಲ್ಲಿಯವರೆಗೆ 4.47 ಕೋಟಿ ಜನರು ಸೋಂಕಿಗೆ ಒಳಪಟ್ಟಿದ್ದಾರೆ ಎಂದು ತಿಳಿಸಿದೆ.

ಓಮೈಕ್ರಾನ್‌ ಹಾಗೂ ಅದರ ಉಪ ತಳಿಗಳ ಪ್ರಭಾವ ದಟ್ಟವಾಗಿದೆ. ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಎಕ್ಸ್‌ಬಿಬಿ.1.16 ಉಪ ತಳಿಯ ಹರಡುವಿಕೆ ಪ್ರಮಾಣ 21.6ರಷ್ಟಿತ್ತು. ಮಾರ್ಚ್‌ನಲ್ಲಿ ಇದು 35.8ಕ್ಕೆ ತಲುಪಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT