ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ ಪ್ರದೇಶ: ಭಾರಿ ಮಳೆಗೆ 8 ಸಾವು

ವಿಜಯವಾಡದಲ್ಲಿ 200 ವರ್ಷಗಳಲ್ಲಿ ಗರಿಷ್ಠ ಮಳೆ ದಾಖಲು
Published 31 ಆಗಸ್ಟ್ 2024, 15:41 IST
Last Updated 31 ಆಗಸ್ಟ್ 2024, 15:41 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಶುಕ್ರವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿತ ಅವಘ‌ಡಗಳಿಂದ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ.

ವಿಜಯವಾಡದ ಸುನ್ನಪ್ಪುಬಟ್ಟಿಲ ಸೆಂಟರ್‌ನಲ್ಲಿ ಮನೆಯೊಂದರ ಮೇಲೆ ಬೃಹತ್‌ ಬಂಡೆಯೊಂದು ಉರುಳಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳೀಯ ಆಡಳಿತವು ಭಾರಿ ಯಂತ್ರೋಪಕರಣಗಳನ್ನು ಬಳಸಿ ಮನೆಯ ಅವಶೇಷಗಳನ್ನು ತೆರವುಗೊಳಿಸುವ ಮೂಲಕ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಗುಂಟೂರು ಜಿಲ್ಲೆಯ ಉಪ್ಪಲಪಾಡುವಿನಲ್ಲಿ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಚಲಿಸುತ್ತಿದ್ದ ಕಾರು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಮೃತರನ್ನು ನೆಡುಂಪಲ್ಲಿ ರಾಘವೇಂದ್ರ(38), ಪಸುಪುಲೆಟಿ ಸೌದಿ(6) ಮತ್ತು ಕೋಡೂರಿ ಮಾನ್ವಿತ್‌(9) ಎಂದು ಗುರುತಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಮಂಗಳಗಿರಿಯ ಗಂಡಾಲಯ್ಯಪೇಟದಲ್ಲಿ ಭೂಕುಸಿತಕ್ಕೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ.

ವಿಜಯವಾಡ ನಗರದ ಪೂರ್ವ ಭಾಗದಲ್ಲಿನ ಬೆಂಜ್‌ ವೃತ್ತದಲ್ಲಿ ಕಳೆದ 24 ಗಂಟೆಗಳಲ್ಲಿ 16 ಸೆಂ.ಮೀಗೂ ಹೆಚ್ಚು ಮಳೆಯಾಗಿದ್ದು, ಇದು ಆಗಸ್ಟ್‌ ತಿಂಗಳ ಒಂದೇ ದಿನದಲ್ಲಿ ಈವರೆಗೆ ಸುರಿದ ಅತಿ ಹೆಚ್ಚಿನ ಮಳೆಯಾಗಿದೆ. ವಿಜಯವಾಡ ವಿಮಾನ ನಿಲ್ದಾಣದಲ್ಲಿ 123 ಮಿ.ಮೀ. ಮಳೆಯಾಗಿದ್ದು, ಕಳೆದ 200 ವರ್ಷಗಳಲ್ಲಿ ಆಗಸ್ಟ್‌ ತಿಂಗಳ ದಿನವೊಂದರಲ್ಲಿ ಸುರಿದ ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದು ಆಂಧ್ರಪ್ರದೇಶದ ಹವಾಮಾನ ಪುರುಷ ಎಂದೇ ಹೆಸರಾಗಿರುವ ಕೆ. ಪ್ರಣೀತ್‌ ತಿಳಿಸಿದ್ದಾರೆ. 

ಪರಿಹಾರ ಘೋಷಣೆ: ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆಂಧ್ರಪ್ರದೇಶ ಸರ್ಕಾರವು ₹5 ಲಕ್ಷ ಪರಿಹಾರ ಘೋಷಿಸಿದೆ. ಇನ್ನೂ 2–3 ದಿನ ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಳೆ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.

ಸೆಪ್ಟಂಬರ್‌ನಲ್ಲೂ ವಾಡಿಕೆಗಿಂತ ಹೆಚ್ಚು ಮಳೆ

ನವದೆಹಲಿ: ದೇಶದಲ್ಲಿ ಸೆಪ್ಟಂಬರ್‌ ತಿಂಗಳಿನಲ್ಲಿಯೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಬಹುತೇಕ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಉತ್ತರಾಖಂಡ ಹಿಮಾಚಲ ಪ್ರದೇಶ ಜಮ್ಮು ಮತ್ತು ಕಾಶ್ಮೀರ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸೆಪ್ಟಂಬರ್‌ ತಿಂಗಳಿನಲ್ಲಿ ಭಾರಿ ಮಳೆಯಾಗಲಿದೆ. ಬಿಹಾರದ ಉತ್ತರ ಭೂಭಾಗ ಉತ್ತರ ಪ್ರದೇಶದ ಈಶಾನ್ಯ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಆಗಸ್ಟ್‌ ತಿಂಗಳಿನಲ್ಲಿ ಶೇ 16 ಹೆಚ್ಚು ಮಳೆ

ದೇಶದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಸರಾಸರಿ 749 ಮಿ.ಮೀ. ಮಳೆ ಸುರಿದಿದೆ. ಇದು ವಾಡಿಕೆಗಿಂತ (701. ಮಿ.ಮೀ.) ಶೇ 16 ಹೆಚ್ಚಾಗಿದೆ. ವಾಯುವ್ಯ ಭಾರತದಲ್ಲಿ 253.9 ಮಿ.ಮೀ. ಮಳೆಯಾಗಿದ್ದು 2001ರ ಬಳಿಕ ಆಗಸ್ಟ್‌ ತಿಂಗಳಿನಲ್ಲಿ ಸುರಿದ ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್‌ ಮಹಾಪಾತ್ರ ಶನಿವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT