ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ: 4 ತಿಂಗಳಲ್ಲಿ 80 ಮಂದಿ ನಕ್ಸಲರ ಹತ್ಯೆ

Published 18 ಏಪ್ರಿಲ್ 2024, 14:10 IST
Last Updated 18 ಏಪ್ರಿಲ್ 2024, 14:10 IST
ಅಕ್ಷರ ಗಾತ್ರ

ನವದೆಹಲಿ: ಛತ್ತೀಸಗಢದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 80 ನಕ್ಸಲರ ಹತ್ಯೆಯಾಗಿದ್ದು, 125 ಜನರನ್ನು ಬಂಧಿಸಲಾಗಿದೆ. ಅಲ್ಲದೆ 150ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. ‌ರಾಜ್ಯದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಭದ್ರತಾ ಪಡೆಗಳು 29 ಮಂದಿ ನಕ್ಸಲರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ.

ಛತ್ತೀಸಗಢದಲ್ಲಿ 2023ರ ಡಿಸೆಂಬರ್‌ನಲ್ಲಿ ವಿಷ್ಣುದೇವ್ ಸಾಯ್‌ ಸರ್ಕಾರ ರಚನೆ ಆದಾಗಿನಿಂದ ನಕ್ಸಲರ ವಿರುದ್ಧ ಸಕ್ರಿಯ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಎಡಪಂಥೀಯ ಉಗ್ರ ಸಂಘಟನೆಗಳ ಹಿಂಸಾಚಾರವು ದೇಶದಲ್ಲಿ ಶೇ 52ರಷ್ಟು ಕಡಿಮೆಯಾಗಿದ್ದರೆ, ನಾಗರಿಕರ ಸಾವಿನ ಪ್ರಮಾಣ ಶೇ 69ರಷ್ಟು ಕಡಿಮೆಯಾಗಿದೆ.

ಎಡಪಂಥೀಯ ಉಗ್ರವಾದ (ಎಲ್‌ಡಬ್ಲ್ಯುಇ) ಸಂಬಂಧಿತ ಹಿಂಸಾಚಾರ ಘಟನೆಗಳು 2004–14ರ ಅವಧಿಯಲ್ಲಿ 14,862 ನಡೆದಿದ್ದರೆ, 2014–23ರ ಅವಧಿಯಲ್ಲಿ 7,128ಕ್ಕೆ ಇಳಿದಿವೆ. ಭದ್ರತಾ ಸಿಬ್ಬಂದಿಯ ಸಾವಿನ ಸಂಖ್ಯೆ 2004–14ರಲ್ಲಿ 1,750 ಇತ್ತು. ಅದು 2014–23ರ ಅವಧಿಯಲ್ಲಿ 485ಕ್ಕೆ ಇಳಿದಿದೆ. ಅಂದರೆ ಅದು ಶೇ 72ರಷ್ಟು ಕಡಿಮೆಯಾಗಿದೆ. ನಾಗರಿಕರ ಸಾವಿನ ಸಂಖ್ಯೆ ಈ ಅವಧಿಯಲ್ಲಿ 4,285ರಿಂದ 1,383ರಕ್ಕೆ ಇಳಿಕೆಯಾಗಿದೆ.

ನಕ್ಸಲ್‌ ಹಿಂಸಾಚಾರ ಪೀಡಿತ ಜಿಲ್ಲೆಗಳ ಸಂಖ್ಯೆ 2010ರಲ್ಲಿ 96 ಇತ್ತು. ಅದು 2022ರ ವೇಳೆಗೆ 45ಕ್ಕೆ (ಶೇ 53ರಷ್ಟು ಕಡಿಮೆ) ಇಳಿದಿದೆ. ನಕ್ಸಲರು ಇರುವ 90 ಜಿಲ್ಲೆಗಳಲ್ಲಿ 5000ಕ್ಕೂ ಹೆಚ್ಚು ಅಂಚೆ ಕಚೇರಿಗಳನ್ನು ಸ್ಥಾಪಿಸಲಾಗಿದೆ. 30ಕ್ಕೂ ಹೆಚ್ಚು ಬಾಧಿತ ಜಿಲ್ಲೆಗಳಲ್ಲಿ 1,298 ಬ್ಯಾಂಕ್‌ ಶಾಖೆಗಳನ್ನು ತೆರೆಯಲಾಗಿದ್ದು, 1,348 ಎಟಿಎಂಗಳು ಕಾರ್ಯ ನಿರ್ವಹಿಸುತ್ತಿವೆ.

ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ₹2,690 ಕೋಟಿ ವೆಚ್ಚದಲ್ಲಿ ಒಟ್ಟು 4,885 ಮೊಬೈಲ್‌ ಟವರ್‌ಗಳನ್ನು ಮತ್ತು ₹ 10,718 ಕೋಟಿ ವೆಚ್ಚದಲ್ಲಿ 9,356 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ 121 ಏಕಲವ್ಯ ವಸತಿ ಶಾಲೆಗಳು, 43 ಐಟಿಐಗಳು, 38 ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT