ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ಬಂಧನ ಖಂಡಿಸಿ AAPಯಿಂದ ಸಾಮೂಹಿಕ ಉಪವಾಸ, ವಿದೇಶಗಳಲ್ಲಿಯೂ ಪ್ರತಿಭಟನೆ

Published 7 ಏಪ್ರಿಲ್ 2024, 9:37 IST
Last Updated 7 ಏಪ್ರಿಲ್ 2024, 9:37 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನ ವಿರೋಧಿಸಿ ಮತ್ತು ಬಿಜೆಪಿ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಎಎಪಿ ಹಿರಿಯ ನಾಯಕರು, ಕಾರ್ಯಕರ್ತರು ಇಲ್ಲಿನ ಜಂತರ್‌ ಮಂತರ್‌ನಲ್ಲಿ ದಿನವಿಡೀ ಉಪವಾಸ ಸತ್ಯಾಗ್ರಹ ನಡೆಸಿದರು.

ಜಂತರ್‌ ಮಂತರ್‌ನಲ್ಲಿ ಸೇರಿದ್ದ ಪಕ್ಷದ ಸ್ವಯಂ ಸೇವಕರು ಮತ್ತು ಬೆಂಬಲಿಗರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕೇಜ್ರಿವಾಲ್‌ ಅವರ ಬಂಧನವನ್ನು ತೋರಿಸುವ ಪೋಸ್ಟರ್‌
ಗಳನ್ನು ಹಲವರು ಪ್ರದರ್ಶಿಸಿದರು.

ಇದೇ ರೀತಿಯ ಪ್ರತಿಭಟನೆಗಳು ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿನ ಹಲವು ನಗರಗಳಲ್ಲಿ ನಡೆದವು. ಬೋಸ್ಟನ್‌ನ ಹಾರ್ವರ್ಡ್‌ ಸ್ಕ್ವೇರ್‌, ಲಾಸ್‌ ಏಂಜಲೀಸ್‌ನ ಹಾಲಿವುಡ್‌ ಗುರುತಿನ ಬಳಿ, ವಾಷಿಂಗ್ಟನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೊರಗೆ, ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌, ಟೊರೊಂಟೊ, ಲಂಡನ್‌, ಮಲ್ಬರ್ನ್ ಸೇರಿದಂತೆ ವಿವಿಧ ವಿದೇಶಿ ನಗರಗಳಲ್ಲಿ ಎಎಪಿ ಮುಖಂಡರು ಪ್ರತಿಭಟನೆ ನಡೆಸಿದರು.

ದೆಹಲಿ ವಿಧಾನಸಭೆಯ ಸ್ಪೀಕರ್‌ ರಾಮ್‌ ನಿವಾಸ್‌ ಗೋಯೆಲ್‌, ಉಪ ಸ್ಪೀಕರ್‌ ರಾಖಿ ಬಿಲಾ, ಸಚಿವರಾದ ಗೋಪಾಲ್‌ ರಾಯ್‌, ಸೌರಭ್‌ ಭಾರದ್ವಾಜ್‌, ಅತಿಶಿ, ಕೈಲಾಶ್‌ ಗಹ್ಲೋಟ್‌, ಇಮ್ರಾನ್‌ ಹುಸೇನ್‌ ಸೇರಿದಂತೆ ಎಎಪಿಯ ಹಿರಿಯ ನಾಯಕರು ಜಂತರ್‌ ಮಂತರ್‌ನಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಾಮೂಹಿಕ ಉಪವಾಸದಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ, ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌, ‘ಕೇಜ್ರಿವಾಲ್‌ ಅವರು ಹಿಂದೆ, ಈಗ ಮತ್ತು ಮುಂದೆ ಪ್ರಾಮಾಣಿಕರಾಗಿ ಉಳಿಯುತ್ತಾರೆ’ ಎಂದರು. 

ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿ ಕೂಟದ ಅಭ್ಯರ್ಥಿಗಳ ಗೆಲುವಿಗೆ ಎಎಪಿ ಶ್ರಮಿಸಬೇಕು. ಈ ಮೂಲಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ನಿರ್ಗಮನದ ದಾರಿ ತೋರಬೇಕು ಎಂದರು.

ಸಚಿವೆ ಆತಿಶಿ ಮಾತನಾಡಿ, ಬಿಜೆಪಿ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ. ಎಎಪಿ ಪಕ್ಷದವರ ಉಪವಾಸವು, ಕೇಸರಿ ಪಕ್ಷಕ್ಕೆ ನಿದ್ರೆಯಿಲ್ಲದ ರಾತ್ರಿಗಳನ್ನು ನೀಡಲಿದೆ. ಕೇಜ್ರಿವಾಲ್‌ ಬಂಧನದ ಬಗ್ಗೆ ಜನರಲ್ಲಿ ಇರುವ ಕೋಪವು ಬಿಜೆಪಿಯ ಶವಪೆಟ್ಟಿಗೆಗೆ ಅಂತಿಮ ಮೊಳೆಯಾಗಿ ಪರಿಣಮಿಸುತ್ತದೆ ಎಂದು ಹೇಳಿದರು. 

ಪಂಜಾಬ್‌ನ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ತಮ್ಮ ಸಂಪುಟದ ಸಚಿವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಗ್ರಾಮವಾದ ಖಟ್ಕರ್‌ ಕಲನ್‌ನಲ್ಲಿ ಸಾಮೂಹಿಕ ಉಪವಾಸದಲ್ಲಿ ಪಾಲ್ಗೊಂಡರು.

ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ: ದೆಹಲಿ ಅಬಕಾರಿ ನೀತಿ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾನುವಾರ ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಸೇರಿದಂತೆ ದೆಹಲಿಯ ಬಿಜೆಪಿ ಹಿರಿಯ ನಾಯಕರು, ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಮತ್ತು ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್ ಅವರನ್ನು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT